ಸನ್ಮಾರ್ಗ ವಾರ್ತೆ
ಲಕ್ನೋ: ಹಿಂಸಾಚಾರದ ಮೂಲಕ ಸರ್ಕಾರವನ್ನು ಉರುಳಿಸುವ ಉದ್ದೇಶದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಸರ್ಕಾರಿ ಉದ್ಯೋಗಗಳನ್ನು ನಿರಾಕರಿಸಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.
ಸರ್ಕಾರಿ ಉದ್ಯೋಗಗಳಿಗೆ ನೇರ ನೇಮಕಾತಿಗಾಗಿ ಆಯ್ಕೆಯಾದವರ ನಡತೆ/ಚಾರಿತ್ರ್ಯ ತಪಾಸಣೆಯನ್ನು ಕಟ್ಟುನಿಟ್ಟುಗೊಳಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಮಾರ್ಗದರ್ಶಿಸೂತ್ರಗಳನ್ನು ಹೊರಡಿಸಿದೆ. ಕೇವಲ ರಾಜಕೀಯ ನಿಲುವುಗಳು ಅಥವಾ ಅಭಿಪ್ರಾಯಗಳ ಆಧಾರದ ಮೇಲೆ ನೇಮಕಾತಿಯನ್ನು ನಿರಾಕರಿಸಲಾಗುವುದಿಲ್ಲ ಮತ್ತು ಎಫ್ಐಆರ್ ದಾಖಲಾದ ಅಥವಾ ತನಿಖೆ ಹಂತದಲ್ಲಿರುವ ಕಾರಣಕ್ಕಷ್ಟೇ ಅಭ್ಯರ್ಥಿಗಳನ್ನು ಅನರ್ಹಗೊಳಿಸಲಾಗುವುದಿಲ್ಲ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ರಂಗಕ್ಕಿಳಿದಿವೆ.
ಅಲಹಾಬಾದ್ ಹೈಕೋರ್ಟ್ನ ನಿರ್ದೇಶನದಂತೆ ನೇಮಕಾತಿ ಮತ್ತು ಸಿಬ್ಬಂದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ದೇವರಾಜ್ ಅವರು ಹೊಸ ಮಾರ್ಗದರ್ಶಿಸೂತ್ರಗಳನ್ನು ಹೊರಡಿಸಿದ್ದಾರೆ. ರಾಜ್ಯ ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿನ ನೇರ ನೇಮಕಾತಿಗಳಿಗೆ ಇವು ಅನ್ವಯವಾಗಲಿವೆ.
ಹಿಂಸಾಚಾರದ ಮೂಲಕ ಪ್ರಸ್ತುತ ವ್ಯವಸ್ಥೆಯನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ಸಂಸ್ಥೆಗಳ ಸದಸ್ಯರಾಗಿರುವವರನ್ನು ಸರ್ಕಾರಿ ಉದ್ಯೋಗಗಳಿಗೆ ಅನರ್ಹರೆಂದು ಪರಿಗಣಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
21 ವರ್ಷ ತಲುಪಿದ ವ್ಯಕ್ತಿಯು ಪರಿಶೀಲನೆಯ ದಿನಾಂಕಕ್ಕೆ ಪೂರ್ವಭಾವಿಯಾದ ಮೂರು ವರ್ಷಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೆ, ಆ ವ್ಯಕ್ತಿಯು ಇಂದಿಗೂ ಅವುಗಳಲ್ಲಿ ಸಕ್ರಿಯನಾಗಿದ್ದಾನೆ ಎಂಬುದಕ್ಕೆ ಇದನ್ನು ಸಾಕ್ಷಿಯಾಗಿ ಪರಿಗಣಿಸಬಹುದು. ಆದಾಗ್ಯೂ, ಈ ಮಧ್ಯೆ ವ್ಯಕ್ತಿಯ ನಡವಳಿಕೆಯಲ್ಲಿ ಧನಾತ್ಮಕ ಬದಲಾವಣೆಯನ್ನು ತೋರಿಸುವ ನಿರ್ದಿಷ್ಟ ಮಾಹಿತಿ ಲಭ್ಯವಾದರೆ ಈ ತೀರ್ಮಾನವನ್ನು ಮರುಪರಿಶೀಲಿಸಲಾಗುತ್ತದೆ.
ಅದೇ ಸಮಯದಲ್ಲಿ, ಒಬ್ಬರ ರಾಜಕೀಯ ನಿಲುವುಗಳು ಅಥವಾ ಅಭಿಪ್ರಾಯಗಳ ಆಧಾರದ ಮೇಲೆ ಮಾತ್ರವೇ ಸರ್ಕಾರಿ ಉದ್ಯೋಗಗಳಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಮಾರ್ಗದರ್ಶಿಸೂತ್ರಗಳು ಸ್ಪಷ್ಟಪಡಿಸುತ್ತವೆ. ಅಥವಾ ಕೇವಲ ಎಫ್ಐಆರ್ ದಾಖಲಾಗಿದೆ ಅಥವಾ ತನಿಖೆ ನಡೆಯುತ್ತಿದೆ ಎಂದ ಮಾತ್ರಕ್ಕೆ ನೇಮಕಾತಿಯನ್ನು ನಿರಾಕರಿಸುವಂತಿಲ್ಲ.
ಹೊಸ ಆದೇಶದ ವಿರುದ್ಧ ಸಮಾಜವಾದಿ ಪಕ್ಷ ತೀವ್ರವಾಗಿ ಕಿಡಿಕಾರಿದೆ. ಸರ್ಕಾರದ ಈ ಕ್ರಮವು ಬ್ರಿಟಿಷರ ಆಡಳಿತವನ್ನು ನೆನಪಿಸುತ್ತದೆ ಎಂದು ಪಕ್ಷದ ವಕ್ತಾರ ಉದಯವೀರ್ ಹೇಳಿದ್ದಾರೆ.
ಸ್ವತಂತ್ರ ಭಾರತದಲ್ಲಿ ಪ್ರತಿಭಟಿಸುವ ಹಕ್ಕನ್ನು ಸಂವಿಧಾನವು ಖಾತರಿಪಡಿಸಿದೆ. ಚುನಾವಣೆ ಮತ್ತು ಕಾನೂನು ಪ್ರಕ್ರಿಯೆಗಳ ಮೂಲಕ ಅಧಿಕಾರ ಬದಲಾವಣೆ ಸಾಧ್ಯ ಮತ್ತು ಇದರಲ್ಲಿ ಭಾಗವಹಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಅವರು ಬೆಟ್ಟು ಮಾಡಿದ್ದಾರೆ. ಸರ್ಕಾರದ ಬೆದರಿಸುವ ಧೋರಣೆಯನ್ನು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಶೀದ್ ಆಳ್ವಿ ಕೂಡ ಪ್ರತಿಕ್ರಿಯಿಸಿ, ಈ ಆದೇಶವು ಅತಿಯಾಯಿತು ಎಂದು ಹೇಳಿದ್ದು, ಸರ್ಕಾರವು ‘ಜೆನ್ ಝಿ’ ಪ್ರತಿಭಟನೆಗಳಿಗೆ ಹೆದರುತ್ತಿದೆ ಎಂಬುದಕ್ಕೆ ಈ ಕ್ರಮವೇ ಸಾಕ್ಷಿ ಎಂದು ಸೇರಿಸಿದ್ದಾರೆ.
ಹೊಸ ಮಾರ್ಗದರ್ಶಿಸೂತ್ರಗಳ ಪ್ರಕಾರ, ಕೇವಲ ಎಫ್ಐಆರ್ ದಾಖಲಾಗಿದೆ ಅಥವಾ ತನಿಖೆ ನಡೆಯುತ್ತಿದೆ ಎಂಬ ಕಾರಣವು ಸರ್ಕಾರಿ ನೇಮಕಾತಿಗಳಿಗೆ ತಡೆಯಾಗುವುದಿಲ್ಲ. ದೋಷಮುಕ್ತರಾದವರು, ಮಧ್ಯಸ್ಥಿಕೆಯ ಮೂಲಕ ಪ್ರಕರಣಗಳು ಇತ್ಯರ್ಥಗೊಂಡ ಪ್ರಕರಣಗಳು ಮತ್ತು ಬಾಲನ್ಯಾಯ ಕಾಯ್ದೆಯ ವ್ಯಾಪ್ತಿಗೆ ಬರುವ ಪ್ರಕರಣಗಳಿಗೂ ಈ ಸ್ವಯಂಚಾಲಿತ ಅನರ್ಹತೆ ಅನ್ವಯಿಸುವುದಿಲ್ಲ.
ನಡತೆ ತಪಾಸಣೆ ವರದಿ ಪಡೆಯುವಲ್ಲಿ ವಿಳಂಬವಾದರೆ, ನೇಮಕಾತಿ ಆದೇಶ ನೀಡುವುದನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಬಾರದು ಎಂದೂ ಮಾರ್ಗದರ್ಶಿಸೂತ್ರಗಳಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಯಿಂದ ಸ್ವಯಂ-ದೃಢೀಕೃತ ಘೋಷಣೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದ ನಂತರ ತಾತ್ಕಾಲಿಕ ನೇಮಕಾತಿ ಆದೇಶವನ್ನು ನೀಡಬಹುದು.
ಆದಾಗ್ಯೂ, ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಯು ಅನರ್ಹರೆಂದು ಕಂಡುಬಂದರೆ ಅಥವಾ ಅವರು ಸುಳ್ಳು ಮಾಹಿತಿ ನೀಡಿರುವುದು ಕಂಡುಬಂದರೆ, ನೇಮಕಾತಿಯನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಮುಂದಿನ ಕಾನೂನು ಕ್ರಮವನ್ನೂ ಕೈಗೊಳ್ಳಬಹುದು.
ಪ್ರಸ್ತುತ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹೊಸ ಮಾರ್ಗದರ್ಶಿಸೂತ್ರಗಳ ಅಡಿಯಲ್ಲಿ ಮತ್ತೆ ನಡತೆ ತಪಾಸಣೆಗೆ ಒಳಗಾಗಬೇಕಾಗಿಲ್ಲ. ಅಗತ್ಯ ಬಿದ್ದರೆ, ನೇಮಕಾತಿ ಪ್ರಾಧಿಕಾರಗಳು ಅವರು ಹಿಂದೆ ಕೆಲಸ ಮಾಡಿದ ಇಲಾಖೆಗಳಿಂದ ಮಾಹಿತಿಯನ್ನು ಪಡೆಯಬಹುದು.
ನಡತೆ ತಪಾಸಣೆಯ ಅರ್ಜಿ ಸ್ವೀಕರಿಸಿದ 30 ದಿನಗಳ ಒಳಗೆ ಜಿಲ್ಲಾ ಪೊಲೀಸ್ ಮತ್ತು ಸ್ಥಳೀಯ ಗುಪ್ತಚರ ವಿಭಾಗವು ವರದಿಯನ್ನು ಸಲ್ಲಿಸಬೇಕು. ವರದಿಗಳನ್ನು ಸಲ್ಲಿಸುವಲ್ಲಿ ಆಗುವ ಯಾವುದೇ ವಿಳಂಬವನ್ನು ಗೃಹ ಇಲಾಖೆಯು ಮೇಲ್ವಿಚಾರಣೆ ಮಾಡುತ್ತದೆ.
ಪ್ರತಿಕೂಲ ತಪಾಸಣೆ ವರದಿ ಬಂದಲ್ಲಿ, ಶಿಫಾರಸನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗೆ ತನ್ನ ಕಡೆಯ ವಿವರಣೆ ನೀಡಲು ಅವಕಾಶ ನೀಡಬೇಕು. ಇದನ್ನು ಖುದ್ದಾಗಿ ಅಥವಾ ಆನ್ಲೈನ್ ಮೂಲಕ ಮಾಡಬಹುದು.












