ಅಲ್ಲಿ ಕ್ರಿಸ್ಚಿಯನ್, ಇಲ್ಲಿ ಹನೀಫ್: ಹೆಸರು ಮಾತ್ರ ಬೇರೆ

0
1904

ಸನ್ಮಾರ್ಗ ವಾರ್ತೆ

ಏ ಕೆ ಕುಕ್ಕಿಲ

ಇತ್ತೀಚೆಗೆ ಒಂದು ಘಟನೆ ಸುದ್ದಿಗೀಡಾಗಿತ್ತು.

ಅಮೇರಿಕದ ನ್ಯೂಯಾರ್ಕ್‍ನಲ್ಲಿರುವ ಉದ್ಯಾನವು ಈ ಘಟನೆಯ ಕೇಂದ್ರ ಬಿಂದು. ಹಕ್ಕಿಗಳ ಬಗ್ಗೆ ಅಪಾರ ಒಲವು ಇರುವ ಮತ್ತು ಅವುಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ಹವ್ಯಾಸವುಳ್ಳ ಕ್ರಿಸ್ಚಿಯನ್ ಕೂಪರ್ ಅನ್ನುವ ವ್ಯಕ್ತಿ ಅಲ್ಲಿದ್ದ. ಆತ ಕರಿಯ ಜನಾಂಗದ ವ್ಯಕ್ತಿ. ಅಲ್ಲಿಗೆ ಆ್ಯಮಿ ಕೂಪರ್ ಎಂಬ ಹೆಸರಿನ ಮಹಿಳೆ ತನ್ನ ನಾಯಿಯೊಂದಿಗೆ ಬರುತ್ತಾಳೆ. ಆಕೆ ಬಿಳಿಯ ಹೆಣ್ಣು. ನಾಯಿಯನ್ನು ಬಿಗಿಯಾಗಿ ಹಿಡಿದುಕೋ ಎಂದು ಕ್ರಿಸ್ಚಿಯನ್ ಕೂಪರ್ ಆ್ಯಮಿಯೊಂದಿಗೆ ಹೇಳುತ್ತಾನೆ. ನಾಯಿ ಉದ್ಯಾನದೊಳಗೆ ನುಗ್ಗಿ ಹಕ್ಕಿಗಳಿಗೆ ತೊಂದರೆ ಕೊಡಬಹುದು ಎಂಬುದು ಆತನ ಅನುಮಾನ. ಆ್ಯಮಿಗೆ ಆ ಸಲಹೆ ಇಷ್ಟ ವಾಗುವುದಿಲ್ಲ. ‘ನೀನ್ಯಾರು ನನಗೆ ಸಲಹೆ ಕೊಡುವವ’ ಅನ್ನುವ ಭಾವದಲ್ಲಿ ಆತನ ಮೇಲೆ ಆಕೆ ಏರಿ ಹೋಗುತ್ತಾಳೆ. ‘ನಾನು ಪೊಲೀಸರಿಗೆ ಕರೆ ಮಾಡುವೆ’ ಎಂದಾಕೆ ಬೆದರಿಸುತ್ತಾಳೆ. ‘ಓರ್ವ ಆಫ್ರಿಕನ್ ಮೂಲದ ಅಮೇರಿಕನ್ ವ್ಯಕ್ತಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ’ ಎಂದು ದೂರು ಕೊಡುವೆ ಅನ್ನುತ್ತಾಳೆ ಮತ್ತು ‘ಪೊಲೀಸರಿಗೂ ಕಪ್ಪು ವರ್ಣೀಯರಿಗೂ ನಡುವೆ ಎಂಥ ಸಂಬಂಧ ಇದೆ ಎಂಬುದೂ ನನಗೆ ಗೊತ್ತು’ ಎಂದೂ ಹೇಳುತ್ತಾಳೆ. ಬಳಿಕ ಪೊಲೀಸರಿಗೆ ಕರೆ ಮಾಡುತ್ತಾಳೆ..

ಈ ಇಡೀ ಬೆಳವಣಿಗೆಯನ್ನು ಕ್ರಿಸ್ಚಿಯನ್ ಕೂಪರ್ ಕ್ಯಾಮರಾದಲ್ಲಿ ಸೆರೆಹಿಡಿದು ಹಂಚಿಕೊಳ್ಳುತ್ತಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ವರ್ತನೆಯ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತವೆ. ತೀರಾ ಸಹಜ ಸಲಹೆಯನ್ನು ಆ್ಯಮಿ ಕೂಪರ್ ಜನಾಂಗೀಯ ಪ್ರಕರಣವಾಗಿ ತಿರುಚಿದುದನ್ನು ಖಂಡಿಸಲಾಗುತ್ತದೆ. ‘ಅಮೇರಿಕನ್ ಪೊಲೀಸರು ಕರಿಯರ ವಿರುದ್ಧ ಇದ್ದಾರೆ ಮತ್ತು ನಿನ್ನನ್ನು ನಾನು ಸಿಲುಕಿಸುವೆ’ ಎಂಬ ಆಕೆಯ ಮಾತಿನ ಧಾಟಿಯು ಅಪ್ಪಟ ಜನಾಂಗೀಯ ಮೇಲ್ಮೆಯಿಂದ ಕೂಡಿದ್ದಾಗಿದೆ ಎಂದು ಹೇಳಲಾಗುತ್ತದೆ. ಪ್ರಕರಣ ಎಷ್ಟು ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತೆಂದರೆ, ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಕ್ರಿಸ್ಚಿಯನ್ ಕೂಪರ್ ನ ಸಂದರ್ಶನ ನಡೆಸುತ್ತದೆ. ಘಟನೆಯ ವಿವರಗಳನ್ನು ಪಡೆದುಕೊಳ್ಳುತ್ತದೆ. ಆ್ಯಮಿ ತನ್ನ ವರ್ತನೆಗೆ ಕ್ಷಮೆ ಯಾಚಿಸುತ್ತಾಳೆ. ಮಾತ್ರವಲ್ಲ, ಉದ್ಯೋಗದಾತ ಆಕೆಯನ್ನು ಉದ್ಯೋಗದಿಂದ ಕಿತ್ತು ಹಾಕುತ್ತಾನೆ. ಹಾಗಂತ,

ತಾನು ಜನಾಂಗೀಯವಾದಿಯಲ್ಲ ಎಂದು ಆ್ಯಮಿ ಹೇಳಿದ್ದಾಳೆ. ಆಕೆಯ ಈ ಹೇಳಿಕೆಯನ್ನು ‘ದ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ಸಂದರ್ಶನದಲ್ಲಿ ಕ್ರಿಸ್ಚಿಯನ್ ಕೂಪರ್ ಕೂಡಾ ಸಮರ್ಥಿಸಿದ್ದಾನೆ. ಆಕೆ ಜ ನಾಂಗೀಯವಾದಿ ಅಲ್ಲದೇ ಇರಬಹುದು. ಆದರೆ, ಕೆಲವೊಮ್ಮೆ ಜನಾಂಗೀಯವಾದಿಯಲ್ಲದ ವ್ಯಕ್ತಿಯೂ ಸನ್ನಿ ವೇಶದ ಲಾಭವನ್ನು ಪಡಕೊಳ್ಳುವುದಕ್ಕಾಗಿ ಹೇಗೆ ಜನಾಂಗೀಯವಾದಿ ಯಾಗುತ್ತಾರೆ ಎಂಬ ಸೂಕ್ಷ್ಮ ಎಳೆಯನ್ನು ಆತ ಬಿಚ್ಚಿಡುತ್ತಾನೆ.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರಕರಣವು ಈ ಘಟನೆಯನ್ನು ನೆನಪಿಸುವಂತಿದೆ.

ಹಾವೇರಿಯ ರಾಣೆಬೆನ್ನೂರಿನಿಂದ ನಾಲ್ಕು ಎಮ್ಮೆಗಳನ್ನು ತನ್ನ ಲಾರಿಯಲ್ಲಿ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ ಮುಹಮ್ಮದ್ ಹನೀಫ್ ಎಂಬವರ ಮೇಲೆ ಜೂನ್ 14ರಂದು ಮಂಗಳೂರಿ ನಲ್ಲಿ ದಾಳಿಯಾಗುತ್ತದೆ. ದಾಳಿ ನಡೆದ ಸ್ಥಳಕ್ಕೂ ಪೊಲೀಸ್ ಠಾಣೆಗೂ ತುಂಬಾ ದೂರ ಏನೂ ಇಲ್ಲ. ಸುಮಾರು 15ರಷ್ಟಿದ್ದ ದುಷ್ಕರ್ಮಿಗಳು ಹನೀಫ್‍ರನ್ನು ಲಾರಿಗೆ ಕಟ್ಟಿ ಹಾಕಿ ಥಳಿಸುತ್ತಾರೆ. ಹಣ ದೋಚುತ್ತಾರೆ. ತಮಾಷೆ ಏನೆಂದರೆ, ಪೊಲೀಸರು ಹನೀಫ್‍ನನ್ನು ಠಾಣೆಗೆ ಕರೆದೊಯ್ದು ಗೋಕಳ್ಳತನದ ಆರೋಪ ದಡಿ ಜಾಮೀನು ರಹಿತ ಕೇಸು ದಾಖಲಿಸುತ್ತಾರೆ. ಅದೇವೇಳೆ, ದುಷ್ಕರ್ಮಿಗಳ ಪೈಕಿ ಆರು ಮಂದಿಯ ನ್ನು ಬಂಧಿಸಿ ದುರ್ಬಲ ಸೆಕ್ಷನ್‍ಗಳಡಿ ಕೇಸು ದಾಖಲಿಸಿಕೊಳ್ಳುತ್ತಾರೆ ಮತ್ತು ಜಾಮೀನಿ ನಡಿ ಬಿಡುಗಡೆಗೊಳ್ಳುತ್ತಾರೆ.

ಈ ಎಲ್ಲವನ್ನೂ ಸ್ವತಃ ಮುಹಮ್ಮದ್ ಹನೀಫ್‍ರೇ ಸುದ್ದಿ ಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ತಾನು ಸರಕಾರದಿಂದ ಮಾನ್ಯತೆ ಹೊಂದಿದ ಜಾನುವಾರು ಸಾಗಾಟಗಾರ ಎಂಬುದನ್ನು ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಕ್ರಿಸ್ಚಿಯನ್ ಕೂಪರ್ ಮತ್ತು ಮುಹಮ್ಮದ್ ಹನೀಫ್- ಈ ಎರಡೂ ಪ್ರಕರಣಗಳಲ್ಲಿ ಸೂಕ್ಷ್ಮ ಸಂಬಂಧವೊಂದಿದೆ. ಕ್ರಿಸ್ಚಿಯನ್ ಕಪ್ಪು ವರ್ಣೀಯನಾಗಿರುವುದು ಆತನನ್ನು ಜರೆಯುವುದಕ್ಕೆ, ಆತನ ವಿರುದ್ಧ ಏರಿ ಹೋಗುವುದಕ್ಕೆ ಮತ್ತು ಪೊಲೀಸರಿಗೆ ಕರೆ ಮಾಡಿ ಆತನ ಕಪ್ಪು ವರ್ಣವನ್ನು ಎತ್ತಿ ಹೇಳಿ ಸುಳ್ಳು ದೂರು ಕೊಡುವುದಕ್ಕೆ ಆ್ಯಮಿ ಕೂಪರ್‍ಗೆ ಧೈರ್ಯ ಒದಗಿಸುತ್ತದೆ. ನಿಜವಾಗಿ, ಕ್ರಿಸ್ಚಿಯನ್‍ನ ಸಲಹೆಯ ಬಗ್ಗೆ ಆಕ್ಷೇಪ ಇದ್ದಿದ್ದರೆ ಅದನ್ನು ಪ್ರಶ್ನಿಸುವುದಕ್ಕೆ ಆ್ಯಮಿಗೆ ಅವಕಾಶ ಖಂಡಿತ ಇತ್ತು. ಆದರೆ ಆ ಅವಕಾಶ ಆಕೆ ಬಿಳಿಯಳು ಎಂಬ ಕಾರಣದಿಂದ ಒದಗಿರುವುದಲ್ಲ. ಬಿಳಿ ಮತ್ತು ಕಪ್ಪು ಅಲ್ಲಿ ವಿಷಯವೇ ಅಲ್ಲ. ಇಬ್ಬರು ಮನುಷ್ಯರ ನಡುವಿನ ವಿಷಯ ಅದು. ಆದರೆ ಆ್ಯಮಿ ಆ ಸಲಹೆಯನ್ನು ಓರ್ವ ಕರಿಯನ ಸಲಹೆ ಎಂದು ಪರಿಗಣಿಸಿದಳು. ‘ಕರಿಯನೋರ್ವ ಬಿಳಿಯಳಿಗೆ ಸಲಹೆ ಕೊಡುವುದೇ’ ಎಂಬ ಮೇಲ್ಮೆ ಭಾವನೆಯೂ ಬಂತು. ಆದ್ದರಿಂದಲೇ, ಆಕೆ ಆ ಸಂದರ್ಭದ ಲಾಭವನ್ನು ಪಡೆದುಕೊಳ್ಳಲು ಯತ್ನಿಸಿದಳು. ಪೊಲೀಸರಲ್ಲಿ ಕರಿವರ್ಣೀಯರ ವಿರೋಧಿ ಭಾವನೆಯಿದೆ. ಸಾಮಾಜಿಕವಾಗಿಯೂ ಕರಿಯರ ಬಗ್ಗೆ ಜನಾಂಗೀಯ ತಾರತಮ್ಯ ವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿದೆ. ಇದನ್ನು ಬಳಸಿಕೊಂಡು ಈತನನ್ನು ತುಳಿಯಬೇಕು ಎಂದು ಆಲೋಚಿಸಿದಳು.

ಮಂಗಳೂರು ಘಟನೆಯಲ್ಲೂ ಸ್ಪಷ್ಟವಾಗುವುದೂ ಇಂಥದ್ದೇ ಭಾವನೆ.

ಜಾನುವಾರು ಸಾಗಾಟ ಅಪರಾಧ ಅಲ್ಲ. ಕಸಾಯಿಖಾನೆಗಳು ಬಾಗಿಲು ತೆರೆದಿರುವುದೇ ಜಾನುವಾರುಗಳನ್ನು ನಂಬಿಕೊಂಡು. ಅವೇನೂ ಸ್ವಯಂ ತೆರೆದುಕೊಂಡು ಸ್ವಯಂ ಮುಚ್ಚಿಕೊಳ್ಳುವ ಬಾಗಿಲುಗಳಲ್ಲ. ಸರಕಾರದ ಮಾನ್ಯತೆಯಿಂದಲೇ ಅವು ಬಾಗಿಲು ತೆರೆಯುತ್ತವೆ. ಹಾಗೆ ಮಾನ್ಯತೆಯಿರುವ ಕಸಾಯಿಖಾನೆಗಳಿಗೆ ಕಾನೂನುಬದ್ಧವಾಗಿ ಜಾನುವಾರು ಸಾಗಾಟ ಮಾಡುವುದು ಅಪರಾಧವೂ ಅಲ್ಲ, ಅದನ್ನು ತಡೆಯುವುದೇ ಅಪರಾಧ. ಇದು ತಡೆಯುವವರಿಗೂ ಗೊತ್ತು, ಜಾಮೀನು ರಹಿತ ಕೇಸು ದಾಖಲಿಸುವ ಪೊಲೀಸು ಠಾಣೆಗೂ ಗೊತ್ತು. ಹಾಗಿದ್ದರೂ ಮತ್ತೂ ಮತ್ತೂ ಇಂಥ ಪ್ರಕರಣಗಳು ನಡೆಯುತ್ತಿರುವುದೇಕೆ?

ತೆಲಂಗಾಣದ ಹೈಕೋರ್ಟೂ ಕಳೆದವಾರ ಇದೇ ಪ್ರಶ್ನೆಯನ್ನು ಎತ್ತಿತ್ತು. ಕೊರೋನಾ ಲಾಕ್‍ಡೌನ್‍ನ ವೇಳೆ ಕೇವಲ ಒಂದೇ ಸಮುದಾಯದವರೇ ಏಕೆ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ಪೊಲೀಸರನ್ನು ಪ್ರಶ್ನಿಸಿತ್ತು.

ಜನಾಂಗೀಯ ತಾರತಮ್ಯ ಮತ್ತು ಧಾರ್ಮಿಕ ತಾರತಮ್ಯ- ಇವೆರಡೂ ಭಾಷಿಕವಾಗಿ ಬೇರೆ ಬೇರೆಯಾಗಿದ್ದರೂ ದೌರ್ಜನ್ಯಕ್ಕೆ ಸಂಬಂಧಿಸಿ ಸಮಾನ ಉದ್ದೇಶಗಳನ್ನೇ ಹೊಂದಿರುತ್ತದೆ. ಯಾವ ದೇಶದಲ್ಲಿ ಜ ನರು ಅಲ್ಪಸಂಖ್ಯೆಯಲ್ಲಿರುತ್ತಾರೋ ಅವರನ್ನು ಗುರಿ ಮಾಡುವುದೇ ಇದರ ಲಕ್ಷಣ. ಅಂದಹಾಗೆ,

ಕಪ್ಪು ಮತ್ತು ಬಿಳುಪು ಯಾವುದೇ ಮನುಷ್ಯರ ಒಳ್ಳೆಯತನ ಮತ್ತು ಕೆಟ್ಟತನವನ್ನು ಗುರುತಿಸುವುದಕ್ಕೆ ಇರುವ ಮಾನದಂಡಗಳಲ್ಲ. ಮುಸ್ಲಿಮ್ ಮತ್ತು ಹಿಂದೂ ಎಂಬುದೂ ಹೀಗೆಯೇ. ಇವು ಒಳಿತು ಮತ್ತು ಕೆಡುಕನ್ನು ವಿಭಜಿಸುವ ರೇಖೆಗಳಲ್ಲ. ಆದರೆ ಕೊರೋನಾ ಭಾರತವು ಮುಸ್ಲಿಮರನ್ನು ನಡೆಸಿಕೊಂಡ ರೀತಿ ಎಷ್ಟು ಹೀನಾಯವಾಗಿತ್ತು ಅನ್ನುವುದಕ್ಕೆ ನೂರಾರು ವೀಡಿಯೋಗಳು ಮತ್ತು ಚಿತ್ರಗಳೇ ಸಾಕ್ಷಿಗಳಾಗಿವೆ. ಮುಸ್ಲಿಮರನ್ನು ಗುರಿ ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ನಿರ್ಮಾಣವಾದುವು. ಯಾವ್ಯಾವುದೋ ಮತ್ತು ಎಲ್ಲೆಲ್ಲಿಯದೋ ವೀಡಿಯೋಗಳನ್ನು ಮುಸ್ಲಿಮರದೆಂದು ಬಿಂಬಿಸಿ, ಮುಸ್ಲಿಮರನ್ನು ಹೀನಾಯವಾಗಿ ಕಾಣುವುದಕ್ಕೆ ದುರ್ಬಳಕೆ ಮಾಡಲಾಯಿತು. ಮುಸ್ಲಿಮರಿಂದಾಗುವ ಅತಿ ಸಣ್ಣ ತಪ್ಪಿಗೂ ಅತ್ಯಂತ ಭೀಕರ ರೂಪವನ್ನು ಕೊಡಲಾಯಿತು. ಅವು ಸಮಾಜವನ್ನು ಸಹಜವಾಗಿಯೇ ಪ್ರಭಾವಿಸಿತು. ಮುಸ್ಲಿಮರೆಂದರೆ ಹಾಗೆ, ಹೀಗೆ; ಅವರು ಕಾನೂನನ್ನು ಪಾಲಿಸುವುದಿಲ್ಲ, ಕೊರೋನಾದ ಹಿಂದಿರುವುದು ಅವರೇ ಎಂಬಂತಹ ನಂಬಿಕೆಗಳು ಸಾರ್ವಜನಿಕವಾಗಿ ತಳವೂರ ತೊಡಗಿತು. ಪೊಲೀಸರೂ ವೈದ್ಯರೂ ಅಧಿಕಾರಿಗಳೂ ರಾಜಕಾರಣಿಗಳೂ ಅವುಗಳಿಂದ ಪ್ರಭಾವಿತರಾದರು. ಅವರು ಬಯಸದೆಯೇ ಅವರೊಳಗೆ ಮುಸ್ಲಿಮರೆಂದರೆ ಹಾಗೆ ಅನ್ನುವ ಸ್ಟೀರಿಯೋಟೈಪ್ಡ್ ಚಿತ್ರವೊಂದು ಮೂಡತೊಡಗಿತು. ಆಗಬೇಕಾಗಿದ್ದುದು ಇಷ್ಟೇ. ಆ ಬಳಿಕ,

ಎಲ್ಲಿ ರಕ್ಷಣೆ ಸಿಗಬೇಕೋ, ಎಲ್ಲಿ ತಾರತಮ್ಯಕ್ಕೆ ಅವಕಾಶ ಇರಬಾರದೋ ಅಲ್ಲೇ ಅವುಗಳ ಉಲ್ಲಂಘನೆ ಸರಾಗವಾಗಿ ನಡೆಯತೊಡಗುತ್ತದೆ.

ಯಾವುದೇ ಸುಳ್ಳು ಸುದ್ದಿಯೂ ಸುಳ್ಳು ಸುದ್ದಿ ಎಂಬ ಗುರುತಿ ನೊಂದಿಗೆ ಪ್ರಸಾರವಾಗುವುದಿಲ್ಲ. ಆರಂಭದಲ್ಲಿ ಎಲ್ಲ ಸುಳ್ಳು ಸುದ್ದಿಗಳೂ ಸತ್ಯ ಸುದ್ದಿಗಳೇ. ಅವು ಸುಳ್ಳುಗಳು ಅಂತ ಪತ್ತೆಯಾಗುವುದು ವಾರಗಳೋ ತಿಂಗಳುಗಳೋ ಕಳೆದ ಬಳಿಕ. ಆದರೆ, ಆ ಸತ್ಯಶೋಧನಾ ವರದಿಯು ಸುಳ್ಳು ಸುದ್ದಿಯಷ್ಟು ವ್ಯಾಪಕ ಪ್ರಮಾಣದಲ್ಲಿ ಹಂಚಿಕೆಯಾಗುವುದೂ ಇಲ್ಲ. ಆರಂಭದಲ್ಲಿ ಯಾರು ಈ ಸುಳ್ಳು ಸುದ್ದಿಯನ್ನು ಓದಿರುತ್ತಾರೋ ಅವರು ಈ ಸತ್ಯಶೋಧನಾ ವರದಿಯನ್ನು ಓದಬೇಕೆಂದೂ ಇಲ್ಲ. ಹೀಗೆ ಸುಳ್ಳು ಸುದ್ದಿಗಳೇ ಉತ್ಪಾದನೆಗೊಂಡು ಹಂಚುತ್ತಿರುವಾಗ ಅದು ನಿಧಾನಕ್ಕೆ ಫಲಿತಾಂಶವನ್ನು ನೀಡಲೂ ಪ್ರಾರಂಭಿಸುತ್ತದೆ. ಅಮೇರಿಕ ದಲ್ಲಿ ಕರಿವರ್ಣೀಯರ ವಿರುದ್ಧದ ಜನಾಂಗೀಯ ತಾರತಮ್ಯಕ್ಕೂ ಇಂಥದ್ದೇ ಹಿನ್ನೆಲೆಯಿದೆ. ಕರಿಯರನ್ನು ಅಪರಾಧಿ ಮನೋಭಾವ ದವರು, ದುರ್ನಡತೆ ಉಳ್ಳವರು, ಶಿಸ್ತನ್ನು ರೂಢಿಸದವರು, ಅಪರಾಧಿಗಳಲ್ಲಿ ಹೆಚ್ಚಿನವರು ಅವರೇ.. ಇತ್ಯಾದಿ ಸುದ್ದಿಗಳನ್ನು ಪದೇ ಪದೇ ಹಂಚಿಕೊಂಡು ಅಲ್ಲಿಯ ನಾಗರಿಕರಲ್ಲಿ ಜನಾಂಗೀಯ ವಿರೋಧಿ ಭಾವನೆ ಗರಿಗೆದರುವಂತೆ ಮಾಡಲಾಗಿದೆ. ಕರಿಯ ರೆಂದರೆ ಹಾಗೆ, ಕರಿಯರೆಂದರೆ ಹೀಗೆ ಎಂಬ ವದಂತಿಗಳು ಹರಡಿಕೊಂಡು, ಕ್ರಮೇಣ ಅವು ನಿರ್ದಿಷ್ಟ ರೂಪವನ್ನು ಪಡೆಯಿತು. ಆ ರೂಪಕ್ಕೆ ಉದ್ದ ಉಗುರು-ಕೋರೆಹಲ್ಲುಗಳನ್ನು ಅಂಟಿಸಲಾಯಿತು. ಕ್ರಮೇಣ ಕರಿವರ್ಣೀಯರ ವಿರುದ್ಧ ಏನೇ ಆರೋಪ ಹೊರಿಸಿದರೂ ಅದು ನಿಜ ಎಂದು ನಾಗರಿಕರು ನಂಬುವಂಥ ವಾತಾವರಣ ಸೃಷ್ಟಿಯಾಯಿತು.

1955ರಲ್ಲಿ 14 ವರ್ಷದ ಆಫ್ರಿಕನ್ ಮೂಲದ ಅಮೇರಿಕನ್ ಬಾಲಕ ಎಮ್ಮೆಟ್ ಟಿಲ್ ಎಂಬವನನ್ನು ಅಪಹರಿಸಿ, ಹಿಂಸಿಸಿ ಕೊನೆಗೆ ಗುಂಡು ಹೊಡೆದು ಕೊಲ್ಲಲಾದ ಘಟನೆ ನಡೆದಿತ್ತು. ಮಿಸಿಸಿಪ್ಪಿಯಲ್ಲಿ ನಡೆದ ಈ ಘಟನೆಗೆ ಕ್ಯಾರೋಲಿನ್ ಬ್ರಿಯಾಂಟ್ ಎಂಬ ಬಿಳಿ ಮಹಿಳೆಯೊಂದಿಗೆ ಆತ ಅಸಭ್ಯವಾಗಿ ವರ್ತಿಸಿದ್ದು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಮುಂದಾದುದನ್ನು ಕಾರಣವಾಗಿ ನೀಡಲಾಗಿತ್ತು. ಆದರೆ ತ ನಿಖೆಯ ವೇಳೆ ಬ್ರಿಯಾಂಟ್ ಈ ಆರೋಪವನ್ನು ಅಲ್ಲಗಳೆದಳು. ಆದರೆ, ಆ ಸತ್ಯವನ್ನು ಆಲಿಸುವುದಕ್ಕೆ ಎಮ್ಮೆಟ್ ಟಿಲ್ ಬದುಕಿರಲಿಲ್ಲ. ಹಾಗಂತ,

ಇದು ಒಂಟಿ ಘಟನೆಯಲ್ಲ ಮತ್ತು ಅಮೇರಿಕಕ್ಕೆ ಮಾತ್ರ ಸೀಮಿತವಾದ ಘಟನೆಯೂ ಅಲ್ಲ.

ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ಮುಹಮ್ಮದ್ ಹನೀಫ್‍ನ ಮೇಲೆ ಜಾಮೀನು ರಹಿತ ಕೇಸು ದಾಖಲಾಗಿರುವುದರಲ್ಲಿ ಈ ಮನಸ್ಥಿತಿಯ ಪ್ರಭಾವವಿದೆ. ಮುಸ್ಲಿಮನೋರ್ವ ಜಾನುವಾರು ಸಾಗಾಟ ಮಾಡುತ್ತಾನೆಂದರೆ, ಅದು ಕಳ್ಳ ಸಾಗಾಟವೇ ಆಗಿರಬೇಕು ಎಂಬ ಸ್ಟೀರಿಯೋಟೈಪ್ಡ್ ಭಾವನೆಯ ಫಲಿತಾಂಶ ಅದು. ಕೊರೋನಾದ ಆರಂಭದಲ್ಲೂ ಈ ಮನಸ್ಥಿತಿಯ ಪ್ರದರ್ಶನವಾಗಿತ್ತು. ಮುಸ್ಲಿಮರು ಕೊರೋನಾವನ್ನು ಹಬ್ಬಿಸುವವರು ಎಂದು ನಂಬುವ ಪ್ರಾಮಾಣಿಕ ಭಾರತೀಯರನ್ನು ತಯಾರಿಸಿತ್ತು. ಮುಹಮ್ಮದ್ ಹನೀಫ್ ಪ್ರಕರಣ ಅದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನಿಜವಾಗಿ,

ಥಳಿಸಿದವರಿಗೂ ಥಳಿಸಲ್ಪಟ್ಟವರಿಗೂ ಸತ್ಯ ಏನೆಂದು ಗೊತ್ತು. ಅವರಿಬ್ಬರನ್ನು ಬಂಧಿಸಿದವರಿಗೂ ಸತ್ಯದ ಅರಿವಿದೆ. ಆದರೆ ಆ ಸತ್ಯವನ್ನು ಒಪ್ಪುವ ಸ್ಥಿತಿಯಲ್ಲಿ ನಾಗರಿಕ ಸಮಾಜವೇ ಇರುವುದಿಲ್ಲ. ಇದು ಈ ಕಾಲದ ಅತಿದೊಡ್ಡ ದುರಂತ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.