ಸನ್ಮಾರ್ಗ ವಾರ್ತೆ
ಹಮಾಸ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷಕ್ಕೆ ತಿಂಗಳುಗಳೇ ಸಂದಿವೆ. ಈ ನಡುವೆ ರಾಜ್ಯದಲ್ಲಿ ಪ್ಯಾಲೆಸ್ತೀನ್ ಜನರ ಪರವಾಗಿ ಶಾಂತಿಯುತವಾಗಿ ನಡೆಸುವ ಪ್ರತಿಭಟನೆಗಳ ಮೇಲೆ ಪೊಲೀಸ್ ಇಲಾಖೆ ದಾಖಲಿಸಿಸುತ್ತಿರುವ ಎಫ್ಐಆರ್ಗಳನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತರಾದ ಯೋಗೇಂದ್ರ ಯಾದವ್ ನೇತೃತ್ವದ ಸ್ವರಾಜ್ ಇಂಡಿಯಾ ಪಕ್ಷದ ಬೆಂಗಳೂರು ಘಟಕವು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಪ್ಯಾಲೆಸ್ತೀನ್ನ ವಿಚಾರವಾಗಿ ಕರ್ನಾಟಕದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸ್ ಇಲಾಖೆಯು ನಡೆಸುತ್ತಿರುವ ದಬ್ಬಾಳಿಕೆ ಮತ್ತು ನಿಗ್ರಹದ ಇತ್ತೀಚಿನ ವರದಿಗಳ ಬಗ್ಗೆ ಆಳವಾದ ಕಳವಳ ವ್ಯಕ್ತವಾಗಿದೆ. ಹಾಗಾಗಿ, ಈ ವಿಚಾರದಲ್ಲಿ ನಿಮಗೆ ಪತ್ರ ಬರೆಯುತ್ತಿದ್ದೇವೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಬೆಂಗಳೂರು ಘಟಕವು ಮುಖ್ಯಮಂತ್ರಿಯವರಿಗೆ ತಿಳಿಸಿದೆ.
ಪ್ಯಾಲೆಸ್ತೀನ್ನ ಪರವಾಗಿ ಶಾಂತಿಯುತ ಸಭೆ ನಡೆಸುವುದು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಪ್ರಜಾಪ್ರಭುತ್ವವು ನಮಗೆ ನೀಡಿದ ಮೂಲಭೂತ ಹಕ್ಕು. ಈ ಹಕ್ಕುಗಳನ್ನು ಹತ್ತಿಕ್ಕುವ ಯಾವುದೇ ಪ್ರಯತ್ನಗಳು ನಿರಾಶಾದಾಯಕ ಮತ್ತು ನಮ್ಮ ಪ್ರಜಾಪ್ರಭುತ್ವದ ಬೆಳವಣಿಗೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿವೆ ಎಂದು ತಿಳಿಸಿದೆ.
ಪ್ಯಾಲೆಸ್ತೀನ್ಗೆ ಬೆಂಬಲ ವ್ಯಕ್ತಪಡಿಸಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರು ಬರೆದಿರುವ ಸುದೀರ್ಘವಾದ ಲೇಖನವನ್ನು ನಾವು ಕೂಡ ಕುತೂಹಲದಿಂದ ಓದಿದ್ದೇವೆ. ವೈವಿಧ್ಯಮಯ ಅಭಿಪ್ರಾಯಗಳನ್ನು ಗೌರವಿಸುವುದು ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಮುಕ್ತ ಸಂವಾದವನ್ನು ಪ್ರೋತ್ಸಾಹಿಸುವುದು ಈಗಿನ ಅತ್ಯಗತ್ಯ. ಪ್ರತೀಕಾರದ ಭಯವಿಲ್ಲದೆ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಕ್ತವಾಗಿ ಭಾವಿಸುವ ವಾತಾವರಣವನ್ನು ಬೆಳೆಸುವುದು ಸರ್ಕಾರದ ಜವಾಬ್ದಾರಿ.
ಆದರೆ ಕರ್ನಾಟಕದಲ್ಲಿ ‘ಪೊಲೀಸ್ ರಾಜ್’ನ ವರದಿಗಳು ಮತ್ತು ಶಾಂತಿಯುತ ಪ್ರತಿಭಟನಾಕಾರರನ್ನು ನಿಗ್ರಹಿಸುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಈ ಪರಿಸ್ಥಿತಿಯನ್ನು ತಾವುಗಳು ಪರಿಶೀಲಿಸಬೇಕು ಮತ್ತು ನಮ್ಮ ಸಂವಿಧಾನವು ಪ್ರತಿಪಾದಿಸಿರುವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಸ್ವರಾಜ್ ಇಂಡಿಯಾ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಪತ್ರದ ಮೂಲಕ ಆಗ್ರಹಿಸಿದೆ.