ಸುಶೀಲರಿಗೆ ಆಸರೆಯಾದ ಆಯಿಷಾ

0
752

ಸನ್ಮಾರ್ಗ ವಾರ್ತೆ

ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂಜಿ ಅಲಾಬೆ ಎಂಬಲ್ಲಿ , ಅನಾರೋಗ್ಯ ಪೀಡಿತ ಸುಶೀಲ ಎಂಬ ಮಹಿಳೆಗೆ ದಾನಿಗಳ ಸಹಾಯದಿಂದ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನೂಜಿಯಲ್ಲಿ ನಡೆಯಿತು.

ಸುಶೀಲ ಎಂಬವರಿಗೆ ಮನೆ ನಿರ್ಮಾಣಕ್ಕೆ ಕಾರಣವಾದ ಹಿನ್ನೆಲೆ ಮಾನವೀಯತೆಗೆ ಸಾಕ್ಷಿಯಾಗಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿಟ್ ವಿತರಣೆ ಸಂದರ್ಭ ಸುಶೀಲರವರ ಮನೆಗೆ ಭೇಟಿ ನೀಡಿದ ಕೊಳ್ನಾಡು ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಆಯಿಷಾ ಬಾನುರವರು ಸುಶೀಲರ ಕರುಣಾಜನಕ ಸ್ಥಿತಿಗೆ ಮರುಗುತ್ತಾರೆ.

ಪಂಚಾಯತ್ ವತಿಯಿಂದ ಮನೆ ದುರಸ್ಥಿಗೆ ಪ್ರಯತ್ನಿಸಿದಾಗ ಸುಶೀಲರವರು ವಾಸವಿದ್ದ ಮನೆಗೆ ದಾಖಲೆಪತ್ರಗಳು ಇರಲಿಲ್ಲ. ಹೇಗಾದರೂ ಮಾಡಿ ಸುಶೀಲರವರಿಗೆ ವಾಸಯೋಗ್ಯ ಮನೆ ನಿರ್ಮಿಸಬೇಕೆಂದು ಪಣತೊಟ್ಟ ಆಯಿಷಾ ಬಾನು ಹಲವಾರು ದಾನಿಗಳನ್ನು ಭೇಟಿಯಾಗುತ್ತಾರೆ. ಟಾಪ್ ಎನ್ ಟಾಪ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯವರನ್ನು ಭೇಟಿಯಾಗಿ ನೆರವಿಗಾಗಿ ಕ್ರೌಡ್ ಫಂಡಿಂಗ್ ಕೂಡಾ ಮಾಡುತ್ತಾರೆ.

ಈ ಮಧ್ಯೆ ಆಯಿಷಾರವರಿಗೆ ಕೊಳ್ನಾಡುವಿನಿಂದ ಬಾಳೆಪುಣಿಗೆ ವರ್ಗಾವಣೆಯಾಗುತ್ತದೆ. ಆದರೂ, ಪಟ್ಟು ಬಿಡದ ಆಯಿಷಾ ಹ್ಯುಮಾನಿಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗವನ್ನು ಪಡೆದುಕೊಂಡು ತನ್ನ ಯೋಜನೆಯಾದ ಸುಶೀಲರಿಗೊಂದು ಸುಂದರ ಮನೆ ನಿರ್ಮಾಣ ಮಾಡಿ ಹಸ್ತಾಂತರ ಮಾಡುತ್ತಾರೆ.

ಓರ್ವ ಸರಕಾರೀ ನೌಕರರಾಗಿ ಸಾರ್ವಜನಿಕ ರಂಗದಲ್ಲಿ ತನ್ನ ಬದ್ಧತೆಯನ್ನು ತೋರಿಸಿದ ಆಯಿಷಾ ಬಾನು ಕಾರ್ಯ ನಿಜಕ್ಕೂ ಶ್ಲಾಘನೀಯ.