ಅಬ್ದುಲ್ ರಹೀಮ್ ಪ್ರಕರಣ: ಸೌದಿಯನ್ನು ಮತ್ತು ಆ ತಾಯಿಯನ್ನು ಟೀಕಿಸುವ ಮೊದಲು…

0
470

ಸನ್ಮಾರ್ಗ ವಾರ್ತೆ

ಈ ಘಟನೆಯನ್ನು ಹೆಚ್ಚಿನವರು ಮರೆತಿರಲಾರರು ಅನ್ಸುತ್ತೆ

ಸೌದಿ ರಾಜ ಕುಟುಂಬದ ರಾಜಕುಮಾರ ತುರ್ಕಿ ಬಿನ್ ಸೌದ್ ಬಿನ್ ಸೌದ್ ಅಲ್ ಕಬೀರ್ ಎಂಬ ಯುವಕ 2013ರಲ್ಲಿ ಆದಿಲ್ ಅಲ್ ಮುಹೈಮಿದ್ ಎಂಬ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡುತ್ತಾನೆ. ನ್ಯಾಯಾಲಯದಲ್ಲಿ ಈ ಹತ್ಯೆ ಸಾಬೀತಾಗುತ್ತದೆ. ಇನ್ನೀಗ, ಈ ರಾಜಕುಮಾರನ ಅಳಿವು ಮತ್ತು ಉಳಿವು ಆ ಸಂತ್ರಸ್ತ ಕುಟುಂಬಕ್ಕೆ ವರ್ಗಾವಣೆಯಾಗುತ್ತದೆ. ಆ ಕುಟುಂಬ ಕ್ಷಮಿಸಿದರೆ ಈ ರಾಜಕುಮಾರ ನೇಣುಗಂಭದಿಂದ ಪಾರಾಗಬಲ್ಲ. ಈ ಕ್ಷಮೆಗೆ ಪ್ರತಿಯಾಗಿ ಇಂತಿಷ್ಟು ಮೊತ್ತವನ್ನು ರಕ್ತ ಪರಿಹಾರವಾಗಿ ಕೊಡಬೇಕು ಎಂಬ ಶರ್ತವನ್ನು ಮುಂದಿಡುವ ಅವಕಾಶ ಆ ಕುಟುಂಬಕ್ಕೆ ಇರುತ್ತದೆ. ಕ್ಷಮಿಸಲ್ಲ ಎಂದು ಹೇಳುವ ಹಕ್ಕೂ ಆ ಕುಟುಂಬಕ್ಕೆ ಇರುತ್ತದೆ. ಆದರೆ,

ಆ ಕುಟುಂಬ ಕ್ಷಮಿಸುವುದಕ್ಕೆ ಸುತಾರಾಮ್ ಒಪ್ಪುವುದಿಲ್ಲ. ಒಂದು ಕಡೆ ರಾಜ ಕುಟುಂಬದ ಕುಡಿ, ಇನ್ನೊಂದು ಕಡೆ ಸಾಮಾನ್ಯ ಕುಟುಂಬ. ತನ್ನ ಮಗನನ್ನು ಕ್ಷಮಿಸುವಂತೆ ರಾಜ ಕುಟುಂಬ ಪರಿಪರಿಯಾಗಿ ವಿನಂತಿಸುತ್ತದೆ. ಅಂತಿಮವಾಗಿ 2016ರಲ್ಲಿ ಗಲ್ಲು ಶಿಕ್ಷೆಯ ಸಮಯ ಮತ್ತು ದಿನಾಂಕ ನಿರ್ಧಾರವಾಗುತ್ತದೆ. ನೇಣುಗಂಭದ ದಿನದಂದು ರಾಜ ಕುಟುಂಬದ ಕಣ್ಣೀರು, ಕ್ಷಮೆಗಾಗಿ ಅಂಗಲಾಚಿದ ಸನ್ನಿವೇಶವನ್ನು ರಿಯಾದ್ ನ ಅಲ್ ಸಫಾ ಮಸೀದಿಯ ಇಮಾಮರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು ಮತ್ತು ಯಾರಲ್ಲೂ ಸಂಕಟವನ್ನು ತರಿಸುವಷ್ಟು ಆ ಸನ್ನಿವೇಶ ಭಾವನಾತ್ಮಕವಾಗಿತ್ತು. ಕೊನೆಗೆ ಆ ರಾಜಕುಮಾರನನ್ನು ಗಲ್ಲಿಗೇರಿಸಲಾಯಿತು. ಮಾತ್ರವಲ್ಲ ಸೌದಿಯ ನಿಷ್ಠುರ ನ್ಯಾಯ ವ್ಯವಸ್ಥೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

ಕೇರಳದ ಅಬ್ದುಲ್ ರಹಿಂಗೆ ಸಂಬಂಧಿಸಿ ಸೌದಿ ನ್ಯಾಯ ವ್ಯವಸ್ಥೆಯನ್ನು ಪ್ರಶ್ನಿಸುವ ಮತ್ತು ಮಗನನ್ನು ಕಳಕೊಂಡ ಆ ತಾಯಿಯನ್ನು ಹೃದಯ ಹೀನಳು ಎಂಬಂತೆ ಚಿತ್ರಿಸುತ್ತಿರುವ ಬರಹಗಳ ನಡುವೆ ನನಗೆ ಈ ಘಟನೆ ನೆನಪಾಯಿತು.

ನಿಜವಾಗಿ, ಓರ್ವ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದರೆ ಸಕಲ ಮಾನವರನ್ನು ಕೊಂದ ಪಾಪ ಕೊಂದವನ ಮೇಲಿದೆ ಎಂಬುದು ಇಸ್ಲಾಮಿನ ನ್ಯಾಯ ಪರಿಕಲ್ಪನೆ. ಅಪರಾಧಿಯನ್ನು ಕ್ಷಮಿಸುವುದು ಸಂತ್ರಸ್ತ ಕುಟುಂಬದ ಪಾಲಿಗೆ ಆಯ್ಕೆಯೇ ಹೊರತು ಕಡ್ಡಾಯ ಅಲ್ಲ. ಆದ್ದರಿಂದ ಅಬ್ದುಲ್ ರಹೀಮ್ ರನ್ನು ಆ ತಾಯಿ ಯಾಕೆ ಕ್ಷಮಿಸಿಲ್ಲ ಎಂದು ಪ್ರಶ್ನಿಸುವುದು ಸೂಕ್ತವೂ ಆಗುವುದಿಲ್ಲ.

ಅಂದಹಾಗೆ, ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ಸೋನಿಯಾ ಗಾಂಧಿ ಮತ್ತು ಮಕ್ಕಳು ಕ್ಷಮಿಸಿದ್ರು. ಆದರೆ ತನ್ನ ಮಗಳನ್ನು ಹತ್ಯೆಗೈದವರನ್ನು ತಾನು ಕ್ಷಮಿಸಲಾರೆ ಎಂದು ನಿರ್ಭಯಳ ತಾಯಿ ಪಟ್ಟು ಹಿಡಿದ್ರು. ಅಪರಾಧಿಗಳ ಕುಟುಂಬ ಆ ತಾಯಿಯಲ್ಲಿ ಗೋಗರೆದಾಗ, ನನ್ನ ನಿರ್ಭಯಳನ್ನು ಕೊಡಿ, ಕ್ಷಮಿಸುವೆ ಎಂದರು. ಇಲ್ಲಿ ನಿರ್ಭಯಳ ತಾಯಿಯನ್ನು ಟೀಕಿಸುವುದು ಸಲ್ಲದು. ಮಗಳನ್ನು ಕಳಕೊಂಡ ನೋವಿನ ತೀವ್ರತೆ ಅವರಿಂದಷ್ಟೇ ವಿವರಿಸಲು ಸಾಧ್ಯ. ಆದ್ದರಿಂದ

ಅಬ್ದುರಹೀಮ್ ಪ್ರಕರಣವನ್ನು ಎತ್ತಿಕೊಂಡು ಸೌದಿ ನ್ಯಾಯ ವ್ಯವಸ್ಥೆಯನ್ನು ಮತ್ತು ಆ ತಾಯಿಯನ್ನು ಟೀಕಿಸುವುದಕ್ಕಿಂತ ಅವರನ್ನು ನೇಣುಗಂಭದಿಂದ ಬಿಡುಗಡೆಗೊಳಿಸಲು ಕೈ ಜೋಡಿಸಿದ ಸಹೃದಯಿಗಳನ್ನು ಅಭಿನಂದಿಸೋಣ.

ಅಬ್ದುರಹೀಮ್ ರ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿರುವಾಗ ಮತ್ತು ಅವರ ಅಸಹಜ ವರ್ತನೆಯ ಪಾತ್ರವೂ ಇದರ ಹಿಂದಿದೆ ಎಂಬ ವರದಿಗಳೂ ಇರುವಾಗ, ಇಲ್ಲೇ ಕುಳಿತು ನಾವು ಜಡ್ಜ್ ಳಾಗುವುದು ಬೇಡ. ಅಂಥ ಸೌದ್ ಕುಟುಂಬದ ರಾಜಕುಮಾರನನ್ನೇ ಬಿಡದ ಮತ್ತು ಮೂರೇ ವರ್ಷಗಳೊಳಗೆ ಗಲ್ಲಿಗೇರಿಸಿದ ನ್ಯಾಯ ವ್ಯವಸ್ಥೆಯಿರುವಲ್ಲಿ ಅಬ್ದುಲ್ ರಹೀಮ್ 18 ವರ್ಷಗಳಷ್ಟು ದೀರ್ಘಾವಧಿಯನ್ನು ಪಡೆದರು ಎಂಬುದೇ ಸಮಾಧಾನಕರ. ಅವರ ಮುಂದಿನ ಬದುಕು ಸುಖಮಯವಾಗಿರಲಿ.

ಏ ಕೆ ಕುಕ್ಕಿಲ

LEAVE A REPLY

Please enter your comment!
Please enter your name here