‘ಅಣ್ಣಾ ಹಜಾರೆ ಪ್ರತಿಭಟನೆಯು ಬಿಜೆಪಿ ಮತ್ತು ಆರ್‌ಎಸ್ಎಸ್‌ನಿಂದ ರಹಸ್ಯವಾಗಿ ಯೋಜಿಸಲ್ಪಟ್ಟಿತ್ತು’: ಸೋನಿಯಾ ಗಾಂಧಿ

0
36

ಸನ್ಮಾರ್ಗ ವಾರ್ತೆ

ನವದೆಹಲಿ: 2012ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಯು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಿಂದ ರಹಸ್ಯವಾಗಿ ಯೋಜಿಸಲ್ಪಟ್ಟಿತ್ತು ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಉರುಳಿಸುವ ಉದ್ದೇಶವನ್ನು ಹೊಂದಿತ್ತು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ನಿನ್ನೆ ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ಆತ್ಮಕಥನ/ಸ್ಮರಣಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ನಲ್ಲ ಈ ವಿಷಯವನ್ನು ತಿಳಿಸಲಾಗಿದೆ.

ಅಂದಿನ ಯುಪಿಎ ಸರ್ಕಾರವನ್ನು ಪತನಗೊಳಿಸುವ ಉದ್ದೇಶದಿಂದ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ರಹಸ್ಯವಾಗಿ ಯೋಜಿಸಿದ್ದವು ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಸರ್ಕಾರದ ಮೇಲೆ ಒತ್ತಡ ಹೇರಿದವು. ಯುಪಿಎ ಸರ್ಕಾರವನ್ನು ಉರುಳಿಸುವ ಗುರಿಯನ್ನು ಸಾಧಿಸಿದ ನಂತರ, ಅಣ್ಣಾ ಹಜಾರೆ ಅಥವಾ ಭ್ರಷ್ಟಾಚಾರ ವಿರೋಧಿ ಚಳವಳಿಯ ಬಗ್ಗೆ ಯಾವುದೇ ಹೆಚ್ಚಿನ ಚರ್ಚೆಗಳು ನಡೆಯಲಿಲ್ಲ ಎಂಬುದನ್ನು ಸೋನಿಯಾ ಅವರು ಪುಸ್ತಕದಲ್ಲಿ ಬೆಟ್ಟು ಮಾಡಿದ್ದಾರೆ.

ಭ್ರಷ್ಟಾಚಾರ ತಡೆಯಲು 2014ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದ ಲೋಕಪಾಲ ಕಣ್ಮರೆಯಾಗಿದೆ ಎಂಬ ಟೀಕೆಯೂ ಇದೆ. ‘2014 ರಲ್ಲಿ ನಾವು ಲೋಕಪಾಲ ವಿಧೇಯಕವನ್ನು ತಂದೆವು. ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ಮಾಡಲು ನಾವು ಕೇಂದ್ರ ಮಟ್ಟದಲ್ಲಿ ಲೋಕಪಾಲಕ್ಕೆ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತಗಳಿಗೆ ಅಧಿಕಾರ ನೀಡಿದ್ದೇವೆ. ಆದರೆ ಬಿಜೆಪಿಯ ಅಡಿಯಲ್ಲಿ ಅದನ್ನು ವಿಧ್ವಂಸಗೊಳಿಸಲಾಯಿತು. ಅದು ಹಲ್ಲು ಇಲ್ಲದ ಹುಲಿಯಾಗಿ ಉಳಿದಿದೆ’ ಎಂದು ಸೋನಿಯಾ ಹೇಳಿದ್ದಾರೆ.

ಎರಡನೇ ಯುಪಿಎ ಅವಧಿಯಲ್ಲಿ, ಮಾಜಿ ಪ್ರಧಾನಿ ಡಾ. ಮನ್‌ಮೋಹನ್ ಸಿಂಗ್ ಅವರು ಬೃಹತ್ ಪ್ರಮಾಣದ ಸುಳ್ಳು ಪ್ರಚಾರವನ್ನು ಎದುರಿಸಿದರು, ಆದರೆ ಅವರು ಅದನ್ನು ಅತ್ಯಂತ ಘನತೆಯಿಂದ ಎದುರಿಸಿದರು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ.

2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ತಾವೇಕೆ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲಿಲ್ಲ ಎಂಬುದನ್ನೂ ಸೋನಿಯಾ ಗಾಂಧಿ ವಿವರಿಸಿದ್ದಾರೆ. ಮೈತ್ರಿಕೂಟದ ನಾಯಕರ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹುದ್ದೆಯನ್ನು ವಹಿಸಿಕೊಳ್ಳಲು ಅವರು ಸಮ್ಮತಿಸಿದ್ದರು, ಆದರೆ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುತ್ತೀರಾ ಎಂದು ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮನ್ನು ಕೇಳಿದ್ದರು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಇದು 2004 ರ ಲೋಕಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮುಂಚಿನ ಮಾತು. ಅವರ ಉತ್ತರ ‘ಎಂದಿಗೂ ಇಲ್ಲ’ ಎಂಬುದಾಗಿತ್ತು. ಈ ವಿಷಯದಲ್ಲಿ ತಮಗೆ ಸ್ಪಷ್ಟ ನಿಲುವಿದೆ ಎಂದೂ ಅವರು ತಮ್ಮ ಮಕ್ಕಳಿಗೆ ತಿಳಿಸಿದ್ದರು. ಮಕ್ಕಳ ವಿರೋಧಕ್ಕೆ ಮುಖ್ಯ ಕಾರಣ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳು ಕುಟುಂಬದ ಮೇಲೆ ಬೀರಿದ ಪ್ರಭಾವವಾಗಿತ್ತು. ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡರೆ ತಮ್ಮ ತಾಯಿಯ ಜೀವಕ್ಕೆ ಹೆಚ್ಚಿನ ಅಪಾಯ ಉಂಟಾಗಬಹುದು ಎಂದು ರಾಹುಲ್ ಮತ್ತು ಪ್ರಿಯಾಂಕಾ ಭಯಪಟ್ಟಿದ್ದರು ಎಂದು ಸೋನಿಯಾ ತಮ್ಮ ಸ್ಮರಣಕಥೆಯಲ್ಲಿ ಹೇಳಿದ್ದಾರೆ.