ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

0
647

ಸನ್ಮಾರ್ಗ ವಾರ್ತೆ

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್‌ ಬೆಂಗಳೂರು ಟ್ಯಾಬ್ಲಾಯ್ಡ್‌ನ ಪ್ರಧಾನ ಸಂಪಾದಕ ರವಿ ಬೆಳಗೆರೆ (62) ಶುಕ್ರವಾರ ಬೆಳಗಿನ ಜಾವ ನಿಧನರಾದರು.ನಿನ್ನೆ ರಾತ್ರಿಯ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.

1995ರಲ್ಲಿ ಹಾಯ್‌ ಬೆಂಗಳೂರು ಪತ್ರಿಕೆ ಆರಂಭಿಸಿದ್ದ‌ ರವಿ ಬೆಳಗೆರೆ, ಕಾದಂಬರಿ, ಅನುವಾದ, ಕಥಾ ಸಂಕಲನ, ಅಂಕಣ ಬರಹಗಳು, ಜೀವನ ಕಥನ ಒಳಗೊಂಡ ಅವರ ಸುಮಾರು 70 ಪುಸ್ತಕಗಳು ಪ್ರಕಟಗೊಂಡಿವೆ.

ಅಲ್ಲದೇ, ಈ ಟಿವಿ ಚಾನೆಲ್ ಇದ್ದ ಸಂದರ್ಭದಲ್ಲಿ ಕ್ರೈಂ ಡೈರಿ ಎಂಬ ಕಾರ್ಯಕ್ರಮದ ಮೂಲಕ ಕೂಡಾ ಹೆಚ್ಚು ಜನಪ್ರಿಯರಾಗಿದ್ದರು.ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಸಂದಿವೆ.

ಪ್ರಾರ್ಥನಾ ಶಾಲೆ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದಾಗಿ ತಿಳಿದು ಬಂದಿದೆ.ಇವರ ಮೊದಲ ಪತ್ನಿಗೆ ಇಬ್ಬರು ಪುತ್ರಿಯರು, ಎರಡನೇ ಪತ್ನಿಗೆ ಒಬ್ಬ ಮಗನಿದ್ದಾನೆ.
ತಡರಾತ್ರಿ ಹೃದಯಾಘಾತ ಆದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧರಾದರು. ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ತರಲಾಗಿದೆ.

ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ ಮಾಡಿದ್ದ ಅವರು, ಪತ್ರಿಕೋದ್ಯಮದ ಕಡೆಗೆ ಹೆಚ್ಚು ಒಲವು ಹೊಂದಿ, ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡರು. ಸಾಹಿತ್ಯ, ಕ್ರೈಂ ಕಾರ್ಯಕ್ರಮಗಳ ನಿರೂಪಣೆ, ಓ ಮನಸೇ ಮೂಲಕ ಜನಪ್ರಿಯರಾದರು. ಅವರು ಬೆಂಗಳೂರಿನಲ್ಲಿ ಪ್ರಾರ್ಥನಾ ಶಾಲೆ ಕಟ್ಟಿ ಬೆಳೆಸಿದ್ದು, ಡೊನೇಶನ್ ರಹಿತ ಶಾಲೆ ಎಂದು ಹೆಸರು ಪಡೆದಿತ್ತು.