ಸನ್ಮಾರ್ಗ ವಾರ್ತೆ
ಗುವಾಹಟಿ: ಅಸ್ಸಾಂನ ಕಾಮರೂಪ್ ಗ್ರಾಮಾಂತರ ಜಿಲ್ಲೆಯಲ್ಲಿ ಚರ್ಚ್ ಧ್ವಂಸಗೊಂಡ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೋರ್ತುಲಿ ಗರೋಪಾರಾ ಪ್ರದೇಶದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಶುಕ್ರವಾರ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ದಾಳಿಯು ಅಸ್ಸಾಂ-ಮೇಘಾಲಯ ಗಡಿ ವಿವಾದಕ್ಕೆ ಸಂಬಂಧಿಸಿದೆ ಎಂದು ಮೊದಲು ವರದಿಗಳಲ್ಲಿ ಬಿತ್ತರಿಸಲಾಗಿತ್ತು. ಆದರೆ, ಈ ಘಟನೆಗೆ ಗಡಿ ವಿವಾದದೊಂದಿಗೆ ಯಾವುದೇ ಸಂಬಂಧವಿಲ್ಲ ಹಾಗೂ ಇದು ಯಾವುದೇ ಧಾರ್ಮಿಕ ಅಥವಾ ಭಾಷಾ ಸಂಘರ್ಷವಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸ್ಥಳೀಯವಾಗಿ ಗುರುತಿಸಿಕೊಂಡಿರುವ ಎರಡು ಗುಂಪುಗಳ ನಡುವಿನ ವೈಮನಸ್ಯವೇ ಈ ದಾಳಿಗೆ ಕಾರಣ ಎಂದು ಪೊಲೀಸರು ಪ್ರಾಥಮಿಕವಾಗಿ ತಿಳಿಸಿದ್ದಾರೆ. ಎರಡೂ ಗುಂಪುಗಳೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದು, ಒಂದೇ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ ಎಂದು ಕಾಮರೂಪ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸುಭಾಷಿಶ್ ಬರುವಾ ತಿಳಿಸಿದ್ದಾರೆ. ಪೂಜಾ ಸ್ಥಳಕ್ಕೆ ಹಾನಿ ಮಾಡುವುದು, ಕಳವು, ಅತಿಕ್ರಮ ಪ್ರವೇಶ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನುಂಟುಮಾಡುವ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ












