ಎಲ್ಲ ದಾರ್ಶನಿಕರು ನ್ಯಾಯದ ಹರಿಕಾರರು: ಇಲಕಲ್ಲ್ ಸೀರತ್ ಸಮಾವೇಶದಲ್ಲಿ ಡಾ. ಅದಿತಿ ಅಕ್ಕಿ

0
285

ಸನ್ಮಾರ್ಗ ವಾರ್ತೆ

ಇಲಕಲ್ಲ: ಜಗತ್ತಿನಲ್ಲಿ ಬಂದ ಎಲ್ಲ ದಾರ್ಶನಿಕರು ನ್ಯಾಯದ ಹರಿಕಾರರು. ಬುದ್ಧ, ಬಸವ, ಅಂಬೇಡ್ಕರ, ಪೈಗಂಬರ ಮುಹಮ್ಮದ ಎಲ್ಲರೂ ನ್ಯಾಯದ ಸ್ಥಾಪನೆಗೆ ಶ್ರಮಿಸಿದರು ಎಂದು ಡಾ ಅದಿತಿ ಅಕ್ಕಿ ಹೇಳಿದರು.

ಅವರು ಜಮಾಅತೆ ಇಸ್ಲಾಮೀ ಹಿಂದ್ ಇಲಕಲ್ ಮಹಿಳಾ ಘಟಕದ ರಾಜ್ಯವ್ಯಾಪಿ ಅಭಿಯಾನ ನ್ಯಾಯದ ಹರಿಕಾರ ಪೈಗಂಬರ ಮುಹಮ್ಮದ್ ವಿಷಯದ ಮೇಲೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ಮುಂದುವರಿದು ಮಾತನಾಡಿದ ಅವರು ಪೈಗಂಬರ್ ಮುಹಮ್ಮದರ ಕಾಲದಲ್ಲಿ ಕುಲೀನ ಮನೆತನದ ಮಹಿಳೆ ಕಳ್ಳತನ ಶಿಕ್ಷೆಗೆ ಗುರಿಯಾದಾಗ ಸಮಾಜದ ಗಣ್ಯರ ನಿಯೋಗ ಶಿಕ್ಷೆಯಲ್ಲಿ ರಿಯಾಯಿತಿ ತೋರಲು ಹೇಳುತ್ತಾರೆ, ಇದರಿಂದ ಕುಪಿತರಾದ ಮುಹಮ್ಮದ್ ರು ನ್ಯಾಯದ ವಿಷಯದಲ್ಲಿ ತಾರತಮ್ಯ ಮಾಡಿಯೇ ಹಿಂದಿನ ಜನಾಂಗಗಳು ನಾಶವಾದದ್ದು, ಸ್ವತಃ ನನ್ನ ಮಗಳು ಫಾತಿಮಾ ಕದ್ದಿದ್ದರು ಅವಳು ಕೂಡಾ ಶಿಕ್ಷೆಗೆ ಗುರಿಯಾಗುತ್ತಿದ್ದಳು ಎಂದು ಹೇಳುತ್ತಾರೆ. ಈ ರೀತಿಯಾಗಿ ಬಡವ ಶ್ರೀಮಂತ, ಹೆಣ್ಣು ಗಂಡು ಭೇದವಿಲ್ಲದೆ ನ್ಯಾಯವನ್ನು ಸ್ಥಾಪಿಸಿ ಒಂದು ಅತ್ಯುತ್ತಮ ಸಮಾಜ ನಿರ್ಮಾಣ ಮಾಡಿದರು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಸವಿತಾ ಚಲವಾದಿ ಮಾತನಾಡಿ, ಮುಹಮ್ಮದ ಪೈಗಂಬರ್ ರವರು ಮಹಿಳೆಯರು ಶಿಕ್ಷಣ ಪಡೆಯಬೇಕು, ಪ್ರಾಣಿ, ಪಕ್ಷಿಗಳನ್ನು ಹಿಂಸಿಸಬಾರದು ಮತ್ತು ಮಕ್ಕಳು ಮಹಿಳೆಯರು ಮತ್ತು ವೃದ್ದರ ಜೊತೆ ಮೃದುವಾಗಿ ವ್ಯವಹರಿಸಿ ನ್ಯಾಯ ಪಾಲನೆ ಮಾಡಲು ಆದೇಶಿಸಿದ್ದಾರೆ ಎಂದು ಹೇಳಿದರು. ಶ್ರೀಮತಿ ವೈಶಾಲಿ ಘಂಟಿ ಸಂದರ್ಭೋಚಿತವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದ ಆಯಿಶಾ ಪೋತನಾಳ ಅಜ್ಞಾನದ ಅಂಧಕಾರದಲ್ಲಿ ಮುಳಗಿದ್ದ ಒಂದು ಸಮಾಜವನ್ನು ಇಡೀ ಜಗತ್ತಿಗೆ ನ್ಯಾಯ ಸ್ಥಾಪನೆಯಲ್ಲಿ ಮಾದರಿಯನ್ನಾಗಿ ಪ್ರವಾದಿ ಮುಹಮ್ಮದರು ಚರಿತ್ರೆ ನಿರ್ಮಿಸಿದರು ಎಂದರು.

ನಗರ ಸಂಚಾಲಕಿ ಝಲೇಖಾ ಹುಮನಾಬಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಹಿದಾ ಬಾಗವಾನ ಕುರ್ ಆನ್ ಪಠಿಸಿದರು. ನುಸ್ರತ್ ಜಹಾಂ ಮೊಮಿನಾತಿ ಧನ್ಯವಾದ ಅರ್ಪಿಸಿದರು. ಗುಲ್ನಾಜ್ ಬೇಪಾರಿ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಐಓ ವತಿಯಿಂದ ಸೀರತ್ ಕ್ವಿಜ್ ನಲ್ಲಿ ಭಾಗಿಯಾದವರಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಸೀರತ ಸಂಚಾಲಕಿ ಗೌಸಿಯಾ ಬದಾಮಿ, ಫಿರ್ ದೌಸ್ ಬೇಟಗೇರಿ, ಯಾಸ್ಮೀನ್ ಮುಹಮ್ಮದ್ ಗಬ್ಬೂರ, ಸಬೀಹಾ ಹುಮ್ನಾಬಾದ್, ಸಮೀನಾ ತರನ್ನುಮ್ಮ ಅತನೂರ, ಹನೀಫಾ ಹುಣಚಗಿ ಪರವೀನ ಖಾಝಿ, ಮಮತಾಜ ತಟಗಾರ ಮುಂತಾದವರು ಉಪಸ್ಥಿತರಿದ್ದರು.