ಸನ್ಮಾರ್ಗ ವಾರ್ತೆ
ಮಡಿಕೇರಿ: ಎಡಬಿಡದೆ ಸುರಿದ ಭಾರೀ ಮಳೆಯ ಮಧ್ಯೆ ಧನ ಪಿಶಾಚಿಗಳು ತಮ್ಮ ಕೈಚಳಕ ತೋರಿದ ದುಃಖಕರ ಸುದ್ದಿ ಕೊಡಗಿನಿಂದ ವರದಿಯಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಹಲವು ಪ್ರದೇಶಗಳು ಮಳೆಯಿಂದ ತೀವ್ರ ಹಾನಿಗೆ ತುತ್ತಾಗಿರುವುದರ ಮಧ್ಯೆ ಕಳ್ಳರು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ ಎಂದು ವರದಿಯಾಗಿದೆ.
ಕದಡಿದ ನೀರಿಗೆ ಗಾಳ ಹಾಕುವವರು ಎನ್ನುವ ಮಾತಿಗೆ ಆನ್ವರ್ಥದಂತೆ ಇರುವ ಈ ಸುದ್ದಿಯು ತೀವ್ರ ಅಚ್ಚರಿಯನ್ನು ಪರಿಸರದಲ್ಲಿ ಸೃಷ್ಟಿಸಿದೆ. ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ಗುರಿಯಾಗಿಸಿಕೊಂಡ ಕಳ್ಳರು, ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಗೋಣಿಕೊಪ್ಪಲು ಭಾಗದಲ್ಲಿ ಪ್ರವಾಹ ಉಂಟಾಗಿದ್ದ ಕಾರಣಕ್ಕೆ ಒಂದು ವಾರದಿಂದ ಮಾಲೀಕರು ಅಂಗಡಿಗೆ ಹೋಗಿರಲಿಲ್ಲ. ಇದನ್ನೇ ಬಳಸಿಕೊಂಡಿರುವ ಕಳ್ಳರು ಅಂಗಡಿ ದೋಚಲು ಉಪಾಯ ಹೂಡಿದ್ದಾರೆ. ಜಲಾವೃತಗೊಂಡಿದ್ದ ಅಂಗಡಿಗಳಿಗೆ ನುಗ್ಗಿ ದೋಚಿದ್ದಾರೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಹಾಗೂ 20 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ಕಳವು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಾಲೀಕರು ತಮ್ಮ ಅಂಗಡಿಗಳಿಗೆ ಹೋಗಿದ್ದಾಗ ಕಳ್ಳತನ ಬೆಳಕಿಗೆ ಬಂದಿದೆ. ಅಂಗಡಿ ಮಾಲೀಕರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.












