ಸಮುದಾಯದಲ್ಲಿ ಹೆಚ್ಚುತ್ತಿರುವ ‘ಎಂಗೇಜ್ಮೆಂಟ್’ ಎಂಬ ಅನಾಚಾರ

0
526

ಲೇಖನ: ಖದೀಜ ನುಸ್ರತ್ ಅಬುಧಾಬಿ

ನಮ್ಮ ಸಮಾಜದಲ್ಲಿ ವಿವಾಹದ ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಹಲವು ಅನಾಚಾರಗಳಲ್ಲಿ ಎಂಗೇಜ್ಮೆಂಟ್(ನಿಶ್ಚಿತಾರ್ಥ) ಕೂಡ ಒಂದಾಗಿದೆ. ವಿವಾಹಕ್ಕಿಂತ ಮುಂಚೆ ಹೆಣ್ಣು ನೋಡುವುದಕ್ಕೆ ಕೆಲವು ನಿಬಂಧನೆಗಳೊಂದಿಗೆ ಇಸ್ಲಾಮ್ ಧರ್ಮವು ಬಹಳ ಪ್ರಾಮುಖ್ಯತೆಯನ್ನು ನೀಡಿದೆ. ತನ್ನೊಂದಿಗೆ ವಿವಾಹ ನಿಶ್ಚಯವಾದವಳಿಗೆ ಸವಿನೆನಪಿಗಾಗಿ ಸಣ್ಣ ಸಣ್ಣ ಉಡುಗೊರೆ ನೀಡುವುದರಲ್ಲಿ ತಪ್ಪಿಲ್ಲ. ದುಡಿಯಲು ಆರಂಭಿಸಿರುವ ವಿವಾಹ ಪ್ರಾಯಕ್ಕೆ ತಲುಪಿರುವ ಯುವಕರಿಗೆ ವಿವಾಹಕ್ಕಿಂತ ಮೊದಲೇ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಲು ನಿರ್ಬಂಧಿಸಿದರೆ ಅವರು ಆರ್ಥಿಕ ಕಾರಣಗಳಿಂದಾಗಿ ವಿವಾಹವನ್ನು ಮುಂದೂಡಬೇಕಾದ ಪರಿಸ್ಥಿತಿ ಬರುತ್ತದೆ.

ಇಸ್ಲಾಮ್ ಧರ್ಮದಲ್ಲಿ ವಿವಾಹ ಅತ್ಯಂತ ಸರಳ ಕಾರ್ಯಕ್ರಮವಾಗಿದ್ದು ಮದುವೆಯ ಸಮಯದಲ್ಲಿ ‘ಮಹ್ರ್’ ನೀಡುವುದು ಮಾತ್ರ ಕಡ್ಡಾಯವಾಗಿದೆ. ಚಿನ್ನ ದುಬಾರಿಯಾಗಿರುವ ಈ ಕಾಲದಲ್ಲಿ ನಿಶ್ಚಿತಾರ್ಥದ ಉಡುಗೊರೆ, ಮಹ್ರ್ ಎಂದು ತೋರಿಕೆಗಾಗಿ ದೊಡ್ಡ ಮೊತ್ತದ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಬೇಕೆಂದು ನಿರ್ಬಂಧಿಸಿದರೆ ಹೆಚ್ಚಿನವರನ್ನು ಸಾಲದಲ್ಲಿ ಸಿಲುಕಿಸುತ್ತದೆ. ವಿವಾಹದ ನಂತರ ಅವರಿಗೆ ಹಲವಾರು ಜವಾಬ್ದಾರಿಗಳು ಹೆಚ್ಚುವುದರಿಂದ ಸಾಲವು ವಿವಾಹದ ಆರಂಭ ದಿನಗಳಲ್ಲೇ ಕುಟುಂಬದ ಮತ್ತು ವೈವಾಹಿಕ ಜೀವನದ ನೆಮ್ಮದಿ ಕೆಡಿಸಬಹುದೆಂಬುದರಲ್ಲಿ ಸಂಶಯವಿಲ್ಲ.

ಮೊದಮೊದಲು ಸಿಹಿತಿಂಡಿಯ ಸಣ್ಣ ಪೊಟ್ಟಣದೊಂದಿಗೆ ಆರಂಭವಾದ ಈ ಸಂಪ್ರದಾಯವು ಬರ ಬರುತ್ತಾ ಹೂವು, ಚಿನ್ನಾಭರಣ, ವಸ್ತ್ರ, ಚಪ್ಪಲಿ, ಮೊಬೈಲ್, ಕೇಕ್, ಚಾಕಲೇಟ್, ಡ್ರೈ ಫ್ರೂಟ್ಸ್ ಹೀಗೆ ಹಲವಾರು ವಸ್ತುಗಳು ಸೇರಿ ನೋಡುವವರಿಗೆ ಆಕರ್ಷಕವಾಗಿ ಪ್ಯಾಕ್ ಮಾಡಿ ಬರುವವರೆಲ್ಲರೂ ಕೈಯಲ್ಲಿ ಉಡುಗೊರೆ ಹಿಡಿದುಕೊಂಡು ಬರುವುದು, ಸಾಮಾನುಗಳ ರಾಶಿಗಳನ್ನು ಮೂರು ನಾಲ್ಕು ಟೇಬಲ್ ಗಳು ತುಂಬಿಸಿ ಅದರ ಫೋಟೋ, ವೀಡಿಯೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದು ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಡುತ್ತಿದೆ. ಇವುಗಳಲ್ಲಿ ಎಷ್ಟು ಅಗತ್ಯ ಅನಗತ್ಯ ಎಂದು ನಾವೇ ಆಲೋಚಿಸಬೇಕು. ಇಂತಹ ಸಮಾರಂಭಗಳನ್ನು ಬಂಡವಾಳಶಾಹಿಗಳು ಸಿನಿಮಾ ಮತ್ತು ಧಾರವಾಹಿ ಮಾಧ್ಯಮಗಳ ಮೂಲಕ ಅತ್ಯಾಕರ್ಷಕವಾಗಿ ಚಿತ್ರೀಕರಿಸಿ ಜನರನ್ನು ಆಕರ್ಷಿಸುತ್ತಾರೆ. ಇದು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಅತ್ಯಧಿಕ ಲಾಭ ಗಳಿಸುವ ಕುತಂತ್ರದ ಭಾಗವಾಗಿದೆ.

ನಿಕಾಹ್ ಆಗುವವರೆಗೆ ವಧುವರರು ಪರಸ್ಪರ ಅನ್ಯರಾಗಿರುತ್ತಾರೆ. ಹೆಣ್ಣು ತನ್ನ ವಿವಾಹವಾಗುವವನ ಮುಂದೆ ಮುಖ ಮತ್ತು ಮುಂಗೈಯ ಹೊರತು ಶರೀರದ ಎಲ್ಲಾ ಭಾಗಗಳನ್ನು ಮುಚ್ಚಬೇಕು ಎನ್ನುವುದು ಇಸ್ಲಾಮಿನ ನಿಯಮವಾಗಿದೆ. ಕೇಕ್ ಕತ್ತರಿಸುವುದು, ಉಂಗುರ ಹಾಕುವುದು, ಹೂಗುಚ್ಛೆ ನೀಡುವುದು, ಒಟ್ಟಿಗೆ ನಿಂತು ಫೋಟೋ ತೆಗೆಯುವುದು, ವೀಡಿಯೋ ಮಾಡುವುದು ಇತ್ಯಾದಿ ಇಸ್ಲಾಮಿನ ಸಂಸ್ಕೃತಿಯಲ್ಲ. ನೋಡುವವರಿಗೆಲ್ಲರಿಗೂ ನಯನ ಸುಖ ನೀಡಿದರೂ ಇವೆಲ್ಲವೂ ನಮ್ಮನ್ನು ನೈತಿಕ ಅಧಃಪತನದತ್ತ ಕೊಂಡೊಯ್ಯುತ್ತಿದೆ.

ಇಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಮಹಿಳೆಯರ ಪಾತ್ರ ಹೆಚ್ಚಾಗುತ್ತಿದ್ದು ಪುರುಷರ ಮೌನ ಸಮ್ಮತಿಯು ಖೇದಕರವಾಗಿದೆ. ಅನ್ಯಧರ್ಮೀಯರ ಮತ್ತು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವವರ ಸಂಖ್ಯೆ ಮುಸ್ಲಿಮ್ ಸಮುದಾಯದಲ್ಲಿ ಹೆಚ್ಚಾಗುತ್ತಿರುವುದು ಖೇದಕರವಾಗಿದೆ. ನಾವು ಏನು ಮಾಡುತ್ತೇವೆಯೋ ನಮ್ಮ ಮುಂದಿನ ತಲೆಮಾರು ಕೂಡ ಅದನ್ನು ನೋಡಿ ಅನುಕರಣೆ ಮಾಡುತ್ತದೆ. ಆದುದರಿಂದ ಮರಣ ಹೊಂದುವಾಗ ಉತ್ತಮ ಸಂಸ್ಕಾರ, ಮೌಲ್ಯ, ಸಂಸ್ಕೃತಿಯನ್ನು ಬಿಟ್ಟು ಹೋಗಲು ಪ್ರಯತ್ನಿಸಬೇಕು.

ಫೋಟೋ, ವೀಡಿಯೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದು ಒಂದು ಮನೋರಂಜನೆಯಾಗಿಬಿಟ್ಟಿದೆ. ಆರಂಭದಿಂದಲೇ ರಹಸ್ಯವಾದ ದಾಂಪತ್ಯ ಜೀವನ ಇಂದು ಅಗತ್ಯವಾಗಿದೆ. ಒಂದು ದಿನಕ್ಕಾಗಿ ಎರಡೂ ಕಡೆಯಿಂದ ದುಬಾರಿ ಬೆಲೆಯ ವಸ್ತ್ರ, ವೇದಿಕೆ ಅಲಂಕಾರಗೊಳಿಸುವುದು ಇತ್ಯಾದಿಗಳೆಲ್ಲವೂ ದುಂದು ವೆಚ್ಚದ ಹೊರತು ಇನ್ನೇನೂ ಅಲ್ಲ. ಒಟ್ಟಿನಲ್ಲಿ ಎಂಗೇಜ್ಮೆಂಟ್ ಹೆಸರಿನಲ್ಲಿ ಸಮಯ, ಹಣ, ಪರಿಶ್ರಮ ಎಲ್ಲವೂ ವ್ಯರ್ಥ. ನಮ್ಮ ಸಮಾಜದಲ್ಲಿ ತಿನ್ನಲು ಸರಿಯಾದ ಪೌಷ್ಠಿಕಾಂಶದ ಆಹಾರವಿಲ್ಲದೆ, ವಾಸಿಸಲು ಸರಿಯಾದ ಮನೆಯಿಲ್ಲದೆ, ಧರಿಸಲು ಸರಿಯಾದ ಬಟ್ಟೆ ಬರೆಗಳಿಲ್ಲದೇ, ವಿದ್ಯಾಭ್ಯಾಸ ಪಡೆಯಲು ಸರಿಯಾದ ಸೌಕರ್ಯಗಳಿಲ್ಲದೇ, ವಿವಾಹ ಪ್ರಾಯಕ್ಕೆ ಬಂದಿರುವ ಎಷ್ಟೋ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬದವರು ವಿವಾಹದಿನದ ಖರ್ಚನ್ನು ಈಡೇರಿಸಲು ಸಾಧ್ಯವಾಗದೆ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಇಂತಹ ನವೀನಾಚರಣೆಗೆ ಸಮುದಾಯದ ಜನರು ಬಲಿಯಾಗುತ್ತಿರುವುದು ಅತ್ಯಂತ ಖೇದಕರವಾಗಿದೆ.

ಸಣ್ಣ ಮನೆ ಅಥವಾ ಫ್ಲಾಟ್‌ಗಳಿಗೆ ನೂರಾರು ಜನರನ್ನು ಕರೆದುಕೊಂಡು ಹೋಗುವಾಗ ಅಲ್ಲಿ ಕುಳಿತುಕೊಳ್ಳುವ, ಊಟದ ವ್ಯವಸ್ಥೆ ಮಾಡಲು ಸ್ಥಳ ಇದೆಯೇ ಎಂದು ನಾವೇ ಆಲೋಚಿಸಬೇಕು. ಮನೆಯಲ್ಲಿ ಸ್ಥಳ ಸಾಕಾಗುವುದಿಲ್ಲವೆಂದು ಹಾಲ್‌ಗಳಲ್ಲಿ ನಿಶ್ಚಿತಾರ್ಥ ಮಾಡಬೇಕಾದಂತಹ ಪರಿಸ್ಥಿತಿಯೂ ಉಂಟಾಗಿದೆ. ಮನೆಗೆ ಬರುವವರನ್ನು ಬರಬೇಡಿ ಎಂದು ಹೇಳಲೂ ಸಾಧ್ಯವಾಗುವುದಿಲ್ಲ. ಇದು ಹೆಣ್ಣು ಹೆತ್ತವರಿಗೆ ಆರ್ಥಿಕ ನಷ್ಟವಾಗಿರುತ್ತದೆ. ಎಂಗೇಜ್ಮೆಂಟ್ ಅಥವಾ ಹೆಣ್ಣು ನೋಡುವ ಹೆಸರಿನಲ್ಲಿ ನಾಲ್ಕು ಐದು ಮಂದಿಗಿಂತ ಹೆಚ್ಚು ಜನರು ಹೋಗುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು. ಹೆಣ್ಣುಮಕ್ಕಳ ತಂದೆ ಕಷ್ಟಪಟ್ಟು ಸಂಪಾದಿಸಿದ ಉಳಿತಾಯವನ್ನು ಎಂಗೇಜ್ಮೆಂಟ್‌ನ ಹೆಸರಿನಲ್ಲಿ ಖರ್ಚು ಮಾಡಲು ನಿರ್ಬಂಧಿಸಬೇಡಿರಿ. ಇಡೀ ಕುಟುಂಬದವರನ್ನು, ನೆರೆಮನೆಯವರು, ಸ್ನೇಹಿತರು ಹೀಗೆ ಪರಿಚಯವಿರುವವರನ್ನೆಲ್ಲಾ ಬಸ್ಸು, ಕಾರಿನಲ್ಲಿ ತುಂಬಿಸಿ ಕರೆದು ಕೊಂಡು ಹೋಗುವಾಗ ಪೆಟ್ರೋಲ್ ಬೆಲೆ ದುಬಾರಿಯಾಗಿರುವ ಈ ಕಾಲದಲ್ಲಿ ವಾಹನಗಳ ಅನಗತ್ಯ ಓಡಾಟದ ಖರ್ಚುಗಳ ಬಗ್ಗೆ ಆಲೋಚಿಸಬೇಕಾಗಿದೆ. ಹತ್ತಿರದ ಸಂಬಂಧಿಕರಲ್ಲಿ ಕೆಲವರಿಗೆ ಇದು ಇಷ್ಟವಿಲ್ಲದಿದ್ದರೂ ಕುಟುಂಬ ಸಂಬಂಧ ಉಳಿವಿಗಾಗಿ ಹೋಗಲೇಬೇಕಾಗುತ್ತದೆ.

ನಿಶ್ಚಿತಾರ್ಥದ ನಂತರ ವಿವಾಹವಾಗುವವರೆಗೆ ವಧು ವರರು ಗಂಟೆ ಗಂಟೆಗಳ ಕಾಲ ಫೋನ್‌ನಲ್ಲಿ ಮಾತನಾಡುತ್ತಾ, ಮೆಸೇಜ್ ಕಳುಹಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಹರಟೆ ಹೊಡೆಯುವುದು ಧರ್ಮಸಮ್ಮತವಲ್ಲ. ಗಂಡು, ಹೆಣ್ಣು ಹಾಗೂ ಕುಟುಂಬದವರಿಗೆ ಪರಸ್ಪರ ಒಪ್ಪಿಗೆಯಾದ ನಂತರ ಆದಷ್ಟು ಬೇಗ ವಿವಾಹ ನಡೆಸುವುದು ಉತ್ತಮ. ಅದು ಸಮಾಜದಲ್ಲಿ ಹಲವು ಕೆಡುಕುಗಳನ್ನು ತಡೆಯುತ್ತದೆ ಮತ್ತು ಹಲವು ಸಮಸ್ಯೆಗಳಿಗೆ ಪರಿಹಾರವಾಗಿದೆ.