ಹಾಪುರ್: ಇಲ್ಲಿನ ಮಸೀದಿಯೊಂದರ ಗೋಡೆ ಕುಸಿದು ಇಬ್ಬರು ಮೃತಪಟ್ಟು ಹತ್ತು ಮಂದಿ ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿಯಲ್ಲಿ ಕೆಲವು ಮಂದಿ ಇರಬಹುದು ಎಂದು ಹೇಳಲಾಗುತ್ತಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.
ತಾಕಿಯ ವಾಲಿ ಮಸೀದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನ ಝುಹರ್ ನಮಾಝ್ ಮಾಡುತ್ತಿದ್ದಾಗ ಜನರ ಮೇಲೆ ಮಸೀದಿಯ ಒಂದು ಗೋಡೆ ಕುಸಿದು ಬಿತ್ತು. ಗೋಡೆಯಡಿಗೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗೋಡೆಯ ಅವಶೇಷಗಳು ಬಿದ್ದು ಗಾಯಗೊಂಡರು. ದುರಂತದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ನಂತರ ರಕ್ಷಣಾ ಕಾರ್ಯ ಆರಂಭಿಸಲಾಯಿತು. ಮಸೀದಿಯ ದುರಸ್ತಿ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ರಹಿಸುಲ್ ಹಸನ್ ಮತ್ತು ಮಾಜಿದ್ ಗೋಡೆಯಡಿಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.












