ಅಮತುರ್ರಝಾಕ್ ಸಾಹಿಬಾರವರ ನಿಧನ ಇಸ್ಲಾಮೀ ಆಂದೋಲನಕ್ಕೆ ತುಂಬಲಾರದ ನಷ್ಟ

0
260

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಅಮತುರ್ರ ಝಾಕ್ ಸಾಹಿಬಾ ರವರ ನಿಧನ ಇಸ್ಲಾಮೀ ಆಂದೋಲನಕ್ಕೆ ತುಂಬಲಾರದ ನಷ್ಟವೆಂದು ನಾನು ಭಾವಿಸುತ್ತೇನೆ. ಮಹಿಳಾ ವಿಭಾಗದಲ್ಲಿ ನನಗೆ ಎಲ್ಲರಿಗಿಂತಲೂ ಆತ್ಮೀಯರಾಗಿದ್ದರು. ಜಮಾಅತ್’ನ ಎಂತಹ ದೊಡ್ಡ ಸಭೆಗಳಲ್ಲೂ ರೋಗಪೀಡಿತರಾಗಿದ್ದವರ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ರೋಗಿಗಳಿಗೆ ಬೇಕಾದ ರೀತಿಯ ಊಟದ ವ್ಯವಸ್ಥೆ ಮಾಡುತ್ತಿದ್ದರು. ಸರಳತೆಯನ್ನು ಮೈಗೂಡಿಸಿಕೊಂಡಿದ್ದರು. ಒಮ್ಮೆ ಅವರ ಮನೆಗೆ ಭೇಟಿ ನೀಡಿದಾಗ ಅವರ ಮನೆಯ ಅಡುಗೆ ಕೋಣೆಯಲ್ಲಿ ಒಲೆ ಉರಿಯುವುದಿಲ್ಲವೋ ಎಂಬಂತೆ ಭಾಸವಾಗಿತ್ತು. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆದು ಅಲ್ಲಾಹನ ಧರ್ಮದ ಕೆಲಸಕ್ಕೆ ಅಡ್ಡಿಪಡಿಸಬಾರದು. ಆಧುನಿಕ ಉಪಕರಣಗಳನ್ನು ಬಳಸಿ ಅಡುಗೆ ಮನೆಯಲ್ಲಿಯೇ ಹೆಚ್ವು ಸಮಯ ಪೋಲಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಿದ್ದರು.

ಅವರ ಸಂಘಟನಾ ಸಾಮರ್ಥ್ಯ ಅಲ್ಲಾಹನು ಅವರಿಗೆ ನೀಡಿದ ವಿಶೇಷ ಕೊಡುಗೆ.ಅವರಿಂದ ನಾವು ಬಹಳಷ್ಟು ಕಲಿತೆವು. ಮಹಿಳೆಯರು ಮನೆಯ ಕೆಲಸ ಮತ್ತು ಜಮಾಅತ್ ಎರಡರಲ್ಲೂ ಸಮತೋಲನ ಕಾಪಾಡಬೇಕು ಎನ್ನುತ್ತಿದ್ದರು. ಜಮಾಆತ್ ಬೈತುಲ್ ಮಾಲ್ ಗೆ ಇಂತಿಷ್ಟೇ ಹಣ ನಿಗದಿ ಪಡಿಸಬಾರದು.ಹೆಚ್ಚು ಇರುವಾಗ ಹೆಚ್ಚು ನೀಡಬೇಕು ಎಂದಿದ್ದರು. ವ್ಯಾಪಾರದಲ್ಲಿ ಪಾಲುದಾರಳಾಗಿ ಅದರ ಲಾಭ ಸನ್ಮಾರ್ಗ ವಾರಪತ್ರಿಕೆಗೆ ಕೊಡುತ್ತಿದ್ದರು.

ಅಮತುರ್ರಝಾಕ್ ಸಾಹಿಬಾ ಇಸ್ಲಾಮೀ ಆಂದೋಲನದ ಆತ್ಮ ಮತ್ತು ಶರೀರದಂತಿದ್ದರು. ಸದಾ ಸಕ್ರಿಯವಾಗಿದ್ದು ತಾನು ಮುಂದೆ ಹೋಗಿ ಇತರರನ್ನು ಮುಂದೆ ತರುವ ನಾಯಕತ್ವದ ವಿಶೇಷ ಗುಣ ಅವರಲ್ಲಿತ್ತು. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಸ್ಥಾಪಕರಾಗಿದ್ದ ಮೌಲಾನಾ ಅಬುಲ್ ಆಲಾ ಮೌದೂದಿಯವರ ವ್ಯಕ್ತಿತ್ವ ಓರ್ವ ಮಹಿಳೆಯಲ್ಲಿ ಇರಲು ಸಾಧ್ಯವೇ ಎಂದು ಯಾರಾದರೂ ನನ್ನಲ್ಲಿ ಪ್ರಶ್ನಿಸಿದರೆ ಖಂಡಿತ ಅಮತುರ್ರಝಾಕ್ ಸಾಹಿಬಾ ಹಾಗೆಯೇ ಇದ್ದರು ಎಂದು ನಾನು ಹೇಳಬಲ್ಲೆ. ಮೌದೂದಿಯವರ ವ್ಯಕ್ತಿತ್ವ ನನಗೆ ಅವರ ಸಾಹಿತ್ಯಗಳಿಂದ ಪರಿಚಯವಾಗಿರಬಹುದು. ಆದರೆ ಅಮತುರ್ರಝಾಕ್ ಸಾಹಿಬಾರಂತಹ ಜೀವಂತ ಮಹಿಳೆಯಲ್ಲಿ ನಾನು ಮೌಲಾನಾ ಮೌದೂದಿ ಯವರನ್ನು ಕಂಡೆನು. ಪತಿಯ ಪ್ರೇರಣೆಯಿಂದ ಪತಿಯು ತಂದು ಕೊಡುತ್ತಿದ್ದ ಮೌಲಾನಾ ಮೌದೂದಿಯವರ ಸಾಹಿತ್ಯಗಳ ಅಧ್ಯಯನದಿಂದ ನಾನು ಆಂದೋಲನಕ್ಕೆ ಹತ್ತಿರವಾದೆ ಎಂದಿದ್ದರು.

ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದ ದಿವಂಗತರಾದ ಇಬ್ರಾಹೀಮ್ ಸ’ಈದ್ ಸಾಹೇಬ್, ರಾಜ್ಯ ಕಾರ್ಯದರ್ಶಿಯಾಗಿದ್ದ ಹಾಮಿದ್ ಹುಸೈನ್ ಸಾಹೇಬ್ ರ ಮಾರ್ಗದರ್ಶನವನ್ನು ಸದಾ ನೆನಪಿಸುತ್ತಿದ್ದರು. ಮಹಿಳೆಯರ ಪ್ರತಿನಿಧಿ ಎಂಬ ನೆಲೆಯಲ್ಲಿ ಅವರೊಂದಿಗೆ ಆಂದೋಲನದ ಮಹಿಳೆಯರ ಬಗ್ಗೆ ದೂರು ಕೊಟ್ಟರೆ ಅವರು ಇಷ್ಟಪಡುತ್ತಿರಲಿಲ್ಲ. ಇಸ್ಲಾಮೀ ಅಂದೋಲನದಲ್ಲಿ ಯಾರ ಬಗ್ಗೆಯೂ ಆಕ್ಷೇಪ ದೂರುಗಳು ಇರಬಾರದು ಹಾಮಿದ್ ಹುಸೈನ್ ಸಾಹೆಬ್ ರ ಈ ಉಪದೇಶವನ್ನು ನಮಗೆ ನೆನಪಿಸುತ್ತಿದ್ದರು.

ವಯಸ್ಸಿನಲ್ಲಿ ಕಿರಿಯವರಾದ ರಾಷ್ಟ್ರ ಸಂಚಾಲಕಿ ಅತಿಯ್ಯ ಸಿದ್ಧೀಕಾ ರವರನ್ನು ಗೌರವಿಸುವ ಅವರ ವಿನಯಶೀಲತೆಯನ್ನು ಮೆಚ್ಚಲೇಬೇಕು. ಅಲ್ಲಾಹನ ನಿಜವಾದ ದಾಸರಿಗೆ ಮಾತ್ರ ವಿನಯಶೀಲತೆಯನ್ನು ಮೈಗೂಡಿಸಲು ಸಾಧ್ಯ. ಆಂದೋಲನದ ವಿಷಯದಲ್ಲಿ ಶಿಸ್ತಿಗೆ,ತರಬೇತಿಗೆ ಬಹಳ ಮಹತ್ವ ಕೊಡುತ್ತಿದ್ದರು. ಕೆಲವೊಮ್ಮೆ ಹಿಡಿತ ಬಿಗಿಯಾಗಿರುವಂತೆ ಭಾಸವಾದರೂ ನಮಗೆ ಸಂತೋಷವಾಗುತ್ತಿತ್ತು. ಒಮ್ಮೆಯೂ ಕೋಪಗೊಂಡಿರಲಿಲ್ಲ. ನಯವಾಗಿ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಿದ್ದರು. ವರದಿಯು ಸರಿಯಾದ ಸಮಯಕ್ಕೆ ರಾಜ್ಯ ,ಕೇಂದ್ರಕ್ಕೆ ತಲುಪಿಸಲು ಪ್ರಯತ್ನಿಸುವ ಅವರ ಉತ್ಸಾಹ ಮರೆಯಲು ಸಾಧ್ಯವಿಲ್ಲ. ಪುರುಷ ಸದಸ್ಯ ರು,ಮಹಿಳಾ ಸದಸ್ಯೆಯರ ಮನೆಯವರೂ ಆಂದೋಲನದಲ್ಲಿರಬೇಕು ಎಂಬುದು ಅವರ ಬಯಕೆಯಾಗಿತ್ತು. ಅದಕ್ಕಾಗಿ ಇತ್ತೇಚೆಗೆ ರಾಜ್ಯದಾದ್ಯಂತ ಪ್ರಯಾಣಿಸಿದ್ದರು. ವೈಯಕ್ತಿಕ ಭೇಟಿಯ ಮೂಲಕ ಎಲ್ಲರ ಸ್ಥಿತಿಗತಿಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದರು. ಇತ್ತೇಚೆಗೆ ಆಂದೋಲನದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಹೊಸ ಉತ್ಸಾಹದೊಂದಿಗೆ ಯುವ ಸಮೂಹವನ್ನು ತಯಾರುಗೊಳಿಸುತ್ತಿದ್ದರು. ಅವರ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸುತ್ತಿದ್ದರು. ಪ್ರತಿಭೆಗಳನ್ನು ಗುರುತಿಸಿ ಆಂದೋಲನಕ್ಕೆ ಪ್ರಯೋಜನಕಾರಿಯಾಗಿ ಮಾಡುವಲ್ಲಿ ಅವರಿಗೆ ಸಾಟಿ ಯಾರೂ ಇಲ್ಲ.

ಅನಾರೋಗ್ಯಪೀಡಿತರಾಗಿದ್ದೂ ಜಿ.ಐ.ಒ ಯುವತಿಯರಿಗೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ತಾಯಿ ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳಿಂದ ಬಾಚಿ ಎಲ್ಲ ಕೇಡುಗಳಿಂದ ರಕ್ಷಿಸುವಂತೆ ಮಹಿಳೆಯರನ್ನು ,ಯುವತಿಯರನ್ನು ತನ್ನ ನಿಷ್ಕಳಂಕ ಪ್ರೀತಿ, ಆತ್ಮೀಯತೆಯಿಂದ ಹಿಡಿದಿಟ್ಟುಕೊಳ್ಳುತ್ತಿದ್ದರು. ಅವರು ಕಲಿಸಿದ ಪಾಠ,ಅವರ ಜೀವನ ನಮಗೆಲ್ಲರಿಗೂ ಮಾದರಿಯಾಗಲಿ. ಸದಾ ಅವರ ಜೊತೆಗಿದ್ದು ಆಂದೋಲನದ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತಿದ್ದ ಅವರ ಮನೆಯವರಿಗೆ ಅಲ್ಲಾಹನು ಸಹನೆಯನ್ನು ದಯಪಾಲಿಸಲಿ.ಅವರ ಎಲ್ಲ ಸೇವೆಯನ್ನು ಸ್ವೀಕರಿಸಿ ಶಾಶ್ವತವಾದ ಶಾಂತಿಧಾಮದಲ್ಲಿರಿಸಲಿ. ಇಸ್ಲಾಮೀ ಆಂದೋಲನವನ್ನು ಕೊನೆಯ ಉಸಿರಿರುವ ವರೆಗೂ ಮುನ್ನಡೆಸುವ ಸೌಭಾಗ್ಯ ನಮಗೆಲ್ಲರಿಗೂ ದಯಪಾಲಿಸಲಿ. ಆಮೀನ್.

ಶಮೀರಾ ಜಹಾನ್, ಮಂಗಳೂರು