ಸನ್ಮಾರ್ಗ ವಾರ್ತೆ
ಮುಂಬೈ,ಸೆ.30: ಠಾಕ್ರೆ ಕುಟುಂಬದಿಂದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆದಿತ್ಯ ಠಾಕ್ರೆ ಸಜ್ಜಾಗಿದ್ದಾರೆ. ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆಯ ಹಿರಿಯ ಮಗ ಆದಿತ್ಯ ಠಾಕ್ರೆವರ್ಲಿ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಬಾಳಾಠಾಕ್ರೆಯ ಕುಟುಂಬದಿಂದ ಇದೇ ಮೊದಲ ಸಲ ಓರ್ವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ.
ವರ್ಲಿಯ ಹಾಲಿ ಶಾಸಕ ಸುನೀಲ್ ಶಿಂಧೆ ಆದಿತ್ಯರಿಗಾಗಿ ಸ್ಥಾನ ಬಿಟ್ಟು ಕೊಡಲಿದ್ದಾರೆ. ಶಿವಸೇನೆಯ ಸುರಕ್ಷಿತ ಕ್ಷೇತ್ರವೂ ಇದಾಗಿದ್ದು, 2014ರಲ್ಲಿ ಸುನೀಲ್ ಶಿಂಧೆ ಎನ್ಸಿಪಿ ನಾಯಕ ಸಚಿನ್ ಅಹಿರ್ ಅವರನ್ನು ಸೋಲಿಸಿದ್ದರು. ಅಹಿರ್ ಇತ್ತೀಚೆಗೆ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಆದಿತ್ಯ ಠಾಕ್ರೆಗೆ ಸುಲಭ ಗೆಲುವು ಸಿಗಲಿದೆ ಎನ್ನಲಾಗುತ್ತಿದೆ.
ಎನ್ಡಿಎ ಪುನಃ ಅಧಿಕಾರಕ್ಕೆ ಬಂದರೆ ಆದಿತ್ಯ ಠಾಕ್ರೆಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಶಿವಸೇನೆ ಹೊಂದಿದೆ. ಕಳೆದ ಜುಲೈಯಲ್ಲಿ ಆದಿತ್ಯ ಠಾಕ್ರೆ ಮಹಾರಾಷ್ಟ್ರದಲ್ಲಿ ಜನ್ ಆಶೀರ್ವಾದ್ ಯಾತ್ರೆ ಕೈಗೊಂಡಿದ್ದರು. ಲೋಕಸಭೆಯ ಚುನಾವಣೆಯಲ್ಲಿ ಬೆಂಬಲಿಸಿದ ಮತದಾರರಿಗೆ ಈ ಯಾತ್ರೆಯಲ್ಲಿ ಅವರು ಕೃತಜ್ಞತೆಯನ್ನೂ ಸಲ್ಲಿಸಿದ್ದರು.












