ಮದ್ಯ ಮುಕ್ತ ಸಮಾಜ; ಪ್ರವಾದಿ ಮುಹಮ್ಮದ್(ಸ)ರ ಸಕಾರಾತ್ಮಕ ಹೆಜ್ಜೆಗಳು

0
594

ಸನ್ಮಾರ್ಗ ವಾರ್ತೆ

✍️ ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್

ಮಾದಕ ವ್ಯಸನಗಳು ಸಮಾಜಕ್ಕೆ ಅಂಟಿದ ಪೀಡೆ. ಇದನ್ನು ಹೋಗಲಾಡಿಸುವುದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಅಮಲು ಪದಾರ್ಥಗಳನ್ನು ಸೇವಿಸುವ ವ್ಯಕ್ತಿ ಮಾತ್ರ ಖಿನ್ನತೆಗೆ ಒಳಗಾಗುವುದಲ್ಲ ಬದಲಾಗಿ ಅವನ ಕುಟುಂಬ, ಪರಿಸರ ಕೂಡ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಹಲವಾರು ತೊಂದರೆಗಳನ್ನು ನಿತ್ಯವೂ ಎದುರಿಸಬೇಕಾಗುತ್ತದೆ. ಮದ್ಯಪಾನದಿಂದ ಹೆತ್ತವರು, ಮಕ್ಕಳು ಸಂಕಷ್ಟಕ್ಕೊಳಗಾಗುವುದಲ್ಲದೆ ಸಮಾಜದಲ್ಲಿ ಗೌರವವನ್ನೂ ಕಳೆದುಕೊಳ್ಳುತ್ತಾರೆ.

ಇಂದು, ಮಾದಕ ವ್ಯಸನದ ವ್ಯವಹಾರ ಮತ್ತು ಉಪಯೋಗ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಕಾನೂನಿನ ಕೈ ಮೀರಿ ಬೆಳೆದಿದೆ. ಮದ್ಯವು ಎಲ್ಲಾ ರೀತಿಯ ಕೆಡುಕಿನ ಮೂಲವಾಗಿರುವುದರಿಂದ ಅದನ್ನು ಹೋಗಲಾಡಿಸಲು ಒಂದು ಜನಾಂದೋಲನದ ಅಗತ್ಯವಿದೆ. ಅದಕ್ಕಾಗಿ ನಾವೆಲ್ಲರೂ ದಿಟ್ಟ ಹೆಜ್ಜೆ ಇಡಬೇಕಾದದ್ದು ಇಂದಿನ ಅಗತ್ಯ.

ಈ ದುರಂತವನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಇತ್ತೀಚೆಗೆ ಹಲವಾರು ಧಾರ್ಮಿಕ ನಾಯಕರು ಹೋರಾಟಗಳನ್ನು ಮಾಡಿದ್ದರೂ ಅಷ್ಟು ಯಶಸ್ಸು ಕಾಣಲಿಲ್ಲ.

ಆದರೆ, ಮದ್ಯಪಾನ ಮತ್ತು ಮಾದಕ ಪದಾರ್ಥಗಳ ಉಪಯೋಗದ ವಿರುದ್ಧ ಸಾವಿರದ ನಾಲ್ಕುನೂರು ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್(ಸ) ಕೈಗೊಂಡಿರುವ ಸಕಾರಾತ್ಮಕ ಹೆಜ್ಜೆಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ.

ಪ್ರವಾದಿ ಮುಹಮ್ಮದ್(ಸ)ರು ‘ಮದ್ಯದ ಅಮಲು ಮನುಷ್ಯನಿಗೆ ವಿಶಿಷ್ಟ ರೀತಿಯಲ್ಲಿ ಮುದವನ್ನು ನೀಡುತ್ತದೆ ಮತ್ತು ಅವರನ್ನು ವಿನಾಶ ಮತ್ತು ಕೇಡಿನತ್ತ ಕೊಂಡೊಯ್ಯುತ್ತದೆ. ಈ ದುರಾಭ್ಯಾಸದಿಂದ ಮುಕ್ತಿ ದೊರೆಯವುದು ಕಷ್ಟ. ಇದೊಂದು ಹೊಲಸು ಪೈಶಾಚಿಕ ಕೃತ್ಯ ಎಂದು ಹೇಳಿದ್ದಾರೆ. ಶೈತಾನನು ಮದ್ಯ ಮತ್ತು ಜೂಜಿನ ಮೂಲಕ ಮನುಷ್ಯರ ನಡುವೆ ವೈರತ್ವವನ್ನು ಉಂಟು ಮಾಡುತ್ತಾನೆ ಎಂದು ಕುರ್‌ಆನ್ ಹೇಳುತ್ತದೆ.

ಪ್ರವಾದಿತ್ವದ ಪೂರ್ವದಲ್ಲಿ ಅರಬ್ ಮರುಭೂಮಿಯಲ್ಲಿ ಮದ್ಯವು ಸಾರ್ವತ್ರಿಕವಾಗಿ ಉಪಯೋಗದಲ್ಲಿದ್ದ ಪಾನೀಯವಾಗಿತ್ತು. ಕೆಲವರಿಗೆ ಅದು ಪ್ರತಿಷ್ಠೆಯ ಸಂಕೇತವಾಗಿಯೂ ಇನ್ನು ಕೆಲವರು ಚಳಿಯನ್ನು ನಿಯಂತ್ರಿಸಲು ಅಥವಾ ತಮ್ಮ ಶಾರೀರಿಕ ನೋವುಗಳನ್ನು ನಿವಾರಿಸಲು ಹಾಗೂ ದೇಹದ ಬಲವರ್ಧನೆಗಾಗಿ ಕುಡಿಯುವವರೂ ಇದ್ದರು. ಪುರುಷರಂತೆ ಸ್ತ್ರೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗಿದ್ದರು. ಸೂಕ್ ಉಕ್ಕಾಝ್ ಎಂಬ ಸಂತೆಗಳಲ್ಲಿ ಮದ್ಯವನ್ನು ಮುಕ್ತವಾಗಿ ವಿತರಿಸಲಾಗುತ್ತಿತ್ತೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ.

ಪ್ರವಾದಿತ್ವದ ನಂತರವೂ ಇಸ್ಲಾಮ್ ಧರ್ಮ ಸ್ವೀಕರಿಸಿದ ಹಲವು ಹಿಂಬಾಲಕರು ಮದ್ಯಪಾನವನ್ನು ತೊರೆದಿರಲಿಲ್ಲ. ಒಮ್ಮೆಗೆ ಅವರನ್ನು ಅವುಗಳಿಂದ ಬಿಡಿಸುವುದು ಅಷ್ಟು ಸುಲಭದ ಕಾರ್ಯವಾಗಿರಲಿಲ್ಲ.

ಮದ್ಯಕ್ಕೆ ಖಮ್ರ್’ ಎಂಬ ಪದವನ್ನು ಕುರ್‌ಆನ್ ಉಪಯೋಗಿಸಿದೆ.ಅಂದರೆ ಬುದ್ಧಿ ಭ್ರಮಣೆಗೊಳಿಸುವ’ ಈ ತರದ ಎಲ್ಲಾ ಪಾನೀಯಗಳು ಹರಾಮ್(ನಿಷಿದ್ಧ) ಆಗಿರುತ್ತದೆ. ಮದ್ಯವನ್ನು ಉಡುಗೊರೆಯಾಗಿಯೂ, ಉಚಿತವಾಗಿಯೂ ಕೊಡುವುದನ್ನು ಪ್ರವಾದಿ ಮುಹಮ್ಮದ್(ಸ) ವಿರೋಧಿಸಿದರು. “ಅದು ಔಷಧಿಯಲ್ಲ; ಅದು ರೋಗ” ಎಂದರು.

ಮದ್ಯವು ಒಂದು ಸಾಮಾಜಿಕ ಪಿಡುಗು ಅದು ಕೆಡುಕಿನ ಮೂಲ, ಅದರಿಂದ ಮುಕ್ತರಾಗಲು ಅರೇಬಿಯಾದ ಸರ್ವ ಜನರಿಗೂ ಪ್ರವಾದಿ ಮುಹಮ್ಮದ್(ಸ)ರು ಕರೆ ಕೊಟ್ಟರು. “ಮದ್ಯಪಾನವನ್ನು ಯಾರು ತ್ಯಜಿಸುವುದಿಲ್ಲವೋ ಅವರೊಂದಿಗೆ ಯುದ್ಧ ಸಾರಿರಿ ಎಂಬ ಕಠಿಣ ನಿಲುವನ್ನು ಪ್ರವಾದಿಯವರು(ಸ) ತಾಳಿದ್ದರು. ಅಮಲಿನಲ್ಲಿರುವವರು ಮಸೀದಿಗೆ ಬರುವುದರಿಂದಲೂ ನಮಾಝ್ ಮಾಡುವುದರಿಂದಲೂ ತಡೆದರು. ಪ್ರವಾದಿ(ಸ) ತನ್ನ ಅಧಿಕಾರದ ಅವಧಿಯಲ್ಲಿ ಮದ್ಯಪಾನಿಗೆ 40 ಛಡಿಯೇಟುಗಳನ್ನು ಶಿಕ್ಷೆಯಾಗಿ ವಿಧಿಸಿದ್ದರು.

ಅಲ್ಲಾಹನು ಹೇಳುತ್ತಾನೆ; “ಮದ್ಯಪಾನ ಮತ್ತು ಜೂಜಾಟದ ಬಗ್ಗೆ ಏನು ಆದೇಶವಿದೆಯೆಂದು ಕೇಳುತ್ತಾರೆ. ಹೇಳಿರಿ, ಅವೆರಡರಲ್ಲೂ ಮಹತ್ತರವಾದ ಕೇಡಿದೆ. ಅವುಗಳಲ್ಲಿ ಜನರಿಗೆ ಕೆಲವು ಪ್ರಯೋಜನಗಳು ಇದ್ದರೂ ಅವುಗಳಿಂದಾಗುವ ಹಾನಿಯೂ ಪ್ರಯೋಜನಗಳಿಗಿಂತ ಬಹಳಷ್ಟು ಹೆಚ್ಚು.” (ಅಲ್‌ಬಕರ: 219)

ಪ್ರವಾದಿ ಮುಹಮ್ಮದ್(ಸ)ರು ಎಲ್ಲಾ ತರದ ಮಾದಕ ಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸಂಪೂರ್ಣವಾಗಿ ನಿಷೇಧಿಸಿದರು. ಪ್ರವಾದಿ ಹೀಗೆಂದರು; “ಅಮಲು ಉಂಟು ಮಾಡುವ ವಸ್ತು ನಿಷಿದ್ಧವಾಗಿದೆ.” (ಮುಸ್ಲಿಮ್)

ಅಲ್ಲಾಹನ ಆಜ್ಞೆಯ ನಂತರ ಅರಬ್ ನಾಡಿನಲ್ಲಿ ಮತ್ತು ಪಟ್ಟಣಗಳಲ್ಲಿ ಶೇಖರಣೆಗೊಂಡಿದ್ದ ಶರಾಬುಗಳು, ವಿವಿಧ ಬಗೆಯ ಅಮಲು ಪದಾರ್ಥಗಳನ್ನು ಅದರ ಕಸುಬುಗಾರರು ಮತ್ತು ವ್ಯಾಪಾರಿಗಳು ಸ್ವಇಚ್ಛೆಯಿಂದ ಚರಂಡಿಗಳಿಗೆ ಚೆಲ್ಲಿದರು. ಅಂದು ಅದು ನದಿಯಂತೆ ಹರಿದಿದ್ದವು ಎಂದು ಪ್ರವಾದಿ ವಚನಗಳಲ್ಲಿ ಕಾಣಲು ಸಾಧ್ಯವಿದೆ.

ಪ್ರವಾದಿ(ಸ) ಹೇಳುತ್ತಾರೆ: “ಅಲ್ಲಾಹನು ಹೇಳಿದ್ದಾನೆ, ಮದ್ಯ ಕುಡಿಯುವವನನ್ನು, ಕುಡಿಸುವವನನ್ನು, ಮಾರುವನನ್ನು, ಖರೀದಿಸುವವನನ್ನು, ಭಟ್ಟಿ ಇಳಿಸುವವನನ್ನು, ಅದಕ್ಕಾಗಿ ಸಹಕರಿಸುವವನನ್ನು, ಹೊತ್ತುಕೊಂಡು ಹೋಗುವವನನ್ನು, ಯಾರಿಗಾಗಿ ಹೊತ್ತೊಯ್ಯಲಾಗುತ್ತದೋ ಅವನನ್ನು ಶಪಿಸಿದ್ದೇನೆ.” (ಇಬ್ನು ಉಮರ್ ವರದಿ)

ಎಷ್ಟರವರೆಗೆ ಪ್ರವಾದಿ(ಸ) ಮದ್ಯ ವಿರೋಧಿ ಆಗಿದ್ದರೆಂದರೆ, ಮದ್ಯಪಾನಕ್ಕೆ ಉಪಯೋಗಿಸಿದ್ದ ಪಾತ್ರೆಗಳನ್ನು ಮರು ಉಪಯೋಗಿಸಬೇಡಿ ಎಂದು ಕರೆ ಕೊಟ್ಟಿದ್ದರು.

ಪ್ರವಾದಿಯವರ(ಸ) ಆಜ್ಞೆಯಿಂದಾಗಿ ಅನುಯಾಯಿಗಳಿಗೆ ಮದ್ಯಪಾನದ ಬಗ್ಗೆ ಎಷ್ಟರ ಮಟ್ಟಿಗೆ ಅಸಹ್ಯ ಉಂಟಾಯಿತೆಂದರೆ ಮದ್ಯವನ್ನು ಚೆಲ್ಲಿದ ಪ್ರದೇಶದಲ್ಲಿ ಬೆಳೆದ ಹಣ್ಣುಗಳನ್ನು ತಿನ್ನಲು ಹಿಂದೇಟು ಹಾಕಿದ್ದರು.

ಅನುಯಾಯಿಗಳಿಗೆ ಮದ್ಯಪಾನದ ಬಗ್ಗೆ ಎಷ್ಟರ ಮಟ್ಟಿಗೆ ಅಸಹ್ಯ ಉಂಟಾಯಿ ತೆಂದರೆ, ಮದ್ಯವನ್ನು ಚೆಲ್ಲಿದ ಪ್ರದೇಶದಲ್ಲಿ ಬೆಳೆದ ಹಣ್ಣುಗಳನ್ನು ತಿನ್ನಲು ಹಿಂದೇಟು ಹಾಕಿದ್ದರು.

ಪ್ರವಾದಿ ಮುಹಮ್ಮದ್ (ಸ) ಅಪಾರವಾಗಿ ಗೌರವಿಸುವ, ಪ್ರೀತಿಸುವ ಅವರ ನುಡಿಗಳಂತೆ ಪಾಲಿಸಿ ನಡೆಯುವ ಅನುಯಾಯಿಗಳು ಅಮಲಿನ ಅಂಶ ಅಣು ಗಾತ್ರದಲ್ಲಿರುವ ಪಾನೀಯವನ್ನು ಕೂಡ ದೂರ ಇಡುತ್ತಾರೆ. ಇಸ್ಲಾಮಿನಲ್ಲಿ ನಿಷಿದ್ಧವಾದ ಪಾನೀಯ ಅದು ಮದ್ಯ ಮತ್ತು ಅಮಲು ಪದಾರ್ಥಗಳು. ಅದನ್ನು ಸೇವಿಸುವವರು ಇಹದಲ್ಲೂ ಪರದಲ್ಲೂ ಅಗೌರವಕ್ಕೆ ಒಳಗಾಗುತ್ತಾರೆ.

ಹಲವಾರು ಮುಸ್ಲಿಂ ರಾಷ್ಟ್ರಗಳು ಅಧಿಕೃತವಾಗಿ ಮದ್ಯ ನಿಷೇಧ ಮಾಡಿದೆ. ಭಾರತದ ಹಲವಾರು ಮುಸ್ಲಿಂ ಏರಿಯಾಗಳಲ್ಲಿ ಕ್ಷೇತ್ರದಲ್ಲಿ, ಮೊಹಲ್ಲಗಳಲ್ಲಿ ಜಮಾಅತ್‌ಗಳಲ್ಲಿ ಮದ್ಯ ಮತ್ತು ಲಹರಿ ಉತ್ಪನ್ನಗಳ ಬಳಕೆಯನ್ನು ಸ್ವಯಂ ನಿಷೇಧಿಸಿದ್ದಾರೆ. ಹಲವು ಮಸೀದಿಗಳು ಮಾದಕ ಮುಕ್ತ ಸಮಾಜಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.

ಹಾಗೆಯೇ, ಇಂದು ಅತೀ ಹೆಚ್ಚು ಮಾದಕ ವ್ಯಸನಿಗಳಾಗಿರುವುದು ಮುಸ್ಲಿಂ ಯುವಕರು ಎನ್ನುವುದು ಖೇದಕರ ಯುವಕರು ಸಂಗತಿ. ಈ ಮಹಾ ಪೀಡೆಯಿಂದ ಯುವ ಸಮೂಹವನ್ನು ಜಾಗೃತರಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ.

ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಆದರ್ಶದಂತೆ ಅಮಲು ಪದಾರ್ಥಗಳ ಬಳಕೆಯ ವಿರುದ್ಧ ಒಂದು ಆಂದೋಲನವಾಗಿ ರೂಪುಗೊಂಡು ಜನಜಾಗೃತಿ ಮೂಡಿಸಲು ನಾವೆಲ್ಲರೂ ‘ಒಂದಾಗಿ ಕೈ ಜೋಡಿಸಬೇಕಾಗಿದೆ.

(ಲೇಖಕರು ಶಿಕ್ಷಕರೂ ಆಗಿದ್ದಾರೆ)