✍️ ಏ.ಕೆ. ಕುಕ್ಕಿಲ
ಕುರ್ಆನನ್ನು ಪಠಿಸಿ ಸಂಸತ್ತಿನ ಕಲಾಪಕ್ಕೆ ಚಾಲನೆ ನೀಡುತ್ತಿರುವ ವೀಡಿಯೋ ವೊಂದು ಕಳೆದ ವಾರ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಧಾರ್ಮಿಕ ವಿದ್ವಾಂಸರಂತೆ ಕಾಣುವ ವ್ಯಕ್ತಿಯೋರ್ವರು ಈ ಇಡೀ ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದರು. ಮಾತ್ರವಲ್ಲ, ಕೊನೆಯಲ್ಲಿ ಬ್ಯಾಂಡ್ ಬಾರಿಸಿದ್ದರು. ಈ ಪ್ರಕ್ರಿಯೆಗೆ ತರಹೇವಾರಿ ಪ್ರತಿಕ್ರಿಯೆಗಳೂ ಬಂದಿದ್ದುವು. ಹಾಗಂತ,
ಈ ವೀಡಿಯೋದ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದು, ನಮ್ಮಿಂದ ಬಹುತೇಕ ಮರೆಯಾಗಿದ್ದ ಮತ್ತು ನಾವು ಚರ್ಚಿಸಿಯೇ ಇಲ್ಲದ ಒಂದು ಜಗತ್ತು. ಅದು ಬಂಗ್ಸಮೊರೋ ಎಂಬ ಸ್ವಾಯತ್ತ ಪ್ರದೇಶದ ಸಂಸತ್ತಿನ ದೃಶ್ಯವಾಗಿತ್ತು. ಹಾಗಾದ್ರೆ, ಈ ಬಂಗ್ಸಮೊರೋ ಅಂದರೆ ಏನು, ಅದು ಈ ಜಗತ್ತಿನ ಯಾವ ಭೂಭಾಗದಲ್ಲಿದೆ ಮತ್ತು ಅದು ದಿಢೀರಾಗಿ ಚರ್ಚೆಗೆ ಬರಲು ಕಾರಣ ಏನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.
ಇದು 7641 ದ್ವೀಪಗಳುಳ್ಳ ಫಿಲಿಪ್ಪೀನ್ಸ್ ಎಂಬ ರಾಷ್ಟ್ರದ ಭೂಭಾಗ. ಹಾಗಂತ, ಐತಿಹಾಸಿಕವಾಗಿ ಈ ಬಂಗ್ಸಮೊರೋ ಎಂದು ಕರೆಯಲ್ಪಡುವ ಸುಮಾರು 900 ದ್ವೀಪಸಮೂಹಗಳ ಪ್ರದೇಶ ಫಿಲಿಪ್ಪೀನ್ಸ್ನ ಭಾಗ ಆಗಿಯೇ ಇರಲಿಲ್ಲ. ಬಸಿಲಾನ್, ಸುಲು, ತಾವಿ-ತಾವಿ ಮತ್ತು ಮಿಂದನಾವೊ ಮುಂತಾದ ದ್ವೀಪಸಮೂಹಗಳು ಫಿಲಿಪ್ಪೀನ್ಸ್ ಎಂದು ಈಗ ಕರೆಯಲಾಗುವ ರಾಷ್ಟ್ರದಿಂದ ಬೇರ್ಪಟ್ಟೇ ಗುರುತಿಸಿಕೊಂಡಿದ್ದವು. ಇಲ್ಲಿನ ಜನಸಂಖ್ಯೆಯಲ್ಲಿ 90%ಕ್ಕಿಂತ ಹೆಚ್ಚಿನ ಜನರು ಮುಸ್ಲಿಮರು. ಆದರೆ, 1946ರಲ್ಲಿ ಫಿಲಿಪ್ಪೀನ್ಸ್ ಬ್ರಿಟಿಷರಿಂದ ಸ್ವತಂತ್ರಗೊಂಡಾಗ ಈ ಭೂಭಾಗವನ್ನೂ ಅದು ಆಕ್ರಮಿಸಿ ವಶಪಡಿಸಿಕೊಂಡಿತು. ಆದರೆ, ಈ ಮಿಂದನಾವೋ ದ್ವೀಪ ಸಮೂಹದ ಮುಸ್ಲಿಮರು ಇದನ್ನು ವಿರೋಧಿಸಿದರು. ಈ ವಿರೋಧಕ್ಕೆ ಐತಿಹಾಸಿಕ ಕಾರಣಗಳಿದ್ದುವು.
ಈ ಮಿಂದನಾವೋ ಸೇರಿದಂತೆ ಬಂಗ್ಸಮೊರೋ ಪ್ರದೇಶಕ್ಕೆ 14ನೇ ಶತಮಾನದಲ್ಲಿ ಇಸ್ಲಾಮಿನ ಪರಿಚಯವಾಯಿತು. ಮುಖ್ಯವಾಗಿ, ಅರಬಿಗಳು, ಮಲೇಶ್ಯಾ ಮತ್ತು ಇಂಡೋನೇಶ್ಯಾದ ವ್ಯಾಪಾರಿಗಳು ಈ ದ್ವೀಪಸಮೂಹಕ್ಕೆ ಕಾಲಿಟ್ಟರು ಮತ್ತು ಆ ಮೂಲಕ ಇಸ್ಲಾಮನ್ನೂ ಪರಿಚಯಿಸಿದರು. ಇದರಿಂದಾಗಿ ಈ ಪ್ರದೇಶವು ಸುಲ್ತಾನೇಟ್ಗಳ ಅಥವಾ ಮುಸ್ಲಿಮ್ ದೊರೆಗಳ ಆಳ್ವಿಕೆಯನ್ನು ಕಂಡಿತು. ನಮ್ಮಲ್ಲಿ ಮೊಘಲರು, ದೆಹಲಿ ಸುಲ್ತಾನರು, ಖಿಲ್ಜಿಗಳು, ತುಘಲಕ್ ಸಂತತಿಗಳು, ಬಹಮನೀ ಸುಲ್ತಾನರು ಎಂಬೆಲ್ಲಾ ರಾಜವಂಶಗಳು ಆಡಳಿತ ನಡೆಸಿದಂತೆಯೇ ಈ ದ್ವೀಪಸಮೂಹವನ್ನು ಸುಲು ಸುಲ್ತಾನರು ಮತ್ತು ಮಗುಇಂದನಾವೋ ಸುಲ್ತಾನರು ಎಂಬ ಎರಡು ರಾಜವಂಶಗಳು ಆಳಿದುವು. ಹೀಗೆ,
ಸುಲ್ತಾನರು ಈ ಬಂಗ್ಸಮೊರೋ ಎಂಬ ವಿಶಾಲ ದ್ವೀಪಸಮೂಹವನ್ನು ಆಳುತ್ತಿದ್ದಾಗ 1565ರಲ್ಲಿ ಫಿಲಿಪ್ಪೀನ್ಸ್ ಮೇಲೆ ಸ್ಪೇನ್ ದಾಳಿ ಮಾಡಿತು. ಮಾತ್ರವಲ್ಲ, ಉತ್ತರ ಮತ್ತು ಮಧ್ಯಭಾಗವನ್ನು ವಶಪಡಿಸಿಕೊಂಡಿತು. ಇದರ ಜೊತೆಗೇ ಕ್ರೈಸ್ತ ಧರ್ಮಕ್ಕೆ ದೊಡ್ಡಮಟ್ಟದಲ್ಲಿ ಮತಾಂತರವೂ ನಡೆಯಿತು. ಸ್ಪೇನ್ನ ಆಡಳಿತಗಾರರು ಈ ಮಿಂದನಾವೋ ದ್ವೀಪಸಮೂಹದ ಮುಸ್ಲಿಮರನ್ನು ಮೋರೋ ಎಂದು ಕರೆದರು. ಇವರ ಮೇಲೆ ದಾಳಿ ಮಾಡಿ ಈ ದ್ವೀಪ ಸಮೂಹವನ್ನು ವಶಪಡಿಸಿಕೊಳ್ಳಲು ಮುಂದಾದರು. ಅಂದಿನಿಂದ ಈ ಮಿಂದನಾವೋ ದ್ವೀಪದ ಮುಸ್ಲಿಮರ ಹೋರಾಟ ಪ್ರಾರಂಭವಾಯಿತು. ಈ ಹೋರಾಟ ಸುಮಾರು 330 ವರ್ಷಗಳ ಕಾಲ ನಡೆದು ಮೊನ್ನೆ ಮೊನ್ನೆ ಅಕ್ಟೋಬರ್ 30ರಂದು ಕೊನೆಗೊಂಡಿತು. ಇದು ಆಗ್ನೇಯ ಏಶ್ಯಾದಲ್ಲಿಯೇ ಅತೀ ದೀರ್ಘಕಾಲದ ವಸಾಹತು ವಿರೋಧಿ ಹೋರಾಟವಾಗಿ ಗುರುತಿಸಿಕೊಂಡಿದೆ.
1565ರಲ್ಲಿ ಸ್ಪೇನ್ ಸೇನೆ ಈ ಮುಸ್ಲಿಂ ದ್ವೀಪಗಳ ಮೇಲೆ ದಾಳಿ ಮಾಡಿದ್ದಲ್ಲದೇ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿತು. ವಿವಿಧ ರೀತಿಯ ಬಲಪ್ರಯೋಗವನ್ನು ನಡೆಸಿತು. ಆದರೆ ಅಲ್ಲಿನ ಮುಸ್ಲಿಮರು ಪ್ರತಿರೋಧ ಒಡ್ಡಿದರು. ತಮ್ಮ ಅಸ್ಮಿತೆಯನ್ನು ಬಿಟ್ಟು ಬಿಡಲು ನಿರಾಕರಿಸಿದರು. ಇಲ್ಲಿನ ಸುಲ್ತಾನರು ಸ್ಪೇನ್ ವಿರುದ್ಧ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡರು. ಸ್ಪೇನ್ ಸೇನೆ ಹೊರಪ್ರದೇಶಗಳನ್ನು ವಶಪಡಿಸಿಕೊಂಡರೂ ಈ ದ್ವೀಪಸಮೂಹದ ಒಳ ಪ್ರದೇಶಗಳಿಗೆ ನುಗ್ಗಲು ಸಾಧ್ಯವಾಗಲಿಲ್ಲ. ಇದಕ್ಕೆ ಈ ಸುಲ್ತಾನರ ಸೇನೆಯ ಯುದ್ಧ ತಂತ್ರವೂ ಒಂದು ಕಾರಣವಾಗಿತ್ತು. ಸಮುದ್ರ ಯುದ್ಧದಲ್ಲಿ ಸುಲ್ತಾನರ ಸೇನೆ ಹೆಚ್ಚು ನಿಪುಣತೆಯನ್ನು ಹೊಂದಿತ್ತು. ದಿಢೀರ್ ದಾಳಿ, ಗೆರಿಲ್ಲಾ ಮಾದರಿ ಯುದ್ಧಕ್ಕೆ ಇಲ್ಲಿನ ಮುಸ್ಲಿಮರು ಮೊರೆ ಹೋದರು. ದಾಳಿ ಮಾಡಿದ ಬಳಿಕ ಕಾಡೊಳಗೆ ಸೇರಿಕೊಳ್ಳುತ್ತಿದ್ದರು. ಫಿಲಿಪ್ಪೀನ್ಸ್ ಎಂಬ 7 ಸಾವಿರಕ್ಕಿಂತಲೂ ಅಧಿಕ ದ್ವೀಪಸಮೂಹವನ್ನು ಒಂದೇ ಏಟಿಗೆ ವಶಪಡಿಸಿಕೊಳ್ಳಲು ಶಕ್ತವಾಗಿದ್ದ ಸ್ಪೇನ್ಗೆ ಈ ಬಂಗ್ಸಮೊರೋ ಎಂಬ ಮುಸ್ಲಿಂ ಬಹುಸಂಖ್ಯಾತ ದ್ವೀಪ ಸಮೂಹವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಹೀಗಿರುತ್ತಾ,
1898ರಲ್ಲಿ ಅಮೇರಿಕದ ಜೊತೆ ನಡೆದ ಯುದ್ಧದಲ್ಲಿ ಸ್ಪೇನ್ಗೆ ಪರಾಜಯವಾಯಿತು. ಈ ಪರಾಜಯದ ಹಿನ್ನೆಲೆಯಲ್ಲಿ ಫಿಲಿಪ್ಪೀನ್ಸನ್ನು ಅಮೇರಿಕಕ್ಕೆ ಸ್ಪೇನ್ ಮಾರಾಟ ಮಾಡಿತು. ಅದರಲ್ಲಿ ಈ ಮೋರೋ ಮುಸ್ಲಿಮರಿರುವ ದ್ವೀಪಗಳೂ ಸೇರಿದ್ದುವು. ಸ್ಪೇನ್ ಎಂದೂ ಪೂರ್ಣವಾಗಿ ವಶಪಡಿಸಿಕೊಂಡಿಲ್ಲದ ಈ ಪ್ರದೇಶದ ಸುಲ್ತಾನರು ಇದನ್ನು ವಿರೋಧಿಸಿದರು. ಅಮೇರಿಕದ ವಿರುದ್ಧ ಹೋರಾಟ ಪ್ರಾರಂಭಿಸಿದರು. ಈ ಹೋರಾಟ ನಿರಂತರ ಮುಂದುವರಿಯುತ್ತಾ ಸಾಗಿತಲ್ಲದೇ, ಅಮೇರಿಕಕ್ಕೂ ಈ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಲಿಲ್ಲ. ಇದೇ ಸ್ಥಿತಿಯಲ್ಲಿ 1946ರಲ್ಲಿ ಫಿಲಿಪ್ಪೀನ್ಸ್ಗೆ ಸ್ವಾತಂತ್ರ್ಯ ದೊರೆಯಿತು. ಆದರೆ,
ಸ್ವತಂತ್ರ ಫಿಲಿಪ್ಪೀನ್ಸ್ ಐತಿಹಾಸಿಕ ಎಡ ವಟ್ಟು ಮಾಡಿಕೊಂಡಿತು. ಈ ಮೋರೋ ಮುಸ್ಲಿಮರಿರುವ ದ್ವೀಪಗಳನ್ನೆಲ್ಲಾ ತನ್ನ ವಶಕ್ಕೆ ಪಡೆದುಕೊಂಡಿತು. ಹೀಗೆ ಈ ಮೋರೋ ಮುಸ್ಲಿಮರಿಗೆ ಹೋರಾಟವಲ್ಲದೇ ಬೇರೆ ದಾರಿ ಇಲ್ಲ ಎಂಬಂತಾಯಿತು. ಇವರು ಫಿಲಿಪ್ಪೀನ್ಸ್ನಿಂದ ಸ್ವಾತಂತ್ರ್ಯ ಬಯಸಿ 1946ರಿಂದ ಮರಳಿ ಹೋರಾಟ ಕಟ್ಟಿದರು. ಈ ಹೋರಾಟದ ನಡುವೆಯೇ 1968ರಲ್ಲಿ ಭಾರೀ ದೊಡ್ಡ ನರಮೇಧ ನಡೆಯಿತು. ಕೊರಜಿಡೋರ್ ದ್ವೀಪದಲ್ಲಿ ಫಿಲಿಪ್ಪೀನ್ಸ್ ಸೇನೆಯು ಮುಸ್ಲಿಮ್ ಯುವಕರ ಹತ್ಯಾಕಾಂಡ ನಡೆ ಸಿತು. ಇದು ಮಿಂದನಾವೋ ದ್ವೀಪಸಮೂಹವೂ ಸೇರಿದಂತೆ ಬಂಗ್ಸಮೊರೋ ಪ್ರದೇಶದಲ್ಲಿ ಕಿಚ್ಚು ಹಚ್ಚಿತು. 1968ರಲ್ಲಿ ಮೋರೋ ನ್ಯಾಶನಲ್ ಲಿಬರೇಶನ್ ಫ್ರಂಟ್ (MNLF) ಎಂಬ ಪ್ರತಿರೋಧ ಸಂಘಟನೆಯ ಉದಯಕ್ಕೂ ಕಾರಣವಾಯಿತು. ನೂರ್ ಮಿಸ್ವಾರಿ ಎಂಬವರ ನೇತೃತ್ವದಲ್ಲಿ ಹೊಸ ಸ್ವಾತಂತ್ರ್ಯ ಹೋರಾಟ ನಡೆಯತೊಡಗಿತು. ಈ ನಡುವೆ 1972ರಲ್ಲಿ ಫಿಲಿಪ್ಪೀನ್ಸ್ ಸರಕಾರದಿಂದ ಮಾರ್ಷಲ್ ಲಾ ಹೇರಲಾಯಿತು. ನಂತರ ಹೋರಾಟ ಇನ್ನಷ್ಟು ತೀವ್ರವಾಯಿತು. 1970ರ ದಶಕ ದಲ್ಲಿ ಸುಮಾರು 50 ಸಾವಿರ ಮಂದಿ ಸಾವಿಗೀಡಾದರು. ಲಕ್ಷಾಂತರ ಮಂದಿ ಬೇರೆಡೆಗೆ ಸ್ಥಳಾಂತರಗೊಳ್ಳುವಂಥ ಪರಿಸ್ಥಿತಿಯೂ ನಿರ್ಮಾಣವಾಯಿತು.
ಈ ಹೋರಾಟ ಕೊನೆಗೊಳ್ಳುವುದಿಲ್ಲ ಎಂಬುದನ್ನು ಅರಿತು ಕೊಂಡ ಫಿಲಿಪ್ಪೀನ್ಸ್ ಸರಕಾರವು 1976ರಲ್ಲಿ ಲಿಬಿಯಾದ ನೇತೃತ್ವದಲ್ಲಿ MNLF ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿತು. ಬಂಗ್ ಸಮೊರೋವನ್ನು ಸ್ವಾಯತ್ತ ಪ್ರದೇಶವಾಗಿ ಪರಿಗಣಿಸುವುದಾಗಿ ಅದು ಒಪ್ಪಿಕೊಂಡರೂ, ಇದನ್ನು ಜಾರಿ ಮಾಡದೇ ಈ ಸಂಘಟನೆಯ ಒಳಗೆಯೇ ಭಿನ್ನಾಭಿಪ್ರಾಯ ಮೂಡುವಂತೆ ಮಾಡುವ ತಂತ್ರ ಹೆಣೆಯಿತು ಮತ್ತು ಅದರಲ್ಲಿ ಅದು ಯಶಸ್ವಿಯಾಯಿತು. MNLF ವಿಭಜವೆಯಾಯಿತು ಮತ್ತು ಮೋರೋ ಇಸ್ಲಾಮಿಕ್ ಲಿಬರೇಶನ್ ಫ್ರಂಟ್ (MNLF) ಎಂಬ ಹೊಸ ಸಂಘಟನೆಯ ಉದಯಕ್ಕೂ ಕಾರಣವಾಯಿತು. ಹಾಸಿಮ್ ಸಲಾಮತ್ ಎಂಬವರು ಇದಕ್ಕೆ ನೇತೃತ್ವ ನೀಡಿದರು.
ಇದು ಕೂಡಾ ಆರಂಭದಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಬಯಸಿತು. ಆದರೆ, MNLF ಅನ್ನು ವಿಭಜಿಸಿಯೂ ಪ್ರಯೋಜನ ವಾಗದೇ ಹೋದಾಗ 1996ರಲ್ಲಿ ಫಿಲಿಪ್ಪೀನ್ಸ್ನ ರಾಮೋಸ್ ಸರ್ಕಾರ MNLF ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತು. ಮಿಂದನಾವೋ ಪ್ರದೇಶದ ಮುಸ್ಲಿಮರ ಸ್ವಾಯತ್ತ ಪ್ರದೇಶ MNLF ಎಂಬ ಸಮಿತಿ ರಚನೆಯಾಯಿತು. ಆದರೆ ಇದರ ಅನುಷ್ಠಾನ ಆಗದೇ ಹೋದಾಗ MNLF ಮತ್ತೆ ಹೋರಾಟಕ್ಕೆ ಇಳಿಯಿತು. ಇದರಿಂದಾಗಿ ಮರು ವರ್ಷವೇ ಅಂದರೆ 1997ರಲ್ಲಿ ಚರ್ಚೆಗಳು ಪ್ರಾರಂಭವಾದವು. 2012ರಲ್ಲಿ ಒಪ್ಪಂದಕ್ಕೆ ಬೇಕಾದ ಫ್ರೇಮ್ ವರ್ಕ್ ಗಂಭೀರ ಹಂತವನ್ನು ಪಡೆಯಿತು. 2014ರಲ್ಲಿ ಅಂತಿಮ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2018ರಲ್ಲಿ ಬಂಗ್ ಸಮೊರೋ ಆರ್ಗಾನಿಕ್ ಲಾ ಅಂಗೀಕಾರಗೊಂಡಿತು. 2019ರಲ್ಲಿ ಬಂಗ್ ಸಮೊರೋ ಸ್ವಾಯತ್ತ ಪ್ರದೇಶ MNLF ರಚನೆಯಾಯಿತು. 2019 ಫೆಬ್ರವರಿಯಲ್ಲಿ ಮಧ್ಯಂತರ ಸರಕಾರದ ಪ್ರತಿಜ್ಞಾವಿಧಿಯೂ ನಡೆಯಿತು. ಈ ಮೂಲಕ ಈ ಬಂಗ್ ಸಮೊರೋ ಸ್ವಾಯತ್ತ ಪ್ರದೇಶವು ತನ್ನದೇ ಆದ ಸಂಸದೀಯ ವ್ಯವಸ್ಥೆ, ಶಿಕ್ಷಣ, ಅರ್ಥವ್ಯವಸ್ಥೆ, ನ್ಯಾಯಾಂಗ ಇತ್ಯಾದಿಗಳ ವಿಷಯದಲ್ಲಿ ಸ್ವಯಂ ನಿರ್ಧಾರ ಕೈಗೊಳ್ಳುವುದಕ್ಕೆ ಅಧಿಕಾರವನ್ನು ಪಡೆಯಿತು. ಮುರಾದ್ ಇಬ್ರಾಹೀಮ್ ಎಂಬವರು ಮಧ್ಯಂತರ ಸರಕಾರದ ಮುಖ್ಯಮಂತ್ರಿಯಾದರು. 2019 ರಿಂದ 2026ರ ವರೆಗೆ, ಹೀಗೆ 7 ವರ್ಷಗಳ ಕಾಲ ಮಧ್ಯಂತರ ಸರಕಾರವೇ ಆಡಳಿತವನ್ನು ನಡೆಸಿತಲ್ಲದೇ, ಮತದಾನಕ್ಕೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಈ ಸ್ವಾಯತ್ತ ಪ್ರದೇಶದ ಜನರನ್ನು ಸಜ್ಜುಗೊಳಿಸಿತು. ಈ ಮಧ್ಯಂತರ ಸರಕಾರದಲ್ಲಿ 80 ಮಂದಿ ಸದಸ್ಯರಿದ್ದರು. ಇವರಲ್ಲಿ MNLF ಮತ್ತು ಫಿಲಿಪ್ಪೀನ್ಸ್ ಸರಕಾರದ ನಾಮನಿರ್ದೇಶಿತ ಸದಸ್ಯರೂ ಇದ್ದರು. ಅಂದಹಾಗೆ,
2026 ಸೆಪ್ಟೆಂಬರ್ 14 ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗಲಿಲ್ಲ. ಒಟ್ಟು 23 ಲಕ್ಷ ಜನಸಂಖ್ಯೆಯ ಈ ಬಂಗ್ಸಮೊರೋ ಸ್ವಾಯತ್ತ ಪ್ರದೇಶದ ಪಾರ್ಲಿಮೆಂಟ್ನಲ್ಲಿ ಬಹುಮತಕ್ಕೆ 41 ಸದಸ್ಯರು ಬೇಕಿತ್ತು. ಇದೀಗ ಅಬ್ದುಲ್ ರವೂಫ್ ಮಕಾಕುವ ಎಂಬವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇವರು ಹಿಂದಿನ ಮಧ್ಯಂತರ ಸರಕಾರದಲ್ಲಿ 2025 ರಿಂದ ಮುಖ್ಯಮಂತ್ರಿಯಾಗಿ ಕೆಲಸ ನಿಭಾಯಿಸಿದ್ದರು. ಇವರು ಈ ಹಿಂದಿನ ಮೋರೋ ಇಸ್ಲಾಮಿಕ್ ಲಿಬರೇಶನ್ ಫ್ರಂಟ್ನ ಸಶಸ್ತ್ರ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಹೀಗೆ 3 ಶತಮಾನಗಳ ಹೋರಾಟದ ಬಳಿಕ ಈ ಮಿಂದನಾವೋ ದ್ವೀಪ ಸಮೂಹದ ಅಥವಾ ಬಂಗ್ ಸಮೊರೋ ಸ್ವಾಯತ್ತ ಪ್ರದೇಶದ ಮುಸ್ಲಿಮರು ಸ್ವತಂತ್ರವಾಗಿ ಆಡಳಿತ ನಡೆಸುವ ಮತ್ತು ತಮ್ಮದೇ ಆದ ನ್ಯಾಯಾಂಗ, ಆರ್ಥಿಕ ವ್ಯವಸ್ಥೆ, ಶಿಕ್ಷಣ ಇತ್ಯಾದಿಗಳನ್ನು ಹೊಂದುವ ಹಕ್ಕನ್ನು ಪಡೆದರು. ಹೀಗೆ ಪಡೆದ ಹಕ್ಕಿನ ಪ್ರಾರಂಭ ಎಂಬ ನೆಲೆಯಲ್ಲಿ,
ಅಕ್ಟೋಬರ್ 30 ರಂದು ಸಂಸತ್ ಕಲಾಪಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ಚಾಲನೆ ಕೊಟ್ಟವರು ಧಾರ್ಮಿಕ ವಿದ್ವಾಂಸ ಶೇಖ್ ಮುಸ್ಲಿಮ್. ಇವರು ಕುರ್ಆನ್ನ್ನು ಪಠಿಸಿದರು. ಪ್ರಾರ್ಥನೆ ಮಾಡಿದರು ಮತ್ತು ಬ್ಯಾಂಡ್ಗೆ ಕೋಲಿನಂತಹ ಬಡಿಗೆಯಿಂದ ಹೊಡೆಯುವುದರೊಂದಿಗೆ ಚಾಲನೆ ಕೊಟ್ಟರು. ಈ ಸಮಯದಲ್ಲಿ ಫಿಲಿಪ್ಪೀನ್ಸ್ ರಾಷ್ಟ್ರಪತಿ ಫರ್ಡಿನಾಂಡೋ ಮಾರ್ಕೋಸ್ ಜೂನಿಯರ್ ಕೂಡಾ ಇದ್ದರು.
ಅವರು ತಮ್ಮ ಮಾತನ್ನು ಅಸ್ಸಲಾಮ್ ಅಲೈಕುಮ್ ಎಂದೇ ಪ್ರಾರಂಭಿಸಿದರು ಮತ್ತು ಅಲ್ಹಮ್ದುಲಿಲ್ಲಾಹ್ ಎಂಬ ಸ್ತುತಿಯೊಂದಿಗೆ ಮಾತನಾಡಿದರು. ಇನ್ನೀಗ ಈ ಬಂಗ್ ಸಮೊರೋ ಸ್ವಾಯತ್ತ ಪ್ರದೇಶಕ್ಕೆ ಪ್ರತ್ಯೇಕ ಮುಖ್ಯಮಂತ್ರಿ ಇರುತ್ತಾರೆ. ಪ್ರತ್ಯೇಕ ಬಜೆಟ್ ಇರುತ್ತದೆ. ಪ್ರತ್ಯೇಕ ಪೊಲೀಸ್ ಪಡೆ ಇರುತ್ತದೆ. ಈ ಪ್ರದೇಶವು ಫಿಲಿಪ್ಪೀನ್ಸ್ನ ಭಾಗವೇ ಆಗಿ ಉಳಿಯುತ್ತವಾದರೂ ಫಿಲಿಪ್ಪೀನ್ಸ್ ಕಾನೂನುಗಳು ಬಹುತೇಕ ಇಲ್ಲಿಗೆ ಅನೂರ್ಜಿತವಾಗಿರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಒಂದು ನಿಮಿಷದ ವೀಡಿಯೋವೊಂದು ಐತಿಹಾಸಿಕ ಹೋರಾಟವೊಂದನ್ನು ಬಿಚ್ಚಿಕೊಂಡು ಹೋದ ಕಥೆ ಇದು. ಫಿಲಿಪ್ಪೀನ್ಸ್ ಎಂಬ ದ್ವೀಪ ಸಮೂಹಗಳ ರಾಷ್ಟ್ರವೊಂದು ತನ್ನ ಒಡಲಲ್ಲಿ ಇಷ್ಟೊಂದು ಕುತೂಹಲಕರವಾದ ಮತ್ತು ಅಭೂತಪೂರ್ವ ಹೋರಾಟದ ಇತಿಹಾಸವನ್ನು ಅಡಗಿಸಿಟ್ಟುಕೊಂಡಿದೆ ಎಂಬುದು ಜಗತ್ತಿನ ಬಹುಭಾಗಕ್ಕೆ ಮತ್ತು ಬಹುಜನರಿಗೆ ಗೊತ್ತೇ ಇರಲಿಲ್ಲ. ಒಂದುವೇಳೆ, ಆ ವೀಡಿಯೋ ಬಿಡುಗಡೆ ಆಗದೇ ಇರುತ್ತಿದ್ದರೆ, ಈಗಲೂ ಗೊತ್ತಾಗುತ್ತಿರಲಿಲ್ಲ.












