ಸನ್ಮಾರ್ಗ ವಾರ್ತೆ
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ನಡೆಯುತ್ತಿರುವಂತೆಯೇ, ಪಟ್ಟಿಯಿಂದ ಮತದಾರರನ್ನು ಹೊರಗಿಡಲು ಹಾಗೂ ಹೆಸರನ್ನು ಸೇರಿಸುವುದರ ವಿರುದ್ಧ ಆಕ್ಷೇಪಣೆಗಳಾಗಿ ‘ಫಾರ್ಮ್ 7’ ಅರ್ಜಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಜೂನ್ 16 ಮತ್ತು ಅಕ್ಟೋಬರ್ 22ರ ನಡುವೆ ರಾಜ್ಯದಲ್ಲಿ ಚುನಾವಣಾ ಆಯೋಗವು ಒಟ್ಟು 2,28,917 ಫಾರ್ಮ್ 7 ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ.
ಸೆಪ್ಟೆಂಬರ್ 23ರವರೆಗೆ ಸ್ವೀಕರಿಸಲಾದ ಫಾರ್ಮ್ 7 ಅರ್ಜಿಗಳ ಸಂಖ್ಯೆ ಕೇವಲ 58,475 ಆಗಿತ್ತು. ಆದಾಗ್ಯೂ, ತದನಂತರದ ತಿಂಗಳಲ್ಲಿ 1,70,442 ಹೊಸ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸೆಪ್ಟೆಂಬರ್ 23ರವರೆಗೆ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಯ (ಸಿಇಒ) ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮತದಾರರ ಪಟ್ಟಿಯ ಅಂತಿಮ ಆವೃತ್ತಿಯು ಅಕ್ಟೋಬರ್ 27ರಂದು ಪ್ರಕಟಗೊಳ್ಳಲಿದೆ.
ರಾಜಕೀಯ ವಿವಾದ ಮತ್ತು ಅನಿಯಮಿತತೆಗಳ ಆರೋಪಗಳು
ಫಾರ್ಮ್ 7 ಅರ್ಜಿಗಳ ವ್ಯಾಪಕ ದುರ್ಬಳಕೆ ಆರೋಪವು ರಾಜ್ಯದಲ್ಲಿ ದೊಡ್ಡ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷವು, ವಿರೋಧ ಪಕ್ಷವಾದ ಬಿಜೆಪಿಯು ಅಂತಹ ಅರ್ಜಿಗಳನ್ನು ದೊಡ್ ಪ್ರಮಾಣದಲ್ಲಿ ಸಲ್ಲಿಸುವ ಮೂಲಕ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದೆ. ಈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಈ ವಿಷಯದ ಕುರಿತು ಸಿಇಒ ಕಚೇರಿ ಮುಂದೆ ಪ್ರತಿಭನೆಯನ್ನು ಆಯೋಜಿಸಿತ್ತು. ಇದರ ಬೆನ್ನಲ್ಲೇ, ಚುನಾವಣಾ ಆಯೋಗವು ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್ಒ) ಮೂಲಕ ತನಿಖೆಗೆ ಆದೇಶಿಸಿದೆ. ಆದಾಗ್ಯೂ, ಬಿಜೆಪಿ ಪಕ್ಷವು ಕಾಂಗ್ರೆಸ್ನ ಆರೋಪಗಳನ್ನು ತಳ್ಳಿಹಾಕಿದೆ.
ಫಾರ್ಮ್ 7 ರ ವ್ಯಾಪಕ ಸಲ್ಲಿಕೆಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿವೆ. ಅಂತಹ ಸಾಮೂಹಿಕ ಅರ್ಜಿಗಳ ಕುರಿತಾದ ಮೊದಲ ಮಾಹಿತಿಯು ಬಿಜಾಪುರದಲ್ಲಿ ಬೆಳಕಿಗೆ ಬಂದಿತು. ಇಲ್ಲಿ 4,666 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಬೆಂಗಳೂರಿನಿಂದ ಹೆಚ್ಚಿನ ಆರೋಪಗಳು
ಚುನಾವಣಾ ಆಯೋಗದ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯಿಂದ ಅತಿ ಹೆಚ್ಚು ಅಂದರೆ 24,268 ಫಾರ್ಮ್ 7 ಅರ್ಜಿಗಳು ಬಂದಿವೆ. ಬಿಬಿಎಂಪಿ ದಕ್ಷಿಣ ವಲಯವು 19,662 ಅರ್ಜಿಗಳನ್ನು ಮತ್ತು ಬಿಬಿಎಂಪಿ ಉತ್ತರ ವಲಯವು 18,659 ಅರ್ಜಿಗಳನ್ನು ಸ್ವೀಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯು 10,496 ಆಕ್ಷೇಪಣೆಗಳನ್ನು ಸ್ವೀಕರಿಸಿದೆ.
ಇದರ ಜೊತೆಗೆ, ಚುನಾವಣಾ ಆಯೋಗವು ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಫಾರ್ಮ್ 6 ರ ಮೂಲಕ 10.42 ಲಕ್ಷ ಅರ್ಜಿಗಳನ್ನು ಮತ್ತು ವಿಳಾಸ ತಿದ್ದುಪಡಿ ಸೇರಿದಂತೆ ಬದಲಾವಣೆಗಳಿಗಾಗಿ ಫಾರ್ಮ್ 8 ರ ಮೂಲಕ 13.10 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ.
ಮತದಾರರ ಪಾಲ್ಗೊಳ್ಳುವಿಕೆಯಲ್ಲಿ ಭಾರೀ ಕುಸಿತ
ಆಗಸ್ಟ್ನಲ್ಲಿ ದತ್ತಾಂಶ ಸಂಗ್ರಹಣೆ ಪ್ರಕ್ರಿಯೆಯು ಪೂರ್ಣಗೊಂಡಾಗಿನಿಂದಲೂ ಎಸ್ಐಆರ್ ಪ್ರಕ್ರಿಯೆಯು ಕರ್ನಾಟಕದಲ್ಲಿ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯಾಗಿದೆ. ದತ್ತಾಂಶ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಕರಡು ಪಟ್ಟಿಯಿಂದ 1.08 ಕೋಟಿಗೂ ಹೆಚ್ಚು ಜನರನ್ನು ಹೊರಗಿಡಲಾಗಿದ್ದು, ಇದು ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು 5.54 ಕೋಟಿಯಿಂದ 4.46 ಕೋಟಿಗೆ ತಗ್ಗಿಸಿದೆ.
ಕರಡು ಪಟ್ಟಿಯ ಪರಿಶೀಲನೆಯ ಸಮಯದಲ್ಲಿ ನೋಟಿಸ್ಗಳನ್ನು ಪಡೆದ 43.82 ಲಕ್ಷ ಮತದಾರರ ವಿಚಾರಣಾ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಸಿಇಒ ಕಚೇರಿಯು ಘೋಷಿಸಿದೆ. ಈ ಜನರ ಪೈಕಿ ಶೇಕಡಾ 10 ರಿಂದ 13 ರಷ್ಟು ಮಂದಿಯನ್ನು ಅಂತಿಮ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಪರಿಷ್ಕರಣೆ ಪ್ರಕ್ರಿಯೆಗಿಂತ ಮುಂಚೆ ಅಸ್ತಿತ್ವದಲ್ಲಿದ್ದ ಪಟ್ಟಿಯಲ್ಲಿರುವ ಸುಮಾರು 1.2 ಕೋಟಿ ಮತದಾರರನ್ನು ಅಂತಿಮ ಪಟ್ಟಿಯಿಂದ ಹೊರಗಿಡಲಾಗುವುದು ಎಂದು ಅಂದಾಜು ಮಾಡಲಾಗಿದೆ.












