ಉತ್ತರ ಪ್ರದೇಶ | ಬಿಜೆಪಿ ಶಾಸಕರ ಮನೆಯಲ್ಲಿ ಯುವಕರ ಮೇಲೆ ಕ್ರೂರ ಹಲ್ಲೆ, ಒಬ್ಬರ ಸ್ಥಿತಿ ಗಂಭೀರ

0
229

ಸನ್ಮಾರ್ಗ ವಾರ್ತೆ

ಲಕ್ನೋ: ಉತ್ತರ ಪ್ರದೇಶದಲ್ಲಿ, ಬಿಜೆಪಿ ಶಾಸಕ ಸುಶಾಂತ್ ಸಿಂಗ್ ಅವರ ಮನೆಯಲ್ಲಿ ಮೂವರು ಯುವಕರನ್ನು ಅಕ್ರಮವಾಗಿ ಬಂಧಿಸಿ ಇರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ವಿದ್ಯುತ್ ಶಾಕ್ ನೀಡಲಾಗಿದೆ ಎಂದು ವರದಿಯಾಗಿದೆ. ಮೊರಾದಾಬಾದ್ ಪೊಲೀಸರು ಈ ಘಟನೆಯ ತನಿಖೆಯನ್ನು ಆರಂಭಿಸಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಶಾಸಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಮೂರನೆಯವರು ಅವರ ಸ್ನೇಹಿತರಾಗಿದ್ದಾರೆ. ಗಾಯಗೊಂಡಿರುವ ಮೂವರಲ್ಲಿ ರಾಮು ಕಶ್ಯಪ್ ಮತ್ತು ಅವರ ನೆರೆಹೊರೆಯವರಾದ ಅತುಲ್ ಕಶ್ಯಪ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮು ಅವರ ಸ್ಥಿತಿ ಗಂಭೀರವಾಗಿದೆ. ಮೂರನೇ ಸಂತ್ರಸ್ತ ಲಾವಿಶ್ ಕಶ್ಯಪ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಾಮು ಅವರ ತಾಯಿ ಓಂವತಿ ಕಶ್ಯಪ್ ಅವರು ಶುಕ್ರವಾರ ಠಾಕೂರ್‌ದ್ವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಾಸಕರ ಸಹಚರರು ತಮ್ಮ ಮಗ ಮತ್ತು ಇತರ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕಳವು ಮಾಡಲಾಗಿದೆ ಎಂಬ ಶಂಕೆಯ ಮೇರೆಗೆ ಯುವಕರನ್ನು ತಲೆಕೆಳಕಾಗಿ ಕಟ್ಟಿಹಾಕಿ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅವರ ಗಾಯಗಳಿಗೆ ಉಪ್ಪು ಸವರಲಾಗಿದೆ ಮತ್ತು ವಿದ್ಯುತ್ ಶಾಕ್ ನೀಡಲಾಗಿದೆ ಎಂಬ ದೂರುಗಳೂ ಇವೆ.

ಅಕ್ಟೋಬರ್ 6 ರಂದು ಶಾಸಕರ ನಿವಾಸದಿಂದ ಚಿನ್ನದ ಬಳೆಯೊಂದು ನಾಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಈ ಕೃತ್ಯ ಎಸಗಲಾಗಿದೆ ಎಂದು ರಾಮು ಅವರ ಸಂಬಂಧಿ ಓಂಪಾಲ್ ಸಿಂಗ್ ಹೇಳಿದ್ದಾರೆ. “ಶಾಸಕರ ಸಹಚರರು ಅತುಲ್ ಮತ್ತು ಲಾವಿಶ್ ಅವರನ್ನು ವಿಚಾರಣೆ ನಡೆಸಿ ಹಲ್ಲೆ ನಡೆಸಿದ್ದಾರೆ. ಅತುಲ್ ಮತ್ತು ಲಾವಿಶ್ ಬಳೆಯನ್ನು ಕಳವು ಮಾಡಿರಬಹುದು ಎಂದು ಸಹಚರರು ನಂಬಿದ್ದರು.

ಏನೋ ಕೆಲಸಯಿದೆ ಎಂದು ಶಾಸಕರ ಸಹಚರರು ರಾಮು ಅವರ ಮನೆಯಿಂದ ಕರೆದೊಯ್ದರು ಎಂದು ಓಂಪಾಲ್ ತಿಳಿಸಿದ್ದಾರೆ. ನಂತರ, ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅವರು ಕೆಲವು ಸ್ಥಳೀಯರೊಂದಿಗೆ ಶಾಸಕರ ನಿವಾಸಕ್ಕೆ ಹೋದಾಗ, ಯುವಕರನ್ನು ಭೇಟಿಯಾಗಲು ತಮಗೆ ಅವಕಾಶ ನೀಡಲಿಲ್ಲ ಮತ್ತು ಬದಲಿಗೆ ಬೆದರಿಕೆ ಹಾಕಿದರು ಎಂದು ಆರೋಪಿಸಿದ್ದಾರೆ. ಬಿಜ್ನೋರ್ ಜಿಲ್ಲೆಯ ಬರ್ಹಾಪೂರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಸುಶಾಂತ್ ಸಿಂಗ್ ಅವರ ಎರಡನೇ ಅವಧಿ ಇದಾಗಿದೆ.