ಜೇನುನೊಣದ ಬದುಕು ಕಲಿಸುವ ಪಾಠ

0
234

✍️ ಶೈಕ್ ಅಹ್ಮದ್ ಕುಟ್ಟಿ ಟೊರಾಂಟೊ

ಜೇನುನೊಣದ ಜೀವನ ಶೈಲಿ ಮಾನವರ ಸಂಸ್ಕರಣೆಗೆ ಅತ್ಯಂತ ಸುಂದರವಾದ ಮತ್ತು ಪ್ರೇರಕವಾದ ಉದಾಹರಣೆಯಾಗಿದೆ. ಒಂದು ಜೇನುನೊಣ ಹೂವಿನಿಂದ ಹೂವಿಗೆ ಹಾರುವಾಗ, ಸುತ್ತಮುತ್ತಲಿನ ಪರಿಸರ ಅಥವಾ ಕೃಷಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ, ತನ್ನ ಕರ್ತವ್ಯವನ್ನು ಮಾತ್ರ ಪಾಲಿಸುತ್ತದೆ. ಆ ಪ್ರಕ್ರಿಯೆಯಲ್ಲಿ ಅದು ಗಿಡಗಳಿಗೆ ಪರಾಗಸ್ಪರ್ಷ ಮಾಡಲು ಸಹಾಯ ಮಾಡುತ್ತದೆ. ಇದು ಪ್ರಕೃತಿಯ ಅಸ್ತಿತ್ವಕ್ಕೆ ಅತ್ಯಗತ್ಯ.
“ಸತ್ಯವಿಶ್ವಾಸಿಯು ಜೇನು ನೊಣದಂತೆ; ಜೇನುನೊಣ ಶುದ್ಧವಾದುದನ್ನು ಮಾತ್ರ ಆರಿಸಿಕೊಳ್ಳುತ್ತದೆ, ಶುದ್ಧವಾದುದನ್ನು ಮಾತ್ರ ಸ್ವೀಕರಿಸುತ್ತದೆ.”

“ಒಂದು ಕೊಂಬೆಯ ಮೇಲೆ ಕುಳಿತರೆ, ಅದು ಆ ಕೊಂಬೆಯನ್ನು ಮುರಿಯುವುದಿಲ್ಲ ಅಥವಾ ಅದಕ್ಕೆ ಹಾನಿ ಉಂಟುಮಾಡುವುದಿಲ್ಲ”. (ಪ್ರವಾದಿ ವಚನ)

ದೈವಿಕ ಪ್ರಜ್ಞೆ, ಪ್ರಕೃತಿ ಮತ್ತು ವಿಶ್ವಾಸಿಯ ಆಧ್ಯಾತ್ಮಿಕ ಜೀವನವನ್ನು ಈ ಪದಗಳಲ್ಲಿ ಸುಂದರವಾಗಿ ಜೋಡಿಸಲಾಗಿದೆ! ಪ್ರಪಂಚವನ್ನು ಹೇಗೆ ನೋಡಬೇಕು ಮತ್ತು ಹೇಗೆ ಬದುಕ ಬೇಕು ಎಂದು ಪ್ರವಾದಿಯವರು(ಸ) ಇಲ್ಲಿ ಕಲಿಸಿಕೊಡುತ್ತಾರೆ.

ನಮ್ಮ ಸುತ್ತಲಿರುವ ಎರಡು ಗ್ರಂಥಗಳನ್ನು ಗಮನಿಸುವಂತೆ ಕುರ್‌ಆನ್ ಆಹ್ವಾನಿಸುತ್ತದೆ. ಅದರಲ್ಲಿ ಒಂದು ಅಲ್ಲಾಹನ ವಚನಗಳನ್ನು ಒಳಗೊಂಡಿರುವ ಕುರ್‌ಆನ್. ಎರಡನೆಯದು ಈ ಪ್ರಪಂಚ. ಈ ವಿಶ್ವದಲ್ಲಿ ಹರಡಿಕೊಂಡಿರುವ ಆಕಾಶ, ಭೂಮಿ ಮತ್ತು ಅಲ್ಲಾಹನ ಅಸಂಖ್ಯಾತ ದೃಷ್ಟಾಂತಗಳು.

“ಸತ್ಯವು ವ್ಯಕ್ತವಾಗುವವರೆಗೆ ಅವರಲ್ಲಿ ಮತ್ತು ಅವರಲ್ಲಿನ ದೃಷ್ಟಾಂತಗಳನ್ನು ನಾವು ಅವರಿಗೆ ತೋರಿಸಿಕೊಡುತ್ತೇವೆ” ಎಂದು ಅಲ್ಲಾಹನು ಹೇಳುತ್ತಾನೆ.

ವಿಶ್ವಾಸಿಯ ಜೀವನ ಎಂದರೆ ಈ ಎರಡು ಪುಸ್ತಕಗಳನ್ನು ಒಟ್ಟಾಗಿ ಓದುವುದು ಎಂದರ್ಥ. ಸೃಷ್ಟಿಯ ಈ ಬೃಹತ್ ಪುಸ್ತಕದಲ್ಲಿನ ಒಂದು ಸಣ್ಣ ಪುಟವೇ ಜೇನುನೊಣ.

ಅಲ್ಲಾಹನು ಪವಿತ್ರ ಕುರ್‌ಆನ್‌ನ ಸೂರಃ ಅನ್ನಹ್ಲ್ ಅಧ್ಯಾಯದಲ್ಲಿ ಈ ಸಣ್ಣ ಜೀವಿಗಾಗಿ ಒಂದು ಭಾಗವನ್ನು ಮೀಸಲಿಟ್ಟಿದ್ದಾನೆ. ಜೇನುನೊಣಗಳಿಗೆ ಆಹಾರ ಹುಡುಕುವ ಮಾರ್ಗಗಳನ್ನು ಸುಲಭಗೊಳಿಸಿರುವುದೇ ಅಲ್ಲಾಹನ ಉಪಕಾರ. ಅದರ ದೇಹದೊಳಗಿನಿಂದ ಮನುಷ್ಯರಿಗೆ ಔಷಧಿಯಾದ, ರುಚಿಕರವಾದ ಜೇನುತುಪ್ಪ ಹೊರಬರುತ್ತದೆ. ಕುರ್‌ಆನ್ ಈ ಕುರಿತು ಎಚ್ಚರಿಸುತ್ತದೆ: “ಚಿಂತಿಸುವ ಜನರಿಗೆ ಇದರಲ್ಲಿ ಖಂಡಿತವಾಗಿಯೂ ದೃಷ್ಟಾಂತಗಳಿವೆ.”

ನಾವು ಜೇನುನೊಣವನ್ನು ಗಮನಿಸಿದರೆ ಅದರ ಜೀವನದ ಉದ್ದೇಶ ನಮಗೆ ಅರ್ಥವಾಗುತ್ತದೆ. ಅದು ಹೂವಿನಿಂದ ಹೂವಿಗೆ ಹಾರುವಾಗ, ಒಳ್ಳೆಯದನ್ನು ಮಾತ್ರ ಸ್ವೀಕರಿಸುತ್ತದೆ. ಅಶುದ್ಧವಾದ ಸ್ಥಳದಲ್ಲಿ ಅದು ಕುಳಿತುಕೊಳ್ಳುವುದಿಲ್ಲ. ಶುದ್ಧತೆಯೇ ಅದರ ಗುರಿ. ಈ ಎಚ್ಚರಿಕೆಯ ಆಯ್ಕೆಯಿಂದಲೇ ಆರೋಗ್ಯಕರವಾದ ಮತ್ತು ಗುಣಪಡಿಸುವ ಗುಣವುಳ್ಳ ಜೇನುತುಪ್ಪ ಉಂಟಾಗುತ್ತದೆ.

ಇದು ವಿಶ್ವಾಸಿಯ ಆಂತರಿಕ ಜೀವನದ ಪ್ರತಿಬಿಂಬವಾಗಿದೆ. “ಅದು ಶುದ್ಧವಾದದ್ದನ್ನು ಮಾತ್ರ ಸೇವಿಸುತ್ತದೆ.” ಎಂಬಲ್ಲಿಂದಲೇ ಪ್ರವಾದಿಯವರು(ಸ) ತಮ್ಮ ಸಂದೇಶವನ್ನು ಪ್ರಾರಂಭಿಸುತ್ತಾರೆ. ವಿಶ್ವಾಸಿ ತನ್ನ ಆಹಾರವು `ಹಲಾಲ್’ (ಧರ್ಮಸಮ್ಮತ) ಮತ್ತು ಶುದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಸಂಪಾದನೆಯು ಅಧರ್ಮದ ಹಾದಿಯಲ್ಲಾಗಿರಬಾರದು ಎಂಬುದನ್ನು ಅವನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾನೆ. ತನ್ನ ಮನಸ್ಸಿಗೆ ಅಥವಾ ಹೃದಯಕ್ಕೆ ಪ್ರವೇಶಿಸುವ ಮಾತುಗಳಾಗಲಿ ಅಥವಾ ಪ್ರಭಾವಗಳಾಗಲಿ, ಅವು ಪರದೂಷಣೆಯಾಗಿರಬಾರದು, ಅಸೂಯೆಯಾಗಿರಬಾರದು ಅಥವಾ ದ್ವೇಷದ ಮಾತುಗಳಾಗಿರಬಾರದು ಎಂದು ಅವನು ಜಾಗರೂಕನಾಗಿರುತ್ತಾನೆ. ಅದಕ್ಕಾಗಿಯೇ ಪ್ರವಾದಿಯವರು(ಸ) ಹೀಗೆ ಮುಂದುವರೆಸಿದರು: “ಅದು ಶುದ್ಧವಾದುದನ್ನು ಮಾತ್ರ ಉತ್ಪಾದಿಸುತ್ತದೆ.”

ಪ್ರವಾದಿಯವರ(ಸ) ವಚನದಲ್ಲಿನ ಅತ್ಯಂತ ಸುಂದರ ವಾದ ಭಾಗವಿದು: “ಅದು ಒಂದು ಕೊಂಬೆಯ ಮೇಲೆ ಕುಳಿತರೆ, ಅದನ್ನು ಮುರಿಯುವುದಿಲ್ಲ ಅಥವಾ ಅದಕ್ಕೆ ಹಾನಿ ಮಾಡುವುದಿಲ್ಲ.” ಏನನ್ನು ಸ್ವೀಕರಿಸಬೇಕು, ಯಾವುದನ್ನು ನೀಡಬೇಕು ಎಂಬುದಷ್ಟೇ ಅಲ್ಲ, ನಾವು ಹೇಗಿರಬೇಕು ಎಂಬುದನ್ನೂ ಇದು ನಮಗೆ ಕಲಿಸುತ್ತದೆ.

ಜೇನುನೊಣ ಎಷ್ಟು ಮೃದುವಾಗಿ ಚಲಿಸುತ್ತದೆ ಎಂದರೆ, ಹೂವುಗಳಿಗೆ ಸಣ್ಣ ಗಾಯವನ್ನೂ ಮಾಡದೆ, ತನಗೆ ಬೇಕಾದುದನ್ನು ಅದು ಪಡೆದುಕೊಳ್ಳುತ್ತದೆ. ಅದು ತೊಂದರೆ ನೀಡುವುದಿಲ್ಲ, ಬದಲಾಗಿ ಉಪಕಾರವನ್ನೇ ಮಾಡುತ್ತದೆ.

ಜೀವನದ ಹಾದಿಯಲ್ಲಿ ಸಾಗುವಾಗ ವಿಶ್ವಾಸಿಯೂ ಇದೇ ಮಾರ್ಗವನ್ನು ಅನುಸರಿಸಬೇಕು. ಅವನು ಇತರರ ಜೀವನದಲ್ಲಿ ಸೌಮ್ಯವಾಗಿ ಸಾಗುತ್ತಾನೆ. ಕಠಿಣವಾದ ಮಾತುಗಳಿಂದಲೋ ಅಥವಾ ವಿವೇಚನೆಯಿಲ್ಲದ ತೀರ್ಪುಗಳಿಂದಲೋ ಅವನು ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ಅಹಂಕಾರದಿಂದಲೋ ಅಥವಾ ಕೋಪದಿಂದಲೋ ಅವನು ಸಂಬಂಧಗಳನ್ನು ಹಾಳು ಮಾಡುವುದಿಲ್ಲ. ಒಂದು ಸಂಭಾಷಣೆಯಿಂದಲೋ ಅಥವಾ ಒಟ್ಟಾಗಿ ಕೆಲಸ ಮಾಡುವ ಸ್ಥಳದಿಂದಲೋ ಅವನು ಹೊರಬರುವಾಗ, ಅಲ್ಲಿ ಹೆಚ್ಚು ಸುಂದರವಾದ ವಾತಾವರಣವನ್ನು ನಿರ್ಮಿಸಿರುತ್ತಾನೆ. ಅವನು ಎಲ್ಲೆಡೆ ಹೂ ನಗೆ, ಪ್ರೋತ್ಸಾಹ ಅಥವಾ ಭರವಸೆಯನ್ನು ಬಿಟ್ಟುಬರುತ್ತಾನೆ. ಅವನು ಹೋಗುವಾಗ ಅಲ್ಲಿನ ವಾತಾವರಣವು ಶೋಕತಪ್ತವಾಗುವುದಿಲ್ಲ (ಬದಲಾಗಿ ಹರ್ಷಭರಿತವಾಗಿರುತ್ತದೆ).

ಸಂಘರ್ಷಗಳು ತುಂಬಿರುವ ಈ ಜಗತ್ತಿನಲ್ಲಿ, ಇದೇ ನಿಜವಾದ ಶಕ್ತಿಯೆಂದು ಪರಿಗಣಿಸಬೇಕು.

ಜೇನುನೊಣದ ಜೀವನದಲ್ಲಿ ಮತ್ತೊಂದು ಪಾಠವಿದೆ: ಅದರಲ್ಲಿರುವ ಅದ್ಭುತವಾದ ಸಹಕಾರ ಗುಣ. ಜೇನು ಗೂಡಿನ ಐಕ್ಯತೆ ಅದ್ಭುತವಾದುದು. ಅಲ್ಲಿ ಹುದ್ದೆಗಳಿಗಾಗಿ ಅಥವಾ ಶ್ರೇಯಸ್ಸಿಗಾಗಿ ಸ್ಪರ್ಧೆಯಿಲ್ಲ.

ಪ್ರತಿಯೊಂದು ಜೇನುನೊಣವೂ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತದೆ, ಹೀಗೆ ಒಟ್ಟಾಗಿ ಸೇರಿ ದೊಡ್ಡ ಗುರಿಯನ್ನು ಸಾಧಿಸುತ್ತವೆ.

ವಿಶ್ವಾಸಿಗಳು ಒಂದು ಕಟ್ಟಡದಂತೆ; ಅದರ ಪ್ರತಿಯೊಂದು ಭಾಗವೂ ಪರಸ್ಪರ ಬೆಂಬಲ ನೀಡುತ್ತದೆ ಎಂದು ಪ್ರವಾದಿಯವರು(ಸ) ಕಲಿಸಿದ್ದಾರೆ. ಸಮಾಜದ ಹಿತಕ್ಕಿಂತ ಸ್ವಂತ ಲಾಭಕ್ಕೆ ಮುನ್ನಡೆ ನೀಡುವ ಇಂದಿನ ಕಾಲದ ರೀತಿನೀತಿಗಳಿಗಿಂತ ಇದು ಎಷ್ಟು ಭಿನ್ನವಾಗಿದೆ!

ಒಂದು ಜೇನುನೊಣವನ್ನು ಸೂಕ್ಷ್ಮವಾಗಿ ಗಮನಿಸಿ. ಅದಕ್ಕೊಂದು ಗುರಿಯಿದೆ, ಆ ಗುರಿಯ ಕಡೆಗೆ ಅದು ತನ್ನ ಜೀವನವನ್ನು ಸಾಗಿಸುತ್ತದೆ. ಅದು ಹೂವಿನಿಂದ ಮಕರಂದವನ್ನು ಮಾತ್ರ ಸ್ವೀಕರಿಸುತ್ತದೆ. ಹೂವಿಗೆ ಯಾವುದೇ ಹಾನಿ ಮಾಡುವುದಿಲ್ಲ. ಅಶುದ್ಧವಾದವುಗಳನ್ನು ಅದು ಮುಟ್ಟುವುದಿಲ್ಲ. ಅದರ ಗುರಿ ಶುದ್ಧವಾದ ಜೇನನ್ನು ಮಾತ್ರ ಸಂಗ್ರಹಿಸುವುದಾಗಿದೆ. ಜೇನುನೊಣ ತನ್ನ ಕೆಲಸವನ್ನು ತಾನೇ ನಿರ್ವಹಿಸುವಂತೆ, ನಾವೂ ನಮ್ಮ ಕೆಲಸಗಳನ್ನು ದೇವನಿಗಾಗಿ ಮಾಡಬೇಕು.

ಜೇನುನೊಣದ ಜೀವನದಲ್ಲಿ ನಮಗೊಂದು ದೊಡ್ಡ ಪಾಠವಿದೆ. ಮನುಷ್ಯನಿಂದ ಕೃತಕವಾಗಿ ಜೇನು ತುಪ್ಪವನ್ನು ತಯಾರಿಸಲು ಸಾಧ್ಯವಿಲ್ಲ. ಅದೊಂದು ವಿಶಿಷ್ಟ ಜೀವನದ ಫಲವಾಗಿದೆ. ಅತಿಯಾಸೆಯಿಲ್ಲದ ಶ್ರಮ ಮತ್ತು ಏಕತೆಯೇ ಅದರ ಜೀವನದ ತಳಹದಿ. ಹಾಗೆಯೇ, ಪ್ರತಿಯೊಬ್ಬ ವಿಶ್ವಾಸಿಯೂ ಸಮಾಜದಲ್ಲಿ ಸತ್ಕರ್ಮಗಳನ್ನು ಮಾತ್ರ ಉತ್ಪಾದಿಸುವವರಾಗಿರಬೇಕು. ನಮ್ಮೊಳಗೆ ಅಶುದ್ಧವಾದವುಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು ಮತ್ತು ನಮ್ಮಿಂದ ಹೊರಬರುವ ವಿಷಯಗಳು ಶುದ್ಧವಾಗಿರಬೇಕು. ಆಗ ಮಾತ್ರ ನಮ್ಮ ಜೀವನವು ಇತರರಿಗೆ ಸಿಹಿಯಾದ ಅನುಭವವನ್ನು ನೀಡುತ್ತದೆ.