‘ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಟ ಮುಂದುವರಿಸುತ್ತೇವೆ’, ಅಮೆರಿಕದಲ್ಲಿ ರಾಹುಲ್ ಗಾಂಧಿ

0
3

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಭಾರತೀಯ ಪ್ರಜಾಪ್ರಭುತ್ವ “ಪವಿತ್ರ”ವಾಗಿದೆ ಮತ್ತು ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದೆ ಎಂದು ಜನರಿಗೆ ಅರಿವಾಗುವವರೆಗೂ ಚುನಾವಣಾ ಸೋಲನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್‌ ಗಾಂಧಿ, ಚುನಾವಣಾ ವ್ಯವಸ್ಥೆಯಲ್ಲಿನ ಲೋಪದೋಷಗಳ ಕಾರಣದಿಂದಾಗಿ ಚುನಾವಣೆಗಳನ್ನು ಬಹಿಷ್ಕರಿಸುವುದರಿಂದ ಭಾರತೀಯ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಮತ್ತು ಕಾಂಗ್ರೆಸ್ ಪಕ್ಷವು ಅದನ್ನು ಬಯಸುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಭಾರತೀಯ ಪ್ರಜಾಪ್ರಭುತ್ವ ಪವಿತ್ರವಾಗಿದೆ. ಸಾಕ್ಷ್ಯಾಧಾರಗಳಿಲ್ಲದೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಮಸ್ಯೆ ಇದೆ ಎಂದು ಹೇಳುವುದು ನನಗೂ ಕಷ್ಟ” ಎಂದರು. ಪ್ರೊಫೆಸರ್ ರಾಬರ್ಟ್ ಪೇಪ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಚುನಾವಣೆಗಳನ್ನು ಬಹಿಷ್ಕರಿಸುವಂತೆ ವಿರೋಧ ಪಕ್ಷಗಳಿಗೆ ಹೇಳುವುದು ಆ ಕ್ಷಣವೇ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. “ನಾವು ವಿರೋಧ ಪಕ್ಷದ ಕಾರ್ಯಕರ್ತರಿಗೆ, ‘ಸರಿ, ಚುನಾವಣೆಯಲ್ಲಿ ಭಾಗವಹಿಸಬೇಡಿ’ ಎಂದು ಹೇಳಿದರೆ ಅವರ ಗತಿಯೇನು? ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೆ, ಆ ಕ್ಷಣವೇ ಭಾರತೀಯ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ. ನಾವು ಭಾರತೀಯ ಪ್ರಜಾಪ್ರಭುತ್ವ ನಾಶಮಾಡಲು ಬಯಸುವುದಿಲ್ಲ” ಎಂದು ಗಾಂಧಿ ಹೇಳಿದರು.

“ಆದ್ದರಿಂದ, ಏನು ನಡೆಯುತ್ತಿದೆಯೋ ಅದನ್ನು ಬಹಿರಂಗಪಡಿಸುವುದು ಮತ್ತು ವ್ಯವಸ್ಥೆಯು ಸಂಪೂರ್ಣವಾಗಿ ಕುಸಿದಿದೆ ಎಂದು ಭಾರತದ ಜನರಿಗೆ ಅರಿವಾಗುವವರೆಗೂ ಟೀಕೆಗಳನ್ನು ಎದುರಿಸುವುದು ನಮ್ಮ ಕಾರ್ಯತಂತ್ರವಾಗಿದೆ” ಎಂದು ಅವರು ತಿಳಿಸಿದರು. ಗಾಂಧಿ ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ಅವಧಿಯಲ್ಲಿ ಅವರು ಮಂಗಳವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಬುಧವಾರ ಚಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.