ಡೊನಾಲ್ಡ್ ಟ್ರಂಪ್ ವಿರುದ್ಧವೇ ತಿರುಗಿಬಿದ್ದ ಮಗ; ಇರಾನ್ ಯುದ್ಧಕ್ಕೆ ಅಮೆರಿಕವನ್ನು ಎಳೆದುತರಬೇಡಿ ಎಂದು ಎಚ್ಚರಿಕೆ

0
348

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಇರಾನ್ ಜೊತೆ ನಡೆಯುತ್ತಿರುವ ಸಂಘರ್ಷದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬದೊಳಗೇ ಭಿನ್ನಾಭಿಪ್ರಾಯಗಳಿವೆ ಎಂದು ವರದಿಯಾಗಿದೆ. ‘ದಿ ಅಟ್ಲಾಂಟಿಕ್’ ವರದಿಯ ಪ್ರಕಾರ, ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ತಮ್ಮ ತಂದೆಯೊಂದಿಗೆ ನಡೆದ ಖಾಸಗಿ ಸಂಭಾಷಣೆಯಲ್ಲಿ ಇರಾನ್ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅಮೆರಿಕವನ್ನು ಮಧ್ಯಪ್ರಾಚ್ಯದ ಮತ್ತೊಂದು ಯುದ್ಧದಲ್ಲಿ ಸಿಲುಕಿಸದಂತೆ ಎಚ್ಚರಿಕೆ ನೀಡಿದ್ದಾರೆ.

2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ, ಅಮೆರಿಕವು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಯುದ್ಧಕ್ಕೆ ಸಿಲುಕಿಕೊಳ್ಳುವುದನ್ನು ತಮ್ಮ ತಂದೆ ತಪ್ಪಿಸಬೇಕು ಎಂದು ಡಾನ್ ಜೂನಿಯರ್ ಬಯಸಿದ್ದರು. ಆದಾಗ್ಯೂ, ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳ ಪ್ರಕಾರ, ನಂತರ ಅಮೆರಿಕವು ಇರಾನ್ ಜೊತೆ ದೀರ್ಘಕಾಲೀನ ಸೇನಾ ಸಂಘರ್ಷದಲ್ಲಿ ತೊಡಗಿಕೊಳ್ಳುವಂತಾಯಿತು.

ಮೂಲವೊಂದರ ಪ್ರಕಾರ, ಡಾನ್ ಜೂನಿಯರ್ ಅವರು ಇರಾನ್ ಯುದ್ಧದ ವಿರುದ್ಧ ತಮ್ಮ ವಿರೋಧವನ್ನು ಖಾಸಗಿ ಮಾತುಕತೆಗಳಲ್ಲಿ ಪದೇ ಪದೇ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಅವರು ಸಾರ್ವಜನಿಕವಾಗಿ ತಮ್ಮ ತಂದೆಯ ವಿರುದ್ಧ ಮಾತನಾಡುವುದನ್ನು ತಪ್ಪಿಸಿಕೊಂಡಿದ್ದಾರೆ. ಅವರನ್ನು ಚೆನ್ನಾಗಿ ಬಲ್ಲವರಿಗೆ ಈ ಖಾಸಗಿ ನಿಲುವಿನಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮೂಲಗಳು ತಿಳಿಸಿವೆ. ವಿದೇಶಿ ಸೇನಾ ಕಾರ್ಯಾಚರಣೆಗಳಿಗಿಂತ ಅಮೆರಿಕದ ದೇಶೀಯ ಪ್ರಾಮುಖ್ಯತೆಗಳಿಗೆ ಹೆಚ್ಚಿನ ಒತ್ತು ನೀಡುವ ರಿಪಬ್ಲಿಕನ್ ಪಕ್ಷದ ಬಣಕ್ಕೆ ಡಾನ್ ಜೂನಿಯರ್ ಹತ್ತಿರವಾಗಿದ್ದಾರೆ ಎಂದು ಪರಿಗಣಿಸಲಾಗಿದೆ.

MAGA ಶಿಬಿರದಲ್ಲೂ ಹೆಚ್ಚಿದ ಭಿನ್ನಾಭಿಪ್ರಾಯ

ಇರಾನ್ ಯುದ್ಧವು ಟ್ರಂಪ್ ಅವರ ರಾಜಕೀಯ ನೆಲೆಯಾಗಿರುವ ‘ಮೇಕ್ ಅಮೆರಿಕ ಗ್ರೇಟ್ ಅಗೈನ್(MAGA) ಶಿಬಿರದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗಪಡಿಸಿದೆ. ವಿದೇಶಿ ಯುದ್ಧಗಳಿಗಾಗಿ ಸಂಪನ್ಮೂಲಗಳನ್ನು ಖರ್ಚು ಮಾಡುವುದರಿಂದ ಅಮೆರಿಕದ ದೇಶೀಯ ಸಮಸ್ಯೆಗಳು, ಆರ್ಥಿಕ ಪ್ರಾಧನ್ಯತೆಗಳು ಮತ್ತು ನಾಗರಿಕರ ಅಗತ್ಯತೆಗಳಿಂದ ಗಮನ ಬೇರೆಡೆಗೆ ಸರಿಯುತ್ತದೆ ಎಂದು ಈ ಶಿಬಿರದ ಕೆಲವು ನಾಯಕರು ಮತ್ತು ಬೆಂಬಲಿಗರು ನಂಬುತ್ತಾರೆ.

ಜೆಡಿ ವಾನ್ಸ್ ಸೇರಿದಂತೆ ಹಲವು ಅಧಿಕಾರಿಗಳಿಂದ ಕಳವಳ

ಟ್ರಂಪ್ ಆಡಳಿತದ ಕೆಲವು ಹಿರಿಯ ಅಧಿಕಾರಿಗಳು ಕೂಡ ಇರಾನ್ ಸಂಘರ್ಷದ ಬಗ್ಗೆ ಖಾಸಗಿಯಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ‘ದಿ ಅಟ್ಲಾಂಟಿಕ್’ ವರದಿ ಮಾಡಿದೆ. ಇವರಲ್ಲಿ ಉಪಾಧ್ಯಕ್ಷ ಜೆಡಿ ವಾನ್ಸ್ ಕೂಡ ಸೇರಿದ್ದಾರೆ. ಇಸ್ರೇಲ್‌ನ ಸೇನಾ ಕಾರ್ಯಾಚರಣೆಯನ್ನು ಬೆಂಬಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಚರ್ಚೆ ನಡೆಯುವಾಗ, ಕೆಲವು ಅಧಿಕಾರಿಗಳು ಸಂಘರ್ಷದಲ್ಲಿ ಅಮೆರಿಕದ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಸಿಐಎ (CIA) ನಿರ್ದೇಶಕ ಜಾನ್ ರ್ಯಾಟ್‌ಕ್ಲಿಫ್ ಮತ್ತು ವಿದೇಶಾಂಗ ಕಾರ್ಯಕರ್ತ ಮಾರ್ಕೊ ರೂಬಿಯೊ ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೆಬ್ರವರಿಯಲ್ಲಿ ಮಂಡಿಸಿದ ಆರಂಭಿಕ ಯೋಜನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಕೇವಲ ವೈಮಾನಿಕ ದಾಳಿಗಳ ಮೂಲಕ ಮಾತ್ರ ಯಾವುದೇ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಗುರಿಯನ್ನು ಸಾಧಿಸುವುದು ಎಷ್ಟು ದೂರದವರೆಗೆ ಸಾಧ್ಯ ಎಂಬುದು ಅವರ ಕಳವಳವಾಗಿತ್ತು.