ಅರಸೀಕೆರೆ| ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

0
2081

ಸನ್ಮಾರ್ಗ ವಾರ್ತೆ

ಅರಸೀಕೆರೆ : ನಗರದ ತಾಲೂಕು ಕಚೇರಿ ಆವರಣದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಹಾಗೂ ನಗರದ ಮುಸ್ಲಿಂ ಸಂಘ ಸಂಸ್ಥೆಗಳ ವತಿಯಿಂದ ಮಹಿಳೆಯರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿ ಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕಿ ನಸೀಮಾರವರು ಮಾತನಾಡಿ ಇಸ್ಲಾಂ ಧರ್ಮವು ಮಹಿಳೆಯರಿಗೆ ಉನ್ನತ ಸ್ಥಾನವನ್ನು ನೀಡಿದೆ. ಹೆಣ್ಣು ಮಕ್ಕಳ ಹುಟ್ಟು ಆವಲಕ್ಷಣ ಅಗೌರವವೆಂದು ಕಾಣುತ್ತಿದ್ದ ಕಾಲಘಟ್ಟದಲ್ಲಿ ಹೆಣ್ಣಿನ ಹುಟ್ಟು ಮಾತಾ-ಪಿತರ ಪಾಲಿನ ಅನುಗ್ರಹವೆಂದು ಸಾರಿ ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆಯನ್ನು ಮಹಾ ಪಾಪವೆಂದು ಸಾರಿ ಪ್ರಪಂಚದ ಕೋಟಿ ಹೆಣ್ಣು ಜೀವಗಳು ಕಮರಿ ಹೋಗದೆ ಬದುಕುವಂತೆ ಮಾಡಿದ್ದು ಇಸ್ಲಾಂ ಧರ್ಮವಾಗಿದೆ.

ವಿಧವೆಯಾದರೂ ಅವಲಕ್ಷಣವೆನ್ನದೆ ಮರು ಮದುವೆ ಆಗುವ ವಿಧವಾ ವಿವಾಹಕ್ಕೆ ಪ್ರಾಶಸ್ತ್ಯ ಕಲ್ಪಿಸಿ, ಅದೆಷ್ಟು ಕೋಟಿ ಹೆಣ್ಣು ಜೀವಗಳಿಗೆ ಮರುಜನ್ಮ ನೀಡಿದ್ದು ಇಸ್ಲಾಂ ಆಗಿದೆ ಎಂದು ತಿಳಿಸಿದರು.

ಸರ್ಕಾರವು ಕೂಡಲೇ ಮುಸ್ಲಿಂ ಮಹಿಳೆಯರನ್ನು ಅತ್ಯಂತ ಅಶ್ಲೀಲವಾಗಿ ನಿಂದಿಸಿ ಕೋಮು ಪ್ರಚೋದನಕಾರಿಯಗಿ ಭಾಷಣ ಮಾಡಿದ ಕ್ರಿಮಿನಲ್ ಹಿನ್ನೆಲೆ ಇರುವ ಕಲ್ಲಡ್ಕ ಪ್ರಭಾಕರ್ ಭಟ್ ಇವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಜ್ಮೆ ಫಾರೂಕ್ ಮದ್ರಸದ ಕಾರ್ಯದರ್ಶಿಗಳಾದ ನಿಜಾಂ, ಮೀರ್ ಮೊಹಮ್ಮದ್ ಹಾಗೂ ಹಲವು ಮುಸ್ಲಿಂ ಮುಖಂಡರು ಮಾತನಾಡಿ ಕೂಡಲೇ ಸರ್ಕಾರ ಈ ರೀತಿ ಪ್ರಚೋದನಕಾರಿ ಭಾಷಣ ಮಾಡಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ವ್ಯಕ್ತಿಗಳನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಹಾಗೂ ಪ್ರತಿಭಟನೆಯಲ್ಲಿ ಸೇರಿದ ಪ್ರತಿಭಟನಾಕಾರರು ಕಲ್ಲಡ್ಕ ಪ್ರಭಾಕರ ವಿರುದ್ಧ ಘೋಷಣೆ ಕೂಗುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕೂಡಲೆ ಅವನನ್ನು ಬಂಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ನಂತರ ತಾಲೂಕು ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ರವರಿಗೆ ಮನವಿ ಪತ್ರವನ್ನು ನೀಡಿದರು. ಹಾಗೂ ಈ ಪ್ರತಿಭಟನೆಯಲ್ಲಿ ಸೇರಿದ ಮಹಿಳೆಯರು ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಮುಖದ್ದಮೇ ಹಾಕಬೇಕೆಂದು ಸ್ಥಳಕ್ಕೆ ಆಗಮಿಸಿದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುನ್ನಿ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮುಫ್ತಿ ಫಹೀಂಮುದ್ದಿನ್ ಖಾದ್ರಿ, ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷರಾದ ಸೈಯದ್ ರಫೀಕ್, ಉಪಾಧ್ಯಕ್ಷರಾದ ನೂರುಲ್ಲಾ ಷರೀಫ್, ನಸಿರುದ್ದೀನ್, ಕಾರ್ಯದರ್ಶಿಗಳಾದ ನವಾಜ್ ಪಷಾ ಕಮೇಟಿಯ ಸದಸ್ಯರುಗಳು ನಗರದ ಹಲವು ಮುಸ್ಲಿಂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಸ್ಲಿಂ ಬಾಂಧವರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.