ಉತ್ಬಾ ನೀಡಿದ ದ್ರಾಕ್ಷಿ ಗೊಂಚಲು ಮತ್ತು ಮುತ್‌ಇಮ್ ನೀಡಿದ ಗೋಧಿ

0
2810

ಸನ್ಮಾರ್ಗ ವಾರ್ತೆ

✍️ ಡಾ. ಬದೀಉಝ್ಝಮಾನ್

ಪ್ರವಾದಿ(ಸ)ರು ಅಬೂತಾಲಿಬ್‌ರ ಮರಣದೊಂದಿಗೆ ಮಕ್ಕಾದಲ್ಲಿ ಅನಾಥರಾಗುವ ಸ್ಥಿತಿ ಬಂತು. ಆಗ ಕೆಲವು ದಿನಗಳ ಕಾಲ ಗೋತ್ರದ ಪ್ರಮುಖ ಎಂಬ ನೆಲೆಯಲ್ಲಿ ಅಬೂಲಹಬ್ ಸಂರಕ್ಷಣೆ ನೀಡಿದ್ದ. ಇದನ್ನು ಸಹಿಸದ ಕೆಲವರು ಅದರ ವಿರುದ್ದ ಅಬೂಲಹಬ್‌ನ ಕಿವಿಗೆ ಊದಿದಾಗ ಆತ ಕೂಡಾ ಕೈ ಬಿಟ್ಟನು.

ತನ್ನ ಚಟುವಟಿಕೆಗಳಿಗೆ ಬೆಂಬಲಿಗರು ಬೇಕೆಂದು ಪ್ರವಾದಿವರ್ಯರು(ಸ) ಅನ್ವೇಷಣೆಯಲ್ಲಿ ತೊಡಗಿದಾಗ ತಾಯಿಫ್ ನ ಸಕೀಫ್ ಗೋತ್ರಜರ ನೆನಪು ಮನದಲ್ಲಿ ಮೂಡಿತು. ಅದರಂತೆ ಶುಭ ನಿರೀಕ್ಷೆಯಿಂದ ಝೈದ್ ಬಿನ್ ಹಾರಿಸ್ ಜೊತೆಗೂಡಿ ಹೋದ ಪ್ರವಾದಿವರ್ಯರಿಗೆ(ಸ) ನಿರಾಶೆಯ ಕಾರ್ಮೋಡ ಅಲ್ಲಿ ಕವಿದಿತ್ತು. ಊರ ಪ್ರಮುಖರು ತಮಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಮಕ್ಕಾದ ಕುರೈಶಿ ಪ್ರಮುಖರ ಫಾರ್ಮ್ ಹೌಸ್‌ಗಳು ತಾಯಿಫ್‌ನ ಜನರ ವರಮಾನದ ಪ್ರಮುಖ ಬೆನ್ನೆಲುಬಾಗಿತ್ತು. ಪ್ರವಾದಿವರ್ಯರ (ಸ) ಧರ್ಮವನ್ನು ಬೆಂಬಲಿಸಿ ಕುರೈಶರ ವಿರೋಧ ಕಟ್ಟಿಕೊಳ್ಳಲು ತಾಯಿಫ್‌ನ ಜನತೆ ಸಿದ್ದರಿರಲಿಲ್ಲ. ಆದರೆ ಪ್ರವಾದಿವರ್ಯರು(ಸ) ಕೂಡಲೇ ಹಿಂದಿರುಗಿ ಬರಲು ಸಿದ್ಧರಾಗಲಿಲ್ಲ. ಒಂದು ವೇಳೆ ಜನಸಾಮಾನ್ಯರು ತನ್ನ ಈ ದೌತ್ಯಕ್ಕೆ ಬೆಂಬಲಿಗರಾಗಿ ದೊರೆತರೆ ಎಂಬ ಆಶಾಭಾವ ಅವರಲ್ಲಿ ಮೂಡಿತ್ತು. ಆದರೆ ಅವರು ಆಹ್ವಾನ ಸ್ವೀಕರಿಸುವುದು ಬಿಡಿ. ಅಲ್ಲಿನ ಬೀಡಿ ಪುಂಡ ಪೋಕರಿಗಳು ಪ್ರವಾದಿವರ್ಯರಿಗೆ(ಸ) ಮತ್ತು ಝೈದ್ ಬಿನ್ ಹಾರಿಸ್‌ರ ಮೆಲೆ ಕಲ್ಲೆಸೆಯ ತೊಡಗಿದರು. ಪ್ರವಾದಿವರ್ಯರ(ಸ) ಪವಿತ್ರ ದೇಹವು ರಕ್ತದಿಂದ ತೋಯ್ದಿತ್ತು. ಅಲ್ಲಿಂದ ಅವರು ಒಂದು ದ್ರಾಕ್ಷಾ ತೋಟಕ್ಕೇ ಹೋಗಿ ಪಾರಾದರು. ಆ ತೋಟವು ಮಕ್ಕಾದಲ್ಲಿ ಪ್ರವಾದಿವರ್ಯರ(ಸ) ವಿರೋಧಿ ಪಾಳಯದಲ್ಲಿದ್ದ ಪ್ರಮುಖ ಉತ್ಬಾ ಬಿನ್ ಅಬೀ ರಬೀಅನದ್ದಾಗಿತ್ತು. ರಕ್ತದಲ್ಲಿ ತೋಯ್ದ ಪ್ರವಾದಿ ಮುಹಮ್ಮದ್(ಸ) ಮತ್ತು ಝೈದ್ ಬಿನ್ ಹಾರಿಸ್ ಕುಳಿತಿರುವುದು ತೋಟದ ಒಂದು ಬದಿಯಲ್ಲಿದ್ದ ಉತ್ಬ ಮತ್ತು ಸಹೋದರ ಶೈಬಾ ನೋಡುತ್ತಾರೆ.

ಹಿಂದೊಮ್ಮೆ ಕಅಬಾ ಭವನ ಬಳಿ ಸಾಷ್ಟಾಂಗವೆರಗುತ್ತಿದ್ದ ಪ್ರವಾದಿವರ್ಯರ ಭುಜದ ಮೇಲೆ ಉಕ್ಬ ಬಿನ್ ಅಬೀ ಮುವತ್ವ ಎಂಬ ದುಷ್ಟನು ಒಂಟೆಯ ಕರುಳನ್ನು ನೇತು ಹಾಕಿದಾಗ ಅಟ್ಟಹಾಸದಿಂದ ನಗುತ್ತಿದ್ದವರ ಗುಂಪಿನಲ್ಲಿ ಈ ಉತ್ಬಾ ಕೂಡಾ ಸೇರಿದ್ದ. ಈ ಉತ್ಬ ಸಹಿತ ಅಲ್ಲಿದ್ದವರ ಕುರಿತು ಇವರನ್ನು ನೀನೇ ನೋಡಿಕೋ ಎಂದು ಪ್ರವಾದಿವರ್ಯರು(ಸ) ಶಾಪ ಪ್ರಾರ್ಥನೆ ಮಾಡಿದ್ದರು. ಆದರೂ ಪ್ರವಾದಿವರ್ಯರ(ಸ) ಈಗಿನ ಪರಿಸ್ಥಿತಿ ನೋಡಿ ಅದೇನೋ ಸಹತಾಪ ತೋರಿತು. ಅದ್ದಾಸ್ ಎಂಬ ತನ್ನ ಗುಲಾಮನನ್ನು ಕರೆದು ಒಂದು ಪಾತ್ರೆಯಲ್ಲಿ ಕೆಲವು ದ್ರಾಕ್ಷಿ ಗೊಂಚಲನ್ನಿಟ್ಟು ಪ್ರವಾದಿವರ್ಯ(ಸ)ರಿಗೆ ಕೊಡುವಂತೆ ಉತ್ಬಾ ಹೇಳಿದನು.

ಉತ್ಬಾ ಮತ್ತೆ ಚಿತ್ರದಲ್ಲಿ ಪ್ರತ್ಯಕ್ಷನಾಗುತ್ತಿದ್ದಾನೆ. ಅದು ಬದ್ರ್ ಯುದ್ದಕ್ಕಿಂತ ಸ್ವಲ್ಪ ಮೊದಲಾಗಿತ್ತು. ದೂರದಿಂದ ನೋಡಿದರೆ ಪರಸ್ಪರ ಗುರುತು ಹಿಡಿಯುವಷ್ಟು ದೂರದಲ್ಲಿ ತಂಗಿದ್ದರು. ಪ್ರವಾದಿವರ್ಯರು(ಸ) ನೋಡುವಾಗ ವಿರೋಧಿ ಪಾಳಯದ ಓರ್ವರು ಒಂಟೆಯ ಮೇಲೆ ಕುಳಿತು ಪ್ರತಿಯೋರ್ವರಲ್ಲಿಯೂ ಮಾತನಾಡುತ್ತಿರುವುದು ಗೋಚರವಾಗುತ್ತದೆ. ಇದನ್ನು ಗಮನಿಸಿದ ಪ್ರವಾದಿ ವರ್ಯರು(ಸ) ತನ್ನ ಅನುಯಾಯಿಗಳೊಂದಿಗೆ, “ಆ ಕೆಂಪು ಒಂಟೆಯ ಮೇಲೆ ಕುಳಿತ ವ್ಯಕ್ತಿಯ ಮಾತುಗಳನ್ನು ಅವರು ಅನುಸರಿಸುತ್ತಿದ್ದರೆ ಅವರಿಗೆ ಅದು ಒಳಿತಾಗುತ್ತಿತ್ತು” ಎಂದು ಹೇಳಿದರು. ಆ ವ್ಯಕ್ತಿ ಉತ್ಬಾ ಆಗಿದ್ದ.

ಅಬೂಸುಫ್ಯಾನ್ ಮತ್ತು ಸಂಗಡಿಗರು ಮಕ್ಕಾದಲ್ಲಿ ತಮ್ಮ ವ್ಯಾಪಾರ ಸರಕುಗಳೊಂದಿಗೆ ಯಾವುದೇ ಸಂಘರ್ಷವಿಲ್ಲದೆ ಮರಳಬಾರದೇ? ಎಂದು ಶತ್ರು ಪಾಳಯದ ಕೆಲವರು ಯುಕ್ತಿಯಿಂದ ಚಿಂತಿಸಿದರು. ಈ ಚಿಂತನೆಗೆ ಬೆಂಬಲ ಸೂಚಿಸಿ ಸಂಘರ್ಷದಿಂದ ತಡೆಯುವ ಕೊನೆಯ ಪ್ರಯತ್ನದಲ್ಲಿ ಉತ್ಬಾ ತೊಡಗಿದ್ದ. ಮುಹಮ್ಮದ್ ಸಮಾಜದಲ್ಲಿ ಉಂಟು ಮಾಡಿದ ಬಿರುಕಿನಿಂದ ಕುಪಿತನಾಗಿದ್ದರೂ ಪರಸ್ಪರ ಬಂಧುಗಳು ಯಾಕೆ ರಕ್ತ ಹರಿಸಬೇಕೆಂಬುದು ಅವರ ಚಿಂತೆಯಾಗಿತ್ತು. ಆದರೆ ಅಹಂಕಾರ, ಅಸೂಯೆ ಗರ್ವದಿಂದ ತುಂಬಿದ್ದ ಅಬೂಜಹಲ್‌ನ ವ್ಯಂಗ್ಯದಿಂದ ಕೂಡಿದ ಮಾತುಗಳ ಮುಂದೆ ತನ್ನ ನ್ಯಾಯದ ಮಾತುಗಳು ಸೋತಾಗ ವಿಧಿಯಿಲ್ಲದೆ ಯುದ್ಧಕ್ಕಿಳಿದು ಉತ್ಬಾ ಪ್ರಾಣ ಕಳಕೊಳ್ಳಬೇಕಾಯಿತು.

ಮಾನವೀಯತೆಯ ಗೋದಿಯ ಕಣಜಗಳು
ಬದ್ರ್ ಯುದ್ಧದ ಬಳಿಕ ಯುದ್ಧ ಕೈದಿಗಳು ಮಸೀದಿಯಲ್ಲಿ ಬಂಧಿತರಾಗಿದ್ದರು. ಅವರಲ್ಲಿ ಝುಬೈರ್ ಬಿನ್ ಮುತ್‌ಇಮ್‌ರನ್ನು ನೋಡಿದ ಪ್ರವಾದಿಗಳು ಹೀಗೆ ಹೇಳಿದರು. “ಇವರ ತಂದೆ ಮುತ್‌ಇಮ್ ಜೀವಿಸಿದ್ದಿದ್ದರೆ ಮತ್ತು ಈ ಕೈದಿಗಳನ್ನು ಬಿಡುಗಡೆ ಮಾಡಲು ಹೇಳಿದ್ದರೆ ನಾನು ಎಲ್ಲರನ್ನೂ ಬಂಧಮುಕ್ತ ಗೊಳಿಸುತ್ತಿದ್ದೆ. ಮುತ್‌ಇಮ್ ಕುರೈಶರಲ್ಲಿ ಪ್ರಮುಖರಾಗಿದ್ದರು. ಸತ್ಯವಿಶ್ವಾಸ ಸ್ವೀಕರಿಸದೇ ಮರಣ ಹೊಂದಿದ ಅವರ ಮೇಲೆ ಪ್ರವಾದಿವರ್ಯರು(ಸ) ಇಷ್ಟು ಮಹತ್ವ ನೀಡಲು ಕಾರಣವಿತ್ತು, ಮುಹಮ್ಮದ್ ನನ್ನು ನಮಗೆ ಬಿಟ್ಟು ಕೊಡಬೇಕೆಂದು ಕುರೈಶರು ಬೇಡಿಕೆಯಿಟ್ಟಾಗ ಅದನ್ನು ಅಬೂತಾಲಿಬ್ ತಿರಸ್ಕರಿಸಿದಾಗ ಕುರೈಶರು ಬಹಿಷ್ಕಾರ ಯೋಜನೆ ಹಾಕಿಕೊಂಡರು. ಮುಹಮ್ಮದ್(ಸ) ಅಬೂತಾಲಿಬ್ ಮತ್ತು ಅವರ ಸಂಗಡಿಗರ ಜೊತೆ ವ್ಯಾಪಾರ ವಹಿವಾಟು, ವಿವಾಹ, ಮತ್ತಿತರ ಸಂಬಂಧಗಳನ್ನು ಕಡಿದುಕೊಂಡು ಮುಂದೆ ಹೋಗುವ ಬಹಿಷ್ಕಾರದ ನಿರ್ಧಾರವನ್ನು ದಾರುನ್ನದ್ವಾದ ಸೆಕ್ಯೂರಿಟಿ ಕೌನ್ಸಿಲ್ ಕೈಗೊಂಡಿತು. ಮುಸ್ಲಿಮರ ಜೀವನೋಪಾಯಕ್ಕೆ ಬೇಕಾದ ಸಾಮಗ್ರಿಗಳನ್ನು ಬೇರೆ ದೇಶದವರು ನೀಡಲು ಮುಂದೆ ಬಂದಾಗ ಅವರಿಗೆ ದುಪ್ಪಟ್ಟು ಬೆಲೆ ನೀಡಿ ಅಬೂ ಜಹಲ್ ಖರೀದಿಸಿದನು, ಅವರಲ್ಲಿ ತಿನ್ನಲು ಸರಿಯಾದ ಆಹಾರವಿಲ್ಲದೆ ಅವರು ಎಲೆಗಳನ್ನು ತಿಂದು ಬದುಕುವ ಪರಿಸ್ಥಿತಿ ನಿರ್ಮಾಣವಾಯಿತು.

ಅಂತಹಾ ಸಂದಿಗ್ಧ ಸಮಯದಲ್ಲಿ ಮುಸ್ಲಿಮರಿಗೆ ನೆರವಿನ ಹಸ್ತವಾಗಿ ಮುತ್‌ಇಮ್ ಬಿನ್ ಅದಿಯ್ಯ್ ಬಂದಿದ್ದರು. ರಾತ್ರಿ ಹೊತ್ತು ಅವರು ವಾಹನದಲ್ಲಿ ಮುಸ್ಲಿಮರಿಗೆ ಆಹಾರ ಧಾನ್ಯಗಳನ್ನು ತಲುಪಿಸುತ್ತಿ ದ್ದರು. ಒಂದೂವರೆ ವರ್ಷದವರೆಗಿನ ಬಹಿಷ್ಕಾರವನ್ನು ತೆಗೆದು ಹಾಕಲು ಲಾಬಿ ನಡೆಸಿದವರಲ್ಲಿ ಮುತ್‌ಇಮ್ ಕೂಡಾ ಪ್ರಮುಖರಾಗಿದ್ದರು. ತಾಇಫ್‌ನಿಂದ ಮರಳಿದಾಗ ಇನ್ನು ಮುಂದಿನ ದಾರಿ ಏನೆಂದು ಝೈದ್ ಚಿಂತಿತರಾಗಿ ಕೇಳಿದಾಗ ಅಲ್ಲಾಹನು ಮುಂದಿನ ದಾರಿ ತೋರುವನು ಎಂದು ಉತ್ತರಿಸಿ ಸಮಾಧಾನಿಸಿದ್ದರು. ಆಗ ಅಲ್ಲಿಂದ ಮದೀನಾದ ತನಕ ಪ್ರವಾದಿವರ್ಯರಿಗೆ ಮುತ್‌ಇಮ್‌ರವರು ಅಭಯ ನೀಡಿದ್ದರು. ಸತ್ಯವಿಶ್ವಾಸ ಸ್ವೀಕರಿಸದೆ ಬದ್ರ್ ಯುದ್ದಕ್ಕಿಂತ ಸ್ವಲ್ಪ ಮುಂಚೆ ಅವರು ನಿಧನರಾಗಿದ್ದರು.

ಲೋಕದಲ್ಲಿ ನ್ಯಾಯದ ಸಂಸ್ಥಾಪನೆಗೆ ಮತ್ತು ಮಾನವಕುಲಕ್ಕೆ ಶಾಂತಿಯುತವಾದ ಬದುಕನ್ನು ನೀಡಲು ಸೃಷ್ಟಿಕರ್ತನಾದ ಅಲ್ಲಾಹನೇ ಮನುಷ್ಯರಿಗೆ ಇಸ್ಲಾಮ್ ಧರ್ಮವನ್ನು ನೀಡಿರುತ್ತಾನೆ. ಮಾನವರೆಲ್ಲರೂ ಸೃಷ್ಟಿಸಲ್ಪಟ್ಟಿರುವುದು ದೈವಿಕ ನಿಯಮಾನುಸಾರ. ನ್ಯಾಯ ನೀತಿ ಸಂಸ್ಥಾಪನೆಯಲ್ಲಿ ಇಸ್ಲಾಮಿನ ಭಾಗವಾಗದೇ ಇದ್ದವರು ಶತ್ರು ಪಾಳಯದಲ್ಲಿದ್ದರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ ಎಂಬುದು ಅಲ್ಲಾಹನ ನಿರ್ಧಾರವಾಗಿರುತ್ತದೆ. ಅದ್ದರಿಂದ ಎಲ್ಲರನ್ನೂ ನಮ್ಮ ದೌತ್ಯದ ಭಾಗವಾಗಿಸಲು ಅಥವಾ ಅದು ಸಾಧ್ಯವಲ್ಲವೆಂದಾದರೆ ಸಾಧ್ಯವಿರುವವರ ನೆರವು ಪಡೆಯಲು ಶ್ರಮಿಸಿರಿ ಎಂಬುದು ಪ್ರವಾದಿವರ್ಯರ(ಸ) ಮಾದರಿಯಾಗಿದೆ. ಈ ರೀತಿ ಸಹಾಯ ಮಾಡಲು ಪ್ರಯತ್ನಿಸಿದವರಲ್ಲಿ ಹಲವರು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.