ಬದಲಾಗುತ್ತಿರುವ ಜಾಗತಿಕ ಸ್ಥಿತಿ ಮತ್ತು ಮುಸ್ಲಿಂ ಜಗತ್ತಿನ ಮುಂದಿರುವ ಸವಾಲುಗಳು

0
18

✍️ ಸೈಯದ್‌ ಸಆದತುಲ್ಲಾ ಹುಸೈನಿ
ಅಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್‌

ಜಗತ್ತು ಇಂದು ರಾಜಕೀಯ, ಆರ್ಥಿಕ, ಸೈನಿಕ ಮತ್ತು ಕಾರ್ಯತಂತ್ರದ ಆಯಾಮಗಳಲ್ಲಿ ಮಹತ್ವದ ಬದಲಾವಣೆಗಳ ಹಂತದಲ್ಲಿದೆ. ಎರಡು ಮಹಾಯುದ್ಧದ ನಂತರ ರೂಪುಗೊಂಡ ಅಂತಾರಾಷ್ಟ್ರೀಯ ವ್ಯವಸ್ಥೆ ಹಾಗೂ ಶೀತಲ ಸಮರದ ಅಂತ್ಯದ ಬಳಿಕ ಅಮೆರಿಕದ ನೇತೃತ್ವದಲ್ಲಿ ಸ್ಥಾಪಿತವಾದ ಏಕಧ್ರುವೀಯ ಜಾಗತಿಕ ಪ್ರಾಬಲ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳು ಈ ಬದಲಾವಣೆಯನ್ನು ಮತ್ತಷ್ಟು ವೇಗಗೊಳಿಸಿವೆ.

ವಿಶೇಷವಾಗಿ ಗಾಝಾದಲ್ಲಿ ಇಸ್ರೇಲ್ ನಡೆಸಿದ ವ್ಯಾಪಕ ಸೈನಿಕ ದಾಳಿಗಳು, ಫೆಲೆಸ್ತೀನ್ ಜನತೆಯ ನಿರಂತರ ಪ್ರತಿರೋಧ, ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಸೈನಿಕ ಅತಿಕ್ರಮಣಗಳು ಮತ್ತು ಅದಕ್ಕೆ ಇರಾನ್ ನೀಡಿದ ಪ್ರತಿಕ್ರಿಯೆಗಳು ಜಾಗತಿಕ ರಾಜಕೀಯದ ಸಾಂಪ್ರದಾಯಿಕ ಗ್ರಹಿಕೆಗಳನ್ನು ಪ್ರಶ್ನಿಸಿವೆ. ಇವು ಕೇವಲ ಪ್ರಾದೇಶಿಕ ಸಂಘರ್ಷಗಳಲ್ಲ; ಜಾಗತಿಕ ಶಕ್ತಿ ಸಮತೋಲನ, ಅಂತಾರಾಷ್ಟ್ರೀಯ ಕಾನೂನಿನ ವಿಶ್ವಾಸಾರ್ಹತೆ, ಮಾನವ ಹಕ್ಕುಗಳ ಸಾರ್ವತ್ರಿಕತೆ ಮತ್ತು ಮಹಾಶಕ್ತಿಗಳ ಪ್ರಾಬಲ್ಯದ ಮಿತಿಗಳ ಕುರಿತಾದ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ಈ ಸಂಘರ್ಷಗಳ ಅಂತಿಮ ಪರಿಣಾಮಗಳೇನೇ ಇರಲಿ, ಒಂದು ಸಂಗತಿಯಂತೂ ಸ್ಪಷ್ಟವಾಗಿದೆ. ಜಗತ್ತು ಹಿಂದಿನ ಸ್ಥಿತಿಗೆ ಯಥಾವತ್ತಾಗಿ ಮರಳುವ ಸಾಧ್ಯತೆ ಕಡಿಮೆ. ಹೊಸ ರಾಜಕೀಯ ವಾಸ್ತವಗಳು ರೂಪುಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ಮುಸ್ಲಿಂ ಜಗತ್ತು ಕೇವಲ ನಡೆಯುತ್ತಿರುವ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದಕ್ಕೆ ಸೀಮಿತವಾಗದೆ, ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ತನ್ನ ಪಾತ್ರ, ಸಾಮರ್ಥ್ಯ ಮತ್ತು ಜವಾಬ್ದಾರಿಗಳನ್ನು ಮರುಪರಿಶೀಲಿಸಬೇಕಾಗಿದೆ.

ಬಹುಧ್ರುವೀಯ ಜಗತ್ತಿನ(Multipolar world) ಉದಯ

ಶೀತಲ ಸಮರದ ಅಂತ್ಯದ ಬಳಿಕ ಅಮೆರಿಕವು ಜಾಗತಿಕ ರಾಜಕೀಯ ಮತ್ತು ಸೈನಿಕ ವ್ಯವಸ್ಥೆಯಲ್ಲಿ ಅಪ್ರತಿಮ ಪ್ರಾಬಲ್ಯವನ್ನು ಸಾಧಿಸಿತು. ಯುರೇಷಿಯಾ, ಮಧ್ಯಪ್ರಾಚ್ಯ ಮತ್ತು ಇತರ ಕಾರ್ಯತಂತ್ರದ ಪ್ರದೇಶಗಳಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದು ರಾಜತಾಂತ್ರಿಕ ಪ್ರಭಾವ, ಆರ್ಥಿಕ ನಿರ್ಬಂಧಗಳು, ಮಿಲಿಟರಿ ಮೈತ್ರಿಗಳು ಮತ್ತು ನೇರ ಹಸ್ತಕ್ಷೇಪಗಳನ್ನೂ ಬಳಸಿಕೊಂಡಿತು. ಈ ವ್ಯವಸ್ಥೆಯಲ್ಲಿ ಇಸ್ರೇಲ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತ್ಯಂತ ಪ್ರಬಲ ಕಾರ್ಯತಂತ್ರದ ಮಿತ್ರ ರಾಷ್ಟ್ರವಾಗಿ ಬೆಳೆದಿದೆ.

ಆದರೆ ಇತ್ತೀಚಿನ ಬೆಳವಣಿಗೆಗಳು ಅಮೆರಿಕದ ಪ್ರಾಬಲ್ಯಕ್ಕೆ ಕೆಲವು ಮಿತಿಗಳಿವೆ ಎಂಬುದನ್ನು ಸ್ಪಷ್ಟಪಡಿಸಿವೆ. ಜಗತ್ತಿನ ಅತ್ಯಂತ ಬಲಿಷ್ಠ ಸೈನಿಕ ಶಕ್ತಿಯ ಬೆಂಬಲವಿದ್ದರೂ ಎಲ್ಲ ಸಂದರ್ಭಗಳಲ್ಲೂ ರಾಜಕೀಯ ಮತ್ತು ಕಾರ್ಯತಂತ್ರದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಗಾಝಾ ಮತ್ತು ಮಧ್ಯಪ್ರಾಚ್ಯದ ಬೆಳವಣಿಗೆಗಳು ಮುಂದಿಟ್ಟಿವೆ. ಮಿಲಿಟರಿ ಶ್ರೇಷ್ಠತೆಯೊಂದೇ ರಾಜಕೀಯ ಯಶಸ್ಸಿಗೆ ಪರ್ಯಾಯವಲ್ಲ ಎಂಬ ಪಾಠವನ್ನು ಈ ಸಂಘರ್ಷಗಳು ಮತ್ತೊಮ್ಮೆ ನೆನಪಿಸಿವೆ.

ಇದೇ ಸಂದರ್ಭದಲ್ಲಿ ಚೀನಾ, ರಷ್ಯಾ, ಭಾರತ ಮತ್ತು ಇತರ ಉದಯೋನ್ಮುಖ ಶಕ್ತಿಗಳ ಪ್ರಭಾವ ಹೆಚ್ಚುತ್ತಿದೆ. ಬ್ರಿಕ್ಸ್ (BRICS), ಶಾಂಘೈ ಸಹಕಾರ ಸಂಘಟನೆ (SCO) ಮುಂತಾದ ವೇದಿಕೆಗಳು ಜಾಗತಿಕ ರಾಜಕೀಯ ಮತ್ತು ಆರ್ಥಿಕ ಚರ್ಚೆಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿವೆ. ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಾಂತ್ರಿಕ ಸಹಕಾರ ವಿಸ್ತರಿಸುತ್ತಿದೆ. ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಕೆಲವು ರಾಷ್ಟ್ರಗಳು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿವೆ.

ಈ ಬೆಳವಣಿಗೆಗಳು ಏಕಧ್ರುವೀಯ ವ್ಯವಸ್ಥೆಯಿಂದ ಬಹುಧ್ರುವೀಯ ಜಾಗತಿಕ ವ್ಯವಸ್ಥೆಯತ್ತ ಸಾಗುತ್ತಿರುವ ಬದಲಾವಣೆಯ ಸೂಚನೆಗಳಾಗಿವೆ. ಬಹುಧ್ರುವೀಯತೆ ಎಂದರೆ ಒಂದೇ ರಾಷ್ಟ್ರ ಅಥವಾ ಶಕ್ತಿಕೇಂದ್ರವು ಜಗತ್ತಿನ ರಾಜಕೀಯ ಮತ್ತು ಆರ್ಥಿಕ ನಿರ್ಧಾರಗಳನ್ನು ನಿಯಂತ್ರಿಸುವ ಸ್ಥಿತಿಗೆ ಪರ್ಯಾಯವಾಗಿ ಹಲವು ಶಕ್ತಿಕೇಂದ್ರಗಳು ಅಸ್ತಿತ್ವದಲ್ಲಿರುವುದು.

ಇದರ ಮತ್ತೊಂದು ಪ್ರಮುಖ ಆಯಾಮವೆಂದರೆ ಫೆಲೆಸ್ತೀನ್ ಪರವಾಗಿ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಹೆಚ್ಚುತ್ತಿರುವ ಬೆಂಬಲ. ಹಲವು ರಾಷ್ಟ್ರಗಳು ರಾಜತಾಂತ್ರಿಕ ಖಂಡನೆಗಳನ್ನು ಮೀರಿ ಇಸ್ರೇಲಿ ನೀತಿಗಳ ವಿರುದ್ಧ ಕಾನೂನು, ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳತ್ತ ಹೆಜ್ಜೆ ಹಾಕಿವೆ. ಅಂತಾರಾಷ್ಟ್ರೀಯ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ಹಾಗೂ ‘ಹೇಗ್ ಗ್ರೂಪ್’ನಂತಹ ಉಪಕ್ರಮಗಳು ಫೆಲೆಸ್ತೀನ್ ಪ್ರಶ್ನೆಯನ್ನು ಜಾಗತಿಕ ನ್ಯಾಯ ಮತ್ತು ಅಂತಾರಾಷ್ಟ್ರೀಯ ಹೊಣೆಗಾರಿಕೆಯ ಚರ್ಚೆಯ ಕೇಂದ್ರಕ್ಕೆ ತಂದಿವೆ.

ಆದರೆ ಬಹುಧ್ರುವೀಯ ಜಗತ್ತಿನ ಉದಯವನ್ನೇ ನ್ಯಾಯಯುತ ಜಗತ್ತಿನ ಉದಯವೆಂದು ಭಾವಿಸುವುದು ಸರಿಯಲ್ಲ. ಹಲವು ಪ್ರಬಲ ರಾಷ್ಟ್ರಗಳು ಅಸ್ತಿತ್ವದಲ್ಲಿರುವುದರಿಂದ ಮಾತ್ರ ಶೋಷಣೆ, ಯುದ್ಧ ಮತ್ತು ಅನ್ಯಾಯಗಳು ಅಂತ್ಯಗೊಳ್ಳುವುದಿಲ್ಲ. ಹೊಸ ಶಕ್ತಿಕೇಂದ್ರಗಳೂ ತಮ್ಮ ಹಿತಾಸಕ್ತಿಗಳಿಗಾಗಿ ದುರ್ಬಲ ರಾಷ್ಟ್ರಗಳನ್ನು ಬಳಸಿಕೊಳ್ಳುವ ಅಪಾಯವಿದೆ. ಆದ್ದರಿಂದ ಬಹುಧ್ರುವೀಯತೆಯ ನಿಜವಾದ ಯಶಸ್ಸು ಅದು ನ್ಯಾಯ, ಸಮಾನತೆ, ಸಾರ್ವಭೌಮತ್ವ ಮತ್ತು ಶಾಂತಿಯನ್ನು ಎಷ್ಟರಮಟ್ಟಿಗೆ ಸ್ಥಾಪಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.

ಕಾರ್ಯತಂತ್ರದ ಸ್ವಾವಲಂಬನೆ: ನಿಜವಾದ ಶಕ್ತಿಯ ಮಾನದಂಡ

ಇತ್ತೀಚಿನ ಜಾಗತಿಕ ಸಂಘರ್ಷಗಳು ರಾಷ್ಟ್ರಗಳ ಮುಂದಿಟ್ಟಿರುವ ಅತ್ಯಂತ ಮಹತ್ವದ ಪಾಠವೆಂದರೆ ಕಾರ್ಯತಂತ್ರದ ಸ್ವಾವಲಂಬನೆಯ ಅನಿವಾರ್ಯತೆ. ಒಂದು ರಾಷ್ಟ್ರವು ಎಷ್ಟೇ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರಲಿ, ಅದರ ಆರ್ಥಿಕತೆ ಎಷ್ಟೇ ಬಲಿಷ್ಠವಾಗಿರಲಿ ಅಥವಾ ಅದರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳೇ ಇರಲಿ, ನಿರ್ಣಾಯಕ ಸಂದರ್ಭಗಳಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲದಿದ್ದರೆ ಅದರ ಸಾರ್ವಭೌಮತ್ವ ಅಪಾಯಕ್ಕೆ ಸಿಲುಕಬಹುದು. ಹೊರಗಿನ ಶಕ್ತಿಗಳ ರಾಜಕೀಯ, ಆರ್ಥಿಕ ಮತ್ತು ಸೈನಿಕ ಬೆಂಬಲದ ಮೇಲೆ ಅತಿಯಾಗಿ ಅವಲಂಬಿತವಾಗಿರುವ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗಿಂತ ಆ ಶಕ್ತಿಗಳ ಆದ್ಯತೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗುತ್ತವೆ.

ಹೀಗಾಗಿ, ಸ್ವಾವಲಂಬನೆ ಎಂದರೆ ಕೇವಲ ಆರ್ಥಿಕ ಉತ್ಪಾದನೆಯಲ್ಲಿ ಸ್ವತಂತ್ರವಾಗಿರುವುದಲ್ಲ. ಆಹಾರ ಭದ್ರತೆ, ಇಂಧನ ಭದ್ರತೆ, ತಾಂತ್ರಿಕ ಸಾಮರ್ಥ್ಯ, ರಕ್ಷಣಾ ಉತ್ಪಾದನೆ, ವೈಜ್ಞಾನಿಕ ಸಂಶೋಧನೆ, ಹಣಕಾಸು ವ್ಯವಸ್ಥೆ ಮತ್ತು ಸ್ವತಂತ್ರ ವಿದೇಶಾಂಗ ನೀತಿ ಇವೆಲ್ಲವೂ ಅದರ ಅವಿಭಾಜ್ಯ ಅಂಗಗಳಾಗಿವೆ.

ಮಧ್ಯಪ್ರಾಚ್ಯದ ರಾಷ್ಟ್ರಗಳು ತಮ್ಮ ಭದ್ರತಾ ನೀತಿಗಳನ್ನು ಮರುಪರಿಶೀಲಿಸುತ್ತಿರುವುದು ಈ ಹೊಸ ವಾಸ್ತವದ ಪ್ರತಿಬಿಂಬವಾಗಿದೆ. ಬಾಹ್ಯ ಶಕ್ತಿಗಳ ರಕ್ಷಣಾ ಭರವಸೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುವುದಕ್ಕಿಂತ ಪ್ರಾದೇಶಿಕ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸಹಕಾರದ ಆಧಾರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯ ಹೆಚ್ಚುತ್ತಿದೆ. ಮುಸ್ಲಿಂ ರಾಷ್ಟ್ರಗಳು ಈ ನಿಟ್ಟಿನಲ್ಲಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಾರ್ವಭೌಮತ್ವಕ್ಕೆ ಪರಸ್ಪರ ಗೌರವ, ಸಾಮಾನ್ಯ ಹಿತಾಸಕ್ತಿಗಳ ರಕ್ಷಣೆ ಮತ್ತು ಪ್ರಾದೇಶಿಕ ಶಾಂತಿಯನ್ನು ಆಧರಿಸಿದ ಸಹಕಾರವನ್ನು ಬೆಳೆಸಬೇಕಾಗಿದೆ.

ಶಕ್ತಿಯ ಹೊಸ ಆಯಾಮಗಳು ಮತ್ತು ಜಾಗತಿಕ ಸಾರ್ವಜನಿಕ ಅಭಿಪ್ರಾಯ

ಸಮಕಾಲೀನ ಜಗತ್ತಿನಲ್ಲಿ ಶಕ್ತಿಯ ವ್ಯಾಖ್ಯಾನವೂ ಬದಲಾಗುತ್ತಿದೆ. ಒಂದು ಕಾಲದಲ್ಲಿ ಬೃಹತ್ ಸೇನೆ, ಅತ್ಯಾಧುನಿಕ ಯುದ್ಧವಿಮಾನಗಳು ಮತ್ತು ದುಬಾರಿ ಶಸ್ತ್ರಾಸ್ತ್ರಗಳೇ ಸೈನಿಕ ಸಾಮರ್ಥ್ಯದ ಪ್ರಮುಖ ಮಾನದಂಡಗಳಾಗಿದ್ದವು. ಆದರೆ ಆಧುನಿಕ ಸಂಘರ್ಷಗಳು ತಂತ್ರಜ್ಞಾನ, ನಾವೀನ್ಯತೆ, ಡ್ರೋನ್‌ಗಳು, ಸೈಬರ್ ಸಾಮರ್ಥ್ಯ ಮತ್ತು ಕಾರ್ಯತಂತ್ರದ ಮಾರ್ಗಗಳ ಮೇಲಿನ ನಿಯಂತ್ರಣವೂ ನಿರ್ಣಾಯಕ ಪಾತ್ರ ವಹಿಸಬಲ್ಲವು ಎಂಬುದನ್ನು ತೋರಿಸಿವೆ.

ಸೈನಿಕ ಶಕ್ತಿಯೆಂದರೆ ಕೇವಲ ಶಸ್ತ್ರಾಸ್ತ್ರಗಳ ಸಂಖ್ಯೆಯಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಬಳಸುವ ತಂತ್ರಜ್ಞಾನ, ಗುಪ್ತಚರ ಸಾಮರ್ಥ್ಯ, ವೈಜ್ಞಾನಿಕ ಸಂಶೋಧನೆ, ಆರ್ಥಿಕ ಸಹಿಷ್ಣುತೆ ಮತ್ತು ದೀರ್ಘಕಾಲೀನ ಯೋಜನೆಯೂ ಅಷ್ಟೇ ಮುಖ್ಯ. ಆದ್ದರಿಂದ ಮುಸ್ಲಿಂ ರಾಷ್ಟ್ರಗಳು ಜ್ಞಾನಾಧಾರಿತ ಆರ್ಥಿಕತೆ ಮತ್ತು ತಾಂತ್ರಿಕ ಸ್ವಾವಲಂಬನೆಗೆ ಆದ್ಯತೆ ನೀಡಬೇಕಾಗಿದೆ.

ಇದರೊಂದಿಗೆ ಜಾಗತಿಕ ಸಾರ್ವಜನಿಕ ಅಭಿಪ್ರಾಯವೂ ಹೊಸ ಶಕ್ತಿಯಾಗಿ ಹೊರಹೊಮ್ಮಿದೆ. ಗಾಝಾದಲ್ಲಿನ ಮಾನವೀಯ ದುರಂತಗಳು ವಿಶ್ವದಾದ್ಯಂತ ಅಭೂತಪೂರ್ವ ಜನಪ್ರತಿಕ್ರಿಯೆಯನ್ನು ಹುಟ್ಟುಹಾಕಿವೆ. ಯುರೋಪ್ ಮತ್ತು ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿದ್ಯಾರ್ಥಿಗಳು, ಯುವಜನರು, ಬುದ್ಧಿಜೀವಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ನಾಗರಿಕ ಸಂಘಟನೆಗಳು ತಮ್ಮ ಸರ್ಕಾರಗಳ ನೀತಿಗಳನ್ನು ಪ್ರಶ್ನಿಸಿ ಫೆಲೆಸ್ತೀನ್ ಜನತೆಯ ಹಕ್ಕುಗಳ ಪರವಾಗಿ ಧ್ವನಿ ಎತ್ತಿವೆ.

ಸಾಮಾಜಿಕ ಮಾಧ್ಯಮಗಳು ಮತ್ತು ಪರ್ಯಾಯ ಸಂವಹನ ಮಾಧ್ಯಮಗಳು ಈ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಮುಖ್ಯವಾಹಿನಿಯ ಮಾಧ್ಯಮಗಳ ನಿರೂಪಣೆಗೆ ಪರ್ಯಾಯವಾಗಿ ಸಂಘರ್ಷಪೀಡಿತ ಪ್ರದೇಶಗಳ ವಾಸ್ತವ ಚಿತ್ರಣಗಳು ನೇರವಾಗಿ ಜಾಗತಿಕ ಜನಸಾಮಾನ್ಯರನ್ನು ತಲುಪಿವೆ.

ಗಾಝಾದ ಸಂಕಷ್ಟದ ನಡುವೆಯೂ ಫೆಲೆಸ್ತೀನಿ ಜನತೆ ಪ್ರದರ್ಶಿಸಿರುವ ತಾಳ್ಮೆ, ಧೈರ್ಯ, ಕುಟುಂಬ ಸಂಬಂಧಗಳ ಮೇಲಿನ ಬದ್ಧತೆ ಮತ್ತು ಧಾರ್ಮಿಕ ವಿಶ್ವಾಸವು ಜಗತ್ತಿನ ಹಲವು ಜನರನ್ನು ಆಳವಾಗಿ ಪ್ರಭಾವಿಸಿದೆ. ಪಾಶ್ಚಿಮಾತ್ಯ ಸಮಾಜಗಳ ಕೆಲವು ಯುವಜನರಲ್ಲಿ ಇಸ್ಲಾಮ್‌ ಮತ್ತು ಕುರ್‌ಆನ್ ಕುರಿತು ಕುತೂಹಲ ಹೆಚ್ಚುತ್ತಿರುವುದೂ ಗಮನಾರ್ಹ ಬೆಳವಣಿಗೆಯಾಗಿದೆ. ಇಲ್ಲಿ ಒಂದು ಮಹತ್ವದ ಸಂಗತಿಯನ್ನು ಗುರುತಿಸಬೇಕಾಗಿದೆ. ಜಾಗತಿಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಸಾಮರ್ಥ್ಯವೂ ಒಂದು ರಾಷ್ಟ್ರದ ಅಥವಾ ಸಮುದಾಯದ ಶಕ್ತಿಯ ಭಾಗವಾಗಿದೆ. ನೈತಿಕ ವಿಶ್ವಾಸಾರ್ಹತೆ, ಸತ್ಯದ ಪರವಾದ ನಿಲುವು ಮತ್ತು ಮಾನವೀಯ ಮೌಲ್ಯಗಳ ಮೇಲಿನ ಬದ್ಧತೆಗಳು ಜಾಗತಿಕ ರಾಜಕೀಯದಲ್ಲಿ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಮುಸ್ಲಿಂ ಜಗತ್ತಿನ ಮುಂದಿರುವ ಜವಾಬ್ದಾರಿಗಳು

ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯು ಮುಸ್ಲಿಂ ಜಗತ್ತಿಗೆ ಕೆಲವು ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ಆದರೆ ಅವಕಾಶಗಳು ಮಾತ್ರ ಇತಿಹಾಸವನ್ನು ಬದಲಾಯಿಸುವುದಿಲ್ಲ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ದೂರದೃಷ್ಟಿ, ಸಂಘಟಿತ ಪ್ರಯತ್ನ, ಜ್ಞಾನ, ಸಿದ್ಧತೆ ಮತ್ತು ಸಮರ್ಥ ನಾಯಕತ್ವದ ಅಗತ್ಯವಿದೆ.

ಮುಸ್ಲಿಂ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಆಂತರಿಕ ವಿಭಜನೆಯೂ ಒಂದು. ರಾಜಕೀಯ, ಪಂಥೀಯ, ಜನಾಂಗೀಯ, ಭಾಷಿಕ ಮತ್ತು ರಾಷ್ಟ್ರೀಯ ಭಿನ್ನತೆಗಳು ಮುಸ್ಲಿಂ ರಾಷ್ಟ್ರಗಳ ಸಾಮೂಹಿಕ ಶಕ್ತಿಯನ್ನು ದುರ್ಬಲಗೊಳಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಬಾಹ್ಯ ಶಕ್ತಿಗಳು ಈ ಭಿನ್ನಾಭಿಪ್ರಾಯಗಳನ್ನು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡ ಸಂಘರ್ಷಗಳಾಗಿ ಪರಿವರ್ತಿಸುವ ಪ್ರವೃತ್ತಿ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಇಸ್ಲಾಮೀ ವಿದ್ವಾಂಸರು, ಚಿಂತಕರು, ಸಂಘಟನೆಗಳು ಮತ್ತು ಸಾಮಾಜಿಕ ನಾಯಕತ್ವದ ಜವಾಬ್ದಾರಿ ಹೆಚ್ಚಾಗಿದೆ. ಭಿನ್ನಾಭಿಪ್ರಾಯಗಳನ್ನು ಸಂಘರ್ಷಗಳನ್ನಾಗಿ ಪರಿವರ್ತಿಸುವ ಬದಲು ಪರಸ್ಪರ ತಿಳುವಳಿಕೆಯನ್ನು ಬೆಳೆಸಬೇಕು. ಇಸ್ಲಾಮಿನ ವಿಶಾಲವಾದ ಸಹೋದರತ್ವದ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು.

ಏಕತೆ ಎಂದರೆ ಎಲ್ಲರೂ ಒಂದೇ ರೀತಿಯಲ್ಲಿ ಆಲೋಚಿಸಬೇಕು ಅಥವಾ ಎಲ್ಲ ಭಿನ್ನಾಭಿಪ್ರಾಯಗಳನ್ನು ತ್ಯಜಿಸಬೇಕು ಎಂದರ್ಥವಲ್ಲ. ಬದಲಾಗಿ, ಮೂಲಭೂತ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳ ಆಧಾರದಲ್ಲಿ ಭಿನ್ನಾಭಿಪ್ರಾಯಗಳ ನಡುವೆಯೂ ಸಹಕಾರದಿಂದ ಮುನ್ನಡೆಯುವ ಸಾಮರ್ಥ್ಯವೇ ನಿಜವಾದ ಏಕತೆ. ಮುಸ್ಲಿಂ ಜಗತ್ತು ತನ್ನ ಸಾಮೂಹಿಕ ಹಿತಾಸಕ್ತಿಗಳನ್ನು ವೈಯಕ್ತಿಕ ಆಡಳಿತಗಾರರ ಅಥವಾ ಪ್ರತ್ಯೇಕ ರಾಷ್ಟ್ರಗಳ ತಾತ್ಕಾಲಿಕ ರಾಜಕೀಯ ಹಿತಾಸಕ್ತಿಗಳಿಗಿಂತ ಮೇಲಿರಿಸಬೇಕಾಗಿದೆ. ಫೆಲೆಸ್ತೀನ್‌ನಂತಹ ಸಾರ್ವತ್ರಿಕ ನ್ಯಾಯದ ಪ್ರಶ್ನೆಗಳಲ್ಲಿ ಸಂಘಟಿತ ಮತ್ತು ನಿರಂತರ ನಿಲುವನ್ನು ಪ್ರದರ್ಶಿಸುವುದು ಈ ಏಕತೆಯ ಮೊದಲ ಪರೀಕ್ಷೆಯಾಗಿದೆ.

ಇಸ್ಲಾಮನ್ನು ಒಂದು ನಾಗರಿಕ ಪರ್ಯಾಯವಾಗಿ ಪ್ರಸ್ತುತಪಡಿಸುವ ಅಗತ್ಯ

ಇಸ್ಲಾಮೀ ಜಗತ್ತಿನ ಮುಂದಿರುವ ಮತ್ತೊಂದು ಮಹತ್ವದ ಜವಾಬ್ದಾರಿಯೆಂದರೆ ಇಸ್ಲಾಮನ್ನು ಕೇವಲ ಧಾರ್ಮಿಕ ಆಚರಣೆಗಳ ಸಮೂಹವಾಗಿ ಅಥವಾ ರಾಜಕೀಯ ಪ್ರತಿರೋಧದ ಸಿದ್ಧಾಂತವಾಗಿ ಮಾತ್ರವಲ್ಲದೆ, ಮಾನವ ಬದುಕಿನ ಸಮಗ್ರ ಆಯಾಮಗಳಿಗೆ ಮಾರ್ಗದರ್ಶನ ನೀಡುವ ನಾಗರಿಕತೆಯ ದೃಷ್ಟಿಕೋನವಾಗಿ ಪ್ರಸ್ತುತಪಡಿಸುವುದು.

ಇಂದಿನ ಜಗತ್ತು ಅಸ್ತಿತ್ವದಲ್ಲಿರುವ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗಳ ಮಿತಿಗಳನ್ನು ಮರುಪರಿಶೀಲಿಸುತ್ತಿದೆ. ಆರ್ಥಿಕ ಬೆಳವಣಿಗೆಯ ನಡುವೆಯೂ ಹೆಚ್ಚುತ್ತಿರುವ ಅಸಮಾನತೆ, ಪರಿಸರ ಬಿಕ್ಕಟ್ಟು, ಕುಟುಂಬ ವ್ಯವಸ್ಥೆಯಲ್ಲಿನ ಸವಾಲುಗಳು, ಯುದ್ಧಗಳು, ಶೋಷಣೆ ಮತ್ತು ಮಾನವ ಘನತೆಯ ಉಲ್ಲಂಘನೆಗಳು ಜಾಗತಿಕ ಸಮುದಾಯವನ್ನು ಪರ್ಯಾಯ ಚಿಂತನೆಗಳತ್ತ ಕೊಂಡೊಯ್ಯುತ್ತಿವೆ. ಇಂತಹ ಸಂದರ್ಭದಲ್ಲಿ ಇಸ್ಲಾಮಿನ ಮೌಲ್ಯಗಳು ಮಹತ್ವದ ಕೊಡುಗೆ ನೀಡಬಲ್ಲವು. ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ಸಂಪತ್ತಿನ ನ್ಯಾಯಯುತ ಹಂಚಿಕೆ, ಮಾನವ ಘನತೆ, ಕುಟುಂಬದ ಸ್ಥಿರತೆ, ಪರಿಸರ ಸಂರಕ್ಷಣೆ, ನೈತಿಕತೆ, ಹೊಣೆಗಾರಿಕೆಯುತ ಆಡಳಿತ ಮತ್ತು ರಾಷ್ಟ್ರಗಳ ನಡುವಿನ ನ್ಯಾಯಯುತ ಸಂಬಂಧಗಳ ಕುರಿತು ಇಸ್ಲಾಮ್‌ ಸಮಗ್ರ ದೃಷ್ಟಿಕೋನವನ್ನು ಒದಗಿಸುತ್ತದೆ. ಆದರೆ ಈ ಮೌಲ್ಯಗಳು ಭಾಷಣಗಳು, ಉಪನ್ಯಾಸಗಳು ಮತ್ತು ಸೈದ್ಧಾಂತಿಕ ಚರ್ಚೆಗಳಿಗೆ ಮಾತ್ರ ಸೀಮಿತವಾಗಬಾರದು. ಅವು ಪರಿಣಾಮಕಾರಿ ಸಂಸ್ಥೆಗಳು, ಕಾರ್ಯಸಾಧ್ಯವಾದ ನೀತಿಗಳು ಮತ್ತು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಸಾಮಾಜಿಕ ಮಾದರಿಗಳಾಗಿ ರೂಪುಗೊಳ್ಳಬೇಕು.

ಇಸ್ಲಾಮಿನ ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಗಳನ್ನು ಸಮಾಜದ ಎಲ್ಲ ವರ್ಗಗಳಿಗೂ ಅರ್ಥವಾಗುವ ಭಾಷೆಯಲ್ಲಿ ವಿವರಿಸುವ ಅಗತ್ಯವಿದೆ. ಇಸ್ಲಾಮನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ದೂರುವುದಕ್ಕಿಂತ, ತನ್ನ ನೈತಿಕತೆ, ನಡವಳಿಕೆ, ಸಾಮಾಜಿಕ ಸೇವೆ ಮತ್ತು ಬೌದ್ಧಿಕ ಸಂವಾದಗಳ ಮೂಲಕ ಅದರ ನೈಜ ಮೌಲ್ಯಗಳನ್ನು ಪರಿಚಯಿಸುವುದು ಮುಸ್ಲಿಮರ ಜವಾಬ್ದಾರಿಯಾಗಿದೆ. ಇಸ್ಲಾಮೀ ಆಂದೋಲನಗಳು ತಮ್ಮ ಕಾರ್ಯಕ್ಷೇತ್ರವನ್ನು ಮುಸ್ಲಿಂ ಸಮುದಾಯದ ಆಂತರಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸದೆ, ವಿಶಾಲ ಸಮಾಜದ ಸಮಸ್ಯೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಬಡತನ, ನಿರುದ್ಯೋಗ, ಶಿಕ್ಷಣದ ಕೊರತೆ, ಪರಿಸರ ಮಾಲಿನ್ಯ, ಸಾಮಾಜಿಕ ಅಸಮಾನತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು. ಇಸ್ಲಾಮಿನ ಸಾರ್ವತ್ರಿಕ ಸಂದೇಶವು ಮಾನವಕುಲದ ಕಲ್ಯಾಣವನ್ನು ಉದ್ದೇಶಿಸಿದೆ ಎಂಬುದನ್ನು ಕಾರ್ಯಗಳ ಮೂಲಕ ಸಾಬೀತುಪಡಿಸುವುದು ಇಂದಿನ ಅಗತ್ಯವಾಗಿದೆ.

ಸಂಸ್ಥೆಗಳ ನಿರ್ಮಾಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ

ಯಾವುದೇ ಸಮಾಜದ ದೀರ್ಘಕಾಲೀನ ಪ್ರಗತಿಯು ಅದರ ಸಂಸ್ಥೆಗಳ ಗುಣಮಟ್ಟ ಮತ್ತು ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಮುಸ್ಲಿಂ ಜಗತ್ತು ಈ ಎರಡೂ ಕ್ಷೇತ್ರಗಳಲ್ಲಿ ವಿಶೇಷ ಗಮನ ಹರಿಸಬೇಕಾಗಿದೆ. ಜ್ಞಾನ, ಸಂಶೋಧನೆ, ತಂತ್ರಜ್ಞಾನ ಮತ್ತು ನೀತಿ ನಿರೂಪಣೆಯ ಕ್ಷೇತ್ರಗಳಲ್ಲಿ ಇತರರ ಮೇಲೆ ಅತಿಯಾದ ಅವಲಂಬನೆ ಹೊಂದಿರುವ ಸಮಾಜಗಳು ತಮ್ಮ ಭವಿಷ್ಯವನ್ನು ಸ್ವತಂತ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ವಿಶ್ವಮಟ್ಟದ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ತಂತ್ರಜ್ಞಾನ ಅಭಿವೃದ್ಧಿ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು ಮತ್ತು ಸ್ವತಂತ್ರ ನೀತಿ ಸಂಶೋಧನಾ ಕೇಂದ್ರಗಳನ್ನು ನಿರ್ಮಿಸುವುದು ತುರ್ತು ಆದ್ಯತೆಯಾಗಬೇಕು. ಇದರೊಂದಿಗೆ ಯುವಜನರ ಸಾಮರ್ಥ್ಯವನ್ನು ಗುರುತಿಸಿ ಬೆಳೆಸುವ ಕೆಲಸವೂ ನಡೆಯಬೇಕು. ಮುಸ್ಲಿಂ ಜಗತ್ತಿನಲ್ಲಿ ಯುವಜನರ ದೊಡ್ಡ ಜನಸಂಖ್ಯೆಯಿದೆ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಅರ್ಥಶಾಸ್ತ್ರ, ಆಡಳಿತ, ಸಂಶೋಧನೆ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ಅವರು ಅಪಾರ ಕೊಡುಗೆ ನೀಡಬಲ್ಲರು.

ವಿಶೇಷವಾಗಿ ಮಹಿಳೆಯರು ಮತ್ತು ಯುವಜನರಿಗೆ ಗುಣಮಟ್ಟದ ಶಿಕ್ಷಣ, ಸಂಶೋಧನೆ ಮತ್ತು ನಾಯಕತ್ವದ ಅವಕಾಶಗಳನ್ನು ಒದಗಿಸಬೇಕು. ಪ್ರತಿಭಾವಂತರನ್ನು ಬೆಳೆಸುವುದಷ್ಟೇ ಅಲ್ಲ, ಅವರ ಜ್ಞಾನ ಮತ್ತು ಸಾಮರ್ಥ್ಯವನ್ನು ಸಮಾಜದ ಕಲ್ಯಾಣಕ್ಕೆ ಬಳಸಿಕೊಳ್ಳುವ ವ್ಯವಸ್ಥೆಯನ್ನೂ ರೂಪಿಸಬೇಕು. 

ಇರಾನ್ ಮತ್ತು ಚೀನಾದಂತಹ ರಾಷ್ಟ್ರಗಳ ಅನುಭವಗಳು ವಿವಿಧ ರಾಜಕೀಯ ಮತ್ತು ಆರ್ಥಿಕ ಸಂದರ್ಭಗಳಲ್ಲಿ ಜ್ಞಾನ, ತಂತ್ರಜ್ಞಾನ ಮತ್ತು ದೇಶೀಯ ಸಂಸ್ಥೆಗಳಲ್ಲಿ ದೀರ್ಘಕಾಲೀನ ಹೂಡಿಕೆಯ ಮಹತ್ವವನ್ನು ತೋರಿಸುತ್ತವೆ. ಈ ಅನುಭವಗಳನ್ನು ಅವುಗಳ ಎಲ್ಲ ನೀತಿಗಳನ್ನೂ ಅನುಕರಿಸುವ ದೃಷ್ಟಿಯಿಂದಲ್ಲ, ಬದಲಾಗಿ ಸ್ವತಂತ್ರ ಸಾಮರ್ಥ್ಯ ನಿರ್ಮಾಣದ ಪಾಠಗಳ ದೃಷ್ಟಿಯಿಂದ ಅಧ್ಯಯನ ಮಾಡಬೇಕು. 

ಇಸ್ಲಾಮೀ ಆಂದೋಲನಗಳೂ ತಮ್ಮ ಸಂಘಟನಾ ಸಾಮರ್ಥ್ಯವನ್ನು ಕೇವಲ ಸದಸ್ಯತ್ವ ಮತ್ತು ಚಟುವಟಿಕೆಗಳ ವಿಸ್ತರಣೆಯ ಮೂಲಕ ಅಳೆಯದೆ, ಸಮಾಜಕ್ಕೆ ಎಷ್ಟು ಸಮರ್ಥ, ಜ್ಞಾನವಂತ, ಸೃಜನಶೀಲ ಮತ್ತು ದೂರದೃಷ್ಟಿಯ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡುತ್ತಿವೆ ಎಂಬುದರ ಆಧಾರದಲ್ಲಿ ಮೌಲ್ಯಮಾಪನ ಮಾಡಿಕೊಳ್ಳಬೇಕು.

ಉದಯೋನ್ಮುಖ ವಿಶ್ವ ವ್ಯವಸ್ಥೆಯಲ್ಲಿ ಭಾರತದ ಪಾತ್ರ

ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತವು ಮಹತ್ವದ ಸ್ಥಾನವನ್ನು ಹೊಂದಿದೆ. ವಿಶಾಲ ಜನಸಂಖ್ಯೆ, ಬಲಿಷ್ಠ ಆರ್ಥಿಕ ಸಾಮರ್ಥ್ಯ, ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ, ಭೌಗೋಳಿಕ ಸ್ಥಾನಮಾನ ಹಾಗೂ ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯದ ರಾಷ್ಟ್ರಗಳೊಂದಿಗಿನ ಸಂಬಂಧಗಳು ಭಾರತಕ್ಕೆ ವಿಶೇಷ ಕಾರ್ಯತಂತ್ರದ ಮಹತ್ವವನ್ನು ನೀಡಿವೆ.

ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತವು ಮುಸ್ಲಿಂ ಜಗತ್ತಿನೊಂದಿಗೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಜನಸಂಪರ್ಕದ ಆಳವಾದ ಸಂಬಂಧಗಳನ್ನು ಹೊಂದಿದೆ. ಈ ಸಂಬಂಧಗಳು ಭಾರತಕ್ಕೆ ಜಾಗತಿಕ ಸಂವಾದ ಮತ್ತು ಸಹಕಾರದಲ್ಲಿ ವಿಶೇಷ ಅವಕಾಶಗಳನ್ನು ಒದಗಿಸುತ್ತವೆ. ಆದರೆ ಈ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಭಾರತವು ಸ್ವತಂತ್ರ, ಸಮತೋಲಿತ ಮತ್ತು ನ್ಯಾಯಾಧಾರಿತ ವಿದೇಶಾಂಗ ನೀತಿಯನ್ನು ಅನುಸರಿಸಬೇಕಾಗಿದೆ. ಯಾವುದೇ ಒಂದು ಪ್ರಬಲ ರಾಷ್ಟ್ರದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅತಿಯಾಗಿ ಬದ್ಧವಾಗದೆ, ಅಂತಾರಾಷ್ಟ್ರೀಯ ಕಾನೂನು, ಸಾರ್ವಭೌಮತ್ವ, ವಸಾಹತುಶಾಹಿ ವಿರೋಧಿ ನಿಲುವು ಮತ್ತು ಮಾನವ ಹಕ್ಕುಗಳ ತತ್ವಗಳಿಗೆ ಆದ್ಯತೆ ನೀಡಬೇಕು.

ಭಾರತದ ಜಾಗತಿಕ ವಿಶ್ವಾಸಾರ್ಹತೆಯು ಅದರ ಆರ್ಥಿಕ ಮತ್ತು ಸೈನಿಕ ಸಾಮರ್ಥ್ಯದಿಂದ ಮಾತ್ರ ನಿರ್ಧಾರವಾಗುವುದಿಲ್ಲ. ದೇಶದೊಳಗೆ ಅದು ತನ್ನ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದೂ ಅಷ್ಟೇ ಮುಖ್ಯ. ಬಹುತ್ವ, ಸಾಮಾಜಿಕ ಸಾಮರಸ್ಯ, ಧಾರ್ಮಿಕ ಸ್ವಾತಂತ್ರ್ಯ, ಸಮಾನ ಹಕ್ಕುಗಳು ಮತ್ತು ಕಾನೂನಿನ ಮುಂದೆ ಎಲ್ಲರ ಸಮಾನತೆಯನ್ನು ಎಷ್ಟರಮಟ್ಟಿಗೆ ಖಾತರಿಪಡಿಸುತ್ತದೆ ಎಂಬುದು ಅದರ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರುತ್ತದೆ.

ಭಾರತದ ಸಂವಿಧಾನವು ಪ್ರತಿಪಾದಿಸಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಈ ನಿಟ್ಟಿನಲ್ಲಿ ಮಹತ್ವದ ಮಾರ್ಗದರ್ಶಕ ತತ್ವಗಳಾಗಿವೆ. ದೇಶದ ಎಲ್ಲ ಸಮುದಾಯಗಳಿಗೂ ಘನತೆ, ಭದ್ರತೆ ಮತ್ತು ಸಮಾನ ಅವಕಾಶಗಳನ್ನು ಖಾತರಿಪಡಿಸುವ ಮೂಲಕ ಭಾರತವು ಜಗತ್ತಿಗೆ ಒಂದು ಸಕಾರಾತ್ಮಕ ಮಾದರಿಯನ್ನು ನೀಡಬಹುದು. ವಿಶೇಷವಾಗಿ ಮುಸ್ಲಿಂ ಸಮುದಾಯವು ಭಾರತದ ಬಹುತ್ವದ ಪರಂಪರೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಹೋರಾಟದಲ್ಲಿ ರಚನಾತ್ಮಕ ಪಾತ್ರ ವಹಿಸಬೇಕಾಗಿದೆ. ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವತ್ರಿಕ ಮಾನವೀಯ ಮೌಲ್ಯಗಳು ಪರಸ್ಪರ ವಿರುದ್ಧವಾದವುಗಳಲ್ಲ ಎಂಬುದನ್ನು ಸಮಾಜದ ಮುಂದೆ ಸ್ಪಷ್ಟಪಡಿಸಬೇಕು.

ಹೊಸ ಜಾಗತಿಕ ವಾಸ್ತವದಲ್ಲಿ ಮುಸ್ಲಿಂ ಜಗತ್ತಿನ ಐತಿಹಾಸಿಕ ಹೊಣೆಗಾರಿಕೆ

ಜಗತ್ತು ಇಂದು ಒಂದು ಮಹತ್ವದ ಐತಿಹಾಸಿಕ ಪರಿವರ್ತನೆಯ ಹಂತದಲ್ಲಿದೆ. ಸಾಂಪ್ರದಾಯಿಕ ಶಕ್ತಿ ರಚನೆಗಳಿಗೆ ಎದುರಾಗುತ್ತಿರುವ ಸವಾಲುಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚುತ್ತಿರುವ ಪ್ರಭಾವ, ಜಾಗತಿಕ ದಕ್ಷಿಣದ ಸಹಕಾರ ಮತ್ತು ನ್ಯಾಯಕ್ಕಾಗಿ ವಿಶ್ವದಾದ್ಯಂತ ವ್ಯಕ್ತವಾಗುತ್ತಿರುವ ಜನಾಭಿಪ್ರಾಯಗಳು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿವೆ.

ಆದರೆ ಈ ಬದಲಾವಣೆಗಳು ಸ್ವಯಂಚಾಲಿತವಾಗಿ ಮುಸ್ಲಿಂ ಜಗತ್ತಿನ ಪ್ರಗತಿಗೆ ಕಾರಣವಾಗುವುದಿಲ್ಲ. ಅವುಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳಲು ಮುಸ್ಲಿಂ ರಾಷ್ಟ್ರಗಳು ಮತ್ತು ಸಮಾಜಗಳು ತಮ್ಮ ಆಂತರಿಕ ದೌರ್ಬಲ್ಯಗಳನ್ನು ಗುರುತಿಸಬೇಕು. ರಾಜಕೀಯ ವಿಭಜನೆ, ಆರ್ಥಿಕ ಅವಲಂಬನೆ, ವೈಜ್ಞಾನಿಕ ಹಿಂದುಳಿತ, ಸಂಸ್ಥೆಗಳ ದುರ್ಬಲತೆ ಮತ್ತು ಸಮರ್ಥ ನಾಯಕತ್ವದ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ದೀರ್ಘಕಾಲೀನ ಯೋಜನೆಗಳನ್ನು ರೂಪಿಸಬೇಕು.

ಮುಸ್ಲಿಂ ಜಗತ್ತಿನ ಭವಿಷ್ಯವು ಕೇವಲ ಅದರ ತೈಲ ಸಂಪನ್ಮೂಲಗಳು, ಭೌಗೋಳಿಕ ಸ್ಥಾನಮಾನ ಅಥವಾ ಸೈನಿಕ ಸಾಮರ್ಥ್ಯದಿಂದ ನಿರ್ಧಾರವಾಗುವುದಿಲ್ಲ. ಜ್ಞಾನವನ್ನು ಸೃಷ್ಟಿಸುವ ಸಾಮರ್ಥ್ಯ, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ನ್ಯಾಯಯುತ ಸಂಸ್ಥೆಗಳನ್ನು ನಿರ್ಮಿಸುವ ಬದ್ಧತೆ ಮತ್ತು ಮಾನವಕುಲಕ್ಕೆ ನೀಡುವ ಕೊಡುಗೆಯೇ ಅದರ ನಿಜವಾದ ಶಕ್ತಿಯನ್ನು ನಿರ್ಧರಿಸಲಿದೆ.

ಇಸ್ಲಾಮೀ ಜಗತ್ತು ಕೇವಲ ತನ್ನ ಕಳೆದುಹೋದ ರಾಜಕೀಯ ಪ್ರಭಾವವನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಸೀಮಿತವಾಗಬಾರದು. ಜಾಗತಿಕ ಶಾಂತಿ, ನ್ಯಾಯ, ಮಾನವ ಘನತೆ ಮತ್ತು ಸಹಬಾಳ್ವೆಯನ್ನು ಬಲಪಡಿಸುವ ಒಂದು ಸೃಜನಶೀಲ ಶಕ್ತಿಯಾಗಿ ಹೊರಹೊಮ್ಮಬೇಕು. ಪ್ರತಿರೋಧದ ಜೊತೆಗೆ ನಿರ್ಮಾಣ, ಟೀಕೆಯ ಜೊತೆಗೆ ಪರ್ಯಾಯ, ಹಕ್ಕುಗಳ ಹೋರಾಟದ ಜೊತೆಗೆ ಹೊಣೆಗಾರಿಕೆ ಮತ್ತು ಧಾರ್ಮಿಕ ಬದ್ಧತೆಯ ಜೊತೆಗೆ ಮಾನವೀಯ ಕಾಳಜಿಯನ್ನೂ ಬೆಳೆಸಿಕೊಳ್ಳಬೇಕು. ಇದು ಕೇವಲ ಮುಸ್ಲಿಂ ಜಗತ್ತಿನ ರಾಜಕೀಯ ಭವಿಷ್ಯದ ಪ್ರಶ್ನೆಯಲ್ಲ. ಇಸ್ಲಾಮ್‌ ಪ್ರತಿಪಾದಿಸುವ ನ್ಯಾಯ, ಕರುಣೆ, ಸಮಾನತೆ ಮತ್ತು ಮಾನವ ಕಲ್ಯಾಣದ ಮೌಲ್ಯಗಳನ್ನು ಜಾಗತಿಕ ಬದುಕಿನಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಐತಿಹಾಸಿಕ ಅವಕಾಶವೂ ಹೌದು. 

ಹೀಗಾಗಿ, ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯು ಮುಸ್ಲಿಂ ಜಗತ್ತಿಗೆ ಕೇವಲ ಕಳೆದುಹೋದ ಪ್ರಭಾವವನ್ನು ಮರಳಿ ಪಡೆಯುವ ಅವಕಾಶವನ್ನಷ್ಟೇ ನೀಡುತ್ತಿಲ್ಲ; ಬದಲಾಗಿ, ಹೆಚ್ಚು ನ್ಯಾಯಯುತ, ಮಾನವೀಯ, ಸಮಾನತೆಯ ಮತ್ತು ಶಾಂತಿಯುತ ಜಗತ್ತಿನ ನಿರ್ಮಾಣದಲ್ಲಿ ಅರ್ಥಪೂರ್ಣ ಪಾತ್ರ ವಹಿಸುವ ಐತಿಹಾಸಿಕ ಹೊಣೆಗಾರಿಕೆಯನ್ನೂ ವಹಿಸಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ದೂರದೃಷ್ಟಿ, ಸಾಮರ್ಥ್ಯ ಮತ್ತು ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದೇ ಇಂದಿನ ಕಾಲದ ನಿಜವಾದ ಸವಾಲಾಗಿದೆ.

ಸಂಕ್ಷೇಪಾನುವಾದ: ಎಂ. ನವಾಝ್‌ ಅಬ್ಬೆಟ್ಟು, ಬೆಂಗಳೂರು