ಸನ್ಮಾರ್ಗ ವಾರ್ತೆ
ಕೇರಳ, ಮಾ. 9: ಅದಿವಾಸಿ (ಬುಡಕಟ್ಟು) ಯುವಕ ಮತ್ತು ಮಹಿಳೆ ರಾತ್ರೆಯಲ್ಲಿ ಬಂಡೆ ಕಲ್ಲುಗಳ ಎಡೆಯಲ್ಲಿ ಮಲಗುತ್ತಿದ್ದಾರೆ. ವಯನಾಡ್ ಮೇಪ್ಪಡಿ ಪಂಚಾಯತಿನ ಎಂಟನೆ ವಾರ್ಡಿನ ಕುಪ್ಪುಚ್ಚಿ ಪಣಿಯ ಕಾಲನಿಯ ಸತೀಶ (27) ಮತ್ತು ಮಿನಿ (32) ಹೊಳೆಯ ನಡುವಿನ ಬಂಡೆಯ ಎಡೆಯಲ್ಲಿ ಎರಡು ವಾರಗಳಿಂದ ವಾಸ ಹೂಡಿದ್ದಾರೆ. ಮಿನಿ ವಿವಾಹಿತಳಾಗಿದ್ದು ಹನ್ನೊಂದು ಮತ್ತು ಎಂಟು ವರ್ಷದ ಇಬ್ಬರು ಮಕ್ಕಳಿದ್ದಾರೆ. ಸತೀಶನ್ ಅವಿವಾಹಿತ. ಇಬ್ಬರೂ ಪರಸ್ಪರ ಪ್ರೀತಿಸಿ ಒಟ್ಟಿಗೆ ಜೀವಿಸಲು ತೀರ್ಮಾನಿಸಿದ್ದರಿಂದ ಸಂಬಂಧಿಕರು ಕೋಪಗೊಂಡಿದ್ದರು. ನಂತರ ಅವರಿಗೆ ಕಾಲನಿಯಲ್ಲಿ ಜೊತೆಯಾಗಿರಲು ಬಿಡಲಿಲ್ಲ. ಆದ್ದರಿಂದ ಹೊಳೆಯ ಬಂಡೆಕಲ್ಲಿನ ನಡುವೆ ವಾಸ ಮಾಡುತ್ತಿದ್ದಾರೆ. ಇದು ಕಾಲನಿಯ ಕೆಲವರಿಗೆ ಮಾತ್ರ ಗೊತ್ತಿದೆ. ಬಂಡೆಯ ಮೇಲೆ ಒಲೆಮಾಡಿ ಆಹಾರ ಬೇಯಿಸುತ್ತಿದ್ದಾರೆ. ಕೆಲವು ಪಾತ್ರೆಗಳು, ಚಾಪೆ, ಹೊದಿಕೆ ಇವಿಷ್ಟು ಇವರ ಬಳಿ ಇವೆ. ಮಿನಿಯ ಇಬ್ಬರು ಮಕ್ಕಳು ಈಗಲೂ ತಾಯಿಯೊಂದಿಗಿದ್ದಾರೆ.
ರಾತ್ರೆಯಲ್ಲಿ ಬಂಡೆಕಲ್ಲಿನ ಮೇಲೆ ಬೆಂಕಿ ಉರಿಯುವುದನ್ನು ಕೆಲವರು ನೋಡಿದ್ದಾರೆ. ನಂತರ ಅಲ್ಲಿ ಯಾರೋ ವಾಸಮಾಡಿಕೊಂಡಿದ್ದಾರೆ ಎಂಬ ವಿಚಾರ ಹೊರಗೆ ತಿಳಿದು ಬಂದಿತ್ತು. ತೋಳಗಳು ಇಲ್ಲಿ ವಿಹರಿಸುತ್ತವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬೇರೆಲ್ಲಿಗೂ ಹೋಗಲು ಸ್ಥಳವಿಲ್ಲದ್ದರಿಂದ ಅವರು ಇಲ್ಲಿದ್ದಾರೆ. ಸತೀಶನ್ನ ತಂದೆ ತಾಯಿ ಈ ಹಿಂದೆಯೇ ಮೃತಪಟ್ಟಿದ್ದರು. ಸಹೋದರಿಯ ಮನೆಯಲ್ಲಿ ಆತ ವಾಸಿಸುತ್ತಿದ್ದ. ಕಾಲನಿಗೆ ಮರಳಿದರೆ ತಾವಿಬ್ಬರೂ ಜೊತೆಯಾಗಿ ಇರಲು ಬಿಡಲಾರರು ಎಂದು ಇವರು ಹೇಳುತ್ತಿದ್ದಾರೆ.












