ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಯೊಂದರ ಮೇಲೆ ಸಂಘ ಪರಿವಾರದ ದಾಳಿ ನಡೆದಿದೆ. ಪೂರ್ವ ಬರ್ಧಮಾನ್ ಜಿಲ್ಲೆಯ ರಾಯಾನ್ ಗ್ರಾಮದಲ್ಲಿ ಭಾನುವಾರ ನಡೆದ ಪ್ರಾರ್ಥನಾ ಸಭೆಯ ಮೇಲೆ 40 ಜನರ ಗುಂಪೊಂದು ದಾಳಿ ನಡೆಸಿದೆ. ಘಟನೆಯಲ್ಲಿ ಪಾದ್ರಿ ಮತ್ತು ಹಲವಾರು ವಿಶ್ವಾಸಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಆಮಿಷಗಳ ಮೂಲಕ ಹಾಗೂ ‘ಹನಿಟ್ರಾಪ್’ ಬಳಸಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪದ ಮೇಲೆ ಈ ದಾಳಿ ನಡೆಸಲಾಗಿದೆ.
ದಾಳಿಕೋರರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ದಾಳಿ ನಡೆಸಿದರು ಮತ್ತು “ಇದು ಹಿಂದೂಗಳ ಪ್ರದೇಶ, ನಾವು ಇಲ್ಲಿ ಯೇಸುವಿನ ಪೂಜೆಗೆ ಅವಕಾಶ ನೀಡುವುದಿಲ್ಲ” ಎಂದು ಬೆದರಿಕೆ ಹಾಕಿದರು ಎಂದು ಸಂತ್ರಸ್ತರು ಆಲ್ಟ್ ನ್ಯೂಸ್ಗೆ ತಿಳಿಸಿದ್ದಾರೆ. ಗಾಯಾಳುಗಳು ಬರ್ಧಮಾನ್ ಪೊಲೀಸ್ ಠಾಣೆಗೆ ದೂರು ನೀಡಿದರಾದರೂ, ಠಾಣೆಗೆ ನುಗ್ಗಿದ ದಾಳಿಕೋರರಿಂದ ಬೆದರಿಕೆ ಬಂದ ನಂತರ ದೂರನ್ನು ಹಿಂಪಡೆಯಲು ನಿರ್ಬಂಧಿಸಲ್ಪಟ್ಟರು.
ಈ ಘಟನೆ ನವೆಂಬರ್ 1 ರಂದು ನಡೆದಿದೆ. ಸುಶಾಂತ್ ಮಾಜಿಲಾ ಅವರ ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ ಸುಮಾರು 40 ದಾಳಿಕೋರರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಾ ಮನೆಗೆ ನುಗ್ಗಿದ್ದಾರೆ. ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಪಾದ್ರಿ ಛೋಟು ರಾಯಿದಾಸ್ ಅವರ ಮೇಲೆ ಗ್ರಾಮಸ್ಥ ಬಿಶ್ವೇಶ್ವರ್ ಚೌಧರಿ ನೇತೃತ್ವದ ಗುಂಪು ಹಲ್ಲೆ ನಡೆಸಿ ಒದ್ದಿದೆ. ಗಾಯಾಳುಗಳು ತಮಗೆ ಬಿದಿರಿನ ಕೋಲುಗಳು ಮತ್ತು ಬೆಲ್ಟ್ಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ತಲೆಗೆ ತೀವ್ರ ಗಾಯಗೊಂಡಿದ್ದ 17 ವರ್ಷದ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದನು.
ದಾಳಿಕೋರರ ಭಯದಿಂದ ಅಡುಗೆಮನೆಯಲ್ಲಿ ಅಡಗಿದ್ದ ಪಾದ್ರಿಯನ್ನು ಬಾಗಿಲು ಮುರಿದು ಹೊರಗೆಳೆದು ಹಲ್ಲೆ ನಡೆಸಲಾಗಿದೆ. ಪಾದ್ರಿಯನ್ನು ರಕ್ಷಿಸಲು ಯತ್ನಿಸಿದ ಅವರ ಹಿರಿಯ ಸಹೋದರಿ ನೆಲಕ್ಕೆ ಬಿದ್ದು ಮೂರ್ಛೆ ಹೋದರು. ಅವರನ್ನು ಹತ್ತಿರದ ಆಸ್ಪತ್ರೆ/ದವಾಖಾನೆಗೆ ದಾಖಲಿಸಲಾಗಿದೆ. ವೃದ್ಧೆಯಾಗಿದ್ದ ಮತ್ತೊಬ್ಬ ವಿಶ್ವಾಸಿ ಸಾಗರಿ ಕೊನಾಯಿ ಅವರ ಮನೆಗೆ ಬಂದ ಗುಂಪು ಅವರ ಮೇಲೆಯೂ ಹಲ್ಲೆ ನಡೆಸಿದೆ. ಕೈ ಮೂಳೆ ಮುರಿದಿದ್ದ ಆಕೆಯ ಕಿವಿಯನ್ನು ಹಿಡಿದು ಬಲವಂತವಾಗಿ ಬಸಕಿ ಹೊಡೆಸಿ, ನಂತರ ದೇವಸ್ಥಾನಕ್ಕೆ ಕರೆದೊಯ್ದು ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲು ಬಲವಂತಪಡಿಸಲಾಯಿತು.
ಪಾದ್ರಿ ಜೋಸ್ ಬರ್ನಾರ್ಡ್ 112 ಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೆ ಪೊಲೀಸರು ದಾಳಿಕೋರರ ಪರವಾಗಿ ನಿಲುವು ತಳೆದಿದ್ದಾರೆ ಎಂದು ವಿಶ್ವಾಸಿಗಳು ಆರೋಪಿಸಿದ್ದಾರೆ. ಗಾಯಾಳುಗಳನ್ನು ಪೊಲೀಸ್ ಠಾಣೆಗೆ ಕರೆತರುವ ಮೊದಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಾದ್ರಿ ಜೋಸ್ ಬರ್ನಾರ್ಡ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದರೂ, ಠಾಣೆಗೆ ನುಗ್ಗಿದ ದಾಳಿಕೋರರು ಅವರ ಕಾಲರ್ ಹಿಡಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರ ಎದುರೇ ಈ ಬೆದರಿಕೆಗಳನ್ನು ಹಾಕಲಾಗಿದೆ.
ಪೋಲಿಸರ ಅಸಹಕಾರದಿಂದಾಗಿ ದೂರನ್ನು ಹಿಂಪಡೆಯಲು ತಾನು ನಿರ್ಬಂಧಿಸಲ್ಪಟ್ಟೆ ಎಂದು ಪಾದ್ರಿ ತಿಳಿಸಿದ್ದಾರೆ. ಆದರೆ ಬರ್ಧಮಾನ್ ಐಸಿ ದೇಬಬ್ರತ ಮುಖರ್ಜಿ ಅವರು, ದಾಳಿಕೋರರು ಠಾಣೆಗೆ ನುಗ್ಗಿ ಅವರಿಗೆ ಬೆದರಿಕೆ ಹಾಕಿಲ್ಲ ಮತ್ತು ಎರಡೂ ಕಡೆಯವರು ಪರಸ್ಪರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.












