ಅಹ್ಮದಾಬಾದ್, ಜು. 2: ಅಹ್ಮದಾಬಾದಿನ ಮುಸ್ಲಿಮರು ಜಗನ್ನಾಥ ಮಂದಿರಕ್ಕೆ ಬೆಳ್ಳಿರಥವನ್ನು ಅರ್ಪಿಸಿದ್ದಾರೆ. ಜಗನ್ನಾಥನ ರಥಯಾತ್ರೆಯ ಮೊದಲು ಮುಸ್ಲಿಮರು ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ಳಿಯ ರಥವನ್ನು ಅರ್ಪಿಸಿದ್ದು ಕಳೆದ ಹಲವು ವರ್ಷಗಳಿಂದ ಇಲ್ಲಿನ ಮುಸ್ಲಿಮರು ಬೆಳ್ಳಿ ರಥ ಅರ್ಪಿಸುತ್ತಾ ಬಂದಿದ್ದಾರೆ ಹಾಗೂ ಜಗನ್ನಾಥ ರಥಯಾತ್ರೆಗೆ ಬೆಂಬಲವನ್ನು ನೀಡುತ್ತಿದ್ದಾರೆ.
ಇಂಡಿಯ ಟಿವಿ ನ್ಯೂಸ್ ಡಾಟ್ ಕಾಮ್ ಪ್ರಕಾರ, ಪ್ರತಿ ವರ್ಷದಂತೆ ರವಿವಾರ ಡೋಲು ಬಾರಿಸುತ್ತಾ ಮುಸ್ಲಿಂ ಸಮುದಾಯದ ಜನರು ನಗರದ ಕೆಲವು ರಸ್ತೆಗಳಲ್ಲಿ ಸಾಗಿ ದೇವಸ್ಥಾನದ ಅರ್ಚಕರಿಗೆ ಬೆಳ್ಳಿಯ ರಥವನ್ನ ನೀಡಿದರು. ಗೋಧ್ರ ಘಟನೆಯ ನಂತರ ನಾವು ಪ್ರತಿವರ್ಷ ಬೆಳ್ಳಿ ರಥವನ್ನು ನೀಡುತ್ತಾ ಬಂದಿದ್ದೇವೆ ಎಂದು ಮುಸ್ಲಿಂ ಸಮುದಾಯದ ನಾಯಕ ರವೂಫ್ ಶೇಕ್ ತಿಳಿಸಿದರು. ಮುಸ್ಲಿಮರು ಮೆರವಣಿಗೆಯಲ್ಲಿ ಬರುವಾಗ ಆತ್ಮೀಯ ಸ್ವಾಗತ ನೀಡಲಾಯಿತು. ಮೆರವಣಿಗೆಯಲ್ಲಿ ಬಂದವರಿಗೆ ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಜಗನ್ನಾಥ ರಥಯಾತ್ರೆಗೆ ಎಂದಿನಂತೆ ಈ ಸಲವೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.












