ಸನ್ಮಾರ್ಗ ವಾರ್ತೆ
ಹೊಸದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಕ್ಟೋಬರ್ 10 ರಂದು ಪೊಲೀಸ್ ತಂಡವು ಬಾಂಗ್ಲಾ ಸಾಹಿಬ್ ಗುರುದ್ವಾರದ ಒಳಗೆ ಪ್ರವೇಶಿಸಿದ ಘಟನೆಯ ಬಗ್ಗೆ ಮಾಜಿ ಅಧಿಕಾರಿಗಳು ಮತ್ತು ಸಾರ್ವಜನಿಕ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತು ಕಾಲಮಿತಿಯೊಳಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿ 17 ಮಾಜಿ ಅಧಿಕಾರಿಗಳು ಮತ್ತು ಸಾರ್ವಜನಿಕ ಕಾರ್ಯಕರ್ತರು ದೆಹಲಿ ಉಪರಾಜ್ಯಪಾಲರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಸಿಟಿಜೆನ್ಸ್ ಫಾರ್ ಫ್ರಟರ್ನಿಟಿ-ಭಾರತ್’ (ಸಿಎಫ್ಎಫ್-ಭಾರತ್) ಸಿದ್ಧಪಡಿಸಿರುವ ಈ ಪತ್ರಕ್ಕೆ ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜುಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಮತ್ತು ಪಾಟ್ನಾ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಇಕ್ಬಾಲ್ ಅಹ್ಮದ್ ಅನ್ಸಾರಿ ಸೇರಿದಂತೆ ಪ್ರಮುಖ ಗಣ್ಯರು ಸಹಿ ಹಾಕಿದ್ದಾರೆ. ಈ ಪತ್ರದ ಪ್ರತಿಗಳನ್ನು ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೂ ಕಳುಹಿಸಲಾಗಿದೆ.
ಸಾರ್ವಜನಿಕ ಪ್ರತಿಭಟನೆಗಳನ್ನು ಎದುರಿಸುವಾಗ ಪೂಜಾ ಸ್ಥಳಗಳನ್ನು ಪೊಲೀಸ್ ಕಾರ್ಯಾಚರಣಾ ಪ್ರದೇಶಗಳನ್ನಾಗಿ ಪರಿವರ್ತಿಸಬಾರದು ಎಂದು ಪತ್ರದಲ್ಲಿ ಎತ್ತಿ ತೋರಿಸಲಾಗಿದೆ. ಪೂಜಾ ಸ್ಥಳಗಳ ಪಾವಿತ್ರ್ಯತೆ ಮತ್ತು ಸ್ವತಂತ್ರ ಕಾರ್ಯನಿರ್ವಹಣೆಯನ್ನು ರಕ್ಷಿಸಬೇಕು ಹಾಗೂ ಘಟನೆಯ ಸ್ಪಷ್ಟನೆಗಾಗಿ ಸ್ವತಂತ್ರ ತನಿಖೆಯನ್ನು ನಡೆಸಬೇಕು ಎಂದು ಪ್ರಮುಖ ಗಣ್ಯರು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ತಡೆಯುವ ವೇಳೆ ಪೊಲೀಸರು ಗುರುದ್ವಾರ ಸಂಕೀರ್ಣದ ಒಳಗೆ ಪ್ರವೇಶಿಸಿದ್ದರು. ಬಾಂಗ್ಲಾ ಸಾಹಿಬ್ ಗುರುದ್ವಾರದ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂಬ ವರದಿಗಳಿವೆ. ಗುರುದ್ವಾರದ ಒಳಗೆ ಪೊಲೀಸರು ಪ್ರವೇಶಿಸಲು ಕಾರಣವಾದ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.












