ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್: ಇರಾನ್ನಿಂದ ಎಲ್ಪಿಜಿ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಮತ್ತು ಗಡಿಗಳು ಮುಚ್ಚಲ್ಪಟ್ಟಿರುವುದರಿಂದ ಪಾಕಿಸ್ತಾನದಲ್ಲಿ ತೀವ್ರ ಅನಿಲ (ಗ್ಯಾಸ್) ಬಿಕ್ಕಟ್ಟು ಉಲ್ಬಣಗೊಂಡಿದೆ. ವರದಿಗಳ ಪ್ರಕಾರ, ಕೆಲವು ಪ್ರದೇಶಗಳಲ್ಲಿ 12 ಕೆಜಿ ಸಿಲಿಂಡರ್ ಬೆಲೆ 10,000 ಪಾಕಿಸ್ತಾನಿ ರೂಪಾಯಿಗಳನ್ನು ಮೀರಿದೆ. ದುಬಾರಿ ಗ್ಯಾಸ್ನಿಂದಾಗಿ ಕಟುಂಬದ ಬಜೆಟ್ ಮೇಲೆ ತೀವ್ರ ಹೊರೆ ಬಿದ್ದಿದೆ. ಗಡಿಯಲ್ಲಿ ಓಡಾಟ ನಿಂತಿದ್ದರಿಂದ ಗ್ಯಾಸ್ ತುಂಬಿದ ನೂರಾರು ಟ್ರಕ್ಗಳು ಮತ್ತು ಟ್ಯಾಂಕರ್ಗಳು ಸಿಲುಕಿಹಾಕಿಕೊಂಡಿವೆ ಎಂದು ವರದಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಗ್ಯಾಸ್ ಲಭ್ಯತೆ ಮತ್ತು ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹಲವು ನಗರಗಳಲ್ಲಿ ಮನೆ ಬಳಕೆಯ ಸಿಲಿಂಡರ್ಗಳ ಬೆಲೆ ಗಗನಕ್ಕೇರಿದ್ದರೆ, ಕೆಲವು ಪ್ರದೇಶಗಳಲ್ಲಿ ಕಾಳ ಸಂತೆಯ ದೂರುಗಳು ಸಹ ಕೇಳಿಬಂದಿವೆ.
ಪಾಕಿಸ್ತಾನ ಎಲ್ಪಿಜಿ ಅಸೋಸಿಯೇಷನ್ ಪ್ರಕಾರ, ಪ್ರತಿದಿನ ಸುಮಾರು 7,000 ಮೆಟ್ರಿಕ್ ಟನ್ ಎಲ್ಪಿಜಿ ಇರಾನ್ನಿಂದ ಪಾಕಿಸ್ತಾನಕ್ಕೆ ಬರುತ್ತದೆ. ಗ್ವಾದರ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಶಮ್ಸುಲ್ ಹಕ್ ಮಾತನಾಡಿ, ಕೇವಲ ಗ್ಯಾಬದ್-ರಿಮ್ದಾನ್ ಗಡಿ ಗೇಟ್ ಮೂಲಕವೇ ಪ್ರತಿದಿನ 4,000 ಟನ್ಗಳಿಗೂ ಅಧಿಕ ಗ್ಯಾಸ್ ಪಾಕಿಸ್ತಾನ ತಲುಪುತ್ತಿತ್ತು ಎಂದಿದ್ದಾರೆ. ಅವರ ಪ್ರಕಾರ, ಸದ್ಯ ಈ ಪೂರೈಕೆ ಸಂಪೂರ್ಣವಾಗಿ ಬಂದ್ ಆಗಿದೆ.
ಪಾಕಿಸ್ತಾನದ ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ (OGRA) ಮೂಲಗಳ ಪ್ರಕಾರ, ಇರಾನ್ ಜೊತೆಗಿನ ಗಡಿ ಮುಚ್ಚಿರುವುದು ದೇಶದಲ್ಲಿ ಎಲ್ಪಿಜಿ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪೂರೈಕೆ ವ್ಯತ್ಯಯದಿಂದಾಗಿ ಮಾರುಕಟ್ಟೆಯಲ್ಲಿ ಗ್ಯಾಸ್ ಲಭ್ಯತೆ ಕಡಿಮೆಯಾಗಿ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಪಾಕಿಸ್ತಾನವು ಇರಾನ್ ಹೊರತುಪಡಿಸಿ ಇರಾಕ್ ಮತ್ತು ಒಮಾನ್ನಿಂದಲೂ ಎಲ್ಪಿಜಿ ಆಮದು ಮಾಡಿಕೊಳ್ಳುತ್ತದೆ. ಆದರೂ, ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ತಡೆಯಿಂದಾಗಿ ಈ ದೇಶಗಳಿಂದ ಬರುವ ಪೂರೈಕೆಯೂ ಬಾಧಿತವಾಗಿದೆ ಎಂದು ವರದಿಯಾಗಿದೆ.












