ಸನ್ಮಾರ್ಗ ವಾರ್ತೆ
ಬೆಂಗಳೂರು: ಆಹಾರ ಇಲಾಖೆಯ ಅನ್ನ ಸೇವಾ ಆ್ಯಪ್ನಲ್ಲಿನ ತಾಂತ್ರಿಕ ತೊಂದರೆ ಸರಿಪಡಿಸುವಂತೆ ಆಗ್ರಹಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ರಿಝ್ವಾನ್ ಅರ್ಷದ್ ಅವರಿಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಮನವಿ ಸಲ್ಲಿಸಿತು.
ಬೆಂಗಳೂರಿನಲ್ಲಿಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ರಿಝ್ವಾನ್ ಅರ್ಷದ್ ಅವರನ್ನು ಭೇಟಿಯಾದ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ನಿಯೋಗವು, ಸಾರ್ವಜನಿಕರಿಗೆ ಇ-ಕೆವೈಸಿ ಸೌಲಭ್ಯ ನೀಡುತ್ತಿರುವ ಅನ್ನ ಸೇವಾ ಆ್ಯಪ್ನಲ್ಲಿ ಕೆಲವು ತಾಂತ್ರಿಕ ತೊಂದರೆಗಳನ್ನು ಸಾರ್ವಜನಿಕರು ಅನುಭವಿಸುತ್ತಿರುವ ಬಗ್ಗೆ ಮನವಿ ಪತ್ರದ ಮೂಲಕ ಗಮನ ಸೆಳೆದರು.
ಅನ್ನ ಸೇವೆ ಆ್ಯಪ್ನಲ್ಲಿ ಮೊಬೈಲ್ ನಂಬರ್ ಬದಲಾವಣೆಗೆ ಅವಕಾಶ ನೀಡಿಲ್ಲ. ಹಲವು ಸಾರ್ವಜನಿಕರ ಮೊಬೈಲ್ ನಂಬರ್ಗಳು ಬದಲಾಗಿದ್ದು, ಇದರಿಂದಾಗಿ ಒಟಿಪಿ ಕೂಡ ಹಳೆಯ ನಂಬರ್ಗೆ ಹೋಗುತ್ತಿದೆ. ಇದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಮೊಬೈಲ್ ನಂಬರ್ ಬದಲಾವಣೆಗೂ ಅವಕಾಶ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಯಿತು. ಈ ಬಗ್ಗೆ ಸ್ಪಂದಿಸಿದ ಸಚಿವರು, ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು, ಪರಿಹರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅನ್ನ ಸೇವಾ ಆ್ಯಪ್ನಲ್ಲಿನ ತಾಂತ್ರಿಕ ತೊಂದರೆ ಸರಿಪಡಿಸಲು ಇಲಾಖೆಯು ಹಂಚಿಕೊಂಡಿರುವ ಹೆಲ್ಪ್ ಲೈನ್ ನಂಬರ್ಗೆ ಕರೆ ಮಾಡಿದರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ, ಈ ಬಗ್ಗೆ ಕೂಡ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆಯೂ ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ತೀರ್ಥಹಳ್ಳಿ, ಬೆಂಗಳೂರು ನಗರ ಸೋಲಿಡಾರಿಟಿ ಕಾರ್ಯದರ್ಶಿ ಸುಹೇಲ್ ಅಹ್ಮದ್ ಉಪಸ್ಥಿತರಿದ್ದರು.












