ಫ್ರಾನ್ಸ್ ಪ್ರತಿಭಟನೆ ಇಸ್ಲಾಮೋಫೋಬಿಯ ಮತ್ತು ವಾಸ್ತವ

0
245

✍️ ಏ.ಕೆ. ಕುಕ್ಕಿಲ

ಮುಸ್ಲಿಮ್ ವಲಸಿಗರು
ಫೆಲೆಸ್ತೀನ್ ಧ್ವಜ
ಹಿಂಸೆ

ಫ್ರಾನ್ಸ್ ಪ್ರತಿಭಟನೆಯನ್ನು ಗೋದಿ ಮೀಡಿಯಾಗಳು ಮತ್ತು ಪ್ರಭುತ್ವದ ಐಟಿ ಸೆಲ್ಲು ಈ ಮೇಲಿನ ಮೂರನ್ನು ಕೇಂದ್ರೀಕರಿಸಿಯೇ ಚರ್ಚಿಸಿವೆ. ಅಲ್ಜೀರಿಯಾ, ಮೊರೋಕ್ಕೊ, ಟ್ಯುನೀಶಿಯಾ ಮುಂತಾದ ಉತ್ತರ ಆಫ್ರಿಕಾ ದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಮುಸ್ಲಿ ಮರು ಫ್ರಾನ್ಸ್‌ಗೆ ವಲಸೆ ಬಂದಿದ್ದು, ಅವರೇ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಹಿಂಸಾತಾಂಡವ ಮಾಡುತ್ತಿದ್ದಾರೆ ಎಂದು ಇವು ಹೇಳಿದುವು. ಪ್ರತಿಭಟನೆಯಲ್ಲಿ ಹಾರಾಡಿದ ಫೆಲೆಸ್ತೀನ್ ಧ್ವಜವೇ ಮುಸ್ಲಿಮರು ಈ ಪ್ರತಿಭಟನೆಯ ಭಾಗವಾಗಿದ್ದಾರೆ ಎಂಬುದಕ್ಕೆ ಪುರಾವೆ ಎಂದೂ ಇವು ಸಮರ್ಥಿಸಿದುವು. ಮುಸ್ಲಿಮರು ಅಪಾಯಕಾರಿಗಳು, ಅವರು ಎಲ್ಲಿರುತ್ತಾರೋ ಅಲ್ಲಿ ಹಿಂಸೆ ಖಚಿತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಫ್ರಾನ್ಸ್‌ನಲ್ಲಿ 20ರಿಂದ 30% ಮುಸ್ಲಿಮರಿದ್ದಾರೆ ಎಂದೂ ಹೇಳಲಾಯಿತು. ಅಂದಹಾಗೆ,

ಭಾರತದ ನೆರೆಯ ದೇಶವೂ ಅಲ್ಲದ ಮತ್ತು ಭಾರತೀಯರು ಅಧಿಕಾರದಲ್ಲೂ ಇಲ್ಲದ ದೂರದ ಫ್ರಾನ್ಸ್‌ನ ಪ್ರತಿಭಟನೆ ಗೋದಿ ಮೀಡಿಯಾಗಳಿಗೆ ಮತ್ತು ಪ್ರಭುತ್ವದ ಬೆಂಬಲಿಗರಿಗೆ ಯಾಕೆ ಮುಖ್ಯವಾಯಿತು ಎಂಬ ಜಿಜ್ಞಾಸೆಯಲ್ಲಿ ತೊಡಗಿದರೆ ಎರಡು ಕಾರಣಗಳು ಸಿಗುತ್ತವೆ.

  1. ನೀಟ್ ಮತ್ತು ಜ್ಞಾನೇಶ್‌ ವಿರೋಧಿ ಪ್ರತಿಭಟನೆ
  2. ಎಸ್‌ಐಆರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಪ್ರತಿಭಟನೆಯು ತಿಂಗಳ ಕಾಲ ನಡೆದು ಪ್ರಭುತ್ವದ ವರ್ಚಸ್ಸಿಗೆ ಮಸಿ ಬಳಿಯುವಂತಾಗಿ ಕೊನೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ವರೆಗೆ ಸಾಗಿದ ಗಾಯ ಇನ್ನೂ ಮಾಸುವ ಮೊದಲೇ ಜ್ಞಾನೇಶ್‌ ಕುಮಾರ್ ವಿರುದ್ಧ ಪ್ರತಿಭಟನೆ ಸ್ಫೋಟಿಸಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆಗೆ ಹೋಲಿಸಿದರೆ ಈ ಪ್ರತಿಭಟನೆ ಇನ್ನಷ್ಟು ವ್ಯಾಪಕವಾಗಿತ್ತು. ಈ ಎರಡೂ ಪ್ರತಿಭಟನೆಯಲ್ಲಿ ಯುವ ಸಮೂಹವೇ ಮುಂಚೂಣಿಯಲ್ಲೂ ಇತ್ತು. ಇಂಥ ಇಕ್ಕಟ್ಟಿನ ಸ್ಥಿತಿಯಿಂದ ದೇಶದ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಪ್ರಭುತ್ವ ಮತ್ತು ಅದರ ಮಡಿಲ ಮಾಧ್ಯಮಗಳು ಅವಕಾಶವನ್ನು ಹುಡುಕುತ್ತಲೂ ಇದ್ದುವು. ಒಂದುಕಡೆ, ಈ ಯುವ ಸಮೂಹದ ಮೇಲೆ ದೇಶ ನಿರೀಕ್ಷೆಯನ್ನು ಇಡತೊಡಗಿರುವುದು ಮತ್ತು ಇನ್ನೊಂದು ಕಡೆ, ಧರ್ಮಾಧಾರಿತವಾಗಿ ಈ ಪ್ರತಿಭಟನೆಗೆ ಹಣೆಪಟ್ಟಿ ಹಚ್ಚುವ ಶ್ರಮ ವಿಫಲವಾಗುತ್ತಿರುವುದನ್ನು ಇವು ನಿರಾಶೆಯಿಂದ ವೀಕ್ಷಿಸುತ್ತಲೂ ಇದ್ದುವು. ಇಂಥ ಸಮಯದಲ್ಲಿಯೇ ಫ್ರಾನ್ಸ್‌ನಲ್ಲಿ ಪ್ರತಿಭಟನೆ ಸ್ಫೋಟಿಸಿತು. ಹಿಂಸೆಗೂ ತಿರುಗಿತು. ಇದನ್ನೇ ತಕ್ಕ ಅವ ಕಾಶವಾಗಿ ಪ್ರಭುತ್ವ ಬಳಸಿಕೊಳ್ಳುವ ತಂತ್ರ ಹೆಣೆಯಿತು. ಫ್ರಾನ್ಸ್‌ನ ವಲಸಿಗ ಮುಸ್ಲಿಮರನ್ನು ಇಲ್ಲಿನ ಬಾಂಗ್ಲಾದೇಶಿ ನುಸುಳು ಕೋರರಿಗೆ ಹೋಲಿಸಿ, ಎಸ್‌ಐಆರನ್ನು ಸಮರ್ಥಿಸುವ ಪ್ರಯತ್ನಕ್ಕಿಳಿಯಿತು. ಫ್ರಾನ್ಸ್‌ಗೆ ವಲಸಿಗ ಮುಸ್ಲಿಮರು ಅಪಾಯಕಾರಿಗಳಾಗಿರುವಂತೆ ಭಾರತಕ್ಕೆ ನುಸುಳುಕೋರ ಮುಸ್ಲಿ ಮರು ಅಪಾಯಕಾರಿಗಳಾಗಿದ್ದಾರೆ ಎಂದು ಬಿಂಬಿಸುವುದಕ್ಕೆ ಮುಂದಾಯಿತು. ಹೀಗೆ ಮಾಡುವುದರಿಂದ ಜನರಲ್ಲಿ ಗೊಂದಲ ಹುಟ್ಟಿಸಬಹುದು ಮತ್ತು ಈಗಿನ ಯುವ ಸಮೂಹದ ಪ್ರತಿಭಟನೆಯನ್ನು ಮಟ್ಟಹಾಕಲು ಸಾಧ್ಯವಾಗಬಹುದು ಎಂದು ಅದು ಭಾವಿಸಿತು. ಇದಕ್ಕೆ ಅಕ್ಟೋಬರ್ 6ರಂದು ಅಮೇರಿಕದ ಅಧ್ಯಕ್ಷ ಟ್ರಂಪ್ ಮಾಡಿರುವ ಟ್ವೀಟನ್ನು ಭಾರತೀಯ ಮಾಧ್ಯಮಗಳು ಬಳಸಿಕೊಂಡವು. ‘ಫ್ರಾನ್ಸ್‌ನ ಈಗಿನ ಸ್ಥಿತಿಗೆ ವಲಸಿಗ ಮುಸ್ಲಿಮರೇ ಕಾರಣ’ ಎಂದವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರು. ಫ್ರಾನ್ಸನ್ನು ಇಸ್ಲಾಮ್ ಆಪೋಶನ ಪಡಕೊಳ್ಳುತ್ತಿದೆ ಎಂದೂ ಅವರು ಹೇಳಿದರು. ಈ ಪೋಸ್ಟ್ ಬಳಿಕವೇ ಭಾರತೀಯ ಮೀಡಿಯಾಗಳು ಫ್ರಾನ್ಸ್ ಪ್ರತಿಭಟನೆಯತ್ತ ಕಣ್ಣು ಹಾಯಿಸಿದುವು ಎಂಬುದೇ ಸರಿ.
ಆದರೆ,

ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಅವರು ಅಕ್ಟೋಬರ್ 21ರಂದು ಕತಾರ್‌ನಲ್ಲಿ ಈ ಎಲ್ಲಕ್ಕೂ ಉತ್ತರ ನೀಡಿದರು. ಹಿಂಸಾತ್ಮಕ ಪ್ರತಿಭಟನೆಗೆ ವಲಸಿಗ ಮುಸ್ಲಿಮರು ಕಾರಣವಲ್ಲ ಮತ್ತು ಫ್ರಾನ್ಸನ್ನು ಇಸ್ಲಾಮ್ ಆಪೋಶನ ಪಡಕೊಳ್ಳಲಿದೆ ಎಂಬುದು ಸಂಪೂರ್ಣ ಸುಳ್ಳು ಎಂದೂ ಅವರು ಹೇಳಿದರು. ಹಾಗಿದ್ದರೆ,
ಫ್ರಾನ್ಸ್ ಪ್ರತಿಭಟನೆಗೂ ಮುಸ್ಲಿಮರಿಗೂ ಸಂಬಂಧ ಜೋಡಿಕೊಂಡದ್ದು ಹೇಗೆ? ಯಾವ ಕಾರಣಕ್ಕಾಗಿ ಈ ಸಂಬಂಧವನ್ನು ಜೋಡಿಸಲಾಗಿದೆ?
ನಿಜವಾಗಿ,

ಫ್ರಾನ್ಸ್ಗೂ ಮುಸ್ಲಿಮರಿಗೂ ನಿನ್ನೆ ಮೊನ್ನೆಯ ಸಂಬಂಧ ಅಲ್ಲ. 1789ರ ಫ್ರೆಂಚ್ ಕ್ರಾಂತಿಯಲ್ಲಿ ಮುಸ್ಲಿಮರ ಪಾತ್ರ ಇರುವುದನ್ನು ‘ಮುಸ್ಲಿಮ್ ಆಂಡ್ ಸಿಟಿಜನ್ಸ್: ಇಸ್ಲಾಮ್ ಪಾಲಿಟಿಕ್ಸ್ ಆಂಡ್ ದಿ ಫ್ರೆಂಚ್ ರೆವಲ್ಯೂಷನ್’ ಕೃತಿಯಲ್ಲಿ ಇತಿಹಾಸಕಾರ ಇಯಾನ್ ಕಾಲರ್ ಅವರು ವಿವರವಾಗಿ ಬರೆದಿದ್ದಾರೆ. ಫ್ರಾನ್ಸ್ ನಾಗರಿಕತೆಯೊಂದಿಗೆ ಮುಸ್ಲಿಮರು ಬೆರೆತುಕೊಂಡಿದ್ದಾರೆ. ಆ ದೇಶಕ್ಕೆ ಮುಸ್ಲಿಮರು ಅನ್ಯರಲ್ಲ. ಆಫ್ರಿಕನ್ ರಾಷ್ಟçಗಳೊಂದಿಗೆ ಕೌಟುಂಬಿಕ ಮತ್ತು ಐತಿಹಾಸಿಕ ಸಂಬಂಧವನ್ನು ಫ್ರಾನ್ಸ್ ಮುಸ್ಲಿಮರು ಹೊಂದಿದ್ದಾರೆ. ಇದಕ್ಕೆ ಕಾರಣ, ಹಲವು ಆಫ್ರಿಕನ್ ಮುಸ್ಲಿಮ್ ರಾಷ್ಟ್ರಗಳು ಶತಮಾನಗಳ ಕಾಲ ಫ್ರಾನ್ಸ್‌ನ ವಸಾಹತಾಗಿದ್ದುದು. 1830ರಲ್ಲಿ ಅಲ್ಜೀರಿಯಾವನ್ನು ಫ್ರಾನ್ಸ್ ವಶಪಡಿಸಿಕೊಂಡಿತು. ಇದಾಗಿ 130 ವರ್ಷಗಳ ಬಳಿಕ 1962ರಲ್ಲಿ ಅಲ್ಜೀರಿಯಾ ಸ್ವತಂತ್ರವಾಯಿತು. ಇದು ಹಲವು ದೇಶಗಳ ಪೈಕಿ ಒಂದು ದೇಶದ ಕತೆ. ಭಾರತವನ್ನು ಬ್ರಿಟಿಷರು ವಶಪಡಿಸಿದಂತೆ ಆಫ್ರಿಕನ್ ಖಂಡದ ಮುಸ್ಲಿಮ್ ರಾಷ್ಟ್ರಗಳನ್ನು ಫ್ರಾನ್ಸ್ ಆಕ್ರಮಿಸಿ ಆಡಳಿತ ನಡೆಸಿದ ಪರಿಣಾಮ ಮುಸ್ಲಿಮರು ಫ್ರಾನ್ಸ್‌ಗೆ ವಲಸೆ ಬರುವುದೂ ಸಹಜವಾಯಿತು. ಬ್ರಿಟನ್ನಿನಲ್ಲಿ ಭಾರತ ಮತ್ತು ಪಾಕಿಸ್ತಾನಿ ಸಂಜಾತರು ದೊಡ್ಡ ಸಂಖ್ಯೆಯಲ್ಲಿ ಇವತ್ತು ಹೇಗೆ ವಾಸಿಸುತ್ತಿದ್ದಾರೋ ಅದೇ ರೀತಿಯಲ್ಲಿ ಫ್ರಾನ್ಸ್‌ನಲ್ಲಿ ಮುಸ್ಲಿಮ್ ರಾಷ್ಟ್ರಗಳ ಮುಸ್ಲಿಮ್ ವಲಸಿಗರು ವಾಸಿಸುತ್ತಿದ್ದಾರೆ. ಹಾಗಂತ, ವಲಸಿಗರಲ್ಲಿ ಕೇವಲ ಮುಸ್ಲಿಮರು ಮಾತ್ರ ಇರುವುದಲ್ಲ. ಮುಸ್ಲಿಮರಿಗಿಂತ ದೊಡ್ಡ ಸಂಖ್ಯೆಯಲ್ಲಿ ವಲಸಿಗ ಕ್ರೈಸ್ತರಿದ್ದಾರೆ. ಅಷ್ಟೇ ಅಲ್ಲ, ಫ್ರಾನ್ಸ್‌ನಲ್ಲಿರುವ ಮುಸ್ಲಿಮರೆಲ್ಲ ವಲಸಿಗರಲ್ಲ. INSEE-INED ಸಂಸ್ಥೆಯು 2020ರಲ್ಲಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಸುಮಾರು 44% ಮುಸ್ಲಿಮರು ತಮ್ಮನ್ನು ವಲಸಿಗರು ಎಂದು ಗುರುತಿಸಿಕೊಳ್ಳುತ್ತಾರೆ. ಅದರರ್ಥ, ಫ್ರಾನ್ಸ್‌ನಲ್ಲಿರುವ ಹೆಚ್ಚಿನ ವಲಸಿಗರು ಮುಸ್ಲಿಮರಲ್ಲ.

ಇಷ್ಟೊಂದು ಸ್ಪಷ್ಟನೆಯನ್ನು ಕೊಡಲೇಬೇಕು.

ಫ್ರಾನ್ಸ್‌ನಲ್ಲಿ ಸದ್ಯ 6ರಿಂದ 9%ದಷ್ಟು ಮುಸ್ಲಿಮರಿದ್ದಾರೆ. ಇಲ್ಲಿ ಧರ್ಮಾಧಾರಿತ ಜನಗಣತಿ ನಡೆಯುವುದಿಲ್ಲವಾದ್ದರಿಂದ ನಿಖರವಾಗಿ ಲೆಕ್ಕ ಹಾಕುವುದು ಸುಲಭವೂ ಅಲ್ಲ. ಆದರೂ ಫ್ರಾನ್ಸ್‌ನ 43ರಿಂದ 53% ಜನರು ನಾಸ್ತಿಕರಾಗಿದ್ದಾರೆ. ಫ್ರಾನ್ಸ್‌ನಲ್ಲಿ ಮೊದಲ ಸ್ಥಾನದಲ್ಲಿ ಕ್ರೈಸ್ತ ಧರ್ಮ ಇದ್ದರೆ ದ್ವಿತೀಯ ಸ್ಥಾನದಲ್ಲಿ ಇಸ್ಲಾಮ್ ಇದೆ. ಮಾತ್ರವಲ್ಲ, ಯುರೋಪಿಯನ್ ರಾಷ್ಟ್ರಗಳಲ್ಲಿಯೇ ಅತ್ಯಧಿಕ ಮುಸ್ಲಿಮರಿರುವುದೂ ಫ್ರಾನ್ಸ್‌ನಲ್ಲಿಯೇ. ಆಫ್ರಿಕಾದ ಬಡ ಮುಸ್ಲಿಮ್ ರಾಷ್ಟ್ರಗಳ ಮೇಲೆ ಆಧಿಪತ್ಯ ಸ್ಥಾಪಿಸಿದ ಫ್ರಾನ್ಸ್, ಅಲ್ಲಿಂದ ಬಡಪಾಯಿಗಳನ್ನು ಕೂಲಿ ಕೆಲಸಕ್ಕೆಂದು ದೊಡ್ಡ ಸಂಖ್ಯೆಯಲ್ಲಿ ಸ್ವದೇಶಕ್ಕೆ ಕರೆತಂದಿತು. ಅವರಲ್ಲಿ ಮುಸ್ಲಿಮರೂ ಕ್ರೈಸ್ತರೂ ಇದ್ದರು. ಇವರು ಫ್ರಾನ್ಸ್ ಜಿಡಿಪಿಗೆ ದೊಡ್ಡ ಕೊಡುಗೆಯನ್ನು ಇವತ್ತು ನೀಡುತ್ತಿದ್ದಾರೆ. ಮುಸ್ಲಿಮರು ಮುಖ್ಯವಾಗಿ ಕಟ್ಟಡ ನಿರ್ಮಾಣ ಕಾಮಗಾರಿ, ವ್ಯಾಪಾರ, ಶ್ರಮದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗೆ,

ಫ್ರಾನ್ಸ್ ಜನಸಂಖ್ಯೆಯ ಬರೇ 6ರಿಂದ 9% ಇರುವ ಮುಸ್ಲಿ ಮರೇ ಇಡೀ ಹಿಂಸಾತ್ಮಕ ಪ್ರತಿಭಟನೆಯ ರೂವಾರಿಗಳು ಎಂದು ಟ್ರಂಪ್ ಹೇಳಿಕೊಳ್ಳುವುದಕ್ಕೆ ಮುಖ್ಯ ಕಾರಣ ಏನೆಂದರೆ, ಅಮೇರಿಕದಲ್ಲಿ ಶೀಘ್ರವೇ ನಡೆಯಲಿರುವ ಮಧ್ಯಂತರ ಚುನಾವಣೆ. ಟ್ರಂಪ್ ತನ್ನನ್ನು ವಲಸಿಗ ವಿರೋಧಿ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾರೆ. ಆಫ್ರಿಕನ್ ಮೂಲದ ವಲಸಿಗ ಸಂಸದೆ ಇಲ್ಹಾಮ್ ಉಮರ್ ಮನೆ ಮೇಲೆ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಮುಸ್ಲಿಮರು ಅಪಾಯಕಾರಿಗಳು ಎಂದು ಬಿಂಬಿಸುವ ಮೂಲಕ ಚುನಾವಣೆಯನ್ನು ಗೆಲ್ಲುವುದು ಇದರ ಉದ್ದೇಶ. ಹಾಗಂತ,

ಫ್ರಾನ್ಸ್ ಪ್ರತಿಭಟನೆಯನ್ನು ಆರಂಭಿಸಿದ್ದು ಮುಸ್ಲಿಮರಲ್ಲ. ಅಲ್ಲಿನ ಗ್ರಾಮೀಣ ಪ್ರದೇಶದ ಶಿಕ್ಷಕರೇ ಈ ಪ್ರತಿಭಟನೆಯ ರೂವಾರಿಗಳು. ಅಧ್ಯಾಪಕರ ಕೊರತೆ, ಮೂಲ ಸೌಲಭ್ಯಗಳ ಕೊರತೆ ಮತ್ತು ಕೊಠಡಿಗಳ ಕೊರತೆಯನ್ನು ಮುಂದು ಮಾಡಿ ಹೈಸ್ಕೂಲ್ ಅಧ್ಯಾಪಕರು ಪ್ರತಿಭಟನೆ ನಡೆಸಿದರು. ಇದೇವೇಳೆ, ವಿದ್ಯಾರ್ಥಿಗಳೂ ತಮ್ಮ ಬೇಡಿಕೆಯನ್ನು ಮುಂದಿಟ್ಟು ಈ ಶಿಕ್ಷಕರ ಜೊತೆ ಸೇರಿಕೊಂಡರು. ತೀವ್ರ ಬಿಸಿಲಿದ್ದರೂ ತರಗತಿಯಲ್ಲಿ ಏಸಿ ವ್ಯವಸ್ಥೆ ಇಲ್ಲದಿರುವುದು, ಕೊಠಡಿಗಳ ಅವ್ಯವಸ್ಥೆ ಇತ್ಯಾದಿಗಳು ಫ್ರಾನ್ಸ್‌ನ ಇತರ ಶಾಲೆಗಳ ಸಮಸ್ಯೆಯೂ ಆಗಿತ್ತಾದ್ದರಿಂದ ಪ್ರತಿ ಭಟನೆ ಬೆಳೆಯುತ್ತಾ ಹೋಯಿತು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಸೇರಿಕೊಂಡರು. ವಿದ್ಯಾರ್ಥಿಗಳ ಪೋಷಕರೂ ಸೇರಿಕೊಂಡರು. ಈ ನಡುವೆ ಸರಕಾರ ತೈಲಬೆಲೆ ಹೆಚ್ಚಿಸಿತು. ಸರಕಾರಿ ಉದ್ಯೋಗಸ್ಥರ ನಿವೃತ್ತಿ ವಯಸ್ಸನ್ನು 62ರಿಂದ 64ಕ್ಕೆ ಏರಿಸಿತು. ಇದು ಪ್ರತಿಭಟನೆಗೆ ಬೆಂಕಿ ಸುರಿ ದಂತಾಯಿತು. ಮೊದಲೇ ನಿರುದ್ಯೋಗದ ಸಮಸ್ಯೆಯಿಂದ ಒಳಗೊಳಗೇ ಕುದಿಯುತ್ತಿದ್ದ ಫ್ರಾನ್ಸ್, ಇದೀಗ ಆಹಾರ ವಸ್ತುಗಳ ಬೆಲೆ ಏರಿಕೆಯಿಂದ ಇನ್ನಷ್ಟು ಆಕ್ರೋಶಗೊಂಡಿತು. ಸಾಮಾನ್ಯ ನಾಗರಿಕರೂ ಪ್ರತಿಭಟನೆಯಲ್ಲಿ ಸೇರಿಕೊಂಡರು. ಈ ನಡುವೆ ತೈಲಬೆಲೆ ಏರಿಕೆಯನ್ನು ಖಂಡಿಸಿ ವಾಹನ ಚಾಲಕರು ಈ ಪ್ರತಿಭಟನೆಯ ಭಾಗವಾದರು. ಯೆಲ್ಲೋ ವೆಸ್ಟ್ ಎಂಬ ಹೆಸರಿನ ಬೃಹತ್ ವಾಹನ ಚಾಲಕರ ಸಂಘ ಪ್ರತಿಭಟನೆಯನ್ನು ಬೃಹದಾಕಾರಕ್ಕೆ ಒಯ್ಯಿತು. ಹಿಂಸೆಯೂ ಸ್ಫೋಟಿಸಿತು. ನಿಜವಾಗಿ,

ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ಫೆಲೆಸ್ತೀನ್ ಧ್ವಜಕ್ಕೂ ಅಲ್ಲಿನ ನಾಗರಿಕ ಭಾವನೆಗೂ ಹತ್ತಿರದ ಸಂಬಂಧ ಇದೆ. ಫ್ರಾನ್ಸ್‌ನ ಎಡಪಕ್ಷಗಳು ಫೆಲೆಸ್ತೀನ್ ಪರ ಬಲವಾದ ನಿಲುವನ್ನು ಹೊಂದಿವೆ. 2025ರಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಫ್ರಾನ್ಸ್ ಮಾನ್ಯತೆ ಘೋಷಿಸಿದಾಗ ಪ್ರಮುಖ ಎಡಪಕ್ಷವಾದ LFI ಸಂಸದ ಬೊಯಾರ್ಡ್ ಫೆಲೆಸ್ತೀನ್ ಧ್ವಜ ಹಾರಿಸಿದ್ದರು. ಫ್ರಾನ್ಸ್ನ ಎಡಪಕ್ಷಗಳ ನಿಯಂತ್ರಣದಲ್ಲಿರುವ ವಿವಿಧ ಮುನ್ಸಿಪಾಲಿಟಿಗಳು ಫೆಲೆಸ್ತೀನ್ ಧ್ವಜದೊಂದಿಗೆ ರ‍್ಯಾಲಿ ನಡೆಸಿದ್ದುವು. ಫೆಲೆಸ್ತೀನ್ ಧ್ವಜವನ್ನು ಎಡಪಕ್ಷಗಳು ರಾಜಕೀಯ ಐಡೆಂಟಿಟಿಯಾಗಿ ಬಳಕೆ ಮಾಡುತ್ತಿವೆ. ಫ್ರಾನ್ಸ್‌ನಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆಗಳು ಸಾಮಾನ್ಯ ಅನ್ನುವಷ್ಟು ಸಹಜವಾಗಿವೆ. ಆದ್ದರಿಂದ ಪ್ರತಿಭಟನಾಕಾರರ ಕೈಯಲ್ಲಿ ಫೆಲೆಸ್ತೀನ್ ಧ್ವಜವಿದ್ದರೆ, ಅದನ್ನು ಮುಸ್ಲಿಮನೇ ಹಿಡಿದುಕೊಂಡಿದ್ದಾನೆ ಎಂದು ಹೇಳುವುದು ಫ್ರಾನ್ಸ್ ರಾಜಕೀಯದ ಬಗ್ಗೆ ಅರಿವಿಲ್ಲದಿರುವುದನ್ನು ಸೂಚಿಸುತ್ತದೆ. ಈ ಬಾರಿಯ ಪ್ರತಿಭಟನೆಯಲ್ಲಿ ಫ್ರಾನ್ಸ್ ಧ್ವಜದ ಜೊತೆಗೇ ಫೆಲೆಸ್ತೀನ್ ಧ್ವಜವನ್ನೂ ಅಲ್ಲಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಎಡಪಕ್ಷಗಳು ಸಕ್ರಿಯವಾಗಿ ಭಾಗಿಯಾಗಿರುವುದರಿಂದ ಈ ಬೆಳವಣಿಗೆ ನಡೆದಿದೆ. ಆದರೆ, ಸೋಶಿಯಲ್ ಮೀಡಿಯಾಗಳಲ್ಲಿ ಕೇವಲ ಫೆಲೆಸ್ತೀನ್ ಧ್ಜಜವನ್ನು ಮಾತ್ರ ಹಾರಾಡಿಸುತ್ತಿರುವ ವೀಡಿಯೋಗಳು ಮತ್ತು ಚಿತ್ರಗಳು ಹರಿದಾಡುತ್ತಿದ್ದು, ಇದು ಈಗಿನ ಪ್ರತಿಭಟನೆಯದ್ದಲ್ಲ. 2025ರಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಫ್ರಾನ್ಸ್ ಮಾನ್ಯತೆ ಕೊಟ್ಟಾಗ ನಡೆದ ರ‍್ಯಾಲಿಯ ದೃಶ್ಯಗಳು ಇವು. ಈಗ ದುರುದ್ದೇಶದಿಂದ ಈ ದೃಶ್ಯಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ,
ಫ್ರಾನ್ಸ್ ಪ್ರತಿಭಟನೆಯನ್ನು ಮುಸ್ಲಿಮ್ ಕೇಂದ್ರಿತವಾಗಿ ಮತ್ತು ಮುಸ್ಲಿಮ್ ಭೀತಿಕಾರಕವಾಗಿ ಚಿತ್ರಿಸುತ್ತಿರುವವರ ಬಗ್ಗೆ ಎಚ್ಚರ ಇರಲಿ. ಏಳೆಂಟು ಶೇಕಡಾ ಇರುವ ಮುಸ್ಲಿಮರು ಫ್ರಾನ್ಸ್ ಉದ್ದಕ್ಕೂ ಪ್ರತಿಭಟನೆ ಆಯೋಜಿಸಲು ಸಾಧ್ಯವಾ ಎಂಬ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ.