ಅರವಿಂದ ಬೋಳಾರ್ ಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ , ವಿದ್ಯಾರ್ಥಿ ವೇತನ ವಿತರಣೆ

0
53

ಸನ್ಮಾರ್ಗ ವಾರ್ತೆ

ಮಂಗಳೂರು : ಭಾರತ್ ಸೋಶಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (ರಿ) “BSWT” ವತಿಯಿಂದ ಪ್ರಸಕ್ತ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಅರವಿಂದ ಬೋಳಾರ್ ರವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಸಭಾಂಗಣಲ್ಲಿ ನೆರವೇರಿತು. ನಾರಾಯಣ ಗುರು ಪಿ.ಯು ಕಾಲೇಜಿನ ಪ್ರಾಂಶುಪಾಲೆಯಾದ ಶ್ರೀಮತಿ ರೇಣುಕಾ ಅರುಣ್ ಕಾರ್ಯಕ್ರಮವನ್ನು ಉದ್ಘಾಟಿಸಿ ” ಶಿಕ್ಷಣ ಒಬ್ಬ ವ್ಯಕ್ತಿಗೆ ಅತೀ ಮುಖ್ಯವಾದ ಬೇಡಿಕೆಯಾಗಿದೆ. ಉತ್ತಮ ಬದುಕು ಮತ್ತು ಗೌರವವನ್ನು ಗಳಿಸಲು ಇದು ಸಹಕಾರಿ. ಎಲ್ಲಾ ರೀತಿಯ ಶಿಕ್ಷಣ ಮನುಷ್ಯನಲ್ಲಿ ಇರಬೇಕು. ನಾರಾಯಣ ಗುರು ಕಲಿಸಿದ ಮಾತೃಭಾಷ ಸೂತ್ರ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೂರಕವಾಗಿದೆ. ಮಾತೃಭಾಷೆಯಲ್ಲಿ ಅರಿವು ಧಾರ್ಮಿಕ ಜ್ಞಾನಕ್ಕಾಗಿ ಸಂಸ್ಕೃತ ಪಾಠ ಉದ್ಯೋಗ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆ ಒಳ್ಳೆಯದೆಂದರು ಅಕ್ಷರ ಜ್ಞಾನ ಮಾತ್ರ ಶಿಕ್ಷಣವಲ್ಲ. ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು ಕೂಡಾ ಶಿಕ್ಷಣದ ಭಾಗ’ ಎಂದರು.

ನಂತರ ಸನ್ಮಾನ್ಯ ಶ್ರೀ ಅರವಿಂದ ಬೋಳಾರ್ ರವರಿಗೆ ಶಾಲು ಹೊದಿಸಿ, ಪೇಠ ಧರಿಸಿ “ವರ್ಷದ ವ್ಯಕ್ತಿ” ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು “ಇಂದು ಹೆಚ್ಚಾಗಿ ಸಂಘ ಸಂಸ್ಥೆಗಳು ನೀಡುವ ಸ್ಕಾಲರ್ಶಿಪ್ ತಮ್ಮ ಬಳಗದವರಿಗೆ, ಜಾತಿಯವರಿಗೆ ಮೀಸಲಾಗಿರುತ್ತದೆ. ಆದರೆ ಭಾರತ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ ಜಾತಿ ಧರ್ಮ ನೋಡದೆ ಅರ್ಹರಾದ ಬಡ ವಿದ್ಯಾರ್ಥಿಗಳನ್ನು ಪರಿಗಣಿಸಿ ನೀಡುತ್ತದೆ. ಅದಕ್ಕೆ ಇಲ್ಲಿ ನೆರೆದಿರುವವರೇ ಸಾಕ್ಷಿ. ಹೀಗೆ ಬದುಕಿದರೆ ಮಾತ್ರ ಜೀವನ ಸಾರ್ಥಕ. ನಾವೆಲ್ಲರೂ ಒಂದು ಎಂಬ ಪಾಠವನ್ನು ಇಂದಿನ ವಿದ್ಯಾರ್ಥಿಗಳು ಕಲಿಯಬೇಕು. ಹಿರಿಯರನ್ನು ಗೌರವಿಸುವ ಕಿರಿಯರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಜಾತಿ ಮತ ಭೇದವಿಲ್ಲದೆ ಎಲ್ಲರೂ ಒಂದಾಗಿ ಬದುಕಬೇಕು. ದೇಶಕ್ಕಾಗಿ ಏನನ್ನಾದರೂ ಕೊಡುಗೆಯನ್ನು ನೀಡುವ ಗುರಿ ಸಾಧಿಸಬೇಕು. ಕಲಿತು ಉದ್ಯೋಗ ಗಳಿಸಿದ ನಂತರ ಇತರರಿಗೆ ಸಹಾಯ ಮಾಡುವ ಮನೋಭಾವ ಹೊಂದಬೇಕು’ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಲಾಗ್ರೀಸ್ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಮೆಲ್ವಿನ್ ವಾಸ್, ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಂಗಳ ಗಂಗೋತ್ರಿ ಕೊಣಾಜೆ ಇಲ್ಲಿನ ಸುಪರಿಡೆಂಟ್ ಶ್ರೀ ಹರೀಶ್ ಕುಮಾರ್ ಕುತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ‘BSWT ಇದರ ಸಾಮಾಜಿಕ ಸೇವಾ ಮನೋಭಾವವನ್ನು ಸ್ಮರಿಸಿದರು. ಯಾವುದೇ ಪ್ರಚಾರವನ್ನು ಬಯಸದೆ ಯಾರಿಂದ ಡೊನೇಶನ್ ಪಡೆಯದೆ ತಮ್ಮ ವಾರ್ಷಿಕ ಆದಾಯದ ಒಂದು ಭಾಗವನ್ನು ಸಮಾಜ ಸೇವೆಗೆ ಮೀಸಲಿಟ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಇವರ ಸೇವೆ ಮಾದರಿ ಎಂದರು. ಪ್ರಾರಂಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಎನ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಅಶ್ರಫ್ ಎಂ.ಸಿ, ಪ್ರಧಾನ ಕಾರ್ಯದರ್ಶಿಯಾದ ಆಕಿಫ್ ಎಂಜಿನಿಯರ್, ಸದಸ್ಯರಾದ ಅಬ್ದುಲ್ಲಾ ಮತ್ತು ನಿಯಾಝ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಗಣ್ಯ ಅತಿಥಿಗಳಿಗೆ ಗೌರವ ಕಾಣಿಕೆ ನೀಡಲಾಯಿತು. ಮಂಗಳೂರ ರಿಯಾಝ್ ಹಾಡಿದರು, ಕಾರ್ಯಕ್ರಮದ ಸಂಚಾಲಕ ಸುಲೈಮಾನ್ ಪಕ್ಕಲಡ್ಕ ವಂದಿಸಿದರು. ಡಾ. ಅರುಣ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸುಮಾರು 150 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.