ಸನ್ಮಾರ್ಗ ವಾರ್ತೆ
ನವದೆಹಲಿ: ‘ಇಂಟರ್ನೆಟ್ ಫ್ರೀಡಂ ಫೌಂಡೇಶನ್’ (IFF) ಮತ್ತು ‘ಸಾಫ್ಟ್ವೇರ್ ಫ್ರೀಡಂ ಲಾ ಸೆಂಟರ್’ (SFLC) ಸಂಸ್ಥೆಗಳಿಗೆ ತಮ್ಮ ‘X’ ಹ್ಯಾಂಡಲ್ಗಳನ್ನು ತೆಗೆದುಹಾಕುವಂತೆ ತಿಳಿಸಿ ಕಳುಹಿಸಲಾದ ನೋಟಿಸ್ಗಳನ್ನು ದೆಹಲಿ ಪೊಲೀಸರು ಕಳುಹಿಸಿಲ್ಲ, ಬದಲಾಗಿ ಅವು ನಕಲಿ ನೋಟಿಸ್ಗಳಾಗಿವೆ ಎಂದು ಸಾಮಾಜಿಕ ಜಾಲತಾಣ ಸಂಸ್ಥೆ ‘X’ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ದೆಹಲಿ ಪೊಲೀಸರ ಅಧಿಕೃತ ಇಮೇಲ್ ಡೊಮೇನ್ ನೆಪದಲ್ಲಿ ಈ ವಂಚನೆ ಎಸಗಲಾಗಿದೆ ಹಾಗೂ ಆಂತರಿಕ ತನಿಖೆಯ ಸಮಯದಲ್ಲಿ ಇದು ಬೆಳಕಿಗೆ ಬಂದಿದೆ ಎಂದು ಕಂಪನಿ ಬಹಿರಂಗಪಡಿಸಿದೆ.
ದೆಹಲಿ ಪೊಲೀಸರು ಜಾರಿಗೊಳಿಸಿದ್ದಾರೆನ್ನಲಾದ ಬ್ಲಾಕಿಂಗ್ ನೋಟಿಸ್ಗಳನ್ನು ಪ್ರಶ್ನಿಸಿ IFF ಮತ್ತು SFLC ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಅಮಿತ್ ಮಹಾಜನ್ ಪರಿಶೀಲಿಸುತ್ತಿದ್ದ ವೇಳೆ ‘X’ ಪರ ವಕೀಲರು ಈ ಹೇಳಿಕೆ ನೀಡಿದ್ದಾರೆ. ಆ ಹ್ಯಾಂಡಲ್ಗಳನ್ನು ಬ್ಲಾಕ್ ಮಾಡುವುದಿಲ್ಲ ಎಂದು ‘X’ ನ್ಯಾಯಾಲಯಕ್ಕೆ ಭರವಸೆ ನೀಡಿದೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಗೆ ಅಧಿಕೃತ ದೂರು ನೀಡಿರುವುದಾಗಿಯೂ ಸಂಸ್ಥೆ ತಿಳಿಸಿದೆ. ‘X’ ನೀಡಿದ ವಿವರಣೆಯನ್ನು ದಾಖಲಿಸಿಕೊಂಡ ನ್ಯಾಯಾಲಯ, ಭವಿಷ್ಯದಲ್ಲಿ ಯಾವುದೇ ನಡಾವಳಿಗಳು ನಡೆದರೆ ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸುವ ಸ್ವಾತಂತ್ರ್ಯದೊಂದಿಗೆ ಎರಡೂ ಅರ್ಜಿಗಳನ್ನು ವಿಲೇವಾರಿ ಮಾಡಿದೆ.
ಆರ್ಎಸ್ಎಸ್ ಹೆಸರಿನಲ್ಲಿ ಬೆದರಿಕೆ ನೋಟಿಸ್ ಮತ್ತು ವೆಬ್ ಫಾರ್ಮ್ ಮೂಲಕ ನಕಲಿ ದೂರು
ಅಕ್ಟೋಬರ್ 29 ರಂದು IFF, SFLC ಮತ್ತು ಜಿಯೋಬ್ಲಾಕ್ಡ್ಇಂಡಿಯಾಗೆ (geoblockedindia) ಪ್ರೋಟಾನ್ ಮೇಲ್ ವಿಳಾಸದಿಂದ ಮೊದಲ ನೋಟಿಸ್ ಬಂದಿತ್ತು. ಮಾಹಿತಿ ತಂತ್ರಜ್ಞಾನ (IT) ಕಾಯಿದೆಯಡಿ ಸರ್ಕಾರದ ವಿಷಯ ನಿರ್ಬಂಧಿಸುವ ಆದೇಶಗಳನ್ನು ಬಹಿರಂಗವಾಗಿ ವಿರೋಧಿಸುವುದನ್ನು ನಿಲ್ಲಿಸುವಂತೆ ಮತ್ತು ಜಿಯೋ-ಬ್ಲಾಕ್ ಮಾಡಲಾದ ವಿಷಯಗಳನ್ನು ಪೋಸ್ಟ್ ಮಾಡುವುದನ್ನು ತಡೆಯುವಂತೆ ಕೋರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರಿನಲ್ಲಿ ನಕಲಿ ‘ಕಾನೂನು ನೋಟಿಸ್’ ಕಳುಹಿಸಲಾಗಿತ್ತು. ಅದರಲ್ಲಿ ವಕೀಲರ ಹೆಸರು, ನೋಂದಣಿ ಸಂಖ್ಯೆ ಅಥವಾ ಸ್ಪಷ್ಟ ಕಾನೂನು ವಿಭಾಗಗಳು ಇರಲಿಲ್ಲ. ಇದರ ನಂತರ ದೆಹಲಿ ಪೊಲೀಸ್ನ ವಿಶೇಷ ಪೊಲೀಸ್ ಕಮಿಷನರ್ ಅವರ ಹೆಸರು ಮತ್ತು ಅಧಿಕೃತ ಡೊಮೇನ್ ಇಮೇಲ್ ಅನ್ನು ದುರುಪಯೋಗಪಡಿಸಿಕೊಂಡು ‘X’ ನ ಸಾರ್ವಜನಿಕ ವೆಬ್ ಫಾರ್ಮ್ ಮೂಲಕ ನಕಲಿ ದೂರು ಸಲ್ಲಿಸಲಾಗಿತ್ತು. ಇದರ ಆಧಾರದ ಮೇಲೆ ‘X’ ಈ ಸಂಸ್ಥೆಗಳಿಗೆ ಮತ್ತು 16 ಬಳಕೆದಾರರಿಗೆ ಮೂರು ಗಂಟೆಗಳ ಒಳಗೆ ವಿಷಯವನ್ನು ತೆಗೆದುಹಾಕುವಂತೆ ನೋಟಿಸ್ ಕಳುಹಿಸಿತ್ತು.
ಡಿಜಿಟಲ್ ಭದ್ರತೆಯಲ್ಲಿ ಮೂಡುತ್ತಿರುವ ಗಂಭೀರ ಪ್ರಶ್ನೆಗಳು
ಈ ಘಟನೆಯ ಕುರಿತು ದೆಹಲಿ ಪೊಲೀಸರು ತಕ್ಷಣ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಆಗ್ರಹಿಸಿದೆ. ಕಾನೂನುಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತೋಟಿಯಲ್ಲಿಡಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಹೆಸರಿನಲ್ಲಿ ಸುಳ್ಳು ವರದಿ ಸಲ್ಲಿಸುವುದು ಗಂಭೀರ ಅಪರಾಧ ಎಂದು IFF ಬೆಟ್ಟು ಮಾಡಿದೆ. ನವೆಂಬರ್ 3 ರಂದು ಕಳುಹಿಸಲಾದ ನೋಟಿಸ್ಗೆ ದೆಹಲಿ ಪೊಲೀಸರು ಇನ್ನು ಪ್ರತಿಕ್ರಿಯಿಸಿಲ್ಲ, ಮತ್ತು ‘X’ ದೂರು ನೀಡಿದ ಹಿನ್ನೆಲೆಯಲ್ಲಾದರೂ ಪೊಲೀಸರು ಪ್ರತಿಕ್ರಿಯಿಸಬೇಕು ಎಂದು ಸಂಸ್ಥೆ ಆಗ್ರಹಿಸಿದೆ. ಐಪಿಸಿ ಸೆಕ್ಷನ್ 356 ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆಯು ಗುರುತಿಸಲಾಗದ ಅಪರಾಧವಾಗಿದ್ದು (non-cognizable offence), ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲಾದ ದೂರನ್ನು ಹೊರತುಪಡಿಸಿ ವೆಬ್ ಫಾರ್ಮ್ ಮೂಲಕ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅಧಿಕೃತವೆಂದು ತೋರುವ ಇಮೇಲ್ ವಿಳಾಸಗಳಿಂದ ಬರುವ ಸಂದೇಶಗಳು ಐಟಿ ಕಾಯಿದೆಯ ಸೆಕ್ಷನ್ 3(1)(d) ಅಡಿಯಲ್ಲಿ ಕಾನೂನುಬದ್ಧ ನಿರ್ದೇಶನಗಳಲ್ಲ ಎಂಬುದನ್ನು ತಂತ್ರಜ್ಞಾನ ವೇದಿಕೆಗಳು ಗುರುತಿಸಬೇಕೆಂದು IFF ನೆನಪಿಸಿದೆ. ಸೂಕ್ತ ಪರಿಶೀಲನೆ ಇಲ್ಲದೆ ಖಾತೆಗಳ ವಿರುದ್ಧ ಆತುರದ ಕ್ರಮ ಕೈಗೊಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.












