ಎಲ್ಲಾ ದೊಡ್ಡ ಕಂಪೆನಿಗಳು, ಶ್ರೀಮಂತರು ಸಾಲಗಾರರು: ಹೊರಗಿನ ಥಳಕಿಗೆ ಬಲಿಯಾಗಬೇಡಿ

0
921

ಖದೀಜ ನುಸ್ರತ್ ಅಬು ಧಾಬಿ

ನಮ್ಮ ದೇಶದಲ್ಲಿ ಆರ್ಥಿಕ ಬಿಕ್ಕಟ್ಟುಗಳ ಎಲ್ಲಾ ಲಕ್ಷಣಗಳು ಈಗಾಗಲೇ ಕಾಣಲಾರಂಭಿಸಿದೆ. ಸರ್ಕಾರವು ಯಾವುದೇ ಪೂರ್ವತಯಾರಿ ಯೋಜನೆ ಇಲ್ಲದೇ ಮತ್ತು ಅಧ್ಯಯನ ನಡೆಸದೇ ಜಾರಿಗೊಳಿಸಿದಂತಹ ನೋಟು ಅಮಾನೀಕರಣ ಮತ್ತು ಜಿಎಸ್ ಟಿ ತೆರಿಗೆ ಪದ್ದತಿಯು ದೇಶದ ವ್ಯಾಪಾರ ವ್ಯವಹಾರಗಳಲ್ಲಿ ದುಷ್ಟ ಪರಿಣಾಮವನ್ನು ಬೀರಿದೆ. ವಾಹನ, ಬಟ್ಟೆ, ಕೃಷಿ, ಬ್ಯಾಂಕಿಂಗ್, ಶೇರ್ ಮಾರ್ಕೆಟ್, ರಿಯಲ್ ಎಸ್ಟೇಟ್, ರೂಪಾಯಿಯ ಮೌಲ್ಯ ಕುಸಿತ, ವಿಮಾನ ಕಂಪೆನಿಗಳ ಹೆಚ್ಚುತ್ತಿರುವ ಸಾಲ, ಮುಚ್ಚಲ್ಪಡುವ ವಾರ್ತೆಗಳನ್ನು ಕಳೆದ ಕೆಲವು ದಿನಗಳಿಂದ ಕೇಳುತ್ತಿದ್ದೇವೆ. ಆಭರಣ ಉದ್ಯಮ, ಐಟಿ, ಪತ್ರಿಕೋದ್ಯಮ ಇತ್ಯಾದಿಗಳು ಆತಂಕದ ಸ್ಥಿತಿಯಲ್ಲಿದೆ. ಗಲ್ಫ್ ನಿಂದ ಜನರು ಉದ್ಯೋಗವಿಲ್ಲದೆ ಮರಳುತ್ತಿದ್ದಾರೆ, ಮನೆಯಲ್ಲಿ ಯುವಕರು ಉದ್ಯೋಗವಿಲ್ಲದೆ ಅಲೆದಾಡುತ್ತಿದ್ದಾರೆ. ಆದರೆ ನಾವು ಯಾವುದೇ ವಾಸ್ತವದ ಭೀಕರ ಪರಿಣಾಮವನ್ನು ಅರ್ಥಮಾಡುವುದಿಲ್ಲ. ಅದು ತುಂಬಾ ಅಪಾಯಕಾರಿ ಸ್ಥಾನಕ್ಕೆ ತಲುಪುಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನಾವು ನಿರೀಕ್ಷಿಸುತ್ತಿರುವ ಹಣ ನಾಳೆಯೋ ಬರುವ ತಿಂಗಳೋ ಬರುವ ವರ್ಷವೋ ಬರುವುದಿಲ್ಲ. ನಮ್ಮ ಆರ್ಥಿಕ ವರಮಾನಗಳು ಕಳೆದ ವರ್ಷಗಳಿಗಿಂತ ಕಡಿಮೆಯಾಗುತ್ತಿದೆ. ಇನ್ನೂ ಕಡಿಮೆಯಾಗುವ ಸಾಧ್ಯತೆಯೂ ಇದೆ. ಅದಕ್ಕೆ ತಕ್ಕಂತೆ ಜೀವನ ಶೈಲಿಯಲ್ಲಿ ಬದಲಾವಣೆ ಮಾಡುವುದೇ ಇದಕ್ಕೆ ಪರಿಹಾರ. ಊರಿನಲ್ಲಿರುವವರು ಉದ್ಯೋಗ ಹುಡುಕಿಕೊಂಡು ಗಲ್ಫ್ ಗೆ ಹೋಗುವುದೂ ಪರಿಹಾರವಲ್ಲ.

ಅಗತ್ಯದ ಸಮಯದಲ್ಲಿ ಬೇಡುವುದು, ಸಾಲ ಪಡೆಯುವುದು ಪರಿಹಾರವಲ್ಲ. ಸಾಲ ಪಡೆಯುವಾಗ ಎಲ್ಲಿಂದೆಲ್ಲ ಪಡೆಯಬಹುದೆಂದು ಆಲೋಚಿಸುತ್ತಾರೆ. ಆದರೆ ಅದರ ಮರುಪಾವತಿಯ ಬಗ್ಗೆ ಆಲೋಚಿಸುವುದೇ ಇಲ್ಲ. ಈ ಸಂದರ್ಭ ನಮ್ಮ ಕೈಯಲ್ಲಿರುವಷ್ಟು ಹಣ ಮಾತ್ರ ಖರ್ಚು ಮಾಡಲು ಕಲಿಯಬೇಕು. ನಾಳೆ ನಾನು ಸಂಪಾದಿಸುವೆನು ಅಥವಾ ಭೂಮಿಯ ಮೇಲೆ ಜೀವಿಸಿರುವೆನು ಎಂಬ ಯಾವುದೇ ಭರವಸೆ ಯಾರಿಗೂ ಇಲ್ಲ. ಮನೆಯವರು ಪುರುಷನ ವರಮಾನಕ್ಕೆ ತಕ್ಕಂತೆ ಜೀವಿಸಬೇಕು. ಎಲ್ಲಾ ಡಿಗ್ರಿ, ಧಾರ್ಮಿಕ ಜ್ಞಾನ ಪಡೆದು ನಾವು ಹೇಗೆ ಸರಿಯಾಗಿ ಬದುಕಬೇಕುಂಬುದನ್ನು ಇನ್ನೂ ಅರಿಯದ ಸಮುದಾಯವಾಗಿದೆ. ಪ್ರತಿಯೊಬ್ಬರಿಗೂ ವರಮಾನವನ್ನು ಖರ್ಚು ಮಾಡುವಾಗ ದೀರ್ಘ ವೀಕ್ಷಣೆಯಿರಬೇಕು. ಎಲ್ಲಾ ಅನಗತ್ಯ ಖರ್ಚುಗಳನ್ನು ಕೊನೆಗೊಳಿಸಿ ಸಂಪಾದನೆಯ ಒಂದು ಭಾಗವನ್ನು ಉಳಿತಾಯ ಮಾಡುವುದು ಅನಿವಾರ್ಯವಾಗಿದೆ.

ಪ್ರವಾದಿ ಯೂಸುಫ್(ಅ) ಏಳು ವರ್ಷದ ನಂತರ ಬರಲಿರುವ ಕ್ಷಾಮವನ್ನು ಎದುರಿಸಲು ಅದರ ಏಳು ವರ್ಷದ ಮೊದಲೇ ಎಲ್ಲಾ ತಯಾರಿಮಾಡಿದ್ದರು ಎಂದು ಪವಿತ್ರ ಕುರ್ ಆನ್ ನಲ್ಲಿ ಹೇಳಲಾಗಿದೆ.

ಯೂಸುಫ್ ಹೇಳಿದರು- “ಏಳು ವರ್ಷಗಳ ತನಕ ನೀವು ನಿರಂತರವಾಗಿ ಕೃಷಿ ಮಾಡುತ್ತಿರುವಿರಿ. ಆ ಕಾಲಾವಧಿಯಲ್ಲಿ ನೀವು ಕೊಯ್ಯುವ ಬೆಳೆಯಿಂದ ನಿಮ್ಮ ಆಹಾರಕ್ಕೆ ಬೇಕಾದಷ್ಟು ಅಂಶವನ್ನು ತೆಗೆದು ಉಳಿದುದನ್ನು ಅದರ ತೆನೆಗಳಲ್ಲೇ ಇರಗೊಡಿರಿ. ಅನಂತರ ಏಳು ಕಠಿಣ ವರ್ಷಗಳು ಬರುವುವು. ಆಗ ಆ ಕಾಲಕ್ಕಾಗಿ ಸಂಗ್ರಹಿಸಿಟ್ಟುದನ್ನು ಉಣ್ಣಬಹುದು. ಒಂದು ವೇಳೆ ಉಳಿಯುವುದಾದರೆ ನೀವು ಜೋಪಾನವಾಗಿರಿಸಿದುದು ಮಾತ್ರ.”(ಯೂಸುಫ್ :47-48)

ಹಣವಿರುವವರು ಸಮಯಕ್ಕೆ ಸರಿಯಾಗಿ ಝಕಾತ್ ಮತ್ತು ತುರ್ತು ಪರಿಸ್ಥಿತಿ ಹಾಗು ಸಂದರ್ಭಕ್ಕೆ ತಕ್ಕಂತೆ ದಾನಧರ್ಮವನ್ನು ನೀಡುತ್ತಿರಬೇಕು. ತಮ್ಮ ಹಣದಿಂದ ಇತರರಿಗೆ ಸಹಾಯ ಮಾಡುವವರಿಗೆ ಭವಿಷ್ಯದ ಬಗ್ಗೆ ನಿಶ್ಚಿಂತರಾಗಿ ಜೀವಿಸಬಹುದು. ಝಕಾತ್ ಮತ್ತು ದಾನಧರ್ಮ ಬಡತನ ನಿರ್ಮೂಲನೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಾಲ ಮತ್ತು ಬಡ್ಡಿ ವ್ಯವಹಾರದಿಂದ ದೂರವಿರಬೇಕು. ಸಾಲ ಹಾಗೂ ಬಡ್ಡಿ ವ್ಯವಹಾರಗಳು ಆರ್ಥಿಕ ಕುಸಿತಕ್ಕೆ ಒಂದು ಮುಖ್ಯ ಕಾರಣ. ಇಂದಲ್ಲ ನಾಳೆ ಮಾರುಕಟ್ಟೆ ಸರಿಯಾಗಬಹುದೆಂದು ನಿರೀಕ್ಷಿಸಿ ಯಾವುದೇ ಖರ್ಚುಗಳನ್ನು, ದೀರ್ಘ ಕಾಲದ ಸಾಲದ ವ್ಯವಹಾರವನ್ನು ಮಾಡಬೇಡಿರಿ.

ಸರಕಾರದಿಂದ ಸಿಗುವ ಸವಲತ್ತುಗಳು ಸರಕಾರಿ ಶಾಲಾ ಕಾಲೇಜು, ಸ್ಕಾಲರ್ ಶಿಪ್, ಆಸ್ಪತ್ರೆ, ಆರೋಗ್ಯ ಯೋಜನೆ ಇತ್ಯಾದಿಗಳಿಂದ ಸಾಧ್ಯವಾದಷ್ಟು ಪ್ರಯೋಜನ ಪಡೆಯಬೇಕು. ಸ್ವಂತ ವಾಹನ ಖರೀದಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕ ಸಾರಿಗೆ ಉಪಯೋಗಿಸುವುದು, ಸಾಧ್ಯವಾದಲ್ಲಿ ನಡೆದೇ ಹೋಗುವುದು. ಧರ್ಮಸಮ್ಮತವಾದ ಎಲ್ಲಾ ಉದ್ಯೋಗ ಮಾಡಲು, ಪರಿಶ್ರಮದಿಂದ ದುಡಿಯಲು ತಯಾರಾಗಬೇಕು. ಎಲ್ಲರೂ ಸೂಟು ಬೂಟು ಹಾಕಿ ಹವಾನಿಯಂತ್ರಿತ ಕೋಣೆಯಲ್ಲಿ ದುಡಿಯುವ ವೈಟ್ ಕಾಲರ್ ಹುದ್ದೆಯನ್ನು ನಿರೀಕ್ಷಿಸಬೇಡಿರಿ. ಪ್ರವಾದಿಗಳೆಲ್ಲರೂ ಪರಿಶ್ರಮದಿಂದ ದುಡಿಯುವವರಾಗಿದ್ದರು. ಬಡಗಿ, ಕುರುಬರೂ ಆಗಿದ್ದರು. ಅವರು ಮಿತವಾದ ಆಹಾರ ತಿನ್ನುವವರು, ಸರಳ ಜೀವನ ನಡೆಸುವವರಾಗಿದ್ದರು. ಅವರೆಂದೂ ಆಕರ್ಷಕ ವಸ್ತ್ರಗಳನ್ನು ಧರಿಸಿರಲಿಲ್ಲ.

ಮಹಿಳೆಯರೂ ತಮ್ಮ ಮನೆಯ ಎಲ್ಲಾ ಕೆಲಸಗಳನ್ನು ಮಾಡಲು ತಯಾರಾಗಬೇಕು. ನಮ್ಮ ಹಿಂದಿನ ತಲೆಮಾರು ಗ್ರೈಂಡರ್, ನಲ್ಲಿ ಏನೂ ಇಲ್ಲದಿದ್ದಾಗ ಎಂಟು, ಹತ್ತು ಅಥವಾ ಅದಕ್ಕಿಂತಲೂ ಹೆಚ್ಚು ಮಕ್ಕಳನ್ನು ಬೆಳೆಸಿದ್ದರು. ಇಂದು ನಮಗೆ ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ, ಸುಲಭದಲ್ಲಿ ಶುಚಿಗೊಳಿಸುವಂತಹ ಮನೆ, ಎರಡು ಮೂರು ಮಕ್ಕಳು ಮಾತ್ರ. ಆದರೂ ಮಹಿಳೆಯರಿಗೆ ಸ್ವಂತ ಮನೆಯನ್ನು ಶುಚಿಗೊಳಿಸಲು, ಅಡುಗೆ ಮಾಡಲು ಆಲಸ್ಯ. ಮಕ್ಕಳಿಗೆ ಸುಲಭದಲ್ಲಿ ಕ್ಯಾಂಟೀನ್ ಫುಡ್ ಅಥವಾ ಬೇಕಾದುದನ್ನು ಮನೆಗೆ ಓರ್ಡರ್ ಮಾಡಿ ಕೊಟ್ಟು ಬಿಡುವುದು, ಹೋಟೆಲ್ ಗೆ ಹೋಗಿ ತಿನ್ನುವುದು ಮನೋರಂಜನೆಯೂ, ಹವ್ಯಾಸವೂ ಆಗಿ ಬಿಟ್ಟಿದೆ. ತಿನ್ನಲಿಕ್ಕಾಗಿ ಜೀವಿಸುವವರಲ್ಲ. ಜೀವಿಸಲಿಕ್ಕಾಗಿ ತಿನ್ನುವವರಾಗಬೇಕು. ಇಂದು ಎಲ್ಲವೂ ಸುಲಭವಾಗಿ ಬಿಟ್ಟಿದೆ. ಅಕ್ಕಿ ಹುಡಿ, ದೋಸೆ, ಇಡ್ಲಿಯಂತಹ ರೆಡಿ ಹಿಟ್ಟುಗಳೂ ಲಭ್ಯ. ಸಾಧ್ಯವಾದಷ್ಟು ಪೌಷ್ಠಿಕಾಂಶವಿರುವ ಆಹಾರವನ್ನು ಮನೆಯಲ್ಲಿಯೇ ತಯಾರಿಸಬೇಕು. ಕೇವಲ ಗಂಜಿಯಾದರೂ ಸಾಕು. ಹಾಲು, ಮೀನು, ತರಕಾರಿ, ಹಣ್ಣು, ಖರ್ಜೂರ ಇತ್ಯಾದಿಗಳು ನಮ್ಮ ಆಹಾರ ಪದ್ಧತಿಯನ್ನೊಳಗೊಂಡಿರಬೇಕು.

ಒಬ್ಬರು ಇನ್ನೊಬ್ಬರನ್ನು ಖರ್ಚು ಮಾಡಲು ಒತ್ತಾಯಪಡಿಸಬಾರದು. ವಿವಾಹ, ವಿವಾಹದ ಹಿಂದಿನ ಮುಂದಿನ ಕಾರ್ಯಕ್ರಮಗಳು, ಅಕೀಕ, ಗೃಹ ಪ್ರವೇಶ ಇತ್ಯಾದಿ ಎಲ್ಲಾ ಔತಣ ಕೂಟಗಳಿಗೆ ಎಲ್ಲರನ್ನು ಆಹ್ವಾನಿಸಬೇಕೆಂದು ನಿರೀಕ್ಷಿಸಬೇಡಿರಿ. ನಮ್ಮ ಸಮಾಜದಲ್ಲಿ ಇಂದು ಬಡವರು ಮಾತ್ರವಲ್ಲ ಸಂಪತ್ತಿರುವ ಶ್ರೀಮಂತರು ಕೂಡಾ ಆರ್ಥಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನಾವೇ ಮಾಡಿಟ್ಟಂತಹ ಕೆಲವು ಕಟ್ಟುಪಾಡುಗಳಂತೆಯೇ ನಡೆಯಬೇಕೆಂದು ಒತ್ತಾಯಿಸಬಾರದು. ಒಬ್ಬರೋ ಇಬ್ಬರಿಂದಲೋ ನಮ್ಮ ವಿವಾಹದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಮುದಾಯದಲ್ಲಿ ಎಲ್ಲರೂ ಚಿಂತಿಸಬೇಕಾದಂತಹ ವಿಷಯವಾಗಿದೆ. ಹತ್ತಿರದ ಸಂಬಂಧಿಕರನ್ನು ಕರೆಯದಿದ್ದರೆ ಕುಟುಂಬ ಕಲಹ, ಸಮಸ್ಯೆಯನ್ನುಂಟು ಮಾಡುವರೇ ಹೊರತು ಈ ಸಮಸ್ಯೆಗೆ ಯಾವುದೇ ಪರಿಹಾರ ಕಾಣಲಾರರು.

ವಿವಾಹದ ಸಂದರ್ಭದಲ್ಲಿ ವಧುವಿನ ತಂದೆ ಹಾಗು ವರ ಇಬ್ಬರೂ ಸಾಲ ಮಾಡಿದರೂ ಪರವಾಗಿಲ್ಲ. ನಮಗೆ ಮದುವೆ ಮಂಟಪ ನೋಡುವುದೆಲ್ಲವು ಆಕರ್ಷಕವಾಗಿ ಪಳಪಳವಾಗಿಯೇ ಕಾಣಬೇಕೆ? ಇಸ್ಲಾಮಿನಲ್ಲಿ ನಮ್ಮ ಯಾವುದೇ ಆರಾಧನೆಗಳಿಗೆ ಹೂವು, ಯಾವುದೇ ತಿಂಡಿ ಬೇಕಾಗಿಲ್ಲ. ಬಡವರಿಗೆ ಉಣಿಸುವುದೇ ದೊಡ್ಡ ಆರಾಧನೆಯಾಗಿದೆ. ವಿವಾಹಕ್ಕೆ ಫೋಟೋ ತೆಗೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿದ ಹೂವಿನ ಮತ್ತು ವಿದ್ಯುತ್ತಲಂಕಾರಮಾಡಿದ ಮಂಟಪಗಳು, ಹಲವಾರು ಹೊಸ ಹೊಸ ದಿನಗಳ ಆಚರಣೆ, ಅದಕ್ಕೆ ಉಡುಗೊರೆ, ಚಾಕಲೇಟ್, ಹೂವು, ಕೇಕ್ ಗಳ ಪ್ರದರ್ಶನವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಉಂಟಾಗಿರುವಂತಹ ಆರ್ಥಿಕ ಕುಸಿತವು ನಮಗೆಲ್ಲರಿಗೂ ಪಾಠವಾಗಲಿ. ಇದರೊಂದಿಗೆ ಎಲ್ಲಾ ದುಂದುವೆಚ್ಚ, ಅನಾವಶ್ಯಕ ಆಚರಣೆಗಳು ಮತ್ತು ವಸ್ತ್ರಾಭರಣಗಳ ಪ್ರದರ್ಶನ ಕೊನೆಗೊಳ್ಳಲಿ. ಔತಣ ಕೂಟವೆಂದರೆ ನಾಲ್ಕೈದು ಗಂಟೆಗಳಲ್ಲಿ ಕೆಲವು ಜನರನ್ನು ಭೇಟಿಯಾಗಿ ತಮ್ಮ ಕುಟುಂಬ ಸಂಬಂಧವನ್ನು ಸುದೃಢಗೊಳಿಸುವುದಾಗಿರಬೇಕು.

ಚಿನ್ನದ ಬೆಲೆ ಗಗನಕ್ಕೇರುತ್ತಿದೆಯೆಂದು ಚಿಂತಿಸಬೇಡಿರಿ. ತತ್ಕಾಲಿಕವಾಗಿ ನಾವು ಆಹಾರ, ವಿದ್ಯಾಭ್ಯಾಸ, ಆರೋಗ್ಯ, ವಾಸಿಸಲು ಮನೆ, ಮೈ ಮುಚ್ಚಲು ವಸ್ತ್ರ ಇತ್ಯಾದಿಗಳ ಬಗ್ಗೆ ಮಾತ್ರ ಆಲೋಚಿಸಿದರೆ ಸಾಕು. ವಿವಾಹಕ್ಕೆ ಮಹ್ರ್ ಎಷ್ಟು? ತಂದೆ ಎಷ್ಟು ಚಿನ್ನ ಕೊಟ್ಟಿದ್ದಾರೆಂದು ಕೇಳುವ ಮತ್ತು ನೋಡುವ ಅಭ್ಯಾಸ ಬಿಟ್ಟು ಬಿಡಿರಿ. ಏಕೆಂದರೆ ನಮ್ಮಲ್ಲಿ ಇಂದು ಹೆಚ್ಚಿನ ಮಹಿಳೆಯರು ಸೌಂದರ್ಯಕಿಂತಲು ಹೆಚ್ಚಾಗಿ ತೋರಿಕೆಗಾಗಿ ಚಿನ್ನವನ್ನು ಮತ್ತು ವಾಚನ್ನು ಧರಿಸುತ್ತಾರೆ. ವಾಚ್ ನ ಉದ್ದೇಶ ಸಮಯ ನೋಡುವುದು ಮಾತ್ರವಲ್ಲವೇ? ಅದನ್ನು ಖರೀದಿಸುವಾಗಲೂ ನಮಗೆ ದುಬಾರಿ ಬ್ರಾಂಡ್ ನ ಅಗತ್ಯವಿದೆಯೇ?

ನಮ್ಮಲ್ಲಿರುವ ಎಲ್ಲಾ ವಸ್ತುಗಳನ್ನು ದೀರ್ಘಕಾಲ ಉಪಯೋಗಿಸಬೇಕು. ಮಾರುಕಟ್ಟೆಯಲ್ಲಿರುವ ಎಲ್ಲಾ ವಸ್ತುಗಳನ್ನು ನಾವು ಖರೀದಿಸಬೇಕೆಂದಿಲ್ಲ. ಕೆಲವು ವರ್ಷಗಳ ಹಿಂದೆ ನಾವು ಅದು ಇಲ್ಲದೆಯೇ ಜೀವಿಸಿರಬಹುದು. ಅಗತ್ಯಕ್ಕಿಂತ ಹೆಚ್ಚು ಕಪಾಟು. ಅದರಲ್ಲಿ ತುಂಬಾ ಅನಗತ್ಯ ಸಾಮಾನುಗಳು. ಬೆಲೆಬಾಳುವ ಧರಿಸಲಸಾಧ್ಯವಾದ ಬಟ್ಟೆಗಳು, ಎಲ್ಲರಿಗೂ ಬೇರೆ ಬೇರೆ ಮೊಬೈಲ್ ಅಥವಾ ಟಾಬ್, ಲಾಪ್ ಟಾಪ್ ದೊಡ್ಡ ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ಎಲ್ಲವೂ ಇದೆ. ಆದರೆ ವಿದ್ಯುತ್ ಬಿಲ್ ಪಾವತಿಸಲು ಹಣವಿಲ್ಲದ ಕಾರಣ ಉಪಯೋಗಿಸುವಂತಿಲ್ಲ. ವಸ್ತ್ರ, ಮೊಬೈಲ್, ಲಾಪ್ ಟಾಪ್ ಅಥವಾ ಮನೆ ಬಳಕೆಯ ವಸ್ತುಗಳನ್ನು ಖರೀದಿಸುವಾಗ ಮಿತವನ್ನು ಪಾಲಿಸಿ. ಇಂದು ಕೆಲವರ ಬಳಿ ಎಲ್ಲಾ ಅತ್ಯುತ್ತಮ ಹಾಗು ಅತ್ಯಾಧುನಿಕ ವಸ್ತುಗಳಿವೆ. ಆದರೆ ಕೈಯಲ್ಲಿ ಹಣವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ನೋಡುವವರಿಗೆ ಇವರು ಶ್ರೀಮಂತರು. ಅಗತ್ಯದ ಸಮಯದಲ್ಲೂ ಯಾರೂ ಸಹಾಯ ಮಾಡುವುದಿಲ್ಲ. ನಿಮ್ಮಲ್ಲಿರುವ ಎಲ್ಲಾ ಹಣವನ್ನು ವಿವಾಹ ಅಥವಾ ಮನೆ ನಿರ್ಮಾಣಕ್ಕೆ ಖರ್ಚು ಮಾಡಬೇಡಿರಿ.

ಮನೆಯ ಹತ್ತಿರ ಖಾಲಿ ಜಮೀನು ಇದ್ದರೆ ತರಕಾರಿಗಳನ್ನು ಬೆಳೆಸಲು ಪ್ರಯತ್ನಿಸಿ. ಹಣ್ಣಿನ ಬೀಜಗಳನ್ನು ಬಿತ್ತಿ. ನಮಗಲ್ಲದಿದ್ದರೂ ನಮ್ಮ ಸಂತತಿಗಾದರೂ ಪ್ರಯೋಜನವಾಗಲಿ. ಸಾಧ್ಯವಾದರೆ ವಾರದಲ್ಲಿ ಎರಡು ದಿನ ಉಪವಾಸ ಆಚರಿಸುವುದು. ಉಪವಾಸವು ಹಸಿವನ್ನು ತಡೆಗಟ್ಟಲು ಕಲಿಸುತ್ತದೆ ಮತ್ತು ನಮ್ಮ ಆರೊಗ್ಯವನ್ನು ಹೆಚ್ಚಿಸುತ್ತದೆ. ಉಪವಾಸವು ಎಲ್ಲಾ ಲೌಖಿಕ ಆಸೆಗಳಿಂದ ಆತ್ಮನಿಯಂತ್ರಿಸುತ್ತದೆ. ಲೌಖಿಕ ಮೋಹವೇ ಮಾನವನನ್ನು ಸಾಲದೆಡೆಗೆ ಪ್ರೋತ್ಸಾಹಿಸುತ್ತದೆ.

ಹೊಸ ಮಾಡೆಲ್ ವಾಹನ, ಎಲ್ಲಾ ಅತ್ಯಾಧುನಿಕ ಪೀಠೋಪಕರಣಗಳಿರುವ ಮನೆ, ಇತರರ ಐಶಾರಾಮಿ ಜೀವನ ಮತ್ತು ಸಾಮಾಜಿಕ ಜಾಲತಾಣಗಳ ನಕಲಿ ಫೋಟೋ ಮತ್ತು ಜೀವನ ನೋಡಿ ಆಕರ್ಷಿತರಾಗಬೇಡಿರಿ. ಎಲ್ಲಾ ದೊಡ್ಡ ದೊಡ್ಡ ಕಂಪೆನಿಗಳು, ಶ್ರೀಮಂತರು ಸಾಲಾಗಾರರು ಎಂದು ನಮಗೆ ಕಳೆದ ಕೆಲವು ದಿನಗಳಲ್ಲಿ ಸಿಗುತ್ತಿರುವ ಆಘಾತಕಾರಿ ಸುದ್ಧಿ. ಈಗ ಯಾವುದೇ ಸಾಲವಿಲ್ಲದವನೇ ನಿಜವಾದ ಶ್ರೀಮಂತ.