ಸನ್ಮಾರ್ಗ ವಾರ್ತೆ
ಸೂರತ್: ಸೂರತ್ನಲ್ಲಿ ನಕಲಿ ವೈದ್ಯಕೀಯ ಸೇವೆ ನೀಡುತ್ತಿದ್ದ 16 ಕ್ಲಿನಿಕ್ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಕೇವಲ ಹತ್ತನೇ ತರಗತಿ ಅಥವಾ ಹನ್ನೆರಡನೇ ತರಗತಿ ಕಲಿತ ಪ್ರಾವೀಣ್ಯತೆ ಮಾತ್ರ ಈ ನಕಲಿ ವೈದ್ಯರಿಗಿದೆ. ಈ ರೀತಿ ಇವರು ಹಲವು ರೋಗಿಗಳನ್ನು ವಂಚಿಸಿದ್ದಾರೆ. ಇವರ ಬಳಿ ಯಾವುದೇ ಅಧಿಕೃತ ವೈದ್ಯಕೀಯ ಅರ್ಹತೆ ಅಥವಾ ಪರವಾನಗಿ ಇರಲಿಲ್ಲ. ಬಾಲಿವುಡ್ ಸಿನೆಮಾ ಮುನ್ನಾ ಭಾಯ್ ಎಂಬಿಬಿಎಸ್ಗೂ ಸವಾಲಾದ ರೀತಿಯಲ್ಲಿ ರೋಗಿಗಳನ್ನು ವಂಚಿಸಿ ಚಿಕಿತ್ಸೆ ನೀಡಿ ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ.
ಚೀಫ್ ಡಿಸ್ಟ್ರಿಕ್ಟ್ ಹೆಲ್ತ್ ಆಫಿಸರ್ ಅನಿಲ್ ಪಟೇಲ್, ವಿಶೇಷ ಕಾರ್ಯಾಚರಣೆ ನಡೆಸಿ ನಕಲಿ ವೈದ್ಯರ ಮೋಸದ ಜಾಲವನ್ನು ಬಯಲಿಗೆಳೆದರು. ಇವರಲ್ಲಿ ಹಲವರು ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದವರು ಎಂದು ಅನಿಲ್ ಪಟೇಲ್ ವಿವರ ನೀಡಿದ್ದಾರೆ. ಇವರಲ್ಲಿ ಕೆಲವರು ತಮ್ಮ ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಅಥವಾ ವೈದ್ಯರ ಕೈಕೆಳಗೆ ಕೆಲಸ ಮಾಡುತ್ತಿದ್ದರು. ನಂತರ ಗುಜರಾತಿನ ಸೂರತ್ಗೆ ಬಂದು ವೈದ್ಯರಂತೆ ನಟಿಸಿ ಜ್ವರ, ಮಲೇರಿಯಾದಂತಹ ಸಾಧಾರಣ ರೋಗಗಳಿಗೆ ಚಿಕಿತ್ಸೆ ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಾನ್ಸಿಯಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವಿನೋದ್ ಬಿಶ್ವಾಸ್ ಪಿಯುಸಿ ಕಲಿತಿದ್ದ. ಅವನು ಸೂರತ್ನಲ್ಲಿ 30 ವರ್ಷಗಳಿಂದ ವೈದ್ಯನಾಗಿ ಪ್ರಾಕ್ಟೀಸ್ ಮಾಡುತ್ತಿದ್ದ. 54 ವರ್ಷದ ಸಿಯಾರಾಮ್ ಮೌರ್ಯ ಕಳೆದ ಇಪ್ಪತ್ತುನಾಲ್ಕು ವರ್ಷಗಳಿಂದ ದವಾಖಾನೆ ನಡೆಸುತ್ತಿದ್ದಾನೆ. ಮಹೇಂದ್ರ ಸಿಂಗ್ ಯಾದವ್, ಅಲೋಕ್ ಸಿಂಗ್, ಅಜಯ್ ಕುಮಾರ್ ಸಿಂಗ್, ಜಿತೇಂದ್ರ ವರ್ಮಾ, ಗೌತಂ ಪ್ರಸಾದ್ ಮುಂತಾದವರು ನಕಲಿ ವೈದ್ಯಕೀಯ ಸೇವೆ ನೀಡುತ್ತಿರುವ ಆರೋಪಿಗಳಾಗಿದ್ದಾರೆ. ಆದರೆ ಯಾವುದೇ ವೈದ್ಯಕೀಯ ಪದವಿ ಇವರಲ್ಲಿರಲಿಲ್ಲ.
ಈ ರೀತಿ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಇಂತಹ ನಕಲಿ ವೈದ್ಯರ ವಿರುದ್ಧದ ತಪಾಸಣೆ ಮತ್ತು ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.












