ಕಾನೂನಿನ ಮುಖವಾಡ ತೊಟ್ಟು ವಿರೋಧದ ದಮನ

0
18

✍️ ಆನಂದ್ ತೇಲ್ತುಂಬ್ಡೆ
ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ಖ್ಯಾತ  ಲೇಖಕರು 

ಸರಕಾರಕ್ಕೆ ಚಳವಳಿಗಳನ್ನು ಬೀದಿಯಲ್ಲಿ ನಿಯಂತ್ರಿಸಲು ಸಾಧ್ಯ ಆಗದೇ ಇರುವಾಗಲೆಲ್ಲಾ ನ್ಯಾಯಾಲಯದ ಮೆಟ್ಟಿಲೇರುವುದು ಅಧಿಕಾರದ ಶತಮಾನಗಳ ಹಳೆಯ ಚಾಳಿ. ಮೋದಿ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಭಿನ್ನಮತದ ದನಿಗಳನ್ನು ಹತ್ತಿಕ್ಕಲು ನಿರಂತರವಾಗಿ ಈ ಅಸ್ತ್ರವನ್ನೇ ಬಳಸುತ್ತಾ ಬಂದಿದೆ. 2018ರ ಭಿಮಾ ಕೋರೆಗಾಂವ್ ಪ್ರಕರಣದಲ್ಲಿ 16 ಜನ ಮಾನವ ಹಕ್ಕು ಹೋರಾಟಗಾರರನ್ನು ಸೆರೆವಾಸಕ್ಕೆ ತಳ್ಳಿದ್ದೇ ಇದಕ್ಕೆ ಸಾಕ್ಷಿ; ಹಾಗೆಯೇ 2020ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ (CAA) ವಿರುದ್ಧ ದನಿ ಎತ್ತಿದವರನ್ನು ಹತ್ತಿಕ್ಕಲು ಪ್ರಯತ್ನಿಸಲಾಯಿತು. ಅಂದಿನಿಂದ ಇಂದಿನವರೆಗೆ ಇಂತಹ ಪ್ರಕರಣಗಳ ಸುದೀರ್ಘ ಪಟ್ಟಿಯೇ ಇದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಇಂದು ನಿಧಾನವಾಗಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳನ್ನು ನುಂಗಿಹಾಕುವ ರಹಸ್ಯ ಕೋಣೆಯಂತಾಗುತ್ತಿದೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಧೈರ್ಯ ತೋರುವವರು ಅಂತ್ಯವಿಲ್ಲದ ಕಾನೂನು ಹೋರಾಟಗಳ ಜಾಲದಲ್ಲಿ ಸಿಲುಕಿ ಒದ್ದಾಡುವಂತೆ ಮಾಡಲಾಗುತ್ತಿದೆ. ಈಗ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೇಶಾದ್ಯಂತ ಭುಗಿಲೆದ್ದಿರುವ ಆಕ್ರೋಶವನ್ನು ಹತ್ತಿಕ್ಕಲು ಸರ್ಕಾರ ಇದೇ ದಾರಿಯನ್ನು ಹಿಡಿದಿದೆ. ಇಂದು ಭಾರತೀಯ ಪ್ರಜಾಪ್ರಭುತ್ವಕ್ಕೆ ತೀವ್ರ ಸವಾಲಾಗಿ ಪರಿಣಮಿಸಿರುವ ಜ್ಞಾನೇಶ್ ಕುಮಾರ್, ಮೋದಿ-ಶಾ ಜೋಡಿಯ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸುವ ಪ್ರಮುಖ ಆಧಾರಸ್ತಂಭವಾಗಿದ್ದಾರೆ.

ಜುಲೈನಲ್ಲಿ ನಡೆದ ಮೊದಲ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಮುಖಭಂಗ ಅನುಭವಿಸಿದ್ದ ಸರ್ಕಾರ, ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸಿರಲಿಲ್ಲ. ಅಕ್ಟೋಬರ್ 10 ರಂದು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕರೆ ನೀಡಿದ್ದ ಪ್ರತಿಭಟನೆಯನ್ನು ಎದುರಿಸಲು ಸರ್ಕಾರ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿತ್ತು. ಸರ್ಕಾರದ ಈ ಅತಿ ಆತಂಕವು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಯಾರೋ ಶತ್ರುಗಳು ದಾಳಿ ಮಾಡಿದಂತೆ ಇಡೀ ರಾಜಧಾನಿಯನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿತ್ತು. ಹತ್ತಾರು ಸಾವಿರ ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯಲಾಯಿತು; ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಕಟ್ ಮಾಡಲಾಯಿತು; ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಯಿತು; ಮತ್ತು ಜನರನ್ನು ಬಂಧಿಸಲು ಬಸ್‌ಗಳು ಹಾಗೂ ಡಿಟೆನ್ಷನ್‌ ಕೇಂದ್ರವನ್ನು ಸಿದ್ಧವಾಗಿಡಲಾಗಿತ್ತು. ಇದಲ್ಲದೆ, ಡ್ರೋನ್‌ಗಳು ಮತ್ತು ಮುಖ ಗುರುತಿಸುವ ಕ್ಯಾಮೆರಾಗಳನ್ನು ಭದ್ರತೆಗಾಗಿ ಬಳಸಿಕೊಳ್ಳಲಾಯಿತು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವ ನೆಪದಲ್ಲಿ, ಈ ಬೃಹತ್ ಜನಸಂದಣಿಯನ್ನು ತಡೆಯಲು ದೆಹಲಿ ಪೊಲೀಸರು ಸರ್ಕಾರದ ಸಂಪೂರ್ಣ ಬಲವನ್ನು ಪ್ರಯೋಗಿಸಲು ಸಿದ್ಧರಾಗಿದ್ದರು.

ದೆಹಲಿ ನಗರದ ಮಧ್ಯಭಾಗದಲ್ಲಿ ಜನ ಗುಂಪಾಗಿ ಸೇರುತ್ತಿದ್ದಂತೆಯೇ, ಇಂದಿರಾಗಾಂಧಿ ಏರ್‌ಪೋರ್ಟ್‌ನಲ್ಲಿ ನಿಂತಿದ್ದ ಏರ್ ಇಂಡಿಯಾ ವಿಮಾನದೊಳಗೆ ಒಂದು ಅಚ್ಚರಿಯ ಹೈಡ್ರಾಮಾ ನಡೆಯಿತು. ಅಕ್ಟೋಬರ್ 10 ರಂದು, ಸಿಜೆಪಿ (CJP) ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ವಿಮಾನದಿಂದ ಕೆಳಗೆ ಇಳಿಯುವಷ್ಟರಲ್ಲಿ ಅವರನ್ನು ವಿಮಾನದ ಒಳಗೆಯೇ ವಶಕ್ಕೆ ತೆಗೆದುಕೊಳ್ಳಲಾಯಿತು. ಪ್ರತಿಯೊಬ್ಬರೂ 50,000 ರೂ. ಬಾಂಡ್ ಪಾವತಿಸಿ, ಜಾಮೀನು ಒದಗಿಸಿ ಮತ್ತು ಮುಂದಿನ ಒಂದು ವರ್ಷದವರೆಗೆ ಯಾವುದೇ ಗಲಾಟೆ ಮಾಡುವುದಿಲ್ಲ ಎಂದು ಬರೆದುಕೊಟ್ಟ ಮೇಲೆ ಮಾತ್ರ ಅವರನ್ನು ಬಿಡುಗಡೆ ಮಾಡಲಾಯಿತು. ಸರ್ಕಾರದ ಈ ಕುತಂತ್ರವು ಇಲ್ಲಿ ಬಯಲಾಗಿದೆ: ಪ್ರತಿಭಟನೆಯ ರೂವಾರಿಗಳು ಸ್ಥಳಕ್ಕೆ ತಲುಪದಂತೆ ಅಡ್ಡಿಪಡಿಸುವುದು, ಜನರನ್ನು ಒಗ್ಗೂಡಲು ಬಿಡದಂತೆ ತಡೆಯುವುದು ಮತ್ತು ಮುನ್ನೆಚ್ಚರಿಕೆ ಬಂಧನದ ಕಾನೂನುಗಳನ್ನು ಬಳಸಿ ಅವರನ್ನು ಕೋರ್ಟ್-ಕಚೇರಿಗಳ ಅಲೆದಾಟದಲ್ಲಿ ಸಿಲುಕಿಸುವುದೇ ಸರ್ಕಾರದ ತಂತ್ರವಾಗಿತ್ತು.

ಜಂತರ್ ಮಂತರ್ ಹತ್ತಿರ ಪರಿಸ್ಥಿತಿ ತುಂಬ ಭಯಾನಕವಾಗಿತ್ತು: ಪೊಲೀಸರು ಪ್ರತಿಭಟನಾಕಾರರ ಮೇಲೆರಗಿ, ಅವರ ಪ್ರತಿರೋಧವನ್ನು ಹತ್ತಿಕ್ಕಿ, ಅವರನ್ನು ಬಸ್‌ಗಳಿಗೆ ನೂಕಿ ಯಾವುದೋ ಗುಪ್ತ ಸ್ಥಳಗಳಿಗೆ ಕರೆದೊಯ್ದರು. ಆಮೇಲೆ ನಗರದ ದೂರದ ಪ್ರದೇಶಗಳಲ್ಲಿ ಅವರನ್ನು ಗಂಟೆಗಳ ನಂತರ ಬಿಟ್ಟುಬಂದರು. ಆದರೆ ಹೆದರದ ಪ್ರತಿಭಟನಾಕಾರರು, ಪೊಲೀಸರ ಹಲ್ಲೆ ಮತ್ತು ಪದೇ ಪದೇ ಬಂಧಿಸಿದರೂ ಮತ್ತೆ ವಾಪಸ್ ಅದೇ ಜಾಗಕ್ಕೆ ಬಂದರು. ಸಾವಿರಾರು ಕ್ಯಾಮೆರಾಗಳು ಈ ಎಲ್ಲಾ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಂಡವು. ಈ ವಿಡಿಯೋಗಳು ಬಂದ ನಂತರ, ಪ್ರತಿಭಟನೆ ಶಾಂತಿಯುತವಾಗಿರಲಿಲ್ಲ ಎಂದು ಹೇಳಲು ಪೊಲೀಸರ ಬಳಿ ಯಾವುದೇ ಸುಳ್ಳು ಕಾರಣ ಉಳಿಯಲಿಲ್ಲ. 

ಇದರ ಬೆನ್ನಲ್ಲೇ ಸರ್ಕಾರವು ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನೆಗೆ ಮೀಸಲಾದ ಜಾಗ ಎಂಬ ಪಟ್ಟಿಯಿಂದ ಕೈಬಿಟ್ಟಿತು. ಪ್ರಜಾಪ್ರಭುತ್ವದಲ್ಲಿ ಜನರ ಪ್ರತಿಭಟನೆಯನ್ನು ಒಂದು ನಿರ್ದಿಷ್ಟ ಜಾಗಕ್ಕೆ ಮಾತ್ರ ಕಟ್ಟಿಹಾಕುವುದು ಸರ್ಕಾರದ ಪಾಲಿಗೆ ನಾಚಿಕೆಗೇಡಿನ ವಿಷಯ. ಆದರೆ, ಇಂತಹ ಪ್ರಜಾಪ್ರಭುತ್ವ ವಿರೋಧಿ ಕೆಲಸಗಳೂ ಕೂಡ ಈಗ ಎಲ್ಲರಿಗೂ ರೂಢಿಯಾಗಿಹೋಗಿವೆ. ಇನ್ನು ಮುಂದೆ ಜಂತರ್ ಮಂತರ್ ಪ್ರತಿಭಟನೆಗೆ ಸಿಗುವುದಿಲ್ಲವಾದ್ದರಿಂದ, ಜನರನ್ನು ಯಾರೂ ನೋಡದಂತಹ ದೂರದ ಸ್ಥಳಗಳಿಗೆ ಅಟ್ಟಬಹುದು. ಕೇವಲ ಗುಂಪನ್ನು ಚದುರಿಸುವುದಲ್ಲ, ಸರ್ಕಾರದ ವಿರುದ್ಧದ ಧ್ವನಿ ಜನರಿಗೆ ಕಾಣದಂತೆ ಕಣ್ಮರೆ ಮಾಡುವುದೇ ಇದರ ಹಿಂದಿನ ಕುತಂತ್ರವಾಗಿತ್ತು. 

ಅಕ್ಟೋಬರ್ 13 ರಂದು, ಜಂತರ್ ಮಂತರ್‌ನಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಂಕಾ ಅವರನ್ನು ಬಂಧಿಸಿದರು. ಅವರು ನಿಂತಿದ್ದ ಜಾಗವು “ಈಗ ಪ್ರತಿಭಟನಾ ತಾಣವಾಗಿಲ್ಲ” ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾಖಲಿಸಿಕೊಂಡು, ಅವರನ್ನು ಮುನ್ನೆಚ್ಚರಿಕೆ ಬಂಧನದ ನಂತರ ಐದು ದಿನಗಳ ಕಾಲ ಜೈಲಿಗೆ (ನ್ಯಾಯಾಂಗ ಬಂಧನ) ಕಳುಹಿಸಿದರು. 

ಅಕ್ಟೋಬರ್ 16 ರಂದು ಕನಾಟ್ ಪ್ಲೇಸ್‌ನಲ್ಲಿ “ಲೆಹ್ರಾ ದೋ ತಿರಂಗಾ” ಅಭಿಯಾನ ನಡೆಸಲು ಸಿಜೆಪಿ ಕರೆ ನೀಡಿತ್ತು. ಆದರೆ ಪೊಲೀಸರು ಅನುಮತಿ ನೀಡಲಿಲ್ಲ. ಪ್ರತಿಭಟನೆಗೆ ಹೋಗುವ ಮುಂಚೆಯೇ ಅಭಿಜಿತ್ ದೀಪ್ಕೆ ಮತ್ತು ಐಸಾ (AISA) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ತಡೆದು ವಶಕ್ಕೆ ತೆಗೆದುಕೊಂಡರು. ಆದರೂ ನೂರಾರು ಜನರು ರಾಷ್ಟ್ರಧ್ವಜ ಹಿಡಿದುಕೊಂಡು ಅಲ್ಲಲ್ಲಿ ದಿಢೀರ್ ಪ್ರತಿಭಟನೆ ಮಾಡಿದರು. ನೇಹಾ ಬೋರಾ ಅವರನ್ನು ಮಂಡಿ ಹೌಸ್ ಬಳಿ ಬಂಧಿಸಿ, ಮುಂದಿನ ವಿಚಾರಣೆವರೆಗೂ ಗಲಾಟೆ ಮಾಡುವುದಿಲ್ಲ ಎಂದು 10,000 ರೂ. ಬಾಂಡ್ ಮತ್ತು ಜಾಮೀನು ನೀಡುವಂತೆ ಸ್ಪೆಷಲ್ ಎಕ್ಸಿಕ್ಯುಟಿವ್ ಮ್ಯಾಜಿಸ್ಟ್ರೇಟ್ ನೋಟೀಸ್ ನೀಡಿದರು. ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ಬಳಿಯಿದ್ದ ದಾಖಲೆಗಳು, ಮೂರು ಜಿಡಿ (General Diary) ಎಂಟ್ರಿಗಳು, ನೇಹಾ ಮೇಲಿನ ಆರು ಎಫ್‌ಐಆರ್‌ಗಳು ಹಾಗೂ ವೀಡಿಯೊಗಳನ್ನು ಪರಿಶೀಲಿಸಿ, ಈ ವಿಷಯದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು. 

ಒಂದರ ಹಿಂದೆ ಒಂದರಂತೆ ಆರು ಎಫ್‌ಐಆರ್‌ಗಳು! ವಾಸ್ತವದಲ್ಲಿ “ನಾಯಕರನ್ನು ಕಾನೂನಿನ ಜಾಲದಲ್ಲಿ ಸಿಲುಕಿಸುವುದು” ಅಂದರೆ ಹೇಗಿರುತ್ತದೆ ಎಂಬುದಕ್ಕೆ ಇದುವೇ ಸ್ಪಷ್ಟ ಉದಾಹರಣೆಯಾಗಿದೆ. ಒಂದು ಘಟನೆಯು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯವಾಗಿರಬಹುದು. ಆದರೆ ಆರು ಎಫ್‌ಐಆರ್‌ಗಳು ದಾಖಲಾಗಿವೆ ಎಂದರೆ ಅದು ಅತ್ಯಂತ ಗಂಭೀರವಾದ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತದೆ: ಪ್ರತಿಭಟನಾ ನಾಯಕರಿಗೆ ಆರ್ಥಿಕ ಹಾಗೂ ಮಾನಸಿಕ ಹೊರೆ ಹೆಚ್ಚಿಸಲು ಮತ್ತು ಅವರನ್ನು ಹತ್ತಿಕ್ಕಲು ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆಯೇ? 

ಶಾಂತಿ ಮುಚ್ಚಳಿಕೆ (Peace Bond) ಎನ್ನುವುದು ಅಪರಾಧ ಸಾಬೀತಾದ ತೀರ್ಪಲ್ಲ, ಬದಲಿಗೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿದೆ. ಯಾವುದೇ ಅಪರಾಧ ಸಾಬೀತಾಗದೆಯೇ ಇದನ್ನು ಹೇರಲಾಗುತ್ತದೆ. ತನಿಖೆ ಮುಂದುವರಿಯುತ್ತಿರುವಾಗ ಶಾಂತಿ ಕಾಪಾಡುವುದಕ್ಕಾಗಿ ನೇಹಾ ಬೋರಾ ಅವರು ಒಬ್ಬ ಜಾಮೀನುದಾರರೊಂದಿಗೆ 10,000 ರೂ.ಗಳ ವೈಯಕ್ತಿಕ ಬಾಂಡ್‌ ಒದಗಿಸಬೇಕಾಗಿತ್ತು. ಆ ತನಿಖೆಯು ಸ್ವತಃ ಒಂದು ದೊಡ್ಡ ಹೊರೆಯಾಗಿದೆ: ಯಾವುದೇ ಅಪರಾಧ ಸಾಬೀತಾಗದಿದ್ದರೂ, ಅಧಿಕಾರಿಗಳ ಮುಂದೆ ಹಾಜರಾಗುವುದು, ವಕೀಲರನ್ನು ನೇಮಿಸಿಕೊಳ್ಳುವುದು ಮತ್ತು ಅನುಮಾನದ ನೆರಳಿನಲ್ಲಿ ಬದುಕುವುದು ಅನಿವಾರ್ಯವಾಗುತ್ತದೆ. ಈ ಇಡೀ ಕಾನೂನು ಪ್ರಕ್ರಿಯೆಯೇ ಅಂತಿಮವಾಗಿ ಒಂದು ಶುದ್ಧ ಶಿಕ್ಷೆಯಾಗಿ ಮಾರ್ಪಡುತ್ತದೆ. 

ಸೌರವ್‌ ದಾಸ್ ಮತ್ತು ಅಶುತೋಷ್‌ ರಂಕಾ ಅವರ ಮುನ್ನೆಚ್ಚರಿಕೆ ಬಂಧನಗಳು, ಅಭಿಜಿತ್‌ ದೀಪ್ಕೆ ಮತ್ತು ನೇಹಾ ಬೋರಾ ಅವರು ಯಾವುದೇ ತಪ್ಪು ಮಾಡುವ ಮುನ್ನವೇ ಅವರನ್ನು ವಶಕ್ಕೆ ತೆಗೆದುಕೊಂಡಿರುವುದು ಮತ್ತು ಸಾಲು ಸಾಲು ಎಫ್‌ಐಆರ್‌ಗಳು ದಾಖಲಾಗಿರುವುದರ ಹಿಂದಿರುವುದು ಇದೇ ತತ್ವ ಹಾಗೂ ತಂತ್ರಗಾರಿಕೆಯಾಗಿದೆ. ಸೌರವ್‌ ದಾಸ್‌ ಹಾಗೂ ಅಶುತೋಷ್‌ ರಂಕಾ ಅವರ ಜಾಮೀನು ಪ್ರಕ್ರಿಯೆಯನ್ನು ಸಾರ್ವಜನಿಕರ ಕಣ್ಣೆದುರೇ ದುರುದ್ದೇಶಪೂರ್ವಕವಾಗಿ ವಿಳಂಬಗೊಳಿಸಿ, ಅವರ ಬಂಧನದ ಅವಧಿಯನ್ನು ವಿಸ್ತರಿಸಿದ ಆಡಳಿತದ ಧೋರಣೆ ಅತ್ಯಂತ ಖಂಡನೀಯವಾಗಿತ್ತು. ಈ ಯಾವುದೇ ಕ್ರಮಗಳಿಗೂ ಸರ್ಕಾರವು ನ್ಯಾಯಾಲಯದಲ್ಲಿ ಅಪರಾಧ ಸಾಬೀತುಪಡಿಸುವ ಅಗತ್ಯವಿರುವುದಿಲ್ಲ; ಬದಲಿಗೆ ಪ್ರತಿಯೊಂದು ಕ್ರಮವೂ ವ್ಯಕ್ತಿಯ ಸಮಯ, ಹಣ, ಸ್ವಾತಂತ್ರ್ಯ ಮತ್ತು ಮನಶಾಂತಿಯನ್ನು ಕಸಿದುಕೊಳ್ಳುವ ಮೂಲಕ ಭಾರೀ ಬೆಲೆ ತೆರುವಂತೆ ಮಾಡುತ್ತದೆ—ಮತ್ತು ಇಂತಹ ದೌರ್ಜನ್ಯವನ್ನು ಪದೇ ಪದೇ ಪುನರಾವರ್ತಿಸಬಹುದಾಗಿದೆ. 

ಆಡಳಿತ ವ್ಯವಸ್ಥೆಯ ಈ ದಮನಕಾರಿ ತಂತ್ರವು ಯಶಸ್ವಿಯಾಗಲು ನ್ಯಾಯಾಲಯಗಳ ಒಂದು ನಡವಳಿಕೆಯೇ ಮುಖ್ಯ ಕಾರಣ: ಅದೆಂದರೆ ನ್ಯಾಯಾಲಯಗಳು ಕೇವಲ ಕಾಗದದ ಮೇಲಿನ ಲೇಬಲ್ ಅನ್ನು ನೋಡುತ್ತದೆಯೇ ವಿನಃ, ಅದರ ಹಿಂದೆ ಮರೆಮಾಚಿದ ಸತ್ಯವನ್ನು ಅಗೆದು ನೋಡಲು ಮುಂದಾಗುವುದಿಲ್ಲ. ಅಧಿಕೃತ ಕಡತಗಳಲ್ಲಿ “ಮುನ್ನೆಚ್ಚರಿಕೆ”, “ಶಾಂತಿಭಂಗ” ಅಥವಾ “ಅನಧಿಕೃತ ಸಮಾವೇಶ” ಎಂಬ ಹಣೆಪಟ್ಟಿ ಅಂಟಿಸಿದ್ದರೆ ಸಾಕು, ಆ ಪ್ರಕ್ರಿಯೆಯ ನಿಯಮಗಳು ಪಾಲನೆಯಾಗಿವೆಯಷ್ಟೇ ಎಂದು ನ್ಯಾಯಾಲಯ ಗಮನಿಸುತ್ತದೆಯೇ ವಿನಃ, ಆ ನೆಪಗಳು ಅಸಲಿಯೇ ಅಥವಾ ಕಪೋಲಕಲ್ಪಿತವೇ ಎಂಬುದನ್ನು ಪ್ರಶ್ನಿಸುವುದಿಲ್ಲ. ಪ್ರಜೆಗಳ ಅಳಲನ್ನು ಆಲಿಸುವಾಗ ಮತ್ತು ಸರ್ಕಾರದ ಅಧಿಕಾರ ದುರುಪಯೋಗದ ಪ್ರಸ್ತಾವನೆಗಳನ್ನು ಎದುರಿಸುವಾಗ, ಅತ್ಯಂತ ಕೆಳಗಿನ ಹಂತದ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಹಿಡಿದು ದೇಶದ ಅತ್ಯುನ್ನತ ನ್ಯಾಯಾಲಯದವರೆಗೆ ಎಲ್ಲವೂ ಇದೇ ಧೋರಣೆಯನ್ನು ಅನುಸರಿಸುತ್ತಾ ಬಂದಿವೆ. 

ದೆಹಲಿ ಹೈಕೋರ್ಟ್‌ನ ಈ ನಿರ್ಣಯವು ನ್ಯಾಯಾಂಗದ ಕ್ರಿಯಾಶೀಲತೆಯನ್ನು ಹಾಗೂ ಅದರ ಜಡತ್ವದ ಮಿತಿಗಳನ್ನು ಏಕಕಾಲದಲ್ಲಿ ಕನ್ನಡಿ ಹಿಡಿದು ತೋರಿಸುತ್ತದೆ. ನ್ಯಾಯಾಲಯವು ನೋಟೀಸನ್ನು ವಜಾಗೊಳಿಸಲು ನಿರಾಕರಿಸಿತಾದರೂ, ಅಧಿಕಾರಿಗಳು ಯಾರನ್ನು ನಂಬಿ ಕ್ರಮ ಕೈಗೊಂಡಿದ್ದರೋ ಆ ಎಲ್ಲಾ ದಾಖಲೆಗಳನ್ನು ನೇಹಾ ಬೋರಾ ಅವರಿಗೆ ಕಡ್ಡಾಯವಾಗಿ ತಲುಪಿಸಬೇಕೆಂದು ಆದೇಶಿಸಿತು. ಅಷ್ಟೇ ಅಲ್ಲದೆ, ಬಿಎನ್‌ಎಸ್‌ಎಸ್ (BNSS) ಕಾಯಿದೆಯ ಸೆಕ್ಷನ್ 135 ರ ಅಡಿಯಲ್ಲಿ, ತನಿಖೆಯ ಆರಂಭದ ಹಂತದಲ್ಲೇ ಬಾಂಡ್ ಪಡೆಯಲು ಅವಕಾಶವಿದೆಯೇ ಅಥವಾ ವಿಚಾರಣೆಯ ಹಂತದಲ್ಲಿ ಮಾತ್ರವೇ ಎಂಬ ಕಾನೂನು ಪ್ರಶ್ನೆಯನ್ನು ನ್ಯಾಯಾಲಯವು ಮುನ್ನೆಲೆಗೆ ತಂದಿತು. ಈ ತೀರ್ಪು ನೇಹಾ ತಪ್ಪಿತಸ್ಥೆ ಎಂದು ಹೇಳುವುದಿಲ್ಲ, ಅವರು ಬೇಕಾದರೆ ಮುಂದಿನ ದಿನಗಳಲ್ಲಿ ಈ ಕೇಸ್ ಅನ್ನು ಪ್ರಶ್ನಿಸಬಹುದು. ನೇಹಾ ಬೋರಾ ಅವರು “ನಾನು ಯಾವುದೇ ಕಾರಣಕ್ಕೂ ಆ ಬಾಂಡ್‌ಗೆ ಸಹಿ ಹಾಕುವುದಿಲ್ಲ” ಎಂದು ಧೈರ್ಯವಾಗಿ ತಿಳಿಸಿದ್ದಾರೆ. 

ಆದರೆ ಇದನ್ನು ಸುಪ್ರೀಂ ಕೋರ್ಟ್‌ನ ಭಾನುವಾರ ಕಲಾಪದೊಂದಿಗೆ ಹೋಲಿಸಿ ನೋಡಬೇಕು. ಪೊಲೀಸರು ಕಡ್ಡಾಯವಾಗಿ ಕಾನೂನನ್ನು ಪಾಲಿಸಬೇಕು ಎಂದು ಬಾಯಿಮಾತಿನ ಹಿತವಚನಗಳನ್ನು ಮಾತ್ರ ನೀಡುವ ನ್ಯಾಯಾಲಯವು, ಈ ತುರ್ತು ಸಂದರ್ಭದಲ್ಲಿ ಮಾಡಬೇಕಾದ ನಿಜವಾದ ಕೆಲಸವನ್ನು ಮಾಡಿಲ್ಲ; ಅಂದರೆ, ಇಡೀ ಕಾನೂನು ವ್ಯವಸ್ಥೆಯನ್ನು ತಪ್ಪು ಉದ್ದೇಶಗಳಿಗಾಗಿ ಬಳಸಲಾಗುತ್ತಿದೆಯೇ ಎಂದು ಕೋರ್ಟ್ ಪರಿಶೀಲಿಸಬೇಕಿತ್ತು. ಕೋರ್ಟ್ ನೇರವಾಗಿ ಕೈಜೋಡಿಸಬೇಕಿಲ್ಲ, ಸುಮ್ಮನಿರುವುದರ ಮೂಲಕವೂ ಅದು ತಪ್ಪುಗಳಿಗೆ ಬೆಂಬಲ ಕೊಟ್ಟಂತಾಗುತ್ತದೆ. ಪ್ರತಿಯೊಂದು ನೋಟೀಸ್, ಜೈಲು ಆದೇಶ ಮತ್ತು ಎಫ್‌ಐಆರ್‌ಗಳನ್ನು ಬೇರೆ ಬೇರೆ ಘಟನೆಗಳಂತೆ ಬಿಡಿ ಬಿಡಿಯಾಗಿ ನೋಡುವಾಗ, ಕೋರ್ಟ್ ಪರೋಕ್ಷವಾಗಿ ಆ ಎಲ್ಲದರ ಹಿಂದಿರುವ ತಪ್ಪಾದ ಪ್ಲಾನ್‌ಗೆ ಒಪ್ಪಿಗೆ ನೀಡಿದಂತೆ ಆಗುತ್ತದೆ. ಪ್ರತಿಯೊಂದು ಸಿಂಗಲ್ ಆರ್ಡರ್ ಅನ್ನು ಬೇಕಾದರೆ ನ್ಯಾಯಯುತವೆಂದು ವಾದಿಸಬಹುದು. ಆದರೆ ಎಲ್ಲ ಆದೇಶಗಳನ್ನು ಒಟ್ಟಾಗಿ ಸೇರಿಸಿ ನೋಡಿದಾಗ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. 

ಸರ್ಕಾರ ಮಾಡುತ್ತಿರುವ ದೊಡ್ಡ ತಪ್ಪು ಎಂದರೆ ಅದರ ‘ಭಯದ ಸಿದ್ಧಾಂತ’: ಅಂದರೆ, ಸ್ವಲ್ಪ ಮಟ್ಟಿನ ಕಾನೂನು ಕ್ರಮವು ಕೆಲವು ಪ್ರತಿಭಟನೆಗಳನ್ನು ತಡೆದರೆ, ಹೆಚ್ಚಿನ ಕಾನೂನು ಕ್ರಮವು ಇನ್ನೂ ಹೆಚ್ಚಿನ ಪ್ರತಿಭಟನೆಗಳನ್ನು ತಡೆಯುತ್ತದೆ ಎಂಬುದು ಸರ್ಕಾರದ ನಂಬಿಕೆ. ಆದರೆ ಭಯ ಎಂಬುದು ಶಿಕ್ಷೆಯು ಆಯ್ದ ಕೆಲವರಿಗೆ ಮಾತ್ರ ಅನ್ವಯವಾದಾಗ ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಬಂಧನಗಳು ದಿನನಿತ್ಯದ ಸಾಮಾನ್ಯ ಸಂಗತಿಯಾಗಿ ಬದಲಾಗಿ, ಅಕ್ಕಪಕ್ಕದವರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಜನಪ್ರತಿನಿಧಿಗಳೆಲ್ಲರನ್ನೂ ಒಟ್ಟಾಗಿ ಬಂಧಿಸಿದಾಗ, ಬಂಧನದ ಕಳಂಕವು (Stigma) ಕ್ಷೀಣಿಸುತ್ತಾ ಹೋಗುತ್ತದೆ. ಒಂದು ಕಾಲದಲ್ಲಿ ತೀವ್ರ ಭಯ ಹುಟ್ಟಿಸುತ್ತಿದ್ದ ಸಮನ್ಸ್‌ ಅಥವಾ ನೋಟೀಸ್, ಮುಂದೆ ಕೇವಲ ಒಂದು ಸಾಧಾರಣ ತೊಂದರೆಯಾಗಿ, ಕೊನೆಗೆ ಧೈರ್ಯ ಹಾಗೂ ಪ್ರತಿರೋಧದ ಲಾಂಛನವಾಗಿ (Badge of defiance) ಮಾರ್ಪಡುತ್ತದೆ. ಹೀಗಿರುವಾಗ, ಅದೇ ಮಟ್ಟದ ಭಯದ ಪ್ರಭಾವವನ್ನು ಕಾಯ್ದುಕೊಳ್ಳಲು ಸರ್ಕಾರವು ದಬ್ಬಾಳಿಕೆಯನ್ನು ಮತ್ತಷ್ಟು ತೀವ್ರಗೊಳಿಸಬೇಕಾಗುತ್ತದೆ. ಆದರೆ, ಇದು ಸರ್ಕಾರದ ಅಂತರರಾಷ್ಟ್ರೀಯ ಮತ್ತು ಸಾಂವಿಧಾನಿಕ ಮಾನ್ಯತೆಯನ್ನು ಮತ್ತಷ್ಟು ಕುಂದಿಸುತ್ತದೆ.

ಭಾರತವು ಈ ರೀತಿಯ ರಾಜಕೀಯ ಚಲನಶೀಲತೆಯನ್ನು ಹಿಂದೆಯೂ ಕಂಡಿದೆ. 1975-77ರ ತುರ್ತು ಪರಿಸ್ಥಿತಿಯ ಕಾಲದಲ್ಲಿ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಸೆನ್ಸಾರ್ ಮಾಡಲಾಯಿತು, ಆದರೆ ಅಂತಿಮವಾಗಿ ಆ ಸರ್ಕಾರವು ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಕ್ರಾಂತಿಕಾರಿ ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ನಡೆಸಿದ ಭಗತ್ ಸಿಂಗ್ ಅವರ ವಿಚಾರಣೆಯೇ, ಮುಂದೆ ಅವರ ವಿಚಾರಧಾರೆ ಮತ್ತು ಸಂದೇಶವನ್ನು ಜನರಿಗೆ ತಲುಪಿಸುವ ಪ್ರಮುಖ ವೇದಿಕೆಯಾಯಿತು. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳು ಬ್ಯಾರಿಕೇಡ್‌ಗಳು, ಕ್ರಿಮಿನಲ್ ಪ್ರಕರಣಗಳು ಮತ್ತು “ದೇಶದ್ರೋಹಿ” ಎಂಬ ಅಪವಾದಗಳನ್ನು ಎದುರಿಸಿದವು; ಆದರೆ ಅಂತಿಮವಾಗಿ ಆ ಕಾನೂನುಗಳನ್ನೇ ಸರ್ಕಾರವು ರದ್ದುಗೊಳಿಸಬೇಕಾಯಿತು.

2022ರಲ್ಲಿ ಶ್ರೀಲಂಕಾ, 2024ರಲ್ಲಿ ಬಾಂಗ್ಲಾದೇಶ ಮತ್ತು 2025ರಲ್ಲಿ ನೇಪಾಳದಲ್ಲಿ ನಡೆದ ಘಟನೆಗಳು ವಿಭಿನ್ನ ಹಿನ್ನೆಲೆಯನ್ನು ಹೊಂದಿದ್ದರೂ, ಯುವ ಪ್ರತಿಭಟನಾಕಾರರ ವಿರುದ್ಧದ ದಮನಕಾರಿ ಕ್ರಮಗಳು ಹೇಗೆ ಸಾರ್ವಜನಿಕರ ಅಸಮಾಧಾನವನ್ನು ಸಾಮೂಹಿಕ ಆಂದೋಲನವಾಗಿ ಮತ್ತು ರಾಜಕೀಯ ಕ್ರಾಂತಿಯಾಗಿ ಪರಿವರ್ತಿಸಿದವು ಎಂಬುದಕ್ಕೆ ಸಾಕ್ಷಿಯಾಗಿವೆ. ಈ ಎಲ್ಲಾ ಪ್ರಕರಣಗಳು ಒಂದೇ ರೀತಿಯದ್ದಲ್ಲ, ಮತ್ತು ಭಾರತವು ನೇಪಾಳದಂತಿಲ್ಲ ಎಂಬುದು ನಿಜ. ಆದರೆ ಇಲ್ಲಿ ಗ್ರಹಿಸಬೇಕಾದ ಪ್ರಮುಖ ಪಾಠವೆಂದರೆ: ಸಾರ್ವಜನಿಕ ಸಹನೆಯ ಮಿತಿಯನ್ನು ಮೀರಿ ನಡೆಸುವ ದಬ್ಬಾಳಿಕೆಯು, ವಿರೋಧದ ವಲಯವನ್ನು ಸಂಕುಚಿತಗೊಳಿಸುವ ಬದಲು ಅದನ್ನು ಇನ್ನಷ್ಟು ವಿಸ್ತರಿಸುತ್ತದೆ.

ತಿರುಗುಬಾಣ

ಸರ್ಕಾರ ಮಾಡುವ ಪ್ರತಿಯೊಂದು ತಪ್ಪಾದ ಹೆಜ್ಜೆಯೂ ಆ ಚಳವಳಿಯನ್ನು ಇನ್ನಷ್ಟು ಬಲಪಡಿಸುವ ಗಂಡಾಂತರವನ್ನು ಹೊಂದಿದೆ. ಸೌರವ್‌ ದಾಸ್ ಮತ್ತು ಅಶುತೋಷ್‌ ರಂಕಾ ಅವರ ಬಂಧನಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾದವು; ನೇಹಾ ಬೋರಾ ಅವರ ವಿರುದ್ಧದ ಶಾಂತಿ ಬಾಂಡ್ ಪ್ರಕ್ರಿಯೆಯು ಅವರ ಪ್ರಕರಣವನ್ನು ರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿ ಮಾಡಿ, ಚುನಾವಣಾ ಮತದಾರರ ಪಟ್ಟಿಯ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕ ಚರ್ಚೆಯನ್ನು ಪದೇ ಪದೇ ಮುನ್ನೆಲೆಗೆ ತಂದಿತು. ನೂರಾರು ಜನರು ರಾಷ್ಟ್ರಧ್ವಜವನ್ನು ಹಿಡಿದು ಅಕ್ಟೋಬರ್ 16 ರಂದು ನಡೆಸಿದ ದಿಢೀರ್ ಪ್ರತಿಭಟನೆಗಳು ಸರ್ಕಾರದ ಮುಂದಿರುವ ಒಂದು ಸಾಂಕೇತಿಕ ಇಕ್ಕಟ್ಟನ್ನು (Symbolic dilemma) ಜಗಜ್ಜಾಹೀರು ಮಾಡಿತು: ರಾಷ್ಟ್ರಧ್ವಜವನ್ನು ಹಿಡಿದು ಪ್ರತಿಭಟಿಸುವವರನ್ನು ಎದುರಿಸುವುದು, ತಾನೇ ರಾಷ್ಟ್ರದ ಪ್ರತಿನಿಧಿ ಎಂಬ ಸರ್ಕಾರದ ಹೇಳಿಕೆಯನ್ನು ಬುಡಮೇಲು ಮಾಡುತ್ತದೆ. ಡಿಜಿಟಲ್ ಯುಗದಲ್ಲಿ ಬೆಸೆದಿಕೊಂಡಿರುವ ಇಂದಿನ ಸಮಾಜದಲ್ಲಿ, ಬಂಧನಗಳು, ನೋಟೀಸ್‌ಗಳು ಮತ್ತು ನ್ಯಾಯಾಲಯದ ಆದೇಶಗಳು ಕೆಲವೇ ಗಂಟೆಗಳಲ್ಲಿ ವೀಡಿಯೊ ರೂಪದಲ್ಲಿ ಸೆರೆಯಾಗಿ, ಹರಿದಾಡಿ, ತೀವ್ರ ಪರಿಶೀಲನೆಗೆ ಒಳಪಡುತ್ತವೆ. ಇದರಿಂದಾಗಿ ಭಿನ್ನಮತೀಯರನ್ನು ಪ್ರತ್ಯೇಕಿಸಿ ಹತ್ತಿಕ್ಕುವುದು ಸರ್ಕಾರಕ್ಕೆ ಅತ್ಯಂತ ಕಷ್ಟಕರವಾಗುತ್ತದೆ.

ಇದು ಯಾವುದೇ ಖಚಿತ ವಿಜಯದ ಭವಿಷ್ಯ ನುಡಿಯುವುದಲ್ಲ. ದೀರ್ಘಕಾಲಿಕ ಕಾನೂನು ಪ್ರಕರಣಗಳು ಹೋರಾಟಗಾರರನ್ನು ದಣಿಸುತ್ತವೆ, ಮತ್ತು ಬಂಧನದ ನಿರಂತರ ಬೆದರಿಕೆಯು ಇತರರನ್ನು ಹಿಂದೆ ಸರಿಯುವಂತೆ ಮಾಡುತ್ತದೆ. ಆದರೆ ದಬ್ಬಾಳಿಕೆಗೆ ತನ್ನದೇ ಆದ ಮಿತಿಗಳಿವೆ: ಸರ್ಕಾರವು ಸಾರ್ವಜನಿಕರೊಂದಿಗೆ ಚರ್ಚೆ ನಡೆಸುವುದು (Engagement) ಅಥವಾ ದಬ್ಬಾಳಿಕೆಯನ್ನು ತೀವ್ರಗೊಳಿಸುವುದು (Escalation) – ಈ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಿದೆ; ಆದರೆ ಎರಡನೆಯ ಮಾರ್ಗವು ಅದರ ನೈತಿಕ ಮತ್ತು ಸಾಂವಿಧಾನಿಕ ಮಾನ್ಯತೆಗೆ ಮತ್ತಷ್ಟು ಭಾರಿ ಹಾನಿಯನ್ನುಂಟುಮಾಡುವ ಗಂಡಾಂತರವನ್ನು ಹೊಂದಿದೆ. 

ನ್ಯಾಯಾಲಯಗಳೂ ಸಹ ಇದೇ ರೀತಿಯ ಸಮಾಂತರ ಆಯ್ಕೆಯನ್ನು ಎದುರಿಸುತ್ತಿವೆ: ಪ್ರತಿ ನೋಟೀಸ್ ಮತ್ತು ನ್ಯಾಯಾಂಗ ಬಂಧನವನ್ನು ಕೇವಲ ಒಂದು ಪ್ರತ್ಯೇಕ ತಾಂತ್ರಿಕ ವಿಷಯವಾಗಿ ಪರಿಗಣಿಸುವುದು ಅಥವಾ ವಿಶಾಲವಾದ ಮಾದರಿಯನ್ನು (Wider pattern) ಪರಿಶೀಲಿಸಿ, ಕಾಯ್ದೆಗಳು ಭಿನ್ನಮತವನ್ನು ದಂಡಿಸುವ ಅಸ್ತ್ರಗಳಾಗಿ ಬದಲಾಗುವುದನ್ನು ತಡೆಯುವುದು. ಮೊದಲನೆಯ ವಿಧಾನವು ದಬ್ಬಾಳಿಕೆಯನ್ನು ಸಾಮಾನ್ಯೀಕರಣಗೊಳಿಸುವ ಅಪಾಯವನ್ನು ಹೊಂದಿದೆ; ಎರಡನೆಯ ವಿಧಾನವು ನ್ಯಾಯಾಂಗ ಪರಿಶೀಲನೆಯ ನಿಜವಾದ ಸಾಂವಿಧಾನಿಕ ಉದ್ದೇಶವನ್ನು ದೃಢಪಡಿಸುತ್ತದೆ.

ಸಾರಾಂಶವಿಷ್ಟೇ: ಕಾನೂನನ್ನು ದುರುಪಯೋಗಪಡಿಸಿಕೊಂಡು ಹೂಡುವ ಈ ಕಾನೂನು ಸಮರವು ಎಂದಿಗೂ ಜನರ ದೃಢಸಂಕಲ್ಪವನ್ನು ಅಥವಾ ಹೋರಾಟದ ಛಲವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿಲ್ಲ ಎಂಬುದನ್ನು ಸರ್ಕಾರ ಮತ್ತು ನ್ಯಾಯಾಲಯಗಳು ಕಡ್ಡಾಯವಾಗಿ ಅರ್ಥಮಾಡಿಕೊಳ್ಳಬೇಕು. 

ಕೃಪೆ: frontline.thehindu.com