ಪೌರತ್ವ ಕಾಯ್ದೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಅಬುಧಾಬಿಯಲ್ಲಿರುವ ಭಾರತೀಯರಿಂದ ರಾಯಭಾರಿಗೆ ಮನವಿ

0
899

ಸನ್ಮಾರ್ಗ ವಾರ್ತೆ-
ದುಬೈ: ವಿವಾದಾತ್ಮಕ ಪೌರತ್ವ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಯುಎಇಯ ಭಾರತೀಯ ವಲಸಿಗರ ಗುಂಪು ಅಬುಧಾಬಿಯ ಭಾರತೀಯ ರಾಯಭಾರ ಕಚೇರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯೊಂದಿಗೆ ವಿರೋಧ ವ್ಯಕ್ತಪಡಿಸಲು ಭಾರತೀಯ ಸಮುದಾಯದ ಸುಮಾರು 30 ಮಂದಿ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಭೇಟಿಯಾದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ, ಉಳಿದ ಎಲ್ಲಾ ಧರ್ಮಗಳ ಅನುಯಾಯಿಗಳಿಗೆ ಪೌರತ್ವ ನೀಡುವ ಈ ಕಾನೂನು ಸಮಾಜವನ್ನು ವಿಭಜಿಸುತ್ತದೆ ಎಂದು ಸಮುದಾಯದ ಸದಸ್ಯರು ವಾದಿಸಿದ್ದಾರೆ.

ಗಲ್ಫ್ ನ್ಯೂಸ್ ಜೊತೆ ಮಾತನಾಡಿದ ಅಬುಧಾಬಿ ನಿವಾಸಿ ಅಬ್ದುಲ್ಲಾ ಖಾನ್, “ಭಾರತದಲ್ಲಿ ನನ್ನ ಕುಟುಂಬದ ಬಗ್ಗೆ ನನಗೆ ಚಿಂತೆ ಇದೆ. ಉತ್ತರ ಪ್ರದೇಶದ ಅಜಮ್‌ಗಡದಲ್ಲಿರುವ ನನ್ನ ಕುಟುಂಬವನ್ನು ಸಂಪರ್ಕಿಸಲು ಯತ್ನಿಸಿದೆ. ಆದರೆ ಸಿಎಎ ವಿರುದ್ಧದ ಪ್ರತಿಭಟನೆಯ ನಂತರ ಸಂವಹನ ಮಾರ್ಗಗಳು ಮತ್ತು ಇಂಟರ್‌ನೆಟ್‌ ಸ್ಥಗಿತಗೊಂಡಿದ್ದರಿಂದ ಅದು ಯಶಸ್ವಿಯಾಗಲಿಲ್ಲ ಎಂದರು.

ಮತ್ತೊಬ್ಬ ಅಬುಧಾಬಿ ನಿವಾಸಿ ಸಂಜಯ್ ಮನೋಹರ್ ಪಾಂಚಾ ಅವರು, “ಹಿಂದೂಗಳು, ಮುಸ್ಲಿಮರು, ಸಿಖ್ಖರು ಅಥವಾ ಕ್ರಿಶ್ಚಿಯನ್ನರು ಯಾರೇ ಆಗಿರಲಿ, ಭಾರತದ ಸಂವಿಧಾನದ ಪ್ರಕಾರ ಎಲ್ಲ ಜನರಿಗೆ ಸಮಾನತೆಯನ್ನು ನೀಡಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದರು.