ಸನ್ಮಾರ್ಗ ವಾರ್ತೆ
ಬ್ರಹ್ಮಾವರ: ಹಿರಿಯ ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು, ಯುನಿಟಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿದ್ದ ಮೊಹಮ್ಮದ್ ಜಮಾಲ್ ಹೈದರ್ (68) ಅವರು ನಿಧನರಾಗಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರಾದ ಮೊಹಮ್ಮದ್ ಫರಾಜ್, ಮೊಹಮ್ಮದ್ ಫರ್ಹಾನ್, ಮೊಹಮ್ಮದ್ ರೆಹಾನ್ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಬ್ರಹ್ಮಾವರದ ಜಾಮಿಯ ಮಸೀದಿಯ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು, ಪ್ರಸ್ತುತ ಉಡುಪಿಯ ಯುನಿಟಿ ಸೌಹಾರ್ದ ಬ್ಯಾಂಕ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದ ಅವರು, ಜಮೀಯತುಲ್ ಫಲಾಹ್ ಸೇರಿದಂತೆ ಹಲವಾರು ಸಾಮುದಾಯಿಕ, ಧಾರ್ಮಿಕ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅಲ್ಲದೆ, ‘ಸನ್ಮಾರ್ಗ’ ವಾರ ಪತ್ರಿಕೆ ಹಾಗೂ ‘ಅನುಪಮ’ ಮಾಸಿಕದ ನಿರಂತರ ಓದುಗರೂ ಮತ್ತು ಹಿತೈಷಿಯೂ ಆಗಿದ್ದರು.
ಜಮಾಲ್ ಹೈದರ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಊರಿನ ಹಾಗೂ ಸಮಾಜದ ಹಲವು ಗಣ್ಯರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದ್ದಾರೆ.












