ಸನ್ಮಾರ್ಗ ವಾರ್ತೆ
ಒಟ್ಟಾವಾ: ಸಕಾಲಿಕ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ 2025 ಮತ್ತು 2026ರ ನಡುವೆ 29,000 ಕೆನಡಿಯನ್ನರು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ. ಶಸ್ತ್ರಚಿಕಿತ್ಸೆಗಳು, ರೋಗನಿರ್ಣಯ ಪರೀಕ್ಷೆಗಳು ಮತ್ತು ತಜ್ಞ ವೈದ್ಯರಿಗಾಗಿ ಕಾಯುತ್ತಿರುವಾಗಲೇ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಲ್ಗರಿ ಮೂಲದ ಚಿಂತಕರ ಚಾವಡಿ ‘ಸೆಕೆಂಡ್ ಸ್ಟ್ರೀಟ್.ಆರ್ಗ್’ (Second Street.org) ಬಿಡುಗಡೆ ಮಾಡಿರುವ ಅಧ್ಯಯನದ ಪ್ರಕಾರ, ಕೆನಡಾದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಕಾರ್ಯವೈಖರಿ ಅತೃಪ್ತಿಕರವಾಗಿದೆ ಎಂದು ತಜ್ಞರು ಹೇಳಿದ್ದಾರೆ.
2024-2025ರ ಅವಧಿಗೆ ಹೋಲಿಸಿದರೆ, ದೇಶಾದ್ಯಂತ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವಾಗ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಶೇಕಡಾ 17.5 ರಷ್ಟು ಹೆಚ್ಚಳವಾಗಿದೆ. ಅದೇ ಸಮಯದಲ್ಲಿ, ರೋಗನಿರ್ಣಯ ಪರೀಕ್ಷೆಗಳಿಗಾಗಿ ಕಾಯುತ್ತಿರುವವರ ಮರಣ ಪ್ರಮಾಣದಲ್ಲಿ ಶೇಕಡಾ 2.8 ರಷ್ಟು ಇಳಿಕೆಯಾಗಿದೆ. ಆದಾಗ್ಯೂ, ಕೆನಡಾದ ಎಲ್ಲಾ ಪ್ರಾಂತ್ಯಗಳು ಇಂತಹ ಸಾವುಗಳ ನಿಖರವಾದ ದತ್ತಾಂಶವನ್ನು ಸಂಗ್ರಹಿಸದ ಅಥವಾ ಪ್ರಕಟಿಸದ ಕಾರಣ ನಿಜವಾದ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.
ಕೆನಡಾದ ವಿವಿಧ ಪ್ರಾಂತ್ಯಗಳ ನಡುವೆ ಚಿಕಿತ್ಸೆಗಾಗಿ ಕಾಯುತ್ತಿರುವಾಗ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ದೊಡ್ಡ ವ್ಯತ್ಯಾಸಗಳಿವೆ ಎಂದು ಸಂಶೋಧಕರು ಬೆಟ್ಟುಮಾಡಿ ತೋರಿಸಿದ್ದಾರೆ. ಬ್ರಿಟಿಷ್ ಕೊಲಂಬಿಯಾ, ಸಸ್ಕಾಚೆವಾನ್ ಮತ್ತು ಒಂಟಾರಿಯೊ ಪ್ರಾಂತ್ಯಗಳಲ್ಲಿ ಇಂತಹ ಸಾವುಗಳ ಸಂಖ್ಯೆ ಕಡಿಮೆಯಾಗಿದ್ದರೆ, ಮ್ಯಾನಿಟೋಬಾ ಪ್ರಾಂತ್ಯದಲ್ಲಿ ಸಾವುಗಳ ಸಂಖ್ಯೆ ಹೆಚ್ಚಾಗಿದೆ.
ಈ ಮಧ್ಯೆ, ಅಧ್ಯಯನ ವರದಿಯಲ್ಲಿನ ಅಂಕಿಅಂಶಗಳ ವಿರುದ್ಧ ಒಂಟಾರಿಯೊ ಹೆಲ್ತ್ ಕೊಯಲಿಷನ್ (Ontario Health Coalition) ಧ್ವನಿ ಎತ್ತಿದೆ. ವರದಿಯ ಲೇಖಕರು ಸಮಸ್ಯೆಯ ವ್ಯಾಪ್ತಿಯನ್ನು ಅನ್ಯಾಯವಾಗಿ ಉತ್ಪ್ರೇಕ್ಷೆ ಮಾಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ವರದಿಯಲ್ಲಿ ನಿಖರವಲ್ಲದ ಮಾಹಿತಿಯೂ ಸೇರಿದೆ ಎಂದು ಸಂಘಟನೆಯ ಪ್ರತಿನಿಧಿಗಳು ಬೆಟ್ಟುಮಾಡಿ ತೋರಿಸಿದ್ದಾರೆ. ಉದಾಹರಣೆಗೆ, ಎಂಆರ್ಐ (MRI) ಸ್ಕ್ಯಾನ್ಗೆ ಸಮಯ ನಿಗದಿಯಾಗಿದ್ದ ರೋಗಿಯೊಬ್ಬರು ಪರೀಕ್ಷೆಗೆ ಮುನ್ನವೇ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರೂ ಅವರ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಪರೀಕ್ಷೆಯ ವಿಳಂಬಕ್ಕೂ ಸಾವಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ‘ಸಿಟಿವಿ ನ್ಯೂಸ್’ (CTV News) ವರದಿ ಮಾಡಿದೆ.












