ದೇಶ: ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದತ್ತ!

0
119

✍️ ಅರಫಾ ಮಂಚಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಗ್ಗೆ ಆಗ್ರಾದಲ್ಲಿರುವ ಅವರದೇ ಮನೆಯ ಕಂಪೌಂಡ್‌ವಾಲ್‌ನಲ್ಲಿ ಜ್ಞಾನೇಶ್ ಕುಮಾರ್ ಗದ್ದಾರ್ ಹೈ ವೋಟ್ ಚೋರ್ ಹೈ' ಎಂದು ಬರೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಗಲಿಗಲಿ ಮೇ ಶೋರ್ ಹೈ ಮೋದಿ ಸರಕಾರ್ ಚೋರ್ ಹೈ’ ಎಂದು ಕಾಂಗ್ರೆಸ್ ಧ್ವನಿ ಮೊಳಗಿಸಿದೆ. ಹೌದು, ಕಾಂಗ್ರೆಸ್ ಮಾತ್ರವಲ್ಲ ಇಡೀ ಪ್ರತಿಪಕ್ಷಗಳ ಪ್ರತಿಭಟನೆ ಹೋರಾಟಗಳೆಲ್ಲವೂ ಮೇಲ್ನೋಟಕ್ಕೆ ಜ್ಞಾನೇಶ್ ಕುಮಾರ್ ವಿರುದ್ಧವಾಗಿ ಕಂಡರೂ ಅದು ವಾಸ್ತವದಲ್ಲಿ ಮೋದಿ ಸರಕಾರದ ವಿರುದ್ಧ ಹೋರಾಟವಾಗಿದೆ. ವಾಸ್ತವದಲ್ಲಿ ಮೋದಿ ಸರಕಾರ ಏನೇ ಮಾಡಿದರೂ, ಅಸಾಂವಿಧಾನಿಕವಾಗಿದ್ದರೂ ಈ ವಿಪಕ್ಷಗಳಿಂದ ಏನೂ ಮಾಡಲಿಕ್ಕಾಗುವುದಿಲ್ಲ. ಅವರ ಹೋರಾಟ ಒಂದು `ಶೋರ್’ ಆಗಿಸಿ ಬಿಡುವ ತಾಕತ್ತು ಬಿಜೆಪಿಗಿದೆ. ಈವರೆಗೆ ಸಿಜೆಪಿ ಅಥವಾ ಕಾಕ್ರೊಚ್ ಜನತಾ ಪಾರ್ಟಿ ಅಥವಾ ಜೆನ್‌ಝಿಗಳನ್ನು ಹೊರತುಪಡಿಸಿ ಬಿಜೆಪಿಗಳ ಯಾವ ಸರಕಾರವನ್ನು ಮಣಿಸಲು ಈವರೆಗೆ ಆಗಿಲ್ಲ. ಈ ಪಟ್ಟಿಗೆ ರೈತಾಂದೋಲನವನ್ನು ಸೇರಿಸಿಕೊಳ್ಳಬಹುದು.

ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ಮತದಾರರ ಸೇರ್ಪಡೆ ಫಾರ್ಮನ್ನು ತಿದ್ದಿದ್ದಾರೆ. ಇನ್ನಿಬ್ಬರು ಸಹ ಆಯುಕ್ತರನ್ನು ಪ್ರಕ್ರಿಯೆಯ ಭಾಗವಾಗಿಸಿಲ್ಲ. ಇದು ಅಸಂವಿಧಾನ ಕ್ರಮ ಎಂಬುದು ಅವರಿಗೆ ಗೊತ್ತಿತ್ತು. ಕಾಂಗ್ರೆಸ್ ಮತ್ತು ಸಿಜೆಪಿ ಹೇಳುವ ಪ್ರಕಾರ ನಿರ್ದಿಷ್ಟ ಮತದಾರರನ್ನು ಮತದಾನದ ಪ್ರಕ್ರಿಯೆಯಿಂದ ತಡೆಯಲು ಈ ಷಡ್ಯಂತ್ರ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರಾಗಿ ಹುದ್ದೆ ಕೊಟ್ಟ ಸರಕಾರದ ಋಣವನ್ನು ತೀರಿಸಲು ಅವರು ಹೀಗೆ ಮಾಡಿರಬಹುದು. ನಿವೃತ್ತಿಯ ನಂತರವೂ ಜ್ಞಾನೇಶ್ ಫಲವುಣ್ಣಬಹುದು. ಯಾವುದೋ ಪ್ರಮುಖ ಹುದ್ದೆಯಲ್ಲಿ ಕೂರಬಹುದು. ಯಾಕೆಂದರೆ ಚುನಾವಣಾ ಆಯೋಗದ ಮೂಲಕ ಪ್ರಜೆಗಳು ನಿರ್ದಿಷ್ಟ ವಿಭಾಗದ ಮತದಾರರ ಹಕ್ಕು ಮೊಟಕುಗೊಳಿಸಿದರೆ ಇನ್ನೂ ಐವತ್ತರುವತ್ತು ವರ್ಷ ಬಿಜೆಪಿ ರಾಜ್ಯಭಾರ ಮಾಡಬಹುದು. ಪೂರ್ಣ ರಾಜಾಳ್ವಿಕೆಯಂತೆ.

ಹಾಗಂತ ಕಳೆದ 2014ರಿಂದ ಮೋದಿರಾಜ್ ಪ್ರಾರಂಭಗೊಂಡ ಮೇಲೆ ಪ್ರಜಾ ಮಾನ್ಯರು ಪಡೆದದ್ದೇನಿದೆ. ಅವರನ್ನು ಬೆಲೆಯೇರಿಕೆಯಿಂದ, ಜಿಎಸ್‌ಟಿಯಿಂದ, ಪೆಟ್ರೋ ಡೀಸೆಲ್ ಅಡುಗೆ ಅನಿಲ, ಆಹಾರ ಇತ್ಯಾದಿಗಳಿಂದ ಹಿಡಿದು ಎಲ್ಲವನ್ನೂ ಸರಕಾರ ದುಬಾರಿ ಗೊಳಿಸುವ ಮೂಲಕ ಭವಣೆಪಡಿಸಿದೆ. ನೋಟ್‌ಬ್ಯಾನ್ ಮಾಡಿ ಹೈರಾಣಾಗಿಸಿ ಸತಾಯಿಸಿದ್ದು ನಯಾ ಇಂಡಿಯದ ಪ್ರಜೆಗಳ ದುರದೃಷ್ಟ. ಇಷ್ಟೆಲ್ಲ ಆದರೂ, ಮೋದಿ ಪ್ರಧಾನಿಯಾಗಿಯೂ ಬಿಜೆಪಿ ಅಧಿಕಾರದಲ್ಲಿಯೂ ನಿರಾತಂಕವಾಗಿ ಮುಂದುವರಿಯುತ್ತಿದೆ. ಹೀಗಾಗುವುದರಲ್ಲಿ ಚುನಾವಣಾ ಆಯೋಗದ ಸಹಕಾರ ಇದೆ ಎಂಬುದು ಪ್ರತಿಪಕ್ಷಗಳ ಆರೋಪ. ಈಗ ಜ್ಞಾನೇಶ್ ಕುಮಾರ್‌ರ ಎಸ್‌ಐಆರ್ ಪ್ರಕರಣದ ಫಾರ್ಮ್ ದಗಲ್ಬಾಜಿಯಿಂದ ಈ ವಾದ ನಿಜವೆಂದು ಬಹಳ ಸ್ಪಷ್ಟವಾಗಿ ಅನಾವರಣಗೊಂಡಿದೆ. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರಕಾರ ತನ್ನ ಕೈಬೆರಳ ತುದಿಯಲ್ಲಿ ಆಟ ಆಡಿಸುತ್ತಿದೆ. ದೇಶ ರಾಜಪ್ರಭುತ್ವದತ್ತ ಚಲಿಸುತ್ತಿದೆ!

ಕ್ರೆಡಿಬಿಲಿಟಿ ಕಳಕೊಂಡ ಆಯೋಗ:

ವಿಪಕ್ಷ ನಾಯಕ ರಾಹುಲ್ ಗಾಂಧಿ 2025ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ವೋಟ್ ಚೋರಿ ನಡೆದಿದೆ ಎಂದು ಸಾಕ್ಷ್ಯ ಸಮೇತ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು. ಚುನಾವಣಾ ಆಯೋಗ ಮಗ್ಗುಲು ಬದಲಿಸಿ ಮಲಗಿದ್ದು ಬಿಟ್ಟರೆ, ಯಾವ ಕ್ರಮವೂ ಕೈಗೊಳ್ಳಲಿಲ್ಲ. ವಿಪರ್ಯಾಸವೆಂಬಂತೆ ರಾಹುಲ್ ಗಾಂಧಿ ಕ್ಷಮೆಕೋರಬೇಕೆಂದು ಜ್ಞಾನೇಶ್ ಕುಮಾರ್ ಹೇಳಿದರು. ಆದರೆ, ಆಯೋಗವು ವೋಟು ಫಿಕ್ಸಿಂಗ್ ಮಾಡುತ್ತಿದೆ, ಇವಿಎಂ ಟೆಂಪರಿಂಗ್ ಮಾಡುತ್ತಿದೆ ಎಂದು ಜನರು ದೂರ ತೊಡಗಿದರು. ಆಯೋಗ ಕ್ರೆಡಿಬಿಲಿಟಿ ಕಳಕೊಂಡದ್ದಕ್ಕೆ ಸಾಕ್ಷ್ಯವಾಗಿ ಇದು ಸಾಲು ತ್ತದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘಿಸಿದ್ದನ್ನು ಅಪ್ಪಿತಪ್ಪಿ ಮಾಧ್ಯಮಗಳು ಎತ್ತಿ ತೋರಿಸಿದರೂ ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ. ಸುಪ್ರೀಂ ಕೋರ್ಟಿಗೆ ದೂರು ಒಯ್ದರೂ ಫಲವಿಲ್ಲ.

ಪ್ರತಿಪಕ್ಷದಿಂದ ಇದು ಆಗುವುದಿಲ್ಲ:

2017ರ ನ್ಯೂಸ್‌ಲಾಂಡ್ರಿ ವರದಿ ಪ್ರಕಾರ ಬಿಜೆಪಿ ಆಡಳಿತದಲ್ಲಿ ರುವ ರಾಜ್ಯಗಳಲ್ಲಿ ಇವಿಎಂ ಕಳ್ಳತನ ಮತ್ತು ಲೂಟಿಯ 70 ಪ್ರಕರಣಗಳು ಆರ್‌ಟಿಐ ಮೂಲಕ ಬಹಿರಂಗಗೊಂಡಿತ್ತು. ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಅಸ್ಸಾಂಗಳಲ್ಲಿ ಅಕ್ರಮ ನಡೆದಿದ್ದು, ಯಾರಿಗೂ ಶಿಕ್ಷೆಯಾಗಿಲ್ಲ. 2019ರ ಸಾರ್ವತ್ರಿಕ ಚುನಾವಣೆಯ ವೇಳೆಯೂ ಇಂತಹದ್ದೇ ದೂರುಗಳು ಕೇಳಿ ಬಂದಿವೆ. ಅಸೆಂಬ್ಲಿ ಚುನಾವಣೆಯ ವೇಳೆಯೂ ಇವಿಎಂ ಅದಲು ಬದಲು, ಇವಿಎಂ ಕಳ್ಳತನದ ದೂರುಗಳು ಬಂದವು. ರಾಹುಲ್ ಗಾಂಧಿ ಮಹಾರಾಷ್ಟ್ರದ ಶಿರಡಿಯಲ್ಲಿ ನಕಲಿ ವೋಟು ಚಲಾವಣೆಯ ಬಗ್ಗೆ ಧ್ವನಿ ಎತ್ತಿದ್ದಾರೆ. 2024ರ ಚುನಾವಣೆಯಲ್ಲಿ ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಲಕ್ಷ ಮತಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿದ್ದರು. ಕೆಲವು ಜನರ ಗುಂಪು ಭಾರತಾದ್ಯಂತ ಲಕ್ಷಾಂತರ ಮತದಾರರ ಹೆಸರನ್ನು ಅಳಿಸುವ ಕೆಲಸಕ್ಕಿಳಿದಿದೆ ಮತ್ತು ವಿರೋಧ ಪಕ್ಷಗಳ ಮತದಾರರನ್ನು ಗುರಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಒಬಿಸಿಗಳನ್ನು ನಿರ್ದಿಷ್ಟವಾಗಿ ಗುರಿಯಾಸಿಕೊಳ್ಳಲಾಗಿದೆ. ನಮ್ಮಲ್ಲಿ ನೂರು ಪರ್ಸೆಂಟ್ ಪುರಾವೆ ಇದೆ ಅಂದಿದ್ದರು. ಇದರಿಂದ ಏನೂ ಆಗಲಿಲ್ಲ. ಚುನಾವಣಾ ಆಯೋಗ ಕ್ರಮ ತೆಗೆದುಕೊಳಲಿಲ್ಲ. ಆಯಾಯ ಚುನಾವಣೆಯ ವೇಳೆ ನಡೆದಿರುವ ಅಕ್ರಮಗಳನ್ನು ಹೀಗೆ ಎಲ್ಲ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಎತ್ತಿತೋರಿಸಿವೆ. ಆದರೆ ಚುನಾವಣಾ ಆಯೋಗ ನಿರಾಕರಿಸುತ್ತಲೇ ಬಂದಿದೆ. ಯಾಕೆಂದರೆ ಜ್ಞಾನೇಶ್ ಕುಮಾರ್ ಬೆನ್ನಿಗೆ ಆಧಾರವಾಗಿ ಇಡೀ ಸರಕಾರವೇ ಇದೆ.

ಈಗ ತಪ್ಪಾಗಿದೆ ಒಪ್ಪಬಹುದಾ?

ಜ್ಞಾನೇಶ್ ಕುಮಾರ್ ಇತರ ಆಯುಕ್ತರಿಗೆ ಗೊತ್ತಾಗದಂತೆ ಫಾರಂ ಅನ್ನು ತಿದ್ದಿ ಅಕ್ರಮ ಮಾಡಿದ್ದಾರೆ. ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕಳೆದ ಹತ್ತು ತಿಂಗಳಲ್ಲಿ ಆಯೋಗ ಕೈಗೊಂಡ ನಿರ್ಧಾರಗಳಿಗೆ ಹದಿನಾಲ್ಕು ಬಾರಿ ತಮ್ಮ ಆಕ್ಷೇಪಗಳನ್ನು ಅಧಿಕೃತವಾಗಿ ದಾಖಲಿಸಿದ್ದಾರೆ. ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನು ಮತದಿಂದ ಕೂಡಿರಬೇಕು ಅಥವಾ ಬಹುಮತವನ್ನು ಹೊಂದಿರಬೇಕು ಎಂದು ಚುನಾವಣಾ ಆಯೋಗದ ನಿಯಮಗಳು ಹೇಳುತ್ತವೆ. ಎಲ್ಲ ಆಯುಕ್ತರು ಸಮಾನರು ಆದರೆ ಇದನ್ನು ಜ್ಞಾನೇಶ್ ಕುಮಾರ್ ಗಾಳಿಗೆ ತೂರಿದ್ದಾರೆ. ಯಾರಿಗಾಗಿ? ಮೋದಿ ಅಮಿತ್ ಶಾರ ಒತ್ತಡದಲ್ಲಿ ಹೀಗೆ ಮಾಡಿದ್ದೆಂದು ಸಿಡಬ್ಲ್ಯೂಸಿ ಮೀಟಿಂಗಿನಲ್ಲಿ ಕಾಂಗ್ರೆಸ್ ಹೇಳಿದೆ. ಹಾಗೆ ಅಪರಾಧ ಮಾಡುವಂತೆ ನಡೆಸಿ ಕೊಂಡವರು ಅಧಿಕಾರ ಬಿಟ್ಟು ಹೋಗಬೇಕು. ಆಗ ಮಾತ್ರ ಮತದಾರರ ಪಟ್ಟಿ, ಚುನಾವಣೆಯಲ್ಲಿ ಪಾರದರ್ಶಕತೆ ಸರಿಯಾಗುವುದು. ಸರ್ವಾಧಿಕಾರಿ ಏಕಾಧಿಪತ್ಯ ಚಕ್ರಾಧಿಪತಿಗಳ ಕೈಯಿಂದ ಭಾರತದ ಪ್ರಜಾಪ್ರಭುತ್ವ ಬದುಕಿ ಉಳಿಯುವುದು. ಪ್ರಜೆಗಳ ಹಕ್ಕು ಸುರಕ್ಷಿತಗೊಳ್ಳಲು ಸಾಧ್ಯ.

ಮಣಿದ ಆಯೋಗ:

ಮತದಾರ ಪಟ್ಟಿಯಲ್ಲಿ ಹೊಸ ಹೆಸರು ಸೇರ್ಪಡೆಯ ಆನ್‌ಲೈನ್ ಫಾರ್ಮ್ 6ರಲ್ಲಿ ಸೇರಿಸಲಾಗಿದ್ದ ಡಿಕ್ಲರೇಶನ್ ಅನ್ನು ಆಯೋಗ ಹಿಂತೆಗೆದಿದೆ. ಎಸ್‌ಐಆರ್ ಆಗಿರುವ ರಾಜ್ಯಗಳಲ್ಲಿ ಇದು ಚಾಲ್ತಿಗೆ ಬರುತ್ತದೆ. ಹೊಸ ಅರ್ಜಿಯಲ್ಲಿ ತಮ್ಮ ತಂದೆ ತಾಯಿ ಅಜ್ಜ-ಅಜ್ಜಿಯರ ವಿವರಗಳು ಹಿಂದಿನ ಮತದಾರರ ಪಟ್ಟಿಗೆ ಜೋಡಿಸಿ ಅಫಿದಾವಿತ್ ಸಲ್ಲಿಸಬೇಕೆಂದು ಫಾರ್ಮ್ 6ರಲ್ಲಿ ಹೆಚ್ಚುವರಿಯಾಗಿ ಜ್ಞಾನೇಶ್ ಕುಮಾರ್ ಸೇರಿಸಿದ್ದರು. 1960ರ ನಿಬಂಧನೆ ಪ್ರಕಾರ ಇರುವ ಒಂದು ಫಾರ್ಮಿನಲ್ಲಿ ಬದಲಾವಣೆ ತರುವುದಕ್ಕೆ ಆಯೋಗಕ್ಕೆ ಅಧಿಕಾರ ಇಲ್ಲವೆಂದು ಚುನಾವಣಾ ಆಯುಕ್ತರಲ್ಲೊಬ್ಬರಾದ ವಿವೇಕ್ ಜೋಶಿ ಬೊಟ್ಟು ಮಾಡಿದ್ದಾರೆ. ಇಸಿಐ ನೆಟ್‌ನಲ್ಲಿ ಈ ಡಿಕ್ಲರೇಷನ್ ಸೇರ್ಪಡೆಯನ್ನು ಅನಧಿಕೃತ ಕಾನೂನುಬಾಹಿರ ಎಂದು ಹೇಳಿದ ಇನ್ನೊಬ್ಬ ಆಯುಕ್ತ ಸುಖ್‌ಬೀರ್ ಸಿಂಗ್ ಸಂಧು ಕೂಡಲೇ ತೆರವುಗೊಳಿಸ ಬೇಕೆಂದು ಆಗ್ರಹಿಸಿದ್ದರು. ಜ್ಞಾನೇಶ್ ಕುಮಾರ್ ಉದ್ದೇಶಪೂರ್ವಕ ತಪ್ಪನ್ನು ತಿದ್ದಿಕೊಂಡಿದ್ದಾರೆ. ಅದು ತನ್ನ ಮೇಲೆ ತೂಗುತ್ತಿರುವ ಕತ್ತಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ.

ಅರಿತು ಮಾಡಿದ್ದು ಪ್ರಮಾದವಲ್ಲ. ಸಂಚು:

ವೋಟ್ ಚೋರಿಗೆ ಆಧಾರವಾಗಿ ನಿಲ್ಲುವುದರ ಜೊತೆಗೆ ಈಗ ಮತದಾರರ ಮತದಾನ ಹಕ್ಕು ಚೋರಿಗೆ ಮುಂದಾಗಿ ಜ್ಞಾನೇಶ್ ಕುಮಾರ್ ಸರಕಾರಕ್ಕೆ ನೇರವಾದ್ದಾರೆ. ಎಷ್ಟು ಗಂಭೀರ ಪರ್ವ ಇದು? ಈ ಗಂಭೀರತೆಯನ್ನು ಪಶ್ಚಿಮ ಬಂಗಾಳದ ಎಸ್‌ಐಆರ್ ನಲ್ಲಿ ವೋಟು ಹಕ್ಕು ಕಳಕೊಂಡ ದೇಶದ ಪ್ರಜೆಗಳ ಮುಖದಲ್ಲಿ ನಾವು ಓದಿ ತಿಳಿಯಬಹುದು. ಯಾಕೆಂದರೆ ಅಲ್ಲಿ ಆ ಒಂದು ರಾಜ್ಯದಲ್ಲಿ ಚುನಾವಣಾ ಆಯೋಗ ಸಾಫ್ಟ್ವೇರ್ ಆಟದಿಂದ 27 ಲಕ್ಷ ವೋಟರ್ಸ್ ಹೊರದಬ್ಬಲ್ಪಟ್ಟಿದ್ದಾರೆ. ಇಂತಹ ಜ್ಞಾನೇಶ್ ಶಿಕ್ಷಾರ್ಹರು. ಬಿಜೆಪಿಯವರು ಜ್ಞಾನೇಶ್‌ರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸರಕಾರಕ್ಕೆ ನೆರವಾಗುವಂತೆ ಚುನಾವಣೆ ಆಯೋಗ ವರ್ತಿಸಿದರೆ ಬೆಂಬಲಿಸಬೇಕಾಗುತ್ತದೆ. ಕೈಬಿಟ್ಟ ವೋಟರ್ ಮತ್ತೆ ವೋಟಿನ ಹಕ್ಕು ಪಡೆಯಲು ಈಗ ಸುಪ್ರೀಂ ಕೋರ್ಟು ರಚಿಸಿದ ಟ್ರಿಬ್ಯುನಲ್‌ನಲ್ಲಿ ಇತ್ಯರ್ಥವಾಗಲು ಹತ್ತು ಹನ್ನೆರಡು ವರ್ಷ ಬೇಕು. ಈ ಸ್ಥಿತಿ ಸೃಷ್ಟಿ ಪ್ರಜೆಗಳ ದೃಷ್ಟಿಯಿಂದ ಅಕ್ಷಮ್ಯವಾದುದು.

ಆದರೆ ರಾಜೀನಾಮೆಯಿಂದ ಏನಾಗುತ್ತದೆ:

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸರಕಾರ ಕೆಡಿಸಿರುವುದು ಅಕ್ಷಮ್ಯ. ಆದುದರಿಂದ ಜ್ಞಾನೇಶ್ ಕುಮಾರ್ ಹೋದರೆ ಸಾಲುವುದಿಲ್ಲ. ಚುನಾವಣಾ ವ್ಯವಸ್ಥೆ ಮತ್ತು ಆಯುಕ್ತ ನೇಮಕಾತಿ ಸಹಿತ ಅಮೂಲಾಗ್ರ ಬದಲಾವಣೆಗೆ ಹೋರಾಟ ಇರಬೇಕಾಗುತ್ತದೆ. ಈ ಅಗತ್ಯ ಮೇಲ್ನೋಟಕ್ಕೆ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ಅಂದರೆ ಬಿಜೆಪಿಯ ಸರ್ವಾಧಿಪತ್ಯ ಮನಸ್ಥಿತಿಗೆ ಮದ್ದು ಅರೆಯುವುದಕ್ಕೆ ಅಥವಾ ಅಂತಹ ಸರಕಾರವನ್ನು ಕಿತ್ತು ಹಾಕುವುದಕ್ಕೆ ಹೋರಾಟ ನಡೆಯಬೇಕಾಗಿದೆ.