ಮೈಕ್ರೋಸಾಫ್ಟ್, ಅಮೆಜಾನ್ ಸಹಿತ ದೈತ್ಯ ಕಂಪನಿಗಳಿಂದ ಇಸ್ರೇಲ್‌ಗೆ ನೆರವು: ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗ

0
1176

ಸನ್ಮಾರ್ಗ ವಾರ್ತೆ

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗ ಹತ್ಯೆಗೆ ಬೆಂಬಲವಾಗಿ ಯಾವೆಲ್ಲ ಕಾರ್ಪೊರೇಟ್ ಕಂಪನಿಗಳು ನಿಂತಿವೆ ಅನ್ನುವ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ. ಗಾಝಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತಂತೆ ಅಧ್ಯಯನ ನಡೆಸಿದ ವಿಶ್ವಸಂಸ್ಥೆಯ ವರದಿಗಾರರು ಈ ಕುರಿತಂತೆ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದಾರೆ.

ಒಟ್ಟು 48 ಕಾರ್ಪೊರೇಟ್ ಕಂಪನಿಗಳು ಇಸ್ರೇಲಿನ ಜನಾಂಗ ಹತ್ಯೆಗೆ ಬೆಂಬಲವಾಗಿ ನಿಂತಿವೆ ಎಂದು ಫ್ರಾನ್ಸಿಸ್ ಕಾ ಅಲ್ ಬನೀಸ್ ವರದಿಯು ಹೇಳುತ್ತದೆ.

ಅಮೆರಿಕಾದ ಐಟಿ ದಿಗ್ಗಜ ಕಂಪನಿಯಾದ ಮೈಕ್ರೋಸಾಫ್ಟ್ ಇಸ್ರೇಲ್‌ಗೆ ಬೆಂಬಲವಾಗಿ ನಿಂತ ಕಂಪನಿಗಳ ಪೈಕಿ ಮುಂಚೂಣಿಯಲ್ಲಿದೆ. ಗೂಗಲ್ ನ ಮಾತೃ ಕಂಪನಿಯಾದ ಅಲ್ಫಬೇಟ್ ಮತ್ತು ಅಮೆಜಾನ್ ಮುಂತಾದ ಪ್ರಮುಖ ಕಂಪನಿಗಳು ಕೂಡ ಇಸ್ರೇಲ್‌ಗೆ ಬೆಂಬಲ ನೀಡಿವೆ. ಈ ವರದಿಯನ್ನು ತಯಾರಿಸುವುದಕ್ಕಾಗಿ ಸಾವಿರದಷ್ಟು ಕಂಪನಿಗಳ ಡಾಟಾಬೇಸನ್ನು ತಯಾರಿಸಲಾಗಿದೆ.

ಇಸ್ರೇಲ್ ತಯಾರಿಸುತ್ತಿರುವ ಎಫ್ 35 ವಿಮಾನಕ್ಕೆ ಬೇಕಾದ ಕಚ್ಚಾ ವಸ್ತುಗಳು ಸಹಿತ ಎಲ್ಲವನ್ನೂ ಒದಗಿಸುತ್ತಿರುವುದು ಅಮೆರಿಕಾದ ಲಾಕ್ ಫೆಡ್ ಮಾರ್ಟಿನ್ ಎಂಬ ಕಂಪನಿಯಾಗಿದೆ. ರೊಬೆಟಿಕ್ ಶಸ್ತ್ರಾಸ್ರಗಳನ್ನು ನಿರ್ಮಿಸುವುದಕ್ಕಾಗಿ ಇಸ್ರೇಲ್‌ಗೆ ಜಪಾನೀಸ್ ಕಂಪನಿಯಾದ ಫಾನುಕ್ ಕಾರ್ಪೊರೇಷನ್ ಇಸ್ರೇಲ್‌ಗೆ ಸಹಾಯ ಮಾಡುತ್ತಿದೆ. ಇಟಲಿಯ ಕಂಪನಿಯಾದ ಲಿಯೋನಾರ್ಡೋ ಇಸ್ರೇಲಿಗೆ ಶಸ್ತ್ರಾಸ್ರ ನೆರವನ್ನು ಒದಗಿಸುತ್ತಿದೆ.

ಮೈಕ್ರೋಸಾಫ್ಟ್, ಆಲ್ಫಾಬೆಟ್, ಅಮೆಜಾನ್ ಮುಂತಾದ ಕಂಪನಿಗಳು ತಮ್ಮ ಕ್ಲೌಡ್ ಎ ಐ ತಂತ್ರಜ್ಞಾನವನ್ನು ಉಪಯೋಗಿಸಲು ಇಸ್ರೇಲ್‌ಗೆ ಅನುಮತಿ ನೀಡಿವೆ. ಇಸ್ರೇಲ್ ಸೇನೆಗೆ ಮತ್ತು ಅದರ ಗುಪ್ತಚರ ವಿಭಾಗಕ್ಕೆ ತರಬೇತಿಯನ್ನು ನೀಡುವುದಕ್ಕಾಗಿ ನೆರವಾಗುತ್ತಿರುವುದು ಐಬಿಎಂ ಎಂಬ ಕಂಪನಿಯಾಗಿದೆ.ಗಾಝಾದ ಜನರ ಬಹು ಮಹಡಿ ಕಟ್ಟಡಗಳನ್ನು ಉರುಳಿಸುವುದಕ್ಕಾಗಿ ದಕ್ಷಿಣ ಕೋರಿಯಾದ ಎಚ್ ಡಿ ಹುಂಡಾಯ್ ಮತ್ತು ಸ್ವಿಜರ್ಲ್ಯಾಂಡಿನ ವೋಲ್ವೋ ಗ್ರೂಪ್ ಕಂಪೆನಿಗಳು ಬೃಹತ್ ಯಂತ್ರಗಳನ್ನು ಇಸ್ರೇಲ್‌ಗೆ ನೀಡಿವೆ.

ಇದೇ ವೇಳೆ ಚೀನಾದ ಕಂಪನಿಗಳೂ ಇದರಿಂದ ಹೊರತಾಗಿಲ್ಲ. ಅಲ್ಲಿನ ನುವಯಾನ್ ಎಂಬ ಕಂಪನಿಯು ಇಸ್ರೇಲ್ ನಲ್ಲಿ ಬೃಹತ್ ಆಹಾರ ವಿತರಣಾ ಕಂಪನಿಯಾಗಿ ಗುರುತಿಸಿಕೊಂಡಿದೆ. ಫ್ರಾನ್ಸ್ ನ ನ ಬಿ ಎನ್ ಪಿ ಪರಿಭಾಸ್, ಮತ್ತು ಬ್ರಿಟನ್ನಿನ ಬಾರ್ ಕ್ಲೇಸ್ ಎಂಬ ಕಂಪನಿಗಳು ಇಸ್ರೇಲ್ ನ ಕ್ರೆಡಿಟ್ ರೇಟ್ ಕಡಿಮೆಯಾಗದಂತೆ ನೋಡಿಕೊಳ್ಳಲು ನೆರವಾಗುತ್ತಿವೆ.

ಅಂದಹಾಗೆ ಜನಾಂಗ ಹತ್ಯೆಗೆ ನೆರವಾಗುತ್ತಿರುವ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಂತೂ 21ನೇ ಶತಮಾನ ಕಂಡು ಕೇಳರಿಯದ ಜನಾಂಗ ಹತ್ಯೆಗೆ ಜಗತ್ತಿನ ದೈತ್ಯ ಕಂಪನಿಗಳೆಲ್ಲ ಒಂದಾಗಿ ಇಸ್ರೇಲ್‌ಗೆ ನೆರವಾಗುತ್ತಿವೆ ಎಂಬುದು ಸ್ಪಷ್ಟವಾಗಿದೆ.