ಸನ್ಮಾರ್ಗ ವಾರ್ತೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭನೆಯಲ್ಲಿ ಪಾಲ್ಗೊಂಡ ನಂತರ ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ನಟ ಇಮ್ರಾನ್ ಖಾನ್ಗೆ ಮುಂಬೈ ಪೊಲೀಸರು ನಿರ್ದೇಶನ ನೀಡಿರುವುದಾಗಿ ಎಎನ್ಐ ಗುರುವಾರ ವರದಿ ಮಾಡಿದೆ.
ಇಮ್ರಾನ್ ಖಾನ್ ಅವರು “ಭಾರತೀಯ ನಾಗರಿಕರಲ್ಲದಿದ್ದರೂ ಸಹ” ಶನಿವಾರ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭನೆಯಲ್ಲಿ ಭಾಗವಹಿಸಿದ ನಂತರ ಪೊಲೀಸರು ಭಾರತವನ್ನು ತೊರೆಯುವ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭಾರತವನ್ನು ತೊರೆಯುವ ನೋಟೀಸ್ ಎನ್ನುವುದು ವಿದೇಶಿ ನಾಗರಿಕರು ನಿರ್ದಿಷ್ಟ ಸಮಯದೊಳಗೆ ದೇಶವನ್ನು ಬಿಟ್ಟುಹೋಗುವಂತೆ ಆಡಳಿತದಿಂದ ನೀಡಲ್ಪಡುವ ನಿರ್ದೇಶನವಾಗಿದೆ. ಆದೇಶವನ್ನು ಪಾಲಿಸಲು ವಿಫಲವಾದರೆ ಬಂಧನ, ದೇಶಭ್ರಷ್ಟತೆ ಅಥವಾ ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ಕಾರಣವಾಗಬಹುದು.
ಇಮ್ರಾನ್ ಖಾನ್ ಅವರು ಯುನೈಟೆಡ್ ಸ್ಟೇಟ್ಸ್ನ ನಾಗರಿಕರಾಗಿದ್ದು, ಭಾರತೀಯ ವಲಸಿಗ ನಾಗರಿಕ ಕಾರ್ಡ್ ಅನ್ನು ಹೊಂದಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಭಾರತೀಯ ಮೂಲದ ವಿದೇಶಿ ನಾಗರಿಕರು ಭಾರತದಲ್ಲಿ ಅನಿರ್ದಿಷ್ಟಾವಧಿಗೆ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿಸುವ ವಲಸೆ ಸ್ಥಾನಮಾನವೇ ಭಾರತೀಯ ವಲಸಿಗ ನಾಗರಿಕ (OCI) ಆಗಿದೆ.
ಪೊಲೀಸರು ವಲಸೆ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಭಾರತೀಯ ಜನತಾ ಪಾರ್ಟಿ ನಾಯಕ ಕಿರಿತ್ ಸೋಮಯ್ಯ ಮುಂಬೈ ಪೊಲೀಸರ ಕ್ರಮವನ್ನು ಸ್ವಾಗತಿಸಿದ್ದಾರೆ. “ಇಂತಹ ಎಲ್ಲಾ ವಿದೇಶಿ ನಾಗರಿಕರು, ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ವಿದೇಶಿ ನಿಧಿಯನ್ನು ಬಳಸುವ ವ್ಯಕ್ತಿಗಳು ಇಂತಹ ಕ್ರಮವನ್ನು ಎದುರಿಸಬೇಕು” ಎಂದು ಅವರು ಹೇಳಿದರು.
ನೋಟಿಸ್ ಜಾರಿಗೊಳಿಸುವ ಮೊದಲು, ಸೋಮಯ್ಯ ಅವರು ಮುಂಬೈ ಪೊಲೀಸರಿಗೆ ಪತ್ರ ಬರೆದು ಪ್ರತಿಭನೆಯಲ್ಲಿ ಇಮ್ರಾನ್ ಖಾನ್ ಅವರ ಭಾಗಿತ್ವದ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು.
ಶನಿವಾರ ನಡೆದ ಪ್ರತಿಭಟನೆಯ ವೇಳೆ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ನಟ, ತಾನು ಮುಂಬೈನ ನಿವಾಸಿಯಾಗಿ ಭಾಗವಹಿಸುತ್ತಿದ್ದೇನೆ ಹೊರತು ಯಾವುದೇ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
“ನಾನು ಇಲ್ಲಿ ಒಬ್ಬ ನಾಗರಿಕನಾಗಿ, ಈ ನಗರದಲ್ಲಿ ವಾಸಿಸುವ ವ್ಯಕ್ತಿಯಾಗಿ ಬಂದಿದ್ದೇನೆ. ಓಡಾಡುವ ಸ್ವಾತಂತ್ರ್ಯವನ್ನು ಏಕೆ ನಿರ್ಬಂಧಿಸಲಾಗುತ್ತಿದೆ ಎಂಬುದನ್ನು ನೋಡಲು ನಾನು ಇಲ್ಲಿದ್ದೇನೆ. ಜನರ ಧ್ವನಿಯನ್ನು ಏಕೆ ಹತ್ತಿಕ್ಕಲಾಗುತ್ತಿದೆ?” ಎಂದು ಅವರು ಹೇಳಿದ್ದರು.
ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನದ ನಿರ್ವಹಣೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಈ ಸುತ್ತಿನ ಪ್ರತಿಭಟನೆಗಳಿಗೆ ಪ್ರಚೋದನೆಯು ಸೆಪ್ಟೆಂಬರ್ 23ರಂದು ದಿ ಇಂಡಿಯನ್ ಎಕ್ಸ್ಪ್ರೆಸ್ ನಡೆಸಿದ ತನಿಖೆಯಾಗಿದ್ದು, ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಚುನಾವಣಾ ಸಮಿತಿಯ ನಿರ್ಧಾರಗಳಿಗೆ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳಲ್ಲಿ 14 ಬಾರಿ ಔಪಚಾರಿಕವಾಗಿ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಕೆಲವನ್ನು ಅವರ ಗಮನಕ್ಕೆ ತಾರದೆ ತೆಗೆದುಕೊಳ್ಳಲಾಗಿದೆ ಎಂದು ಅದು ಬಹಿರಂಗಪಡಿಸಿತ್ತು.












