ಸನ್ಮಾರ್ಗ ವಾರ್ತೆ
ಬುಲ್ಡೋಜರ್ಗಳು ರಾಜ್ಯದೊಂದಿಗೆ ಗುರುತಿಸಿಕೊಂಡಿರುವ ‘ಬ್ರ್ಯಾಂಡ್’ ಆಗಿ ಮಾರ್ಪಟ್ಟಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಗುರುವಾರ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ರಾಜ್ಯದಲ್ಲಿ ಟ್ರ್ಯಾಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿರುವ ಕಂಪನಿಯು ಬುಲ್ಡೋಜರ್ಗಳನ್ನೂ ಉತ್ಪಾದಿಸಬೇಕು ಎಂದು ಸಲಹೆ ನೀಡಿದ ಅವರು, “ಅವು ಈಗಾಗಲೇ ಈ ಪ್ರದೇಶದ ಬ್ರ್ಯಾಂಡ್ ಆಗಿರುವುದರಿಂದ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆಯಿರುತ್ತದೆ” ಎಂದು ಹೇಳಿದರು.
ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಪ್ರದೇಶದಲ್ಲಿ ಕಂಪನಿಯ ಘಟಕದ ಶಂಕುಸ್ಥಾಪನೆ ಸಮಾರಂಭದಲ್ಲಿ ಆದಿತ್ಯನಾಥ್ ಮಾತನಾಡುತ್ತಿದ್ದರು.
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ತೆರವು ಕಾರ್ಯಾಚರಣೆಗಳು (ನೆಲಸಮ) ಸಾಮಾನ್ಯವಾಗಿಬಿಟ್ಟಿವೆ. ಭಾರತೀಯ ಜನತಾ ಪಕ್ಷದ ಬೆಂಬಲಿಗರು ಆದಿತ್ಯನಾಥ್ ಅವರನ್ನು “ಬುಲ್ಡೋಜರ್ ಬಾಬಾ” ಎಂದು ಕೊಂಡಾಡಿದ್ದಾರೆ.
ಅಪರಾಧದ ಆರೋಪ ಹೊತ್ತ ವ್ಯಕ್ತಿಗಳ ಆಸ್ತಿಯನ್ನು ಶಿಕ್ಷೆಯ ರೂಪದಲ್ಲಿ ನೆಲಸಮಗೊಳಿಸಲು ಅಧಿಕಾರಿಗಳಿಗೆ ಭಾರತೀಯ ಕಾನೂನಿನಲ್ಲಿ ಯಾವುದೇ ಅವಕಾಶಗಳಿಲ್ಲ. ಆದಾಗ್ಯೂ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಪದ್ಧತಿ ಸಾಮಾನ್ಯವಾಗಿದೆ.
2024ರ ನವೆಂಬರ್ನಲ್ಲಿ, ಅಪರಾಧದ ಆರೋಪ ಹೊತ್ತ ವ್ಯಕ್ತಿಗಳ ಆಸ್ತಿಗಳನ್ನು ದಂಡನಾತ್ಮಕ ಕ್ರಮವಾಗಿ ನೆಲಸಮಗೊಳಿಸುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಕ್ರಮ ಒತ್ತುವರಿ ಎಂದು ಆರೋಪಿಸಲಾದ ನಿರ್ಮಾಣಗಳನ್ನು ಅಧಿಕಾರಿಗಳು ತೆರವುಗೊಳಿಸುವ ಮೊದಲು ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಕೋರ್ಟು ಹೇಳಿತ್ತು.












