ಸನ್ಮಾರ್ಗ ವಾರ್ತೆ
ನವದೆಹಲಿ: ಭಾರತವು ಮೊದಲ ಬಾರಿಗೆ ಆತಿಥ್ಯ ವಹಿಸಿದ್ದ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ನಾಗರಿಕತಾ ಸಂವಾದ ವೇದಿಕೆಯು ಎಲ್ಲಾ ನಾಗರಿಕತೆಗಳನ್ನು ಒಂದೇ ಧ್ವನಿಯಾಗಿ ಗೌರವಿಸುವಂತೆ ಕರೆ ನೀಡಿದೆ. ದೆಹಲಿಯ ಪುರಾಣ ಕಿಲಾದಲ್ಲಿ ನಡೆದ ಮೂರು ದಿನಗಳ ಸಮ್ಮೇಳನದ ಕೊನೆಯಲ್ಲಿ ಬಿಡುಗಡೆ ಮಾಡಲಾದ ಸಮಾರೋಪ ದಾಖಲೆ ‘ಇಂದ್ರಪ್ರಸ್ಥ ಪ್ರಕಟಣೆ’ಯಲ್ಲಿ (Indraprastha Communiqué) ಇದನ್ನು ತಿಳಿಸಲಾಗಿದೆ. ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ನಾಗರಿಕತೆಗಳ ನಡುವೆ ಪರಸ್ಪರ ಗೌರವ ಮತ್ತು ತಂತ್ರಜ್ಞಾನದ ಸೃಜನಾತ್ಮಕ ಬಳಕೆಗೆ ಈ ದಾಖಲೆಯು ಕರೆ ನೀಡಿದೆ.
ಅಕ್ರಮ ಕಳ್ಳಸಾಗಣೆ ಮತ್ತು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಬೆದರಿಕೆಗಳಿಂದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು. ಪಾರಂಪರಿಕ ಆಸ್ತಿಗಳಿಗೆ ಸಾರ್ವಜನಿಕ ಪ್ರವೇಶವನ್ನು ಸುಗಮಗೊಳಿಸಲು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸಬೇಕು. ವಾಸ್ತುಶಿಲ್ಪ, ಸಂಗೀತ, ಆಹಾರ ಸಂಸ್ಕೃತಿ ಮತ್ತು ಉಡುಗೆ ತೊಡುಗೆ ಸಂಪ್ರದಾಯದಂತಹ ಕ್ಷೇತ್ರಗಳಲ್ಲಿ ಸದಸ್ಯ ರಾಷ್ಟ್ರಗಳು ಹಂಚಿಕೊಂಡಿರುವ ಸಾಮಾನ್ಯ ಪರಂಪರೆ ಮತ್ತು ಸಂಸ್ಕೃತಿಯು ರಾಷ್ಟ್ರಗಳ ನಡುವಿನ ಸ್ನೇಹ ಮತ್ತು ಉತ್ತಮ ನೆರೆಹೊರೆಯ ಸಂಬಂಧಗಳಿಗೆ ಬಲವಾದ ಸೇತುವೆಯಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನಕ್ಕಾಗಿ ದೇಶಗಳು ಜಂಟಿಯಾಗಿ ನಾಮನಿರ್ದೇಶನಗಳನ್ನು ಸಲ್ಲಿಸುವ ಅಗತ್ಯವನ್ನೂ ಈ ದಾಖಲೆ ಬೆಟ್ಟು ಮಾಡಿದೆ. 2001 ರಲ್ಲಿ ರಷ್ಯಾ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ಗಳಿಂದ ರಚಿಸಲ್ಪಟ್ಟ ಎಸ್ಸಿಒಗೆ 2017 ರಲ್ಲಿ ಭಾರತ ಮತ್ತು ಪಾಕಿಸ್ತಾನ ಹಾಗೂ 2023 ರಲ್ಲಿ ಇರಾನ್ ಸೇರ್ಪಡೆಯಾದವು.
ಭಾರತ ಮತ್ತು ಪಾಕಿಸ್ತಾನ ಪ್ರತಿನಿಧಿಗಳ ಮಾತುಕತೆ
ನವೆಂಬರ್ 20 ರಿಂದ 22 ರವರೆಗೆ ನಡೆದ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಸೇರಿದಂತೆ ಎಸ್ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ಸಮ್ಮೇಳನದ ಭಾಗವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಔಪಚಾರಿಕ ದ್ವಿಪಕ್ಷೀಯ ಮಾತುಕತೆಗಳು ನಡೆದಿಲ್ಲ, ಆದರೆ ಅಧಿಕೃತ ಔತಣಕೂಟಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ವಿಚಾರ ವಿನಿಮಯ ನಡೆದಿದೆ ಎಂದು ಕೇಂದ್ರ ಸಂಸ್ಕೃತಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ. ಸದಸ್ಯ ರಾಷ್ಟ್ರಗಳ ಸಲಹೆಗಳು ಮತ್ತು ಚರ್ಚೆಯ ಸಮಯದಲ್ಲಿ ವ್ಯಕ್ತವಾದ ವಿಚಾರಗಳ ಆಧಾರದ ಮೇಲೆ ‘ಇಂದ್ರಪ್ರಸ್ಥ ಪ್ರಕಟಣೆ’ಯನ್ನು ಸಿದ್ಧಪಡಿಸಲಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.












