ನೀವು ಹಿಜಾಬ್ ಧರಿಸಿದರೆ ಶಾಲೆಗೆ ಹೋಗಲು ಸಾಧ್ಯವಿಲ್ಲ! ಅಜೆರ್ಬೈಜಾನ್‌ನಲ್ಲಿ ಭುಗಿಲೆದ್ದ ಪ್ರತಿಭಟನೆಗಳು

0
241

ಸನ್ಮಾರ್ಗ ವಾರ್ತೆ

ಬಾಕು: ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಪರೋಕ್ಷವಾಗಿ ನಿಷೇಧಿಸುವ ಸರ್ಕಾರದ ನಿರ್ಧಾರದ ವಿರುದ್ಧ ಅಝರ್ಬೈಜಾನ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರನ್ನು ತರಗತಿಗಳಿಗೆ ಪ್ರವೇಶಿಸಲು ಶಾಲೆಗಳು ಅನುಮತಿಸುತ್ತಿಲ್ಲದಿರುವುದೇ ಪ್ರತಿಭಟನೆಗೆ ಕಾರಣವಾಗಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದೆ.

ಕಳೆದ ತಿಂಗಳು, ಅಝರ್ಬೈಜಾನ್ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರವನ್ನು ನಿಯಂತ್ರಿಸುವ ನಿಯಮಗಳಿಗೆ ತಿದ್ದುಪಡಿ ತಂದಿತ್ತು. ಧಾರ್ಮಿಕ ಉಡುಪುಗಳನ್ನು ನಿಷೇಧಿಸುವ ಉದ್ದೇಶದಿಂದ ಈ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಆದಾಗ್ಯೂ, ಇದು ವ್ಯಕ್ತಿಗಳ ಉಡುಗೆ ತೊಡುಗೆಯ ಹಕ್ಕಿನ ಮೇಲಿನ ದಾಳಿ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.

ತಾನು ಹಿಜಾಬ್ ಧರಿಸಿರುವ ಕಾರಣ ಶಾಲೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಮಗೆ ತಿಳಿಸಿದ್ದಾರೆ ಎಂದು ಅಝರ್ಬೈಜಾನ್‌ನ ಶಿಕ್ಷಕಿ ಝಹ್ರಾ ಹಸನೋವಾ ಹೇಳಿದ್ದಾರೆ ಎಂದು ‘ಅಲ್ ಜಜೀರಾ’ ವರದಿ ಮಾಡಿದೆ. ಆದಾಗ್ಯೂ, ಹಿಜಾಬ್ ಧರಿಸಬೇಕೋ ಬೇಡವೋ ಎಂಬುದು ವೈಯಕ್ತಿಕ ನಿರ್ಧಾರವಾಗಿದ್ದು, ಅದರಲ್ಲಿ ಇವರು ಹಸ್ತಕ್ಷೇಪ ಮಾಡಬಾರದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಆದರೆ, ದೇಶದ ಶಾಲೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ಅನ್ನು ಖಚಿತಪಡಿಸಿಕೊಳ್ಳುವ ಮತ್ತು ಜಾತ್ಯತೀತತೆಯ ತತ್ವವನ್ನು ಅನುಸರಿಸುವ ಉದ್ದೇಶದಿಂದ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ ಎಂದು ಅಝರ್ಬೈಜಾನ್ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಅಝರ್ಬೈಜಾನ್‌ನ ಜನಸಂಖ್ಯೆಯು ಸುಮಾರು ಶೇಕಡಾ 96 ರಷ್ಟು ಮುಸ್ಲಿಮರನ್ನು ಹೊಂದಿದೆ. ದೇಶದ ಸಂವಿಧಾನವು ಜಾತ್ಯತೀತತೆ ಮತ್ತು ಧರ್ಮ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಶಿಕ್ಷಕರ ಔಪಚಾರಿಕ ಉಡುಗೆ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಶಾಲೆಗಳ ಸಾರ್ವಜನಿಕ ಚಿತ್ರಣವನ್ನು ಸುಧಾರಿಸಲು ಹೊಸ ನಿಯಮಗಳು ಸಹಾಯ ಮಾಡುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹೊಸ ನಿರ್ಬಂಧಗಳನ್ನು ವಿರೋಧಿಸಿ ಅಝರ್ಬೈಜಾನ್‌ನ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಹಿಜಾಬ್ ಧರಿಸಿದ ಶಿಕ್ಷಕಿಯರನ್ನು ಶಾಲೆಯಿಂದ ವಾಪಸ್ ಕಳುಹಿಸುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ತರುವಾಯ, ವಿದ್ಯಾರ್ಥಿನಿಯರು ತಮ್ಮ ಶಿಕ್ಷಕಿಯರನ್ನು ಅಪ್ಪಿಕೊಂಡು ಅಳುತ್ತಿರುವ ದೃಶ್ಯಗಳು ಹೊರಬಂದಿವೆ.

ನಿರ್ಬಂಧಗಳನ್ನು ವಿರೋಧಿಸಿ ಕನಿಷ್ಠ ಎರಡು ಶಾಲೆಗಳ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೊಸ ನಿರ್ಧಾರವು ತಮ್ಮ ಸಂವಿಧಾನಬದ್ಧವಾಗಿ ಖಾತರಿಪಡಿಸಿದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.

ಅಝರ್ಬೈಜಾನ್‌ನ ಹಿಜಾಬ್ ನಿರ್ಬಂಧಗಳ ವಿರುದ್ಧ ಟರ್ಕಿಯಲ್ಲಿಯೂ ಸಾಮಾಜಿಕ ಮಾಧ್ಯಮ ಅಭಿಯಾನ ಮತ್ತು ಪ್ರತಿಭಟನೆಗಳು ಆರಂಭವಾಗಿವೆ. 1997 ರಲ್ಲಿ ಟರ್ಕಿಯ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರು ಹೆಡ್‌ಸ್ಕಾರ್ಫ್ ಧರಿಸುವುದರ ಮೇಲಿನ ನಿಷೇಧವನ್ನು ಅಝರ್ಬೈಜಾನ್‌ನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕೆಲವರು ಹೋಲಿಸುತ್ತಿದ್ದಾರೆ. ಆ ಸಮಯದಲ್ಲಿ ಹೆಡ್‌ಸ್ಕಾರ್ಫ್ ಧರಿಸಿದ ಮಹಿಳೆಯರು ತಮ್ಮ ಅಧ್ಯಯನ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ನಿರ್ಬಂಧಗಳನ್ನು ಎದುರಿಸಬೇಕಾಯಿತು.

ನಂತರ, ಕಳೆದ ವಾರ ಪ್ರತಿಭಟನಾಕಾರರು ಇಸ್ತಾಂಬುಲ್‌ನಲ್ಲಿರುವ ಅಝರ್ಬೈಜಾನ್ ದೂತವಾಸದ ಎದುರು ಜಮಾಯಿಸಿದರು. ಮುಸ್ಲಿಂ ಮಹಿಳೆಯರ ಮೇಲೆ ಪರಿಣಾಮ ಬೀರುವ ನಿರ್ಬಂಧಗಳನ್ನು ಮರುಪರಿಶೀಲಿಸುವಂತೆ ಅವರು ಅಝರ್ಬೈಜಾನ್ ಸರ್ಕಾರವನ್ನು ಒತ್ತಾಯಿಸಿದರು.

ಈ ಮಧ್ಯೆ, ಅಝರ್ಬೈಜಾನ್ ಅಧ್ಯಕ್ಷ ಇಲ್ಹಾನ್ ಅಲಿಯೆವ್ ಅವರು ದೇಶದ ಆಂತರಿಕ ವ್ಯವಹಾರಗಳಲ್ಲಿ ಹೊರಗಿನವರ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ, ಆದರೆ ಟರ್ಕಿಯನ್ನು ನೇರವಾಗಿ ಟೀಕಿಸಿಲ್ಲ.

ಅಲಿಯೆವ್ ಅವರ ಹೇಳಿಕೆಗೆ ಟರ್ಕಿ ಸರ್ಕಾರ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯೋಪ್ ಎರ್ಡೊಗನ್ ಅವರು ಸೆಪ್ಟೆಂಬರ್ 23 ರಂದು ವಿಶ್ವಸಂಸ್ಥೆಯ ಮಹಾಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ, ಮುಸ್ಲಿಂ ಮಹಿಳೆಯರು ಹೆಚ್ಚುತ್ತಿರುವ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಗಮನಸೆಳೆದರು. ಹಿಜಾಬ್ ನಿರ್ಬಂಧಗಳ ಕುರಿತಾದ ವಿವಾದವು ಅಝರ್ಬೈಜಾನ್‌ನಲ್ಲಿ ಧರ್ಮ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜಾತ್ಯತೀತತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.