ಅಪರಿಚಿತ ದುಷ್ಕರ್ಮಿಗಳಿಂದ ಶರೀಫ್ ಖಾನ್ ಹತ್ಯೆಯಾದ ದಿನ ಉತ್ತರ ಪ್ರದೇಶ ಪೊಲೀಸರು 18 ಬಾರಿ ಕರೆ ಮಾಡಿದ್ದರು

0
29

ಸನ್ಮಾರ್ಗ ವಾರ್ತೆ

ನವದೆಹಲಿ: 2007ರ ರಾಂಪುರ ಸಿಆರ್‌ಪಿಎಫ್ ಶಿಬಿರದ ಮೇಲಿನ ದಾಳಿ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮೊಹಮ್ಮದ್ ಶರೀಫ್ ಖಾನ್ ಹತ್ಯೆಯಾದ ದಿನದಂದು ರಾಂಪುರ ಪೊಲೀಸರು ಅವರ ಕುಟುಂಬಕ್ಕೆ 18 ಬಾರಿ ಕರೆ ಮಾಡಿದ್ದರು. ಶರೀಫ್ ಅವರ ಚಲನವಲನಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಇದ್ದವರು ಮಾತ್ರ ಇಂತಹ ದಾಳಿ ನಡೆಸಲು ಸಾಧ್ಯ ಎಂದು ಹೇಳಿರುವ ಕುಟುಂಬಸ್ಥರು, ಘಟನೆಯ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದೂ ಕುಟುಂಬ ಆಗ್ರಹಿಸಿದೆ.

ಈ ತಿಂಗಳ 10 ರಂದು, 53 ವರ್ಷದ ಮೊಹಮ್ಮದ್ ಶರೀಫ್ ಖಾನ್ ಅವರು ಪೊಲೀಸ್ ತಪಾಸಣೆಗಾಗಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಮಗನೊಂದಿಗೆ ಹಿಂತಿರುಗುತ್ತಿದ್ದಾಗ ಉತ್ತರ ಪ್ರದೇಶದ ಖಜೂರಿಯಾ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿಕ್ಕಿ ಹತ್ಯೆಗೀಡಾಗಿದ್ದರು. ಕುಟುಂಬಸ್ಥರು ಹಸ್ತಾಂತರಿಸಿರುವ ಫೋನ್ ದಾಖಲೆಗಳ ಪ್ರಕಾರ, ಅಂದು ಮಧ್ಯಾಹ್ನದಿಂದ ಸಂಜೆಯವರೆಗೆ ಶರೀಫ್ ಅವರನ್ನು ಠಾಣೆಗೆ ಕರೆಸಲು ಪೊಲೀಸರು ಹಲವು ಬಾರಿ ಸಂಪರ್ಕಿಸಿದ್ದರು. ನಿರಂತರ ಕರೆಗಳ ಜೊತೆಗೆ ಹಿರಿಯ ಅಧಿಕಾರಿಯೊಬ್ಬರನ್ನೂ ತಮ್ಮ ಮನೆಗೆ ಕಳುಹಿಸಲಾಗಿತ್ತು ಎಂದು ಶರೀಫ್ ಅವರ ಸಹೋದರ ಶಾಹೀನ್ ಖಾನ್ ತಿಳಿಸಿದ್ದಾರೆ. ಒಂದೂವರೆ ಗಂಟೆಗೂ ಹೆಚ್ಚು ಕಾಲ ಠಾಣೆಯಲ್ಲಿ ಕಾದು ಹಿಂತಿರುಗುತ್ತಿದ್ದಾಗ, ಪೊಲೀಸ್ ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿ ಇಬ್ಬರು ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರು.