ಟೆಹ್ರಾನ್, ಆ. 7: ಇರಾನ್ ಆರೋಗ್ಯ ಕ್ಷೇತ್ರದ ಮೇಲೆ ಅಮೆರಿಕ ದಿಗ್ಬಂಧನ ವಿಧಿಸಿದ್ದು ಇದು ಮಾನವಹಕ್ಕು ಉಲ್ಲಂಘನೆಯೆಂದು ಇರಾನ್ ಪ್ರತಿಕ್ರಿಯಿಸಿದೆ. ಇರಾನಿನ ರೋಗಿಗಳಿಗೆ ಅಗತ್ಯ ಔಷಧಗಳ ಮೇಲೆ ದಿಗ್ಬಂಧನ ವಿಧಿಸಿದ ಕ್ರಮದಿಂದಾಗಿ ಆರೋಗ್ಯ ಕ್ಷೇತ್ರದ ಮೇಲೆ ಅಮೆರಿಕದ ಒತ್ತಡವು ಅಮಾನವೀಯ ಅಪರಾಧ ಎಂದು ಇರಾನ್ನ ಆರೋಗ್ಯ ಸಚಿವ ಸಈದ್ ನಮಕಿ ಹೇಳಿದರು. ಲೆಬನೀಸ್ ಆರೋಗ್ಯ ಸಚಿವರೊಂದಿಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಅಮೆರಿಕವನ್ನು ಟೀಕಿಸಿದ್ದಾರೆ.
2015ರ ಅಣು ಒಪ್ಪಂದದಿಂದ ಹಿಂದೆ ಸರಿದ ಬೆನ್ನಿಗೆ ಅಮೆರಿಕ ಇರಾನಿನ ವಿರುದ್ಧ ದಿಗ್ಬಂಧವನ್ನು ತೀವ್ರಗೊಳಿಸಿತ್ತು. ಆದರೆ ಆವಶ್ಯಕ ವಸ್ತುಗಳು, ಮದ್ದುಗಳು, ಮೆಡಿಕಲ್ ಉಪಕರಣಗಳು ದಿಗ್ಬಂಧದಿಂದ ಮುಕ್ತವಾಗಿರಿಸಲಾಗಿತ್ತು. ಆದರೆ ಇದೀಗ ಇರಾನಿನ ವೈದ್ಯಕೀಯ ಕ್ಷೇತ್ರಕ್ಕೂ ದಿಗ್ಬಂಧ ಹೇರುವ ಕ್ರಮವನ್ನು ಅಮೆರಿಕ ಕೈಗೊಂಡಿದೆ. ಅಮೆರಿಕ ದಿಗ್ಬಂಧನ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಪ್ರತಿಕೂಲವಾಗಿ ಪರಿಣಮಿಸಿದೆ ಎಂದು ಈ ಹಿಂದೆ ಇರಾನಿನ ಮೆಡಿಕಲ್ ಕೌನ್ಸಿಲ್ ಆರೋಪಿಸಿದೆ.












