ಸನ್ಮಾರ್ಗ ವಾರ್ತೆ
ಮುಂಬೈ: ಅರ್ನಬ್ ಗೋಸ್ವಾಮಿ ಬೆದರಿಕೆ ಹಾಕಿದ್ದರಿಂದ ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಂಟಿರೀಯರ್ ಡಿಸೈನರ್ ಅನ್ವಯ್ ನಾಯಿಕ್ ಪುತ್ರಿ ಆರೋಪಿಸಿದ್ದಾರೆ. ರಿಪಬ್ಲಿಕ್ ಚ್ಯಾನೆಲ್ ಇಂಟಿರಿಯರ್ ಡಿಸೈನ್ ಮಾಡಿದ್ದಕ್ಕಾಗಿ ತಂದೆಗೆ 83 ಲಕ್ಷ ರೂಪಾಯಿ ಸಿಗಬೇಕಾಗಿತ್ತು. ಅರ್ನಬ್ ಗೋಸ್ವಾಮಿ ಸಹಿತ ಮೂವರು 5.4 ಕೋಟಿ ರೂಪಾಯಿ ಕೊಡಲಿಕ್ಕಿದೆ ಎಂದು ತಂದೆ ಆತ್ಮಹತ್ಯೆ ವೇಳೆ ಪತ್ರ ಬರೆದಿಟ್ಟಿದ್ದಾರೆ ಎಂದು ಅದನ್ಯ ನಾಯಿಕ್ ಪತ್ರಕರ್ತರಿಗೆ ಹೇಳಿದರು.
ತಂದೆಯ ಸಾವಿಗೆ ಕಾರಣರಾದವರ ವಿರುದ್ಧ ಕೇಸು ದಾಖಲಿಸಿದ್ದಕ್ಕಾಗಿ ಮಹಾರಾಷ್ಟ್ರ ಸರಕಾರ ಮತ್ತು ಅದನ್ಯ ಮತ್ತು ಅವರ ತಾಯಿ ಕೃತಜ್ಞತೆ ಹೇಳಿದರು. ರಿಪಬ್ಲಿಕ್ ಟಿವಿಯ ಕೆಲಸದ ವೇಳೆ ಆರ್ಕಿಟೆಕ್ ಆಗಿರುವ ಅದನ್ಯ ಕೂಡ ಸಹಾಯ ಮಾಡಿದ್ದರು.
ಅರ್ನಬ್ ಹಣ ಕೊಟ್ಟಿಲ್ಲ ಎಂದು ತಂದೆ ನನ್ನೊಂದಿಗೆ ಹೇಳುತ್ತಿದ್ದರು. ಈ ಕುರಿತು ದೂರು ನೀಡಿದರೆ ಬದುಕನ್ನೇ ನಾಶಮಾಡುವೆ ಎಂದು ಬೆದರಿಕೆ ಹಾಕಿದ್ದರು. ದೂರು ನೀಡಿದರೂ ಈ ಕುರಿತು ತನಿಖೆ ನಡೆಯಲಿಲ್ಲ. ಅಂದು ನಾವು ಹಲವು ಬಾರಿ ಪೊಲೀಸಧಿಕಾರಿಗಳನ್ನು ಭೇಟಿಯಾಗಿದ್ದೆವು. ಯಾವ ಪ್ರಭಾವ ಬೀರಿ ಪ್ರಕರಣ ಕೊನೆಗೊಳಿಸಲಾಗಿತ್ತೆಂದು ತನಗೆ ಗೊತ್ತಿಲ್ಲ ಎಂದು ಅದನ್ಯ ಹೇಳಿದರು.
ಭೇಟಿ ಮಾಡಲು ಐದು ನಿಮಿಷ ಸಮಯವಾದರೂ ಕೊಡಿ ಎಂದು ಹಲವು ಬಾರಿ ಅರ್ನಬ್ನೊಂದಿಗೆ ನಾನು ಮನವಿ ಮಾಡಿದ್ದೆ. ಆದರೆ ಆತ ನಮ್ಮನ್ನು ಕಡೆಗಣಿಸಿದರು. ಮುರ್ಬಾದ್, ದಾದರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು. ಪ್ರಯೋಜನವಾಗಲಿಲ್ಲ. ಕೊಡಬೇಕಾದ ಹಣವನ್ನು ಕೊಡಬೇಕೆಂದು ಹಲವು ಬಾರಿ ಆಗ್ರಹಿಸಿದರೂ ಪ್ರಯೋಜನವಾಗಲಿಲ್ಲ. ಬೆದರಿಕೆ ಕರೆಗಳು ಸಿಕ್ಕಿದವು. ನಾವು ಹೋದಲ್ಲೆಲ್ಲ ಯಾರೋ ಹಿಂಬಾಲಿಸುತ್ತಿದ್ದರು. ನಾವು ಒತ್ತಡಕ್ಕೊಳಗಾಗಿದ್ದೆವು. ನ್ಯಾಯ ಸಿಗಬೇಕು ಎಂಬುದು ಮಾತ್ರ ನಮ್ಮ ಬೇಡಿಕೆಯಾಗಿದೆ.
ಅನ್ವಯ್ ನಾಯಿಕ್ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿಯವರನ್ನು ಬಂಧಿಸಿದ್ದರು. ಸುಪ್ರೀಂ ಕೊರ್ಟ್ ಮಧ್ಯಂತರ ಜಾಮೀನು ಮೇರೆಗೆ ಅರ್ನಬ್ ಬಿಡುಗಡೆಗೊಂಡಿದ್ದಾರೆ.












