ಖಿಲಾಫತ್ ಇಲ್ಲದ ಒಂದು ಶತಮಾನ

0
158

ಸನ್ಮಾರ್ಗ ವಾರ್ತೆ

✍️ಯಾಸೀನ್ ಅಖ್‌ತ್ವಾಯ್
(ಲೇಖಕರು, ತುರ್ಕಿಯ ಶಿಕ್ಷಣ ತಜ್ಞ ಮತ್ತು
ಟರ್ಕಿ ಅಧ್ಯಕ್ಷ ಉರ್ದುಗಾನ್‌ರ ಮಾಜಿ ಸಲಹೆಗಾರರು)

ಇಸ್ಲಾಮೀ ಖಿಲಾಫತ್ ಪತನಗೊಂಡು ಒಂದು ಶತಮಾನ ಕಳೆದಿರುವ ಈ ವೇಳೆಯಲ್ಲಿ ಗಂಭೀರವಾದ ಚಿಂತನೆಗಳಿಗೆ ಈ ವಿಷಯವು ತೆರೆದುಕೊಳ್ಳಬೇಕು. ಖಿಲಾಫತ್‌ನ ಅವನತಿಯೊಂದಿಗೆ ಮುಸ್ಲಿಮರಿಗೆ ಅವರ ರಾಜಕೀಯ ಕೇಂದ್ರವೇ ನಷ್ಟವಾದಂತಾಯಿತು, ರಾಜಕೀಯವಾಗಿ ಮುಂದುವರಿಯಲು ಯಾವುದೇ ಶಕ್ತಿಯಿಲ್ಲದಂತಾಯಿತು. ಖಿಲಾಫತ್‌ನ ಅಭಾವ ಇಂದಿನ ಮುಸ್ಲಿಮರ ವಾಸ್ತವಿಕತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಒಂದು ಮುಖ್ಯ ಘಟಕವಾಗಿದೆ. ತುರ್ಕಿಯ ಒಳಗೆ ಖಿಲಾಫತ್ ನಿರ್ಮೂಲನವಾದದ್ದಾದರೂ, ಅದರ ಆಘಾತಗಳು ಇಡೀ ಮುಸ್ಲಿಮ್ ಲೋಕವನ್ನು ಅಲುಗಾಡಿಸಿತು.

ತುರ್ಕಿಯ ಒಂದನೇ ತಲೆಮಾರಿನ ಇಸ್ಲಾಮಿಸ್ಟ್ ಗಳಿಗೆ ಖಿಲಾಫತ್‌ನ ರದ್ಧತಿಯಿಂದ ಅತ್ಯಧಿಕ ಆಘಾತವುಂಟಾಯಿತು.

ಈ ಘಟನೆಯ ಬಳಿಕ ಮುಸ್ಲಿಮ್ ಜಗತ್ತನ್ನು ಖಿಲಾಫತ್‌ನ ನಂತರ ಎಂದು ಗುರುತಿಸಲಾಗುತ್ತದೆ. ಮುಸ್ಲಿಮರು ತಮ್ಮ ಸುದೀರ್ಘ ಇತಿಹಾಸದಲ್ಲಿ ಪ್ರಥಮ ಬಾರಿಗೆ ತಮ್ಮನ್ನು ಪ್ರತಿನಿಧಿಸಲು ಒಂದು ರಾಜಕೀಯ ರಚನೆ ಇಲ್ಲ ಎಂದು ತಿಳಿದುಕೊಂಡರು. ಇಸ್ಲಾಮಿನ ಆಶಯಗಳನ್ನು ಕರ್ಮರೂಪಕ್ಕಿಳಿಸುವ ರಾಜಕೀಯ ವೇದಿಕೆ ಇಲ್ಲದಂತಾಯಿತು. ಈ ಅಧಃಪತನಕ್ಕೆ ಪರಸ್ಪರ ಪೂರಕವಾದ ಎರಡು ಹಂತಗಳಿವೆ ಎಂಬುದನ್ನು ನೆನಪಿಡಬೇಕು.

ಒಂದು: ಇಸ್ಲಾಮೀ ಪಾಂಡಿತ್ಯದ (ಫಿಕ್ಹ್) ಇತಿಹಾಸದಲ್ಲಿ ಹಿಂದೆಂದೂ ಇಂತಹ ಅಭಾವ ಇರಲಿಲ್ಲ. ಹಿಂದೆ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಗಳಿದ್ದರೂ, ಪ್ರಬಲ ರಾಜಕೀಯ ಶಕ್ತಿಗೆ ಸೇರಿದವರು ಎಂಬ ಪ್ರಜ್ಞೆ ಮತ್ತು ಸ್ವಾಭಿಮಾನವನ್ನು ಅವರು ಹೊಂದಿದ್ದರು. ಇದು ಅವರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಲು ಸಾಕಾಗಿತ್ತು.

ಎರಡು: ಖಿಲಾಫತ್ ರದ್ಧತಿಗೆ ಮೊದಲೇ ಅದರ ಮೌಲ್ಯಮಾಪನ. ಇದು ಬಹಳ ಪ್ರಮುಖವಾದ ಒಂದಾಗಿದೆ. ಖಿಲಾಫತ್‌ನಿಂದ ಮುಸ್ಲಿಮ್ ಸಮೂಹಕ್ಕೆ ದೊಡ್ಡ ಲಾಭ ಇಲ್ಲ ಎಂಬುದು ಈ ಅಭಿಪ್ರಾಯವಾಗಿತ್ತು. ಇತರ ಕೆಲವು ವಿಶ್ವ ಶಕ್ತಿಗಳ ಒತ್ತಡಗಳಿಗೆ ಖಿಲಾಫತ್ ವಿಧೇಯವಾಗುತ್ತಿದೆಯೆಂದೂ, ಆದ್ದರಿಂದ ಮುಸ್ಲಿಮ್ ಸಮೂಹದ ಅಗತ್ಯಗಳನ್ನು ನೆರವೇರಿಸಲು ಅದಕ್ಕೆ ಶಕ್ತಿಯಿಲ್ಲವೆಂದೂ ವ್ಯಾಖ್ಯಾನಿಸಲಾಯಿತು.

ಖಿಲಾಫತ್ ನಲ್ಲಿ ಶೂರಾ ತತ್ವಗಳು ಪಾಲಿಸಲ್ಪಡುತ್ತಿಲ್ಲವೆಂದೂ, ಆಡಳಿತ ವರ್ಗದ ಹಿತಾಸಕ್ತಿಯನ್ನು ಸಂರಕ್ಷಿಸುವ ಉಪಕರಣವಾಗಿ ಅದು ಮಾರ್ಪಟ್ಟಿದೆಯೆಂದೂ ಆಕ್ಷೇಪ ಉಂಟಾಯಿತು. ಖಿಲಾಫತ್ ವ್ಯವಸ್ಥೆಯು ಹೀಗೆ ದುರುಪಯೋಗವಾಗುವುದರ ವಿರುದ್ಧ ಅದು ಅವನತಿ ಹೊಂದುವ ಮೊದಲೇ ಹಲವು ಇಸ್ಲಾಮೀ ಚಿಂತಕರು, ವಿದ್ವಾಂಸರು ರಂಗಕ್ಕಿಳಿದಿದ್ದರು.

ತುರ್ಕಿಯರ ಸಈದ್ ನೂರ್ಸಿಯಿಂದ ಆರಂಭಿಸಿ ಹಮ್ದಿ ಯಾಸರ್ ವರೆಗೆ, ಮುಹಮ್ಮದ್ ಆರಿಫ್‌ರಿಂದ ತೊಡಗಿ ಆತಿಫ್ ಖ್ವಾಒಅಲ್ ಅಸ್ಖಲೀಬಿಯವರೆಗಿನ ವಿದ್ವಾಂಸರು ಇವರಲ್ಲಿ ಪ್ರಮುಖರು. ಖಿಲಾಫತ್‌ನ ನೊಗ ಹೊತ್ತವರು ಸರಿಯಾದ ರೀತಿಯಲ್ಲಿ ಹೊಣೆಗಾರಿಕೆ ನಿಭಾಯಿಸುತ್ತಿಲ್ಲವೆಂದೂ ಕಟುವಾಗಿ ಇವರೆಲ್ಲಾ ಟೀಕಿಸಿದ್ದರು.

ಖಿಲಾಫತ್‌ನ ನಿರ್ಮೂನಲದ ವಿಷಯ ತುರ್ಕಿಯ ಪಾರ್ಲಿಮೆಂಟ್‌ನಲ್ಲಿ ಚರ್ಚೆಗೆ ಬಂದಾಗ ಸಯೀದ್ ಬೇಯವರು ತನ್ನ ಸುದೀರ್ಘ ಭಾಷಣದಲ್ಲಿ ಎತ್ತಿದ ಪ್ರಶ್ನೆಗಳು ಇಸ್ಲಾಮಿಕ್ ರೀತಿಯಲ್ಲಿತ್ತು ಎಂದು ಹೇಳಬಹುದು.

ಅವರು ಖಿಲಾಫತ್ ಎಂಬುದು ಹಣವನ್ನು ಸಂಗ್ರಹಿಸುವ ವ್ಯವಸ್ಥೆಯಾಗಿ ಅಧಃಪತನಗೊಂಡಿದೆ ಎಂದು ಹೇಳಿ ಮುಸ್ತಫಾ ಕಮಾಲ್ ಪಾಶಾ ಖಿಲಾಫತ್ತನ್ನು ರದ್ದುಗೊಳಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಆದರೆ ಈ ಟೀಕೆಗಳನ್ನು ಮಾಡಿದ ಯಾವ ಇಸ್ಲಾಮಿಸ್ಟ್ ಗಳೂ ಖಿಲಾಫತ್ ರದ್ದಾಗಬೇಕು ಎಂದು ಹೇಳಿರಲಿಲ್ಲ. ಖಿಲಾಫತ್ ರದ್ದುಗೊಂಡಾಗ ಅವರು ಅದನ್ನು ಬಲವಾಗಿ ವಿರೋಧಿಸಿರುವುದರಿಂದ ಈ ಅಂಶವು ಸ್ಪಷ್ಟವಾಗುತ್ತದೆ. ಅಂತಹ ಒಂದು ಹೆಜ್ಜೆಗೆ ಅವರು ಸಿದ್ಧರಿರಲಿಲ್ಲ. ಏಕೆಂದರೆ ಇದರ ಒಂದನೇ ಮತ್ತು ಅತ್ಯಂತ ಮಾರಕವಾದ ಪರಿಣಾಮವು ರಾಷ್ಟ್ರದ ಒಳಗೆ ಕಾನೂನು ವ್ಯವಹಾರದಲ್ಲಿ ಶೂನ್ಯತೆ ಸೃಷ್ಟಿಯಾಯಿತು ಎಂಬುದಾಗಿದೆ. ಇಸ್ಲಾಮಿ ಕಾನೂನುಗಳ ಜಾರಿಯು ಇದರಿಂದ ಅಸಾಧ್ಯವಾಯಿತು. ಅಸ್ತಿತ್ವದಲ್ಲಿರುವ ಯಾವುದೇ ಫಿಕ್ಹ್ ಅಥವಾ ಪ್ರವಚನಗಳು ಖಿಲಾಫತ್‌ನ ಅನುಪಸ್ಥಿತಿಯಲ್ಲಿ ಹೇಗೆ ಮುಂದುವರಿಯಬೇಕು ಎಂಬುದನ್ನು ಕಲಿಸಿರಲಿಲ್ಲ. ಆ ಫಿಕ್ಹೀ ವ್ಯವಹಾರಗಳೆಲ್ಲವೂ ಖಿಲಾಫತ್‌ನ ಒಳಗಿತ್ತು. ಪವಿತ್ರ ಕುರ್‌ಆನ್ ಭೋದನೆಗಳನ್ನು ಪರಿಶೀಲಸಿದರೆ, ಅದು ಸಾಮಾನ್ಯವಾಗಿ ಈ ಅಧಿಕಾರದ ವ್ಯಾಪ್ತಿಯೊಳಗಿರುವ ಇಸ್ಲಾಮೀ ಸಮೂಹವನ್ನು ಅಭಿಸಂಬೋಧಿಸುವುದನ್ನು ಕಾಣಬಹುದು.

ಖಿಲಾಫತ್ ಇಲ್ಲವಾಗುವುದರೊಂದಿಗೆ ಹೆಚ್ಚಿನ ಶರಿಯಾ ವ್ಯವಸ್ಥೆಗಳೂ ಶರೀಅತ್‌ನ ಪರಿಧಿಯಿಂದ ಹೊರಬೀಳುವುದಕ್ಕೆ ಇದು ಕಾರಣವಾಯಿತು. ಪವಿತ್ರ ಕುರ್‌ಆನ್ ಹಲವು ಸೂಕ್ತಗಳಲ್ಲಿ ಅಭಿಸಂಬೋಧಿಸುವ ಸಮೂಹವು ಇಲ್ಲದಂತಾಯಿತು.

ಖಿಲಾಫತ್ ವ್ಯವಸ್ಥೆಯೊಳಗೆ ವಾಸಿಸುವ ಮುಸ್ಲಿಮರಿಗೆ ತನ್ನ ಜೀವನದಲ್ಲಿ ಇಸ್ಲಾಮೀ ಮೌಲ್ಯಗಳನ್ನು ಪಾಲಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ. ದೇವನ ಕಾನೂನುಗಳನ್ನು ಜಾರಿಗೊಳಿಸುವ ಆ ಸರಕಾರವು ವಿಶ್ವಾಸಿಯೊಂದಿಗೆ ಆಳವಾದ ಸಂಬಂಧ ಮತ್ತು ಪರಸ್ಪರ ಅವಲಂಬನೆಯನ್ನು ಸೃಷ್ಟಿಸುತ್ತದೆ. ಸಮಾಜದ ಗುರಿಗಳನ್ನು ಈಡೇರಿಸಲು ವ್ಯಕ್ತಿ ಮತ್ತು ಸರಕಾರವು ಒಂದೇ ದೇಹವಾಗಿ ಪರಿವರ್ತಿತವಾಗುತ್ತದೆ. ಈ ಖಿಲಾಫತ್ ರದ್ಧತಿಯ ನಂತರದ ಹೊಸ ಪರಿಸ್ಥಿತಿಗಳು ಮುಸ್ಲಿಮ್ ಸಮುದಾಯವನ್ನು ಶರೀರವಿಲ್ಲದ ಅವಯವಗಳು ಮಾತ್ರವಿರುವ ಒಂದಾಗಿ ಮಾರ್ಪಡಿಸಿತು. ಖಿಲಾಫತ್ ಎಂಬ ಆ ಶರೀರ ಇಲ್ಲದಂತಾಯಿತು. ಅದರ ಸ್ಥಾನದಲ್ಲಿ ಹೊಸ ರಾಜಕೀಯ ಮತ್ತು ಸಾಮಾಜಿಕ ರಚನೆಗಳು ಬಂದವು. ಆದರೆ, ಅದರ ವ್ಯಕ್ತಿಗಳು ಅದೇ ಹಳೆಯ ವ್ಯಕ್ತಿಗಳು. ಈ ವ್ಯಕ್ತಿಗಳನ್ನು ಹೊಸ ವ್ಯವಸ್ಥೆಯ ವೇಷ ತೊಡಿಸುವ ಪ್ರಯತ್ನಗಳು ನಡೆಯುತ್ತಿವೆ. ಅಂಗಿ ಬದಲಾದಾಗಲೂ ವ್ಯಕ್ತಿಗಳ ಸಾರವು ಹಳೆಯ ರಾಜಕೀಯ ಮತ್ತು ಸಾಮಾಜಿಕ ರಚನೆಯಲ್ಲೇ ಉಳಿಕೊಂಡಿದೆ. ಅದರ ವ್ಯಕ್ತಿಗಳನ್ನು ಪರಿವರ್ತಿಸಲು ಆಧುನಿಕತೆಗೆ ಮಹತ್ತರವಾದ ಪಾತ್ರವಿದೆ. ಇಲ್ಲಿ ಖಂಡಿತವಾಗಿಯೂ ವಿರೋಧಾಭಾಸಗಳಿವೆ. ಜನರು ಧರಿಸುವ ವಸ್ತ್ರಗಳು, ಅವರ ವಿಶ್ವಾಸವನ್ನು ಪ್ರತಿಬಿಂಬಿಸುವುದಿಲ್ಲ. 1925ರಲ್ಲಿ ಸಾಂಪ್ರದಾಯಿಕ ಟೋಪಿಯನ್ನು ನಿಷೇಧಿಸುವ ಕಾನೂನು (ಆಡಳಿತ ಭಾಷೆಯಲ್ಲಿ ಟೋಪಿ ಕ್ರಾಂತಿ’) ಈ ವಿರೋಧಾಭಾಸವನ್ನು ಸರಿಯಾಗಿ ಪ್ರತಿಫಲಿಸುತ್ತದೆ. ಹೀಗೆ ಒಳಗೆ ಮತ್ತು ಹೊರೆಗೆ ಎರಡು ಬಗೆಯ ರೀತಿಯು ಒಂದು ದುರಂತವಾಗಿ ಮಾರ್ಪಡಿಸಿತು.

ಖಿಲಾಫತ್‌ನ ರದ್ಧತಿಯು ಪ್ರಪಂಚದಾದ್ಯಂತದ ಮುಸ್ಲಿಮರಿಗೆ, ವಿಶೇಷವಾಗಿ ತುರ್ಕಿಯ ಮುಸ್ಲಿಮ್ ಸಮೂಹಕ್ಕೆ ದೊಡ್ಡ ಆಘಾತವಾಯಿತು ಎನ್ನಲು ಇದೇ ಕಾರಣವಾಗಿದೆ.

ಖಿಲಾಫತ್ ಪತನಗೊಂಡ ಕೂಡಲೇ ಅದರ ಪರಿಣಾಮಗಳನ್ನು ಅಧ್ಯಯನ ಮಾಡಲು ಅನೇಕ ಪ್ರಯತ್ನಗಳು ನಡೆದವು. ಈ ವೈರುಧ್ಯದೊಂದಿಗೆ ಮುಸ್ಲಿಮ್ ಸಮುದಾಯ ಮುನ್ನಡೆಯಲು ಸಾಧ್ಯವಿಲ್ಲವೆಂಬುದು ಮುಸ್ಲಿಮ್ ವಿದ್ವಾಂಸರ ಅಭಿಪ್ರಾಯ. ಈ ಪರಿಣಾಮ ಮೊದಲೇ ಉಂಟಾಗಿದ್ದ ಎಲ್ಲ ಸಂಬಂಧಗಳನ್ನು ವಿಚ್ಛೇದಿಸುತ್ತದೆ. ಇದನ್ನು ತಾತ್ಕಾಲಿಕ ಬದಲಾವಣೆಯಾಗಿಯೇ ವಿದ್ವಾಂಸರು ನೋಡಿದ್ದಾರೆ. ಈ ಕಾಲದಲ್ಲಿ ರೂಪುಗೊಂಡ ಫಿಕ್ಹಿ ಕಾನೂನುಗಳ ನಿರ್ಧಾರಗಳಲ್ಲಿ ಅಧಿಕವೂ ಈ `ತಾತ್ಕಾಲಿಕ’ (ಮುಅಖತ್ತ) ಸಂದರ್ಭಗಳನ್ನು ಆಧರಿಸಿದೆ. ಖಿಲಾಫತ್ ಇಲ್ಲದ ಸ್ಥಿತಿಯನ್ನು ಅವರು ತಾತ್ಕಾಲಿಕವೆಂದು ಹೇಳಿರುವುದು ಖಿಲಾಫತ್‌ನ ಅಭಾವದೊಂದಿಗಿನ ಇಸ್ಲಾಮೀ ವಿಚಾರಧಾರೆಯ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನಾವು ಕಾಣಬಹುದು. ಅದನ್ನು ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ಮುಸ್ಲಿಮ್ ಸಮುದಾಯವು ಇಂದು ಎಲ್ಲಿಗೆ ತಲುಪಿದೆಯೆಂದು ನಿಖರವಾಗಿ ನಿರ್ಧರಿಸಲು ಸಾಧ್ಯವಾಗುವುದು.