ಸನ್ಮಾರ್ಗ ವಾರ್ತೆ
ನವದೆಹಲಿ: ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ವಂದೇ ಮಾತರಂ’ನ ಎಲ್ಲಾ ಆರೂ ಪ್ಯಾರಗಳನ್ನು ಪೂರ್ಣವಾಗಿ ಹಾಡಬೇಕೆಂಬ ಕೇಂದ್ರ ಗೃಹ ಸಚಿವಾಲಯದ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಗಳನ್ನು ಪರಿಶೀಲಿಸಿದ ನಂತರ ಕೇಂದ್ರದಿಂದ ವಿವರಣೆ ಕೋರಿದೆ.
ಕೇಂದ್ರ ಗೃಹ ಸಚಿವಾಲಯವು 2026 ರ ಜನವರಿ 28 ಮತ್ತು ಜುಲೈ 9 ರಂದು ಹೊರಡಿಸಿದ ವಿವಾದಾತ್ಮಕ ಆದೇಶಗಳನ್ನು ಅರ್ಜಿದಾರರು ಸುಪ್ರೀಂ ಕೋರ್ಟ್ನಲ್ಲಿ ಸವಾಲು ಮಾಡಿದ್ದಾರೆ. ನಾಗ್ಪುರ ಮೂಲದ ಬೌದ್ಧ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ ಬಿ.ಡಿ. ಬೋರ್ಕರ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಶ್ರಮಿಸುವ ‘ಪ್ರಪೋರ್ಷನಲ್ ರಿಪ್ರೆಸೆಂಟೇಶನ್ ಅಗ್ಯಿಟೇಶನ್ ಕಮಿಟಿ’ಯ ಅಧ್ಯಕ್ಷರಾದ ಮಾಜಿ ಐಎಎಸ್ ಅಧಿಕಾರಿ ಬಾಲಕೃಷ್ಣನ್ ಸತ್ಯಭಾಮಾ ಮಾಓಜಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆನಂದಮಠಕ್ಕೂ ಮುಂಚಿನ ಪ್ರಕೃತಿಯ ವರ್ಣನೆ ಮತ್ತು ಧಾರ್ಮಿಕ ಪರಿವರ್ತನೆ
ಯಾವುದೇ ಧಾರ್ಮಿಕ ದೇವತೆಯನ್ನು ಉಲ್ಲೇಖಿಸದ, ಕಳೆದ 79 ವರ್ಷಗಳಿಂದ ನಡೆದುಕೊಂಡು ಬಂದಿದ್ದ ‘ವಂದೇ ಮಾತರಂ’ನ ಮೊದಲ ಎರಡು ನುಡಿಗಳನ್ನು ಮಾತ್ರ ಹಾಡುವ ಸಂಪ್ರದಾಯವನ್ನು ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ರದ್ದುಗೊಳಿಸಿದೆ ಎಂದು ಬಿ.ಡಿ. ಬೋರ್ಕರ್ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಲಾಗಿದೆ. 1870 ರ ದಶಕದ ಆರಂಭದಲ್ಲಿ ಬಂಕಿಮಚಂದ್ರ ಚಟರ್ಜಿ ಅವರು ಬರೆದ ಮೊದಲ ಎರಡು ಪ್ಯಾರಾಗಳು ಅವರ ‘ಆನಂದಮಠ’ ಕಾದಂಬರಿಗಿಂತ ಮುಂಚಿತವಾಗಿಯೇ ರಚನೆಯಾಗಿದ್ದವು. ಅವು ಮಾತೃಭೂಮಿಯ ನೈಸರ್ಗಿಕ ಸೌಂದರ್ಯವನ್ನು ಶ್ಲಾಘಿಸುತ್ತವೆಯೇ ಹೊರತು ಯಾವುದೇ ಧರ್ಮ ಅಥವಾ ದೇವತೆಗೆ ಸಂಬಂಧಿಸಿಲ್ಲ. ಆದರೆ, ಆನಂದಮಠ ಕಾದಂಬರಿಯಲ್ಲಿ ಸೇರಿಸಲಾದ ಮೂರರಿಂದ ಆರನೇ ಪ್ಯಾರಾಗಳು ಈ ಗೀತೆಯನ್ನು ಹಿಂದೂ ದೇವತೆಗಳಾದ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯರ ಪ್ರಾರ್ಥನೆಯಾಗಿ ಪರಿವರ್ತಿಸುತ್ತವೆ. ಅಲ್ಲದೆ, ಕಾದಂಬರಿಯಲ್ಲಿ ಶತ್ರುಗಳಾಗಿ ಬಿಂಬಿತವಾಗಿರುವ ಮುಸ್ಲಿಮರ ವಿರುದ್ಧದ ಯುದ್ಧದ ಕರೆಯನ್ನೂ ಇದು ಒಳಗೊಂಡಿದೆ. ಇದನ್ನು ಸಂಪೂರ್ಣವಾಗಿ ಹಾಡುವಂತೆ ನಾಗರಿಕರನ್ನು ಒತ್ತಾಯಿಸುವುದು ರಾಷ್ಟ್ರೀಯ ಸೋದರತ್ವವನ್ನು ನಾಶಪಡಿಸುತ್ತದೆ ಮತ್ತು ಕೋಮು ವಿಭಜನೆಗಳನ್ನು ಪೋಷಿಸುತ್ತದೆ ಎಂದು ಬೋರ್ಕರ್ ವಾದಿಸಿದ್ದಾರೆ.
‘ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ’; ರದ್ದುಪಡಿಸಲು ಮಾಜಿ ಐಎಎಸ್ ಅಧಿಕಾರಿ ಆಗ್ರಹ
ಸಂಪೂರ್ಣ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ತಮ್ಮ ಅಂತಃಕರಣದ ಸ್ವಾತಂತ್ರ್ಯ ಮತ್ತು ಸಂವಿಧಾನವು ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಮಾಜಿ ಐಎಎಸ್ ಅಧಿಕಾರಿ ಬಾಲಕೃಷ್ಣನ್ ಸತ್ಯಭಾಮಾ ಮಾಓಜಿ ವಾದಿಸಿದ್ದಾರೆ.
“ನಾನು ವೈಷ್ಣವ ಮತ್ತು ಶಾಕ್ತೀಯ ಆಚರಣೆಗಳು ಅಥವಾ ಸಂಕುಚಿತ ಧಾರ್ಮಿಕ ನಂಬಿಕೆಗಳನ್ನು ಒಪ್ಪಿಕೊಳ್ಳದ ಪರಿಶಿಷ್ಟ ಜಾತಿಯ ಹಿಂದೂ. ಆದರೆ ಆನಂದಮಠದ ಈ ಆರು ಪ್ಯಾರಾಗಳು ‘ಧಾರ್ಮಿಕ ಯುದ್ಧ ಗೀತೆ’ ಅಂತಹ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಐತಿಹಾಸಿಕವಾಗಿ, ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನವನ್ನು ನೀಡಲು ಯಾವುದೇ ನಿರ್ದಿಷ್ಟ ಅಧಿಕೃತ ನಿರ್ಧಾರವಿಲ್ಲದಿದ್ದರೂ, ದಶಕಗಳ ಸಂಪ್ರದಾಯ ಮತ್ತು ರೂಢಿಯ ಮೂಲಕ ಅದರ ಎರಡು ಪ್ಯಾರಾಗಳ ರೂಪವನ್ನು ರಾಷ್ಟ್ರಗೀತೆಯಾಗಿ ಸ್ವೀಕರಿಸಲಾಗಿತ್ತು. ಆ ಸಂಪ್ರದಾಯವನ್ನು ಮುರಿದು ಹೊಸ ಆರು ಪ್ಯಾರಾ ಗಳ ಗೀತೆಯನ್ನು ಹೇರಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ.” ಎಂದು ಮಾಓಜಿ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಆದೇಶಗಳನ್ನು ಸಾಂವಿಧಾನಿಕವಾಗಿ ಅಸಿಂಧು ಎಂದು ಘೋಷಿಸಿ ರದ್ದುಗೊಳಿಸಬೇಕು ಮತ್ತು ಮೊದಲ ಎರಡು ನುಡಿಗಳು ಮಾತ್ರ ಭಾರತದ ರಾಷ್ಟ್ರಗೀತೆಯಾಗಿ ಉಳಿಯಬೇಕು ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ವಕೀಲ ವೈಭವ್ ಚೌಧರಿ ಅವರ ಮೂಲಕ ಸಲ್ಲಿಕೆಯಾದ ಈ ಅರ್ಜಿಯನ್ನು ಜಿ. ಮೋಹನ್ ಗೋಪಾಲ್, ವೈಭವ್ ಚೌಧರಿ, ಮಯಾಂಕ್ ಸಿಂಗ್ ರಾವತ್ ಮತ್ತು ಸಯ್ಯದ್ ಅಹಮದ್ ಸಿದ್ಧಪಡಿಸಿದ್ದಾರೆ.
ಟಿ.ಎಂ. ಕೃಷ್ಣ ಅವರ ಅರ್ಜಿ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯ ತಿದ್ದುಪಡಿ
ಪ್ರಸಿದ್ಧ ಕರ್ನಾಟಿಕ್ ಸಂಗೀತಗಾರ ಟಿ.ಎಂ. ಕೃಷ್ಣ ಅವರೂ ಈ ಹಿಂದೆ ಕೇಂದ್ರದ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ವಂದೇ ಮಾತರಂ ಗಾಯನಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ’ಯ ತಿದ್ದುಪಡಿಯನ್ನು ಕೃಷ್ಣ ಪ್ರಶ್ನಿಸಿದ್ದರು.
ಅಂತಃಕರಣದ ಆಧಾರದ ಮೇಲೆ ವಂದೇ ಮಾತರಂನ ಆರೂ ಪ್ಯಾರಾಗಳನ್ನು ಅಥವಾ ಯಾವುದೇ ಭಾಗವನ್ನು ಹಾಡಲು ನಿರಾಕರಿಸುವ ವ್ಯಕ್ತಿಯ ವಿರುದ್ಧ ಯಾವುದೇ ಕ್ರಿಮಿನಲ್ ನಡಾವಳಿಗಳು ಇರಬಾರದು ಎಂದು ಈ ಪ್ರಕರಣವನ್ನು ಪರಿಶೀಲಿಸುವಾಗ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಮೌಖಿಕವಾಗಿ ವೀಕ್ಷಿಸಿತ್ತು. ಸುಪ್ರೀಂ ಕೋರ್ಟ್ ನವೆಂಬರ್ 30 ರಂದು ಟಿ.ಎಂ. ಕೃಷ್ಣ ಅವರ ಅರ್ಜಿ ಮತ್ತು ಹೊಸ ಅರ್ಜಿಗಳ ವಿಚಾರಣೆಯನ್ನು ಮತ್ತೆ ನಡೆಸಲಿದೆ.












